
ನವದೆಹಲಿ(ಏ.13): ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ 50 ದಿನಗಳ ಕಳೆದರೂ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಈ 50 ದಿನಗಳಲ್ಲಿ ಭಾರತ ಹಾಗೂ ರಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧ ಹಾಗೂ ಸಹಕಾರ ಮತ್ತಷ್ಟು ಗಟ್ಟಿಗೊಂಡಿದೆ. ರಷ್ಯಾದಿಂದ ತೈಲ ಆಮದು ಒಪ್ಪಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದರೆ, ಇದರ ನಡುವೆ ರಷ್ಯಾದಿಂದ ಮಿಲಿಟರಿ ಶಸ್ತ್ರಾಸ್ತ್ರ ಭಾರತಕ್ಕೆ ಆಗಮಿಸಿದೆ.
ಭಾರತ ಹಾಗೂ ರಷ್ಯಾ ನಡುವಿನ ಮಿಲಿಟರಿ ಶಸ್ತ್ರಾಸ್ತ್ರ ಒಪ್ಪಂದ ಇಂದು ನಿನ್ನೆಯದಲ್ಲ. ಈ ಒಪ್ಪಂದದಲ್ಲಿ ರಷ್ಯಾ ಪೂರೈಕೆ ಮಾಡಬೇಕಿದ್ದ ಮಿಲಿಟರಿ ಶಸ್ತ್ರಾಸ್ತ್ರಗಳು ಇದೀಗ ಪೂರೈಕೆಯಾಗುತ್ತಿದೆ. ಒಪ್ಪಂದ ಪ್ರಕಾರ ರಷ್ಯಾದಿಂದ ಕನ್‌ಸೈನ್ಮೆಂಟ್ S-400 ಮಿಸೈಲ್ ಭಾರತ ತಲುಪಿದೆ.
ರಷ್ಯಾ-ಉಕ್ರೇನ್ ಕಾದಾಟಕ್ಕೆ ಸಾವಿರ ವರ್ಷ ಇತಿಹಾಸ: ಉಕ್ರೇನಿಗರಿಗೆ ಯುದ್ಧವೇ ಉಸಿರು!
ಭಾರತ ತಲುಪಿರುವ ಕನ್‌ಸೈನ್ಮೆಂಟ್ S-400 ಕ್ಷಿಪಣಿ ಹಡಗು ಹಾಗೂ ವಿಮಾನದ ಮೂಲಕ ಭಾರತ ತಲುಪಿದೆ. ಕ್ಷಿಪಣಿ ಜೋಡಣೆ ಕಾರ್ಯಗಳು ಮುಗಿದಿದೆ. ಇಷ್ಟೇ ಅಲ್ಲ ಸೇನಾ ನೆಲೆಗಳಲ್ಲಿ ಈ ಕ್ಷಿಪಣಿ ನಿಯೋಜಿಸಲಾಗಿದೆ. ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ, ಭಾರತದ ಒಪ್ಪಂದ ಪ್ರಕಾರ ಚಾಚೂ ತಪ್ಪದೆ ಮಿಲಿಟರಿ ಶಸ್ತಾಸ್ತ್ರ ರವಾನಿಸುತ್ತಿದೆ.
ಭಾರತ ಹಾಗೂ ರಷ್ಯಾ ನಡುವೆ ಈಗಾಗಲೇ ಹಲವು ಮಿಲಿಟರಿ ಒಪ್ಪಂದ ನಡೆದಿದೆ. ಅವುಗಳ ಪೈಕಿ ಎಕೆ 47 ಉತ್ಪಾದನೆ ಕೂಡ ಒಂದಾಗಿದೆ. ವಿಶ್ವದ ಅತ್ಯಾಧುನಿಕ ರೈಫಲ್‌ಗಳಲ್ಲಿ ಒಂದಾದ ‘ಎಕೆ 47’ ಭಾರತದಲ್ಲೇ ಉತ್ಪಾದನೆಯಾಗಲಿದೆ. ಎಕೆ 47 ಸರಣಿಯಲ್ಲಿ ಅತ್ಯಾಧುನಿಕ ಮಾದರಿಯಾದ ‘ಎಕೆ 47 203’ ಗನ್ ಅನ್ನು ಭಾರತದಲ್ಲಿ ಉತ್ಪಾದನೆ ಮಾಡುವ ಸಂಬಂಧ ಭಾರತ ಹಾಗೂ ರಷ್ಯಾ ಒಪ್ಪಂದಕ್ಕೆ ಸಹಿ ಹಾಕಿವೆ. ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ರಷ್ಯಾ ಪ್ರವಾಸ ಕೈಗೊಂಡಿದ್ದು ಈ ವೇಳೆ ಒಪ್ಪಂದಕ್ಕೆ ಸಹಿ ಬಿದ್ದಿದೆ ಎಂದು ವರದಿಗಳು ತಿಳಿಸಿವೆ. ಭಾರತೀಯ ಸೇನಾಪಡೆ ಒಟ್ಟು 7.70 ಲಕ್ಷ ‘ಎಕೆ 47 203’ ಗನ್‌ಗಳ ಅಗತ್ಯವನ್ನು ಹೊಂದಿದ್ದು, ಈ ಪೈಕಿ 1 ಲಕ್ಷ ಗನ್ ರಷ್ಯಾದಿಂದ ಆಮದಾಗಲಿದೆ. ಉಳಿದ 6.70 ಲಕ್ಷ ಗನ್‌ಗಳು ಭಾರತ- ರಷ್ಯಾ ಕಂಪನಿಗಳು ಪಾಲುದಾರಿಕೆಯಲ್ಲಿ ಉತ್ತರಪ್ರದೇಶದಲ್ಲಿ ಸ್ಥಾಪನೆಯಾಗಿರುವ ಇಂಡೋ ರಷ್ಯಾ ರೈಫಲ್ಸ್ ಪ್ರೈ.ಲಿ.ನಲ್ಲಿ ಉತ್ಪಾದನೆಯಾಗಲಿವೆ. ಭಾರತಕ್ಕೆ ರೈಫಲ್ ತಂತ್ರಜ್ಞಾನ ಹಸ್ತಾಂತರ, ಭಾರತದಲ್ಲಿ ಘಟಕ ಸ್ಥಾಪನೆ ವೆಚ್ಚ ಸೇರಿಸಿದರೆ ಪ್ರತಿ ಗನ್‌ಗೆ ಅಂದಾಜು 81000 ರು. (1100 ಡಾಲರ್) ವೆಚ್ಚ ತಗುಲಲಿದೆ. ಹೊಸ ಗನ್‌ಗಳು ಹಾಲಿ ಬಳಕೆಯಲ್ಲಿರುವ ಇನ್ಸಾಸ್ (ಇಂಡಿಯನ್ ಸ್ಮಾಲ್ ಆಮ್ಸ್‌ರ್ ಸಿಸ್ಟಮ್) ಗನ್‌ಗಳನ್ನು ಬದಲಾಯಿಸಲಿವೆ.
ಯುದ್ಧವೆಲ್ಲಾ ಮುಗೀಲಿ, ಭಾರತಕ್ಕೆ ಹೋಗಿ ಗರ್ಲ್ ಫ್ರೆಂಡ್ ನ ಮದುವೆ ಆಗ್ತೇನೆ ಎಂದ ಉಕ್ರೇನ್ ಯೋಧ!
ಇದರ ನಡುವೆ ರಷ್ಯಾ ಜೊತೆಗಿನ ವ್ಯವಾಹರ, ಒಪ್ಪಂದ ಅಮೆರಿಕ ಸೇರಿದಂತೆ ಕೆಲ ರಾಷ್ಟ್ರಗಳು ಗರಂ ಆಗಿದೆ. ಒಪ್ಪಂದ ಮಾಡದಂತೆ ತಾಕೀತು ಮಾಡುತ್ತಿದೆ. ಆದರೆ ಬೆದರಿಕೆಗೆ ಜಗ್ಗದ ಭಾರತ ತಕ್ಕ ತಿರುಗೇಟು ನೀಡಿದೆ. ಪುಟ್ಟದೇಶ ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸದಂತೆ ಒತ್ತಡ ಹೇರುತ್ತಿರುವ ಅಮೆರಿಕಕ್ಕೆ ಭಾರತ ಭರ್ಜರಿ ತಿರುಗೇಟು ಕೊಟ್ಟಿದೆ. ತಿಂಗಳೊಂದರಲ್ಲಿ ರಷ್ಯಾದಿಂದ ಭಾರತ ಖರೀದಿಸುವ ತೈಲದ ಪ್ರಮಾಣ ರಷ್ಯಾದಿಂದ ಯುರೋಪ್ ಅರ್ಧದಿನದಲ್ಲಿ ಮಾಡುವ ಖರೀದಿಗಿಂತ ಕಡಿಮೆ ಇದೆ ಎಂದು ಹೇಳುವ ಮೂಲಕ ಬಿಸಿ ಮುಟ್ಟಿಸಿದೆ.
ರಷ್ಯಾದಿಂದ ತೈಲೋತ್ಪನ್ನ ಆಮದು ನಿಲ್ಲಿಸಿರುವ ಅಮೆರಿಕ ಹಾಗೂ ಯುರೋಪ್ ದೇಶಗಳಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತಿರುಗೇಟು ನೀಡಿದ್ದಾರೆ.ತಮ್ಮಲ್ಲಿರುವ ಇಂಧನ ಸಂಪನ್ಮೂಲಗಳನ್ನು ಯುರೋಪಿನ ಬದಲಾಗಿ ನೈಸರ್ಗಿಕ ಅನಿಲ, ಕಚ್ಚಾತೈಲದ ಅಗತ್ಯವಿರುವ ಜಗತ್ತಿನ ಬೇರೆ ರಾಷ್ಟ್ರಗಳಿಗೆ ರಷ್ಯಾ ಪೂರೈಕೆ ಮಾಡಲು ಬದ್ಧವಾಗಿದೆ ಎಂದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬುಧವಾರ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ