
ಪ್ರೀತಿಗಾಗಿ ಏನೆಲ್ಲ ಸಾಹಸ ಮಾಡಬಹುದು ಎಂದು ಕೇಳಿದರೆ ಉತ್ತರಗಳು ಹಲವು ಸಿಗಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಪ್ರೀತಿಯನ್ನು ಹುಡುಕಿಕೊಂಡು ಬರೋಬ್ಬರಿ 7,000 ಕಿಲೋಮೀಟರ್ ಸೈಕಲ್ ತುಳಿದಿದ್ದಾನೆ. ಅದೂ ಒಂದು ದೇಶದಿಂದ ಮತ್ತೊಂದು ದೇಶಕ್ಕೆ, ಬರೋಬ್ಬರಿ ಎಂಟು ದೇಶಗಳ ಗಡಿ ದಾಟಿ. ಕೈಯಲ್ಲಿ ವಿಮಾನದ ಟಿಕೆಟ್ ಖರೀದಿಸಲು ಹಣವಿರಲಿಲ್ಲ, ಆದರೆ ಮನಸ್ಸಿನಲ್ಲಿ ಪ್ರೀತಿಸಿದ ಹುಡುಗಿಯನ್ನು ಮತ್ತೆ ಭೇಟಿಯಾಗಲೇಬೇಕು ಎಂಬ ಛಲವಿತ್ತು. ಹೀಗಾಗಿ ಕೇವಲ 60 ರೂಪಾಯಿಗೆ ಖರೀದಿಸಿದ ಹಳೆಯ ಸೈಕಲ್ ಏರಿ ಭಾರತದಿಂದ ಸ್ವೀಡನ್‌ಗೆ ಹೊರಟೇ ಬಿಟ್ಟ ಪ್ರದ್ಯುಮ್ನ ಕುಮಾರ್ ಮಹಾನಂದ್ಯ (PK Mahanandia).
1949ರಲ್ಲಿ ಒಡಿಶಾದ ಬಡ ದಲಿತ ಕುಟುಂಬದಲ್ಲಿ ಜನಿಸಿದ ಪ್ರದ್ಯುಮ್ನ ಕುಮಾರ್ ಮಹಾನಂದ್ಯ ಅವರನ್ನು ಎಲ್ಲರೂ ಪ್ರೀತಿಯಿಂದ ಪಿಕೆ ಎಂದು ಕರೆಯುತ್ತಿದ್ದರು. ಬಾಲ್ಯದಿಂದಲೇ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ನೋವನ್ನು ಅನುಭವಿಸಿದ್ದ ಅವರು, ಚಿತ್ರಕಲೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಇದೇ ಆಸಕ್ತಿ ಮುಂದೆ ಅವರ ಬದುಕನ್ನೇ ಬದಲಿಸಿತು.
ಪಿಕೆ ಬಾಲ್ಯದಲ್ಲಿದ್ದಾಗ ಅವರ ತಂದೆ ಭವಿಷ್ಯ ತಿಳಿಯಲು ಜ್ಯೋತಿಷಿಯೊಬ್ಬರ ಬಳಿ ಕರೆದುಕೊಂಡು ಹೋಗಿದ್ದರಂತೆ. ಆಗ ಜ್ಯೋತಿಷಿ ಹೇಳಿದ ಭವಿಷ್ಯ ಸಾಕಷ್ಟು ಅಚ್ಚರಿ ಮೂಡಿಸಿತ್ತು. ನಿಮ್ಮ ಮಗ ವಿದೇಶಿ ಹುಡುಗಿಯನ್ನು ಮದುವೆಯಾಗುತ್ತಾನೆ. ಆಕೆ ದೂರದ ದೇಶದಿಂದ ಬರುತ್ತಾಳೆ. ಆಕೆಯ ರಾಶಿ ವೃಷಭವಾಗಿರುತ್ತದೆ. ಆಕೆಗೆ ಸಂಗೀತದಲ್ಲಿ ಆಸಕ್ತಿ ಇರುತ್ತದೆ ಮತ್ತು ಶ್ರೀಮಂತ ಕುಟುಂಬದ ಹಿನ್ನೆಲೆಯೂ ಇರುತ್ತದೆ ಎಂದು ಭವಿಷ್ಯ ನುಡಿದಿದ್ದರಂತೆ.
ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಪಿಕೆ ದೆಹಲಿಯ ಕಾಲೇಜ್ ಆಫ್ ಆರ್ಟ್‌ನಲ್ಲಿ ಶಿಕ್ಷಣ ಪಡೆದರು. ಆರ್ಥಿಕ ಸಂಕಷ್ಟದಿಂದಾಗಿ ಜೀವನ ನಿರ್ವಹಣೆಗಾಗಿ ದೆಹಲಿಯ ರಸ್ತೆ ಬದಿಯಲ್ಲಿ ಕುಳಿತು ಪ್ರವಾಸಿಗರ ಭಾವಚಿತ್ರಗಳನ್ನು ಬಿಡಿಸುತ್ತಿದ್ದರು. 10 ರೂಪಾಯಿ ಕೊಟ್ಟರೆ 10 ನಿಮಿಷದಲ್ಲಿ ಸುಂದರವಾದ ಭಾವಚಿತ್ರ ಸಿದ್ಧಪಡಿಸುತ್ತಿದ್ದರು. 1975ರ ಡಿಸೆಂಬರ್ 17ರಂದು ಅವರ ಬದುಕಿನಲ್ಲಿ ಮಹತ್ವದ ತಿರುವು ಸಿಕ್ಕಿತು. ಅಂದು ದೆಹಲಿಗೆ ಪ್ರವಾಸಕ್ಕೆ ಬಂದಿದ್ದ ನೀಲಿ ಕಣ್ಣಿನ, ಹೊಂಬಣ್ಣದ ಕೂದಲಿನ ಸುಂದರಿ ಪಿಕೆ ಬಳಿ ಭಾವಚಿತ್ರ ಬಿಡಿಸಿಕೊಳ್ಳಲು ಬಂದರು. ಆಕೆಯೇ ಸ್ವೀಡನ್ ಮೂಲದ ಷಾರ್ಲೆಟ್ ವಾನ್ ಶೆಡ್ವಿನ್.
ಮೊದಲ ಬಾರಿ ಆಕೆಯನ್ನು ನೋಡಿದ ಪಿಕೆ ಒಂದು ಕ್ಷಣ ತಬ್ಬಿಬ್ಬಾದರು. ಕೈಗಳು ನಡುಗತೊಡಗಿದವು. ಭಾವಚಿತ್ರ ಬಿಡಿಸಲು ಸಾಧ್ಯವಾಗದೆ ಮರುದಿನ ಬರುವಂತೆ ಹೇಳಿದರು. ಹೀಗೆ ಸತತ ಮೂರು ದಿನ ಆಕೆ ಬಂದರೂ ಪಿಕೆಗೆ ಚಿತ್ರ ಬಿಡಿಸಲು ಸಾಧ್ಯವಾಗಲಿಲ್ಲವಂತೆ. ಕೊನೆಗೂ ಭಾವಚಿತ್ರ ಸಿದ್ಧಪಡಿಸಿ 10 ರೂಪಾಯಿ ಕೇಳಿದಾಗ ಷಾರ್ಲೆಟ್ 20 ರೂಪಾಯಿ ನೀಡಿದರು. ಇಲ್ಲಿಂದ ಇಬ್ಬರ ನಡುವೆ ಮಾತುಕತೆ ಆರಂಭವಾಯಿತು. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿತು.
ಮಾತನಾಡುತ್ತಾ ಹೋದಂತೆ ಷಾರ್ಲೆಟ್ ಬಗ್ಗೆ ಪಿಕೆಗೆ ಹಲವು ವಿಚಾರಗಳು ತಿಳಿದವು. ಆಕೆ ಸ್ವೀಡನ್‌ನವಳು, ವೃಷಭ ರಾಶಿಯವಳು, ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಳು. ಕೊಳಲು ನುಡಿಸುವುದೆಂದರೆ ಆಕೆಗೆ ಬಹಳ ಇಷ್ಟವಿತ್ತು. ಅಷ್ಟೇ ಅಲ್ಲ, ಆಕೆಯ ಕುಟುಂಬವೂ ಶ್ರೀಮಂತ ಹಿನ್ನೆಲೆಯನ್ನು ಹೊಂದಿತ್ತು. ಇದನ್ನು ಕೇಳಿದ ಪಿಕೆಗೆ ಬಾಲ್ಯದಲ್ಲಿ ಜ್ಯೋತಿಷಿ ಹೇಳಿದ್ದ ಭವಿಷ್ಯ ನೆನಪಾಯಿತು. ಅಂದು ಹೇಳಿದ್ದ ಎಲ್ಲ ವಿಚಾರಗಳೂ ಷಾರ್ಲೆಟ್ ವಿಚಾರದಲ್ಲಿ ನಿಜವಾಗಿದ್ದವು. ಹೀಗಾಗಿ ಆಕೆಯೇ ತನ್ನ ಜೀವನ ಸಂಗಾತಿ ಎಂದು ನಿರ್ಧರಿಸಿದ ಪಿಕೆ, ನೇರವಾಗಿ ನೀನೇ ನನ್ನ ಹೆಂಡತಿಯಾಗುತ್ತೀಯ ಎಂದು ಹೇಳಿಬಿಟ್ಟರಂತೆ.
ಪಿಕೆ ಅವರ ಸರಳತೆ, ಪ್ರತಿಭೆ ಮತ್ತು ವ್ಯಕ್ತಿತ್ವಕ್ಕೆ ಮನಸೋತ ಷಾರ್ಲೆಟ್ ಕೂಡ ಪ್ರೀತಿಗೆ ಒಪ್ಪಿಗೆ ನೀಡಿದರು. ಬಳಿಕ ಇಬ್ಬರೂ ಒಡಿಶಾದಲ್ಲಿರುವ ಪಿಕೆ ಅವರ ಊರಿಗೆ ತೆರಳಿ ಕುಟುಂಬದ ಆಶೀರ್ವಾದ ಪಡೆದರು. ಕೋನಾರ್ಕ್ ಸೂರ್ಯ ದೇವಾಲಯದಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾದರು.
ಮದುವೆಯಾದ ಬಳಿಕ ಇಬ್ಬರೂ ಸಂತೋಷವಾಗಿ ಜೀವನ ಆರಂಭಿಸಿದರು ಎಂದುಕೊಂಡರೆ ಅಲ್ಲೊಂದು ಅನಿರೀಕ್ಷಿತ ತಿರುವಿತ್ತು. ಷಾರ್ಲೆಟ್ ಇನ್ನೂ ವಿದ್ಯಾರ್ಥಿನಿಯಾಗಿದ್ದ ಕಾರಣ, ತಮ್ಮ ವಿದ್ಯಾಭ್ಯಾಸ ಮುಂದುವರಿಸಲು ಸ್ವೀಡನ್‌ಗೆ ಮರಳಬೇಕಾಯಿತು. ಹೀಗಾಗಿ ಪತಿ ಪಿಕೆಯನ್ನು ಭಾರತದಲ್ಲಿಯೇ ಬಿಟ್ಟು ಆಕೆ ಸ್ವೀಡನ್‌ಗೆ ತೆರಳಿದರು.
ಪ್ರೀತಿಸಿ ಮದುವೆಯಾದ ಪತ್ನಿ ಸಾವಿರಾರು ಕಿಲೋಮೀಟರ್ ದೂರದಲ್ಲಿದ್ದ ಕಾರಣ ಪಿಕೆ ವಿರಹದ ನೋವು ಅನುಭವಿಸಬೇಕಾಯಿತು. ಆಗ ಮೊಬೈಲ್ ಫೋನ್‌ಗಳು ಇರಲಿಲ್ಲ. ಇಬ್ಬರ ಪ್ರೀತಿಗೆ ಆಧಾರವಾಗಿದ್ದದ್ದು ಪತ್ರಗಳು ಮಾತ್ರ. ಆದರೆ ಪಿಕೆಗೆ ಪತ್ನಿಯನ್ನು ನೋಡಬೇಕೆಂಬ ಹಂಬಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ವಿಮಾನದ ಟಿಕೆಟ್ ಖರೀದಿಸಲು ಹಣವಿರಲಿಲ್ಲ. ಬೇರೆ ವಾಹನದಲ್ಲಿ ಪ್ರಯಾಣಿಸುವಷ್ಟು ಆರ್ಥಿಕ ಸಾಮರ್ಥ್ಯವೂ ಇರಲಿಲ್ಲ. ಆದರೆ ಪತ್ನಿಯನ್ನು ಭೇಟಿಯಾಗುವ ಆಸೆಯನ್ನು ಮಾತ್ರ ಕೈಬಿಡಲಿಲ್ಲ.
ಪತ್ನಿಯನ್ನು ನೋಡಲು ಸ್ವೀಡನ್‌ಗೆ ಹೋಗಲೇಬೇಕು ಎಂದು ನಿರ್ಧರಿಸಿದ ಪಿಕೆ, ತಮ್ಮ ಬಳಿ ಇದ್ದ ಹಣಕ್ಕೆ ಹಳೆಯ ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿದರು. 1977ರ ಜನವರಿ 22ರಂದು ದೆಹಲಿಯಿಂದ ಸ್ವೀಡನ್ ಕಡೆಗೆ ತಮ್ಮ ಐತಿಹಾಸಿಕ ಸೈಕಲ್ ಪ್ರಯಾಣ ಆರಂಭಿಸಿದರು. ಜೇಬಿನಲ್ಲಿ ಇದ್ದದ್ದು ಕೇವಲ 80 ಡಾಲರ್. ಬೆನ್ನಿಗೆ ಬ್ಯಾಗ್, ಪತ್ನಿ ಉಡುಗೊರೆಯಾಗಿ ನೀಡಿದ್ದ ನೀಲಿ ಬಣ್ಣದ ಶರ್ಟ್ ಧರಿಸಿ ಪ್ರಯಾಣ ಶುರುಮಾಡಿದರು.
ಆದರೆ ಪ್ರಯಾಣ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಪಾಕಿಸ್ತಾನದ ಗಡಿಯಲ್ಲಿ ಪ್ರವೇಶಕ್ಕೆ ತೊಂದರೆ ಎದುರಾದ ಕಾರಣ ಅವರ ಪ್ರಯಾಣಕ್ಕೆ ಆರಂಭದಲ್ಲೇ ಅಡ್ಡಿಯಾಯಿತು. ಕೊನೆಗೆ ಸ್ನೇಹಿತರೊಬ್ಬರ ನೆರವಿನಿಂದ ಅಮೃತಸರದಿಂದ ಕಾಬೂಲ್‌ಗೆ ವಿಮಾನದಲ್ಲಿ ತೆರಳುವ ಅವಕಾಶ ಸಿಕ್ಕಿತು. ಅಫ್ಘಾನಿಸ್ತಾನದ ಕಾಬೂಲ್ ತಲುಪಿದ ಬಳಿಕ ಮತ್ತೆ ಸೈಕಲ್ ಏರಿ ಪ್ರಯಾಣ ಮುಂದುವರಿಸಿದರು.
ಪ್ರಯಾಣದ ನಡುವೆ ಅಪಘಾತಕ್ಕೀಡಾಗಿದ್ದ ಜರ್ಮನ್ ಯುವತಿಯೊಬ್ಬರಿಗೆ ಪಿಕೆ ಸಹಾಯ ಮಾಡಿದ್ದರು. ಇದರಿಂದ ಪ್ರಭಾವಿತರಾದ ಆಕೆ ವಿಯೆನ್ನಾಗೆ ತೆರಳಲು ರೈಲು ಟಿಕೆಟ್ ವ್ಯವಸ್ಥೆ ಮಾಡಿಕೊಟ್ಟರು. ಬಳಿಕ ಯುರೋಪಿನಲ್ಲಿಯೂ ಕೆಲವರ ನೆರವು ಪಡೆದು ಸ್ವೀಡನ್ ಕಡೆಗೆ ಪ್ರಯಾಣ ಬೆಳೆಸಿದರು.
1977ರ ಮೇ 28ರಂದು ಪಿಕೆ ಸ್ವೀಡನ್‌ನ ಗೊಥೆನ್‌ಬರ್ಗ್ ರೈಲು ನಿಲ್ದಾಣ ತಲುಪಿದರು. ಬರೋಬ್ಬರಿ 16 ತಿಂಗಳ ಹಿಂದೆ ಭಾರತದಲ್ಲಿ ದೂರವಾಗಿದ್ದ ಪ್ರೇಮಿಗಳು ಮತ್ತೆ ಒಂದಾಗುವ ಸಮಯ ಬಂದಿತ್ತು. ರೈಲು ನಿಲ್ದಾಣದಿಂದಲೇ ಪಿಕೆ ಪತ್ನಿ ಷಾರ್ಲೆಟ್‌ಗೆ ಕರೆ ಮಾಡಿದರು. ಪತಿ ಸ್ವೀಡನ್‌ಗೆ ಬಂದಿದ್ದಾರೆ ಎಂಬ ಸುದ್ದಿ ಕೇಳಿ ಆಕೆಗೆ ನಂಬಲು ಸಾಧ್ಯವಾಗಲಿಲ್ಲ. ಕೂಡಲೇ ಕಾರಿನಲ್ಲಿ ರೈಲು ನಿಲ್ದಾಣಕ್ಕೆ ಧಾವಿಸಿದರು.
ವಿಮಾನದ ಟಿಕೆಟ್‌ಗೆ ಹಣವಿಲ್ಲದಿದ್ದರೂ ಪ್ರೀತಿಸಿದ ಪತ್ನಿಯನ್ನು ಸೇರಲು 7,000 ಕಿಲೋಮೀಟರ್ ಸೈಕಲ್ ತುಳಿದ ಈ ಪ್ರೇಮಿಯ ಸಾಹಸ ಇಂದಿಗೂ ಜಗತ್ತಿನಾದ್ಯಂತ ಜನರ ಮನಗೆದ್ದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ