
ನವದೆಹಲಿ: ಜಮ್ಮು ಕಾಶ್ಮೀರದ ಬಗ್ಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥರ ಹೇಳಿಕೆಗೆ ಭಾರತ ಈಗ ಖಡಕ್ ಉತ್ತರ ನೀಡಿದೆ. ಜಮ್ಮು ಕಾಶ್ಮೀರ ನಮ್ಮ ಕತ್ತಿನ ರಕ್ತನಾಳವಾಗಿದೆ. ಹಾಗೂ ಅದು ಮುಂದೆಯೂ ಅದೇ ಆಗಿರುತ್ತದೆ ಎಂದು ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿದ ಭಾರತದ ವಿದೇಶಾಂಗ ಸಚಿವಾಲಯ ನಿಮ್ಮ ಕತ್ತಿನ ರಕ್ತನಾಳದಲ್ಲಿ ವಿದೇಶ ಇರಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಹಾಗೂ ಅದು ಭಾರತದ ಕೇಂದ್ರಾಡಳಿತ ಪ್ರದೇಶ, ಪಾಕಿಸ್ತಾನದೊಂದಿಗಿನ ಜಮ್ಮುಕಾಶ್ಮೀರದ ಏಕೈಕ ಸಂಬಂಧವೆಂದರೆ ಆ ಪ್ರದೇಶವನ್ನು ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವುದಾಗಿದೆ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥರ ಹೇಳಿಕೆಗೆ ಜೈಸ್ವಾಲ್ ತಿರುಗೇಟು ನೀಡಿದ್ದಾರೆ.
ಇದೇ ವೇಳೆ ಅವರ 'ಎರಡು ರಾಷ್ಟ್ರ' ಹೇಳಿಕೆಗೂ ಪ್ರತಿಕ್ರಿಯಿಸಿದ ಜೈಸ್ವಾಲ್, ತಾನು ಅಕ್ರಮಿಸಿಕೊಂಡ ಕಾಶ್ಮೀರದ ಪ್ರದೇಶವನ್ನು ವಾಪಸ್ ಹಿಂದಿರುಗಿಸುವುದೊಂದು ಮಾತ್ರ ಪಾಕಿಸ್ತಾನದ ಜೊತೆ ಕಾಶ್ಮೀರಕ್ಕಿರುವ ಸಂಬಂಧವಾಗಿದೆ ಎಂದಿದ್ದಾರೆ.
ವಿದೇಶದಲ್ಲಿ ಪಾಕಿಸ್ತಾನ ಪ್ರಜೆಗಳ ಸಮಾವೇಶದಲ್ಲಿ ಮಾತನಾಡಿದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್, ಪಾಕಿಸ್ತಾನದ ಸೃಷ್ಟಿಗೆ ಆಧಾರವಾಗಿರುವ ದ್ವಿರಾಷ್ಟ್ರ ಸಿದ್ಧಾಂತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಲ್ಲದೇ ಮುಸ್ಲಿಮರು ಜೀವನದ ಎಲ್ಲಾ ವಿಚಾರಗಳಲ್ಲಿ ಹಿಂದೂಗಳಿಗಿಂತ ಭಿನ್ನರು ಎಂದು ಹೇಳಿಕೆ ನೀಡಿದ್ದರು. ಭಾರತ ಮತ್ತು ಪಾಕಿಸ್ತಾನ ಎರಡು ರಾಷ್ಟ್ರಗಳು, ನಾವು ಒಂದೇ ರಾಷ್ಟ್ರವಲ್ಲ. ಅದಕ್ಕಾಗಿಯೇ ನಮ್ಮ ಪೂರ್ವಜರು ಈ ದೇಶವನ್ನು ರಚಿಸಲು ಹೋರಾಡಿದರು. ನಾವು ಹಿಂದೂಗಳಿಗಿಂತ ತುಂಬಾ ವಿಭಿನ್ನರು, ನಮ್ಮ ಪೂರ್ವಜರು ಮತ್ತು ನಾವು ಈ ದೇಶದ ನಿರ್ಮಾಣಕ್ಕೆ ಸಾಕಷ್ಟು ತ್ಯಾಗ ಮಾಡಿದ್ದೇವೆ. ಅದನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ನಮಗೆ ತಿಳಿದಿದೆ. ನನ್ನ ಪ್ರೀತಿಯ ಸಹೋದರರೇ, ಸಹೋದರಿಯರೇ, ಹೆಣ್ಣುಮಕ್ಕಳೇ ಮತ್ತು ಪುತ್ರರೇ, ದಯವಿಟ್ಟು ಪಾಕಿಸ್ತಾನದ ಈ ಕಥೆಯನ್ನು ಮರೆಯಬೇಡಿ. ಪಾಕಿಸ್ತಾನದೊಂದಿಗಿನ ಅವರ ಬಾಂಧವ್ಯ ಎಂದಿಗೂ ದುರ್ಬಲವಾಗದಂತೆ ಈ ಕಥೆಯನ್ನು ನಿಮ್ಮ ಮುಂದಿನ ಪೀಳಿಗೆಗೆ ಹೇಳಲು ಮರೆಯಬೇಡಿ ಎಂದು ಅವರು ಹೇಳಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಸರ್ಮಾ ಅವರು ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಗಡಿ ಸ್ಪಷ್ಟವಾಗಿದೆ, ನಮ್ಮ ಮಾರ್ಗಗಳು ವಿಭಿನ್ನವಾಗಿವೆ. ನಮ್ಮ ರಾಷ್ಟ್ರವನ್ನು ಬಲಪಡಿಸುವುದು, ನಮ್ಮ ಧರ್ಮವನ್ನು ಎತ್ತಿಹಿಡಿಯುವುದು ಮತ್ತು ನಮ್ಮ ನಾಗರಿಕ ಮೌಲ್ಯಗಳನ್ನು ಪಾಲಿಸುವುದು ಈಗ ನಮ್ಮ ಕರ್ತವ್ಯವಾಗಿದೆ. ಹಾಗೆ ಮಾಡುವುದರಿಂದ, ನಮ್ಮ ರಾಷ್ಟ್ರದ ಘನತೆ ಮತ್ತು ಪ್ರಭಾವವು ಅಪ್ರತಿಮ ಎತ್ತರಕ್ಕೆ ಏರುವುದನ್ನು ನಾವು ಖಚಿತಪಡಿಸಿಕೊಳ್ಳಬಹುದು ಎಂದು ಅವರು ಪಾಕಿಸ್ತಾನ ಸೇನಾ ಮುಖ್ಯಸ್ಥರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಪಾಕಿಸ್ತಾನವು ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದುವಾಗಿದೆ ಪಾಕಿಸ್ತಾನವೂ ಮುಂಬೈ ದಾಳಿಯ ಇತರ ಅಪರಾಧಿಗಳನ್ನು ಕೂಡ ಶಿಕ್ಷೆಗೆ ಒಳಪಡಿಸಬೇಕು ಎಂದು ಭಾರತದ ವಿದೇಶಾಂಗ ಸಚಿವಾಲಯ ಪಾಕಿಸ್ತಾನಕ್ಕೆ ಹೇಳಿದೆ. ಪಾಕಿಸ್ತಾನ ಎಷ್ಟೇ ಪ್ರಯತ್ನಿಸಿದರೂ ಅದು ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದು ಎಂಬ ಅದರ ಕುಖ್ಯಾತಿ ಕಡಿಮೆಯಾಗುವುದಿಲ್ಲ ಎಂದು ಜೈಸ್ವಾಲ್ ಹೇಳಿದ್ದಾರೆ.
ಕೋಟ್ಯಾಂತರ ರೂ. ಮೌಲ್ಯದ ಬಿಲ್‌ಗೇಟ್ಸ್ ಆಸ್ತಿಯಲ್ಲಿ ಮಕ್ಕಳಿಗಾಗಿ ಏನೇನೂ ಇಲ್ಲ..!
26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ತಹವೂರ್ ರಾಣಾನನ್ನು ಕೆಲ ದಿನಗಳ ಹಿಂದಷ್ಟೇ ಅಮೆರಿಕ ಭಾರತದ ವಶಕ್ಕೆ ನೀಡಿತ್ತು. 2008 ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನ ಪ್ರಜೆಯಾದ ತಹವೂರ್ ರಾಣಾನ ಪಾತ್ರದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಚಾರಣೆ ನಡೆಸುತ್ತಿದೆ. 2008 ರ ದಾಳಿಗೆ ಮುನ್ನ ಹಲವಾರು ಭಾರತೀಯ ನಗರಗಳಲ್ಲಿ ನಡೆಸಲಾದ ವಿಚಕ್ಷಣ ಕಾರ್ಯಾಚರಣೆಗಳ ಬಗ್ಗೆ ಮತ್ತು ಲಷ್ಕರ್-ಎ-ತೈಬಾ ಭಯೋತ್ಪಾದಕ ಸಂಘಟನೆಯ ಸದಸ್ಯರೊಂದಿಗಿನ ಸಂವಹನಗಳ ಬಗ್ಗೆ ರಾಣಾ ಪ್ರಮುಖ ಸುಳಿವು ನೀಡಬಹುದೆಂದು ಎನ್‌ಐಎ ನಿರೀಕ್ಷಿಸುತ್ತಿದೆ ಶಂಕಿಸಿದೆ. ಈತನೊಂದಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್‌ಐ ನ ಅಧಿಕಾರಿಗಳ ಒಳಗೊಳ್ಳುವಿಕೆ ಹಾಗೂ ಹರ್ಕತ್-ಉಲ್ ಜಿಹಾದಿ ಇಸ್ಲಾಮಿ (HuJI)ನಂತಹ ಗುಂಪುಗಳ ಭಯೋತ್ಪಾದಕ ಸಂಘಟನೆಗಳ ಜೊತೆ ಈತನ ಸಂಭಾವ್ಯ ಸಂಪರ್ಕಗಳನ್ನು ಸಹ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ