ಆಶಾ ಕಾರ್ಯಕರ್ತೆಯರ ವೇತನ ಭಾರೀ ಪ್ರಮಾಣದಲ್ಲಿ ಏರಿಕೆ, ಜೂ.15ರಿಂದ ಮಹಿಳೆಯರಿಗೆ ಬಸ್‌ ಪ್ರಯಾಣ ಉಚಿತ

Published : May 18, 2026, 04:18 PM IST
VD Satheesan

ಸಾರಾಂಶ

ಕೇರಳದ ನೂತನ ಯುಡಿಎಫ್ ಸರ್ಕಾರವು ತನ್ನ ಮೊದಲ ಸಂಪುಟ ಸಭೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ಹಿರಿಯ ನಾಗರಿಕರಿಗೆ ವಿಶೇಷ ಇಲಾಖೆ ಸ್ಥಾಪಿಸುವ ಗ್ಯಾರಂಟಿಗಳನ್ನು ಘೋಷಿಸಿದೆ. ಇದರೊಂದಿಗೆ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು ಹೆಚ್ಚಳ ಮಾಡಿದೆ.

ತಿರುವನಂತಪುರಂ (ಮೇ.18): ಕೇರಳದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಯುಡಿಎಫ್ ಸರ್ಕಾರದ ಚೊಚ್ಚಲ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ರಾಜ್ಯದ ಜನತೆಗೆ ಎರಡು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಜೂನ್ 15 ರಿಂದ ರಾಜ್ಯಾದ್ಯಂತ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವುದು ಹಾಗೂ ದೇಶದಲ್ಲೇ ಮೊದಲ ಬಾರಿಗೆ ಹಿರಿಯ ನಾಗರಿಕರಿಗಾಗಿ ವಿಶೇಷ ಇಲಾಖೆಯನ್ನು ಸ್ಥಾಪಿಸುವುದು ಸೇರಿದಂತೆ ಹಲವು ಜನಪ್ರಿಯ ನಿರ್ಧಾರಗಳನ್ನು ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.

ಸಮಾಜವು ಹೆಚ್ಚು ಸುಸಂಸ್ಕೃತವಾಗಬೇಕಾದರೆ ಹಿರಿಯ ನಾಗರೀಕರನ್ನು ಗೌರವದಿಂದ ರಕ್ಷಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಪ್ರತ್ಯೇಕ ಇಲಾಖೆಯನ್ನು ರಚಿಸಲಾಗುತ್ತಿದ್ದು, ಇದು ಭಾರತದಲ್ಲೇ ಮೊದಲ ಪ್ರಯತ್ನವಾಗಿದೆ. ಈ ನೂತನ ಇಲಾಖೆಯ ಹಿಂದೆ ಸರ್ಕಾರದ ಕನಸಿನ ಮಹತ್ವಾಕಾಂಕ್ಷಿ ಗುರಿ ಅಡಗಿದೆ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.

ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಿಬ್ಬಂದಿಗೆ ಭರ್ಜರಿ ವೇತನ ಪರಿಷ್ಕರಣೆ

ರಾಜ್ಯದ ವಿವಿಧ ವಲಯದ ತಳಮಟ್ಟದ ನೌಕರರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಸಂಪುಟ ಸಭೆಯು ಮಹತ್ವದ ತೀರ್ಮಾನ ಕೈಗೊಂಡಿದೆ. ರಾಜ್ಯದ ಆಶಾ (Asha) ಕಾರ್ಯಕರ್ತೆಯರ ಮಾಸಿಕ ವೇತನವನ್ನು ಭಾರಿ ಪ್ರಮಾಣದಲ್ಲಿ ಅಂದರೆ 3,000 ರೂಪಾಯಿ ಹೆಚ್ಚಳ ಮಾಡಲಾಗಿದೆ. ಅದರೊಂದಿಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವೇತನದಲ್ಲಿ 1,000 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇನ್ನು ಸರ್ಕಾರಿ ಶಾಲೆಗಳ ಉಚಿತ ಬಿಸಿಯೂಟ ಯೋಜನೆ ಮತ್ತು ಕಚೇರಿಗಳ ಅಡುಗೆ ಕಾರ್ಮಿಕರ ವೇತನವನ್ನೂ ಸಹ 1,000 ರೂಪಾಯಿ ಏರಿಕೆ ಮಾಡಲಾಗಿದೆ. ಪ್ರೀ-ಪ್ರೈಮರಿ (Pre-primary) ಶಾಲಾ ಶಿಕ್ಷಕರು ಹಾಗೂ ಆಯಾಗಳ ವೇತನದಲ್ಲಿಯೂ 1,000 ರೂಪಾಯಿ ಹೆಚ್ಚಳ ಮಾಡಲಾಗಿದೆ.

"ರಾಜ್ಯದ ಸದ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ತಕ್ಷಣ, ಮುಂಬರುವ ದಿನಗಳಲ್ಲಿ ಇವರಿಗಾಗಿ ಇನ್ನೂ ಹೆಚ್ಚಿನ ಆರ್ಥಿಕ ನೆರವು ಮತ್ತು ಸವಲತ್ತುಗಳನ್ನು ನೀಡಲಾಗುವುದು. ಸದ್ಯದಲ್ಲೇ ರಾಜ್ಯದ ಪ್ರಸ್ತುತ ಆರ್ಥಿಕ ಸ್ಥಿತಿಗತಿಯ ಬಗ್ಗೆ ಅಧಿಕೃತ ಶ್ವೇತಪತ್ರ (White Paper) ಹೊರಡಿಸಲಾಗುವುದು" ಎಂದು ಸಿಎಂ ಸತೀಶನ್ ಸ್ಪಷ್ಟಪಡಿಸಿದರು. ಇದರೊಂದಿಗೆ ಹಿಂದಿನ ಎಡರಂಗ ಸರ್ಕಾರದ ಅವಧಿಯಲ್ಲಿ ಮಾಧ್ಯಮಗಳ ಮೇಲಿನ ನಿರ್ಬಂಧವನ್ನು ಮರುಪರಿಶೀಲಿಸುವುದಾಗಿ ಅವರು ಮಾಧ್ಯಮಗಳಿಗೆ ಭರವಸೆ ನೀಡಿದರು.

ಮೇ 21 ರಿಂದ ಅಧಿವೇಶನ ಆರಂಭ; ಜಿ. ಸುಧಾಕರನ್ ಹಂಗಾಮಿ ಸ್ಪೀಕರ್‌

ಕೇರಳದ ನೂತನ ವಿಧಾನಸಭೆಯ ಪ್ರಕ್ರಿಯೆಗಳ ದಿನಾಂಕವನ್ನು ಸಂಪುಟ ಸಭೆ ಅಂತಿಮಗೊಳಿಸಿದೆ. ಹಿರಿಯ ನಾಯಕ ಜಿ. ಸುಧಾಕರನ್ ಅವರನ್ನು ನೂತನ ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಲಾಗಿದೆ. ಮೇ 21 ರಿಂದ ಅಧಿಕೃತವಾಗಿ ವಿಧಾನಸಭಾ ಅಧಿವೇಶನ ಆರಂಭವಾಗಲಿದ್ದು, ಅಂದೇ ನೂತನವಾಗಿ ಆಯ್ಕೆಯಾಗಿರುವ ಎಲ್ಲಾ ಶಾಸಕರ (MLA) ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ತದನಂತರ ಮೇ 29 ರಂದು ರಾಜ್ಯ ಸರ್ಕಾರದ ನೂತನ ನೀತಿಗಳು ಹೊರಬೀಳಲಿದೆ.

ಪ್ರಾಸಿಕ್ಯೂಷನ್ ಡಿಜಿ ಆಗಿ ಟಿ. ಅಸಫ್ ಅಲಿ ನೇಮಕ; ಸಿಟ್‌ (SIT) ತನಿಖೆಗೆ ಆದೇಶ

ನ್ಯಾಯಾಂಗ ಮತ್ತು ಆಡಳಿತಾತ್ಮಕ ವಲಯದಲ್ಲೂ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದ್ದು, ಹಿರಿಯ ವಕೀಲ ಟಿ. ಅಸಫ್ ಅಲಿ ಅವರನ್ನು ರಾಜ್ಯದ ನೂತನ ಪ್ರಾಸಿಕ್ಯೂಷನ್ ಡೈರೆಕ್ಟರ್ ಜನರಲ್ (Director General of Prosecution) ಆಗಿ ನೇಮಕ ಮಾಡಲಾಗಿದೆ. ಇದೇ ವೇಳೆ, ಹಿಂದಿನ ಮುಖ್ಯಮಂತ್ರಿಯವರ ಗನ್‌ಮ್ಯಾನ್ ಸಾರ್ವಜನಿಕರ ಮೇಲೆ ನಡೆಸಿದ್ದ ಹಲ್ಲೆ ಮತ್ತು ದೌರ್ಜನ್ಯದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೊಸ ಸರ್ಕಾರ, ಈ ಕುರಿತು ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. "ರಾಜ್ಯದಲ್ಲಿ ಈ ಹಿಂದಿನಿಂದ ನಡೆದುಕೊಂಡು ಬರುತ್ತಿದ್ದ ತಪ್ಪು ಪದ್ಧತಿಗಳು ಮತ್ತು ಆಡಳಿತಾತ್ಮಕ ಧೋರಣೆಗಳನ್ನು ಸಂಪೂರ್ಣವಾಗಿ ಬದಲಾಯಿಸಲಾಗುವುದು" ಎಂದು ಮುಖ್ಯಮಂತ್ರಿ ವಿ.ಡಿ.ಸತೀಶನ್‌ ತಿಳಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಫಾರಿನ್‌ನಲ್ಲಿರೋ ಅಳಿಯನಿಗೆ 1.5 ಕೆಜಿ ತೂಕದ ಕೊಲ್ಲಾಪುರಿ ಬೆಳ್ಳಿ ಚಪ್ಪಲಿ ಕೊಡಿಸಿದ ಮಾವ! ವೈರಲ್ ಆಯ್ತು ಐಡಿಯಾ!
ಜಡ್ಜ್ ಅತ್ತೆಗೆ ಸೊಸೆಯಾದ ಮಾಜಿ 'ಮಿಸ್ ಪುಣೆ ಟ್ವಿಶಾ ಶರ್ಮಾ'; ಮದುವೆಯಾಗಿ 5 ತಿಂಗಳಿಗೆ ನಿಗೂಢ ಸಾವು!