
ನವದೆಹಲಿ(ಅ.22) ಭಾರತವು ಗುರುವಾರ ಬೆಳಗ್ಗೆ ದಾಖಲೆಯ 100 ಕೋಟಿ ಲಸಿಕೆ ಡೋಸ್ ನೀಡುವ ಮುಖಾಂತರ ಹೊಸ ಮೈಲಿಗಲ್ಲಿಗೆ ಸಾಕ್ಷಿಯಾಗಿದೆ. ಇದರೊಂದಿಗೆ ಲಸಿಕೆ ಅಭಿಯಾನ ಆರಂಭವಾದ 279 ದಿನಗಳಲ್ಲಿ ಭಾರತ 100 ಕೋಟಿ ಡೋಸ್ ಲಸಿಕೆ ಸಾಧನೆ ಮಾಡಿದಂತಾಗಿದೆ. ಹೀಗಿರುವಾಗ ದೇಶದ ಕೊರೋನಾ ಹೋರಾಟದಲ್ಲಿ ಮೂರು ವ್ಯಕ್ತಿಗಳು ಬಹಳ ಮಹತ್ವದ ಪಾತ್ರ ವಹಿಸಿದ್ದಾರೆ. ಅಷ್ಟಕ್ಕೂ ಅವರು ಯಾರು? ಇಲ್ಲಿದೆ ವಿವರ
ಡಾ. ಬಲರಾಂ ಭಾರ್ಗವ, ಐಸಿಎಂಆರ್ ಮುಖ್ಯಸ್ಥ
ಐಸಿಎಂಆರ್ ಮುಖ್ಯಸ್ಥರಾಗಿರುವ ಡಾ. ಬಲರಾಂ ಭಾರ್ಗವ(Balram Bhargava) ಅವರು ಕೊರೋನಾ ವೈರಸ್ ವಿರುದ್ಧದ ಸರ್ಕಾರದ ಹೋರಾಟದಲ್ಲಿ ಸಕ್ರಿಯರಾಗಿ ಪಾಲುದಾರರಾಗಿದ್ದರು. ಸೋಂಕು ತಡೆಯುವ ನಿಟ್ಟಿನಲ್ಲಿ ಅವರು ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡಿದರು. ಜತೆಗೆ ಜನರು ಕೊರೋನಾ ವೈರಸ್ ಬಗ್ಗೆ ಯಾವೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂಬ ಬಗ್ಗೆ ಆಗ್ಗಾಗ್ಗೆ ಸುದ್ದಿಗೋಷ್ಠಿಗಳನ್ನು ನಡೆಸಿ ಸಲಹೆ ಮತ್ತು ಸೂಚನೆಗಳನ್ನು ನೀಡುತ್ತಿದ್ದರು. ಅಲ್ಲದೆ ಲಸಿಕೆ ಬಗ್ಗೆ ಜನ ಸಾಮಾನ್ಯರಲ್ಲಿ ಇದ್ದ ಗೊಂದಲಗಳನ್ನು ನಿವಾರಿಸಿ ಲಸಿಕೆ ಅಭಿಯಾನಕ್ಕೆ ಚುರುಕು ನೀಡುವಲ್ಲಿ ಇವರ ಪಾತ್ರ ಕಡೆಗಣಿಸುವಂತಿಲ್ಲ.
ಡಾ. ವಿ.ಕೆ ಪೌಲ್, ಕೊರೋನಾ ಕಾರ್ಯಪಡೆ ಮುಖ್ಯಸ್ಥ
ನೀತಿ ಆಯೋಗದ ಸದಸ್ಯರಾಗಿರುವ ಡಾ. ವಿ.ಕೆ ಪೌಲ್(VK Paul) ಅವರಿಗೆ ದೇಶದಲ್ಲಿ ವ್ಯಾಪಕವಾಗಿ ಹಬ್ಬಿದ ಮಹಾಮಾರಿ ಕೊರೋನಾ ಸೋಂಕು ನಿಯಂತ್ರಣಕ್ಕೆ ರಚಿಸಲಾದ ಕೊರೋನಾ ಕಾರ್ಯಪಡೆಯ ಮುಖ್ಯಸ್ಥರ ಜವಾಬ್ದಾರಿಯನ್ನು ವಹಿಸಲಾಯಿತು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಆಯುಷ್ಮಾನ್ ಭಾರತ್-ಪಿಎಂಜೆಎವೈ, ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಪೋಷಣ ಅಭಿಯಾನಗಳ ಹಿಂದೆ ಡಾ. ವಿ.ಕೆ ಪೌಲ್ ಅವರ ಶ್ರಮವಿದೆ. ಈ ಎಲ್ಲಾ ಜವಾಬ್ದಾರಿಗಳ ಜತೆಗೆ ಸೋಂಕು ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಆಗ್ಗಾಗ್ಗೆ ಸಲಹೆ ಮತ್ತು ಸೂಚನೆಗಳನ್ನು ನೀಡಿದರು. ಜನ ಸಾಮಾನ್ಯರಲ್ಲಿ ಕೋವಿಡ್ ಲಸಿಕೆ ಬಗ್ಗೆ ತಪ್ಪು ಕಲ್ಪನೆಯನ್ನು ಹೋಗಲಾಡಿಸಿ, ಜನರನ್ನು ಲಸಿಕೆ ಪಡೆಯುವತ್ತ ಉತ್ತೇಜನ ನೀಡುವಲ್ಲಿ ಇವರ ಪಾತ್ರವೂ ಇತ್ತು.
ಡಾ. ಆರ್.ಎಸ್ ಶರ್ಮಾ, ಕೋವಿನ್ ಮುಖ್ಯಸ್ಥ
ದೇಶದಲ್ಲಿ ಪ್ರತಿಯೊಬ್ಬರಿಗೂ ಕೊರೋನಾ ಲಸಿಕೆ ನೀಡುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾದ ಕೋವಿನ್ ವೆಬ್‌ಸೈಟ್ ನೇತೃತ್ವವನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ. ಆರ್.ಎಸ್ ಶರ್ಮಾ(RS Sharma) ಅವರಿಗೆ ವಹಿಸಲಾಗಿತ್ತು. ಮೊದಲಿಗೆ ಲಸಿಕೆ ಪಡೆಯುವವರು ಮೊದಲ ಡೋಸ್ ಮತ್ತು 2ನೇ ಡೋಸ್ ಪಡೆಯುವಾಗ ಬೇರೆ ಮೊಬೈಲ್ ಸಂಖ್ಯೆ ನೀಡುತ್ತಿದ್ದರು. ಇದರಿಂದ ಲಸಿಕೆಯ 2 ಡೋಸ್‌ಗಳನ್ನು ಪಡೆದವರಿಗೆ ಒಂದೇ ಡೋಸ್ ಲಸಿಕೆ ನೀಡಲಾಗಿದೆ ಎಂಬಂತೆ ಕೋವಿನ್‌ನಲ್ಲಿ ತೋರಿಸಲಾಗುತ್ತಿತ್ತು. ಇಂಥ ಹಲವು ದೋಷಗಳನ್ನು ಸರಿಪಡಿಸಿ ದೇಶಾದ್ಯಂತ ಕೋವಿಡ್ ಲಸಿಕೆ ಲೆಕ್ಕಾಚಾರದಲ್ಲಿ ಸಕ್ರಿಯವಾದ ಕೋವಿನ್ ಅನ್ನು ಡಾ. ಆರ್.ಎಸ್ ಶರ್ಮಾ ಅವರು ಪರಿಣಾಮಕಾರಿಗೊಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ