ದೇಶದ ಮೊದಲ ಬುಲೆಟ್ ರೈಲು ವಿನ್ಯಾಸ ಅನಾವರಣ: ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲಿನ 'ಫಸ್ಟ್ ಲುಕ್' ರಿಲೀಸ್‌

Published : May 18, 2026, 06:23 PM IST
india first bullet train

ಸಾರಾಂಶ

ಭಾರತದ ಮೊದಲ ಬುಲೆಟ್ ರೈಲು ಯೋಜನೆಯ ಅಧಿಕೃತ ವಿನ್ಯಾಸವನ್ನು ಅನಾವರಣಗೊಳಿಸಲಾಗಿದೆ. ಮುಂಬೈ-ಅಹಮದಾಬಾದ್ ನಡುವಿನ ಈ 508 ಕಿ.ಮೀ. ಮಾರ್ಗದ ಕಾಮಗಾರಿ, ಸಮುದ್ರದಾಳದ ಸುರಂಗ ಮತ್ತು ಮೇಕ್ ಇನ್ ಇಂಡಿಯಾ ಅಡಿಯಲ್ಲಿ ರೈಲುಗಳ ಅಭಿವೃದ್ಧಿ ಸೇರಿದಂತೆ, ವೇಗವಾಗಿ ಸಾಗುತ್ತಿದೆ.

ನವದೆಹಲಿ (ಮೇ.18): ದೇಶದ ಬಹುನಿರೀಕ್ಷಿತ ಹಾಗೂ ಅತ್ಯಂತ ಪ್ರತಿಷ್ಠಿತ ಮೊದಲ ಬುಲೆಟ್ ರೈಲು (Bullet Train) ಯೋಜನೆಯ ಅಧಿಕೃತ ವಿನ್ಯಾಸವನ್ನು ಭಾರತೀಯ ರೈಲ್ವೆ ಇಲಾಖೆ ಕೊನೆಗೂ ಅನಾವರಣಗೊಳಿಸಿದೆ. ಮುಂಬೈ ಮತ್ತು ಅಹಮದಾಬಾದ್ ನಡುವೆ ಸಂಚರಿಸಲಿರುವ ಈ ಹೈಸ್ಪೀಡ್ ರೈಲಿನ ಪ್ರಸ್ತಾಪಿತ ಮಾದರಿಯ ಚಿತ್ರವನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ರೈಲ್ವೆ ಸಚಿವಾಲಯದ ಕಚೇರಿಯಲ್ಲಿ ಪ್ರದರ್ಶಿಸಲಾಗಿದೆ. "ದೇಶದ ಮೊದಲ ಪ್ರಸ್ತಾಪಿತ ಬುಲೆಟ್ ರೈಲಿನ ಆಕರ್ಷಕ ಚಿತ್ರವನ್ನು ರೈಲ್ವೆ ಸಚಿವಾಲಯದ ಗೇಟ್ ಸಂಖ್ಯೆ 4 ರಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಅಳವಡಿಸಲಾಗಿದೆ" ಎಂದು ಭಾರತೀಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ (ANI) ವರದಿ ಮಾಡಿದೆ.

12 ನಿಲ್ದಾಣಗಳು, 3 ರಾಜ್ಯಗಳ ವ್ಯಾಪ್ತಿ

ಕಳೆದ ಫೆಬ್ರವರಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಂತೆ, ಒಟ್ಟು 508 ಕಿಲೋಮೀಟರ್ ಉದ್ದದ ಈ 'ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು' (MAHSR) ಯೋಜನೆಯು ಮಹಾರಾಷ್ಟ್ರ, ಗುಜರಾತ್ ಹಾಗೂ ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ ಹವೇಲಿ ವ್ಯಾಪ್ತಿಯಲ್ಲಿ ಹಾದುಹೋಗಲಿದೆ. ಈ ಸಂಪೂರ್ಣ ಮಾರ್ಗದಲ್ಲಿ ಒಟ್ಟು 12 ನಿಲ್ದಾಣಗಳನ್ನು ಗುರುತಿಸಲಾಗಿದೆ. ಅವುಗಳೆಂದರೆ: ಮುಂಬೈ, ಥಾಣೆ, ವಿರಾರ್, ಬೋಯಿಸರ್, ವಾಪಿ, ಬಿಲಿಮೋರಾ, ಸೂರತ್, ಭರೂಚ್, ವಡೋದರಾ, ಆನಂದ್, ಅಹಮದಾಬಾದ್ ಮತ್ತು ಸಬರಮತಿ.

ಕಾಮಗಾರಿ ಪ್ರಗತಿ

ಈ ಬೃಹತ್ ಯೋಜನೆಗಾಗಿ ಮೂಲಸೌಕರ್ಯ ಕಾಮಗಾರಿಗಳು ಅತ್ಯಂತ ವೇಗವಾಗಿ ಪ್ರಗತಿಯಲ್ಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಗುಜರಾತ್ ವಲಯದ ಎಂಟು ನಿಲ್ದಾಣಗಳಲ್ಲಿ (ವಾಪಿ, ಬಿಲಿಮೋರಾ, ಸೂರತ್, ಭರೂಚ್, ಆನಂದ್, ವಡೋದರಾ, ಅಹಮದಾಬಾದ್ ಮತ್ತು ಸಬರಮತಿ) ಈಗಾಗಲೇ ನಿಲ್ದಾಣಗಳ ಅಡಿಪಾಯದ ಕೆಲಸ ಪೂರ್ಣಗೊಂಡಿದೆ. ಮಹಾರಾಷ್ಟ್ರದ ಥಾಣೆ, ವಿರಾರ್ ಮತ್ತು ಬೋಯಿಸರ್‌ನಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಮುಂಬೈನ ಬಿಕೆಸಿ ನಿಲ್ದಾಣದ ಉತ್ಖನನ (Excavation) ಕಾರ್ಯವು ಶೇಕಡಾ 91% ರಷ್ಟು ಪೂರ್ಣಗೊಂಡಿದ್ದು, ನಿರ್ಮಾಣ ಕಾರ್ಯ ಆರಂಭವಾಗಿದೆ.

ಯೋಜನೆಯ ಮಾರ್ಗದಲ್ಲಿ ಬರುವ ಒಟ್ಟು 17 ನದಿ ಸೇತುವೆಗಳ ನಿರ್ಮಾಣ ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಂಡಿದೆ. ಗುಜರಾತ್‌ನ ಪ್ರಮುಖ ನದಿಗಳಾದ ನರ್ಮದಾ, ಮಾಹಿ, ತಪ್ತಿ ಮತ್ತು ಸಬರಮತಿ ಸೇತುವೆಗಳ ಕೆಲಸ ಅಂತಿಮ ಹಂತಕ್ಕೆ ತಲುಪಿದೆ. ಇತ್ತ ಮಹಾರಾಷ್ಟ್ರದಲ್ಲೂ ನಾಲ್ಕು ನದಿ ಸೇತುವೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ದೇಶದಲ್ಲೇ ಮೊದಲ ಬಾರಿಗೆ ನಿರ್ಮಾಣವಾಗುತ್ತಿರುವ ಸಮುದ್ರದಾಳದ ಸುರಂಗ ಮಾರ್ಗದ (Under-sea tunnel) ಕಾಮಗಾರಿ ಆರಂಭವಾಗಿದ್ದು, ಘನ್ಸೋಲಿ ಮತ್ತು ಶಿಲ್ಪಾಟಾ ನಡುವಿನ 4.8 ಕಿಲೋಮೀಟರ್ ವ್ಯಾಪ್ತಿಯ ಕೆಲಸ ಈಗಾಗಲೇ ಮುಕ್ತಾಯಗೊಂಡಿದೆ.

ಮೇಕ್ ಇನ್ ಇಂಡಿಯಾ ಅಡಿಯಲ್ಲಿ 280 ಕಿಮೀ ವೇಗದ ರೈಲು

ಭಾರತೀಯ ರೈಲ್ವೆಯ ಪ್ರಕಾರ, ಈ ಯೋಜನೆಯು ಪ್ರಧಾನಿ ಮೋದಿಯವರ 'ಮೇಕ್ ಇನ್ ಇಂಡಿಯಾ' (Make in India) ಉಪಕ್ರಮಕ್ಕೆ ಭಾರಿ ಉತ್ತೇಜನ ನೀಡಲಿದೆ. ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಮತ್ತು ಬೆಂಗಳೂರಿನ ಬಿಇಎಂಎಲ್ ಲಿಮಿಟೆಡ್ (BEML) ಸಂಸ್ಥೆಗಳು ಜಂಟಿಯಾಗಿ ಗಂಟೆಗೆ ಬರೋಬ್ಬರಿ 280 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಅತ್ಯಾಧುನಿಕ ಬುಲೆಟ್ ರೈಲು ಸೆಟ್‌ಗಳನ್ನು ದೇಶೀಯವಾಗಿಯೇ ಅಭಿವೃದ್ಧಿಪಡಿಸುತ್ತಿವೆ. ಲೋಕಸಭೆಯಲ್ಲಿ ರೈಲ್ವೆ ಸಚಿವರು ನೀಡಿರುವ ಲಿಖಿತ ಉತ್ತರದ ಪ್ರಕಾರ, ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಗೆ ಅಗತ್ಯವಿದ್ದ ಒಟ್ಟು 1,389.5 ಹೆಕ್ಟೇರ್ ಭೂಮಿಯನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ.

ಚಾಲ್ತಿಯಲ್ಲಿರುವ ಕಾನೂನುಗಳ ಪ್ರಕಾರವೇ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗಿದ್ದು, ಸಂತ್ರಸ್ತರಿಗೆ 'ಭೂಸ್ವಾಧೀನ, ಪುನರ್ವಸತಿ ಮತ್ತು ಮರುಸ್ಥಾಪನೆ ಕಾಯ್ದೆ' (Right to Fair Compensation and Transparency in Land Acquisition, Rehabilitation and Resettlement Act) ಹಾಗೂ ಆಯಾ ರಾಜ್ಯಗಳ ನೀತಿಗಳ ಅಡಿಯಲ್ಲಿ ಸೂಕ್ತ ಪರಿಹಾರ, ಹೆಚ್ಚುವರಿ ಸವಲತ್ತು ಮತ್ತು ಸೋಲೇಷಿಯಂ (Solatium - ನಷ್ಟ ಪರಿಹಾರ ಮೊತ್ತ) ಅನ್ನು ಮಹಾರಾಷ್ಟ್ರ ಮತ್ತು ಗುಜರಾತ್ ಸರ್ಕಾರಗಳ ಸಮನ್ವಯದೊಂದಿಗೆ ವಿತರಿಸಲಾಗಿದೆ.

ಸ್ಪರ್ಧಾತ್ಮಕ ಟಿಕೆಟ್ ದರ ಮತ್ತು ಜಪಾನ್ ತಂತ್ರಜ್ಞಾನ

ಪ್ರಯಾಣಿಕರ ಹೆಚ್ಚಿನ ದಟ್ಟಣೆಯನ್ನು ನಿಭಾಯಿಸುವ ಹಾಗೂ ಅತಿ ಹೆಚ್ಚು ಫ್ರೀಕ್ವೆನ್ಸಿಯಲ್ಲಿ (ಸತತ ಕಾರ್ಯಾಚರಣೆ) ಸಂಚರಿಸುವ ರೀತಿಯಲ್ಲಿ ಈ ಕಾರಿಡಾರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದರ ಟಿಕೆಟ್ ದರಗಳನ್ನು ಪ್ರಸ್ತುತ ಇರುವ ರೈಲ್ವೆ ಮತ್ತು ವಿಮಾನ ಪ್ರಯಾಣದ ದರಗಳಿಗೆ ತಕ್ಕಂತೆ ಸಾರ್ವಜನಿಕರಿಗೆ ಹೊರೆಯಾಗದಂತೆ ಅತ್ಯಂತ ಸ್ಪರ್ಧಾತ್ಮಕವಾಗಿ ಇರಿಸಲು ಪ್ರಸ್ತಾಪಿಸಲಾಗಿದೆ.

ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ಇಡೀ ಪ್ರಾಜೆಕ್ಟ್‌ ಅನ್ನು ಜಪಾನೀಸ್ ರೈಲ್ವೇಸ್ (Japanese Railways) ತಾಂತ್ರಿಕ ಸಹಯೋಗದೊಂದಿಗೆ ವಿನ್ಯಾಸಗೊಳಿಸಲಾಗಿದ್ದರೂ, ಭಾರತದ ವಾತಾವರಣ, ಹವಾಮಾನ ಮತ್ತು ಇಲ್ಲಿನ ಅಗತ್ಯತೆಗಳಿಗೆ ತಕ್ಕಂತೆ ವಿಶೇಷವಾಗಿ ಕಸ್ಟಮೈಸ್ (Customised) ಮಾಡಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಮಿಳುನಾಡು ಟಿವಿಕೆ ಸರ್ಕಾರಕ್ಕೆ ಕಂಟಕ, ವಿಜಯ್ ಆಡಳಿತ 6 ತಿಂಗಳಲ್ಲಿ ಕೊನೆ: ಭವಿಷ್ಯ ನುಡಿದ ರಾಧಾಕೃಷ್ಣನ್!
GOA SECRET: ಸಿಟಿ ಜಂಜಾಟಕ್ಕೆ ಬೇಸತ್ತು ಗೋವಾ ಕಡೆ ಮುಖ ಮಾಡಿದ ಯುವಕರು! ಏನಿದು 'ಸುಸೆಗಾಡ್' ಲೈಫ್‌ಸ್ಟೈಲ್?