ಪೂಂಚ್ ಸೆಕ್ಟರ್‌ನಲ್ಲಿ ಭೀಕರ ಭಯೋತ್ಪಾದಕ ದಾಳಿ, ಭಾರತೀಯ ಸೇನಾ ಮೇಲೆ ಗುಂಡಿನ ಸುರಿಮಳೆ!

By Suvarna News  |  First Published Dec 21, 2023, 5:55 PM IST

ಅಡಗಿ ಕುಳಿತು ಭಾರತೀಯ ಸೇನಾ ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಒಂದೇ ತಿಂಗಳಲ್ಲಿ ಇದೀಗ ಎರಡನೇ ಭಯೋತ್ಪಾದಕ ದಾಳಿ ನಡೆದಿದೆ. ಪೂಂಚ್ ಸೆಕ್ಟರ್‌ನಲ್ಲಿ ನಡೆದಿರುವ ಈ ದಾಳಿಗೆ ಭಾರತೀಯ ಸೇನೆ ಪ್ರತಿದಾಳಿ ಆರಂಭಿಸಿದೆ.
 


ಪೂಂಚ್(ಡಿ.21) ಜಮ್ಮು ಮತ್ತು ಕಾಶ್ಮೀರದ ಆರ್ಟಿಕಲ್ 370 ನಿರ್ಣಯವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯುವ ಮೂಲಕ ಕಣಿವೆ ರಾಜ್ಯದ ಮಹತ್ತರ ಬದಲಾವಣೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಆದರೆ ಸರ್ಕಾರದ ಪ್ರಯತ್ನವನ್ನು ಸರ್ವನಾಶ ಮಾಡಲು ಭಯೋತ್ಪಾದರು ಹೊಂಚು ಹಾಕಿ ಕುಳಿತಿದ್ದಾರೆ. ಇದೀಗ ಪೂಂಚ್ ಜಿಲ್ಲೆಯಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ.ಅಡಗಿಕುಳಿತ ಭಯೋತ್ಪಾದಕರು ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದಾರೆ. ಈ ತಿಂಗಳಲ್ಲಿ ನಡೆದ 2ನೇ ಭೀಕರ ಭಯೋತ್ಪಾದಕ ದಾಳಿ ಇದಾಗಿದೆ. 

ಸೇನಾ ಟ್ರಕ್ ಮೂಲಕ ಸಾಗುತ್ತಿದ್ದ ಯೋಧರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಕಾಡಿನ ಪ್ರದೇಶದಲ್ಲಿ ಸಾಗುತ್ತಿದ್ದ ಸೇನಾ ವಾಹನದ ಮೇಲೆ ಅಡಗಿ ಕುಳಿತಿದ್ದ ಉಗ್ರರು ದಾಳಿ ನಡೆಸಿದ್ದಾರೆ. ಭೀಕರ ಗುಂಡಿನ ಚಕಮಕಿ ನಡೆದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಭಾರತೀಯ ಸೇನೆ ಸ್ಥಳಕ್ಕೆ ಧಾವಿಸಿ ಪ್ರತಿದಾಳಿ ಆರಂಭಿಸಿದೆ. ಇದೀಗ ಇಡೀ ಪ್ರದೇಶ ಸುತ್ತುವರೆದು ಕಾರ್ಯಾಚರಣೆ ಆರಂಭಿಸಲಾಗಿದೆ. ಪೂಂಚ್ ಜಿಲ್ಲೆಯ ಸೂರಾನ್‌ಕೋಟ್ ವಲಯದ ದೇರಾ ಕಿ ಗಾಲಿ ಬಳಿ ಈ ದಾಳಿ ನಡೆದಿದೆ. 

Tap to resize

Latest Videos

ಉಗ್ರರ ಬೆಂಬಲಿಗ ಸಂಸ್ಥೆಗಳ ಆಸ್ತಿ 24 ಗಂಟೆಯಲ್ಲಿ ಜಪ್ತಿ : ಕೇಂದ್ರ ಸರ್ಕಾರ

ನವೆಂಬರ್ ತಿಂಗಳ ಅಂತ್ಯದಲ್ಲಿ ಕಾಶ್ಮೀರದ ರಜೌರಿಯಲ್ಲಿ ಭೀಕರ ಉಗ್ರ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಇಬ್ಬರು ಹಿರಿಯ ಅಧಿಕಾರಿಗಳು ಮತ್ತು ಮೂವರು ಯೋಧರು ಹುತಾತ್ಮರಾಗಿದ್ದರು. ಭಾರೀ ಗುಂಡಿನ ಚಕಮಕಿಯಲ್ಲಿ ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಮೂಲದ ಕ್ಯಾಪ್ಟನ್‌ ಎಂ.ವಿ. ಪ್ರಾಂಜಲ್‌ ಸೇರಿ 4 ಯೋಧರು ಹುತಾ​ತ್ಮ​ರಾಗಿದ್ದರು. ಬಳಿಕ ಇಲ್ಲಿನ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಖಚಿತ ಮಾಹಿ​ತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಮತ್ತು ಪೊಲೀಸರು  ಕಾರ್ಯಾಚರಣೆ ಆರಂಭಿಸಿತ್ತು.

ರಜೌರಿಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಮುಂದುವರೆದ ಘರ್ಷಣೆಯಲ್ಲಿ ಗುರುವಾರ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.ಇಬ್ಬರು ಭಯೋತ್ಪಾದಕರ ಪೈಕಿ ಖಾರಿ ಎಂಬಾತ ಲಷ್ಕರ್-ಎ-ತೊಯ್ಬಾದಲ್ಲಿ ಉನ್ನತ ಹುದ್ದೆಯಲ್ಲಿದ್ದ ಭಯೋತ್ಪಾದಕ ನಾಯಕ ಹಾಗೂ ಪಾಕಿಸ್ತಾನಿ ಪ್ರಜೆ ಎಂದು ಗುರುತಿಸಲಾಗಿದೆ. ಅಲ್ಲದೇ ಐಇಡಿ ಪರಿಣಿತನಾಗಿದ್ದ ಈತ ಮರೆಯಲ್ಲಿದ್ದೇ ಗುಂಡು ಹಾರಿಸಿ ಕೊಲ್ಲಬಲ್ಲ (ಸ್ನೈಪರ್‌) ಸಾಮರ್ಥ್ಯದ ತರಬೇತಿ ಪಡೆದವನಾಗಿದ್ದ. ರಜೌರಿ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಇವನನ್ನು ಕಳುಹಿಸಲಾಗಿತ್ತು. ಈತ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ತರಬೇತಿ ಪಡೆದಿದ್ದಾನೆ ಎಂದು ಸೇನೆ ತಿಳಿಸಿದೆ. ಕಳೆದೊಂದು ವರ್ಷದಿಂದ ರಜೌರಿಯಲ್ಲಿ ಸಕ್ರಿಯನಾಗಿದ್ದ ಈತ ಇತ್ತೀಚೆಗೆ ನಡೆದಿದ್ದ ಒಂದು ಪ್ರಮುಖ ದಾಳಿಯ ಮಾಸ್ಟರ್‌ ಮೈಂಡ್‌ ಆಗಿದ್ದ ಎನ್ನಲಾಗಿದೆ. 

 

ಕಾಶ್ಮೀರದಲ್ಲಿ ಸೇನೆ ಗುಂಡಿಗೆ 6 ಉಗ್ರರ ಬಲಿ: 18 ಗಂಟೆಗಳ ಸತತ ಕಾರ್ಯಾಚರಣೆಯಲ್ಲಿ ಭರ್ಜರಿ ಯಶಸ್ಸು

click me!