'ಟೀಂ ಇಂಡಿಯಾ ಜಗತ್ತಿಗೆ ಶಕ್ತಿ ತೋರಿಸಿದೆ' ಲಸಿಕಾ ಅಭಿಯಾನಕ್ಕೆ ಮೋದಿ ಧನ್ಯವಾದ

By Suvarna News  |  First Published Oct 21, 2021, 7:35 PM IST

* ಸಾಧನೆಯಿಂದಲೇ ಸಂಕಷ್ಟಕ್ಕೆ ಸ್ಪಂದಿಸಿದ ಟೀಮ್ ಇಂಡಿಯಾ 
*ಅತಿದೊಡ್ಡ ಲಸಿಕಾ ಅಭಿಯಾನ ಯಶಸ್ಸಿನಲ್ಲಿ ಮೋದಿ ಬರಹ
* ಲಸಿಕೆ ಅಭಿಯಾನದ ಯಶಸ್ಸು ಎಲ್ಲರಿಗೂ ಸಲ್ಲಬೇಕು
* ಕೊರೋನಾ ಫ್ರಂಟ್ ಲೈನ್  ಯೋಗಿಗಳಿಗೆ ಧನ್ಯವಾದ


* ನರೇಂದ್ರ ಮೋದಿ, ಪ್ರಧಾನ ಮಂತ್ರಿ, ಭಾರತ ಸರ್ಕಾರ

ಭಾರತವು(India) ಲಸಿಕೆ (Vaccine) ಹಾಕಲು ಆರಂಭಿಸಿದ ಸುಮಾರು 9 ತಿಂಗಳಲ್ಲಿ 21 ಅಕ್ಟೋಬರ್ 2021 ರಂದು 100 ಕೋಟಿ ಡೋಸ್‌ಗಳ ಲಸಿಕೆ ನೀಡಿಕೆಯನ್ನು ಪೂರ್ಣಗೊಳಿಸಿದೆ. ಕೋವಿಡ್-19 ನಿಗ್ರಹದಲ್ಲಿ, ವಿಶೇಷವಾಗಿ 2020 ರ ಆರಂಭದಲ್ಲಿದ್ದ ಪರಿಸ್ಥಿತಿಯನ್ನು ನಾವು ನೆನಪಿಸಿಕೊಂಡರೆ ಇದೊಂದು ಅದ್ಭುತವಾದ ಪ್ರಯಾಣವಾಗಿದೆ.  ಮನುಕುಲವು 100 ವರ್ಷಗಳ ನಂತರ ಇಂತಹ ಸಾಂಕ್ರಾಮಿಕ(Pandemic) ರೋಗವನ್ನು ಎದುರಿಸುತ್ತಿದೆ ಮತ್ತು ಈ ವೈರಾಣುವಿನ(Coronavirus) ಬಗ್ಗೆ ಯಾರಿಗೂ ಹೆಚ್ಚು ತಿಳಿದಿರಲಿಲ್ಲ.

Tap to resize

Latest Videos

ಅಪರಿಚಿತ ಮತ್ತು ಅದೃಶ್ಯ ಶತ್ರು ವೇಗವಾಗಿ ಪರಿವರ್ತಿತವಾಗುತ್ತಿದ್ದಂತೆ ಪರಿಸ್ಥಿತಿ ಎಷ್ಟು ಅನಿರೀಕ್ಷಿತವಾಗಿತ್ತು ಎಂಬುದನ್ನು ನಾವು ಮರೆತಿಲ್ಲ. ಆತಂಕದಿಂದ ಭರವಸೆಯವರೆಗಿನ ಪ್ರಯಾಣವು ಸಂಭವಿಸಿದೆ ಮತ್ತು ನಮ್ಮ ರಾಷ್ಟ್ರವು ಶಕ್ತಿಯುತವಾಗಿ ಹೊರಹೊಮ್ಮಿದೆ.  ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನಕ್ಕೆ ಧನ್ಯವಾದಗಳು.

ಇದು ಸಮಾಜದ ಬಹು ವರ್ಗಗಳನ್ನು ಒಳಗೊಂಡ ನಿಜವಾದ ಭಗೀರಥ ಪ್ರಯತ್ನವಾಗಿದೆ. ಇದರ ಬೃಹತ್ ಪ್ರಮಾಣವನ್ನು ತಿಳಿಯಬೇಕಾದರೆ, ಪ್ರತಿ ಲಸಿಕೆ ನೀಡಲು ಆರೋಗ್ಯ ಕಾರ್ಯಕರ್ತರಿಗೆ ಕೇವಲ 2 ನಿಮಿಷಗಳು ಬೇಕಾಗುತ್ತದೆ ಎಂದು ಊಹಿಸಿಕೊಳ್ಳಿ. ಈ ದರದಲ್ಲಿ, ಈ ಹೆಗ್ಗುರುತನ್ನು ತಲುಪಲು ಸುಮಾರು 41 ಲಕ್ಷ ಮಾನವ ದಿನಗಳು ಅಥವಾ ಸರಿಸುಮಾರು 11 ಸಾವಿರ ಮಾನವ ವರ್ಷಗಳ ಶ್ರಮ ಬೇಕಾಗುತ್ತದೆ. 

ಯಾವುದೇ ಪ್ರಯತ್ನದಲ್ಲಿ ವೇಗ ಮತ್ತು ಪ್ರಮಾಣವನ್ನು ಸಾಧಿಸಲು ಮತ್ತು ಅದನ್ನು ಉಳಿಸಿಕೊಳ್ಳಲು ಎಲ್ಲಾ ಪಾಲುದಾರರ ವಿಶ್ವಾಸವು ನಿರ್ಣಾಯಕವಾಗಿದೆ. ಈ ಅಭಿಯಾನದ ಯಶಸ್ಸಿಗೆ ಒಂದು ಪ್ರಮುಖ ಕಾರಣವೆಂದರೆ, ಅಪನಂಬಿಕೆ ಮತ್ತು ಭಯವನ್ನು ಸೃಷ್ಟಿಸುವ ಹಲವಾರು ಪ್ರಯತ್ನಗಳ ನಡುವೆಯೂ ಜನರು ಲಸಿಕೆಯ ಬಗ್ಗೆ ತೋರಿಸಿದ ವಿಶ್ವಾಸ ಮತ್ತು ಲಸಿಕೆ ನೀಡಿಕೆಯಲ್ಲಿ ಅನುಸರಿಸಲಾದ  ಪ್ರಕ್ರಿಯೆ.
ನಮ್ಮಲ್ಲಿ ಕೆಲವರು ದೈನಂದಿನ ಅಗತ್ಯಗಳಿಗೂ ಸಹ ವಿದೇಶಿ ಬ್ರಾಂಡ್‌ಗಳನ್ನು ಮಾತ್ರ ನಂಬುತ್ತಾರೆ. ಆದಾಗ್ಯೂ, ಕೋವಿಡ್ -19 ಲಸಿಕೆಯಂತಹ ನಿರ್ಣಾಯಕವಾದ ವಿಷಯ ಬಂದಾಗ, ಭಾರತದ ಜನರು ಸರ್ವಾನುಮತದಿಂದ 'ಮೇಡ್ ಇನ್ ಇಂಡಿಯಾ' ಲಸಿಕೆಗಳ ಮೇಲೆ ವಿಶ್ವಾಸವಿಟ್ಟರು.  ಇದೊಂದು ಮಹತ್ವದ ಮಾದರಿ ಬದಲಾವಣೆಯಾಗಿದೆ.

ಇಡೀ ಭಾರತಕ್ಕೆ ಮೋದಿ ಅಭಿನಂದನೆ

ಜನರ ಭಾಗವಹಿಸುವಿಕೆಯ ಉತ್ಸಾಹದಲ್ಲಿ ನಾಗರಿಕರು ಮತ್ತು ಸರ್ಕಾರವು ಒಂದು ಸಾಮಾನ್ಯ ಗುರಿಯೊಂದಿಗೆ ಒಗ್ಗೂಡಿದರೆ ಭಾರತವು ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಭಾರತದ ಲಸಿಕೆ ಅಭಿಯಾನ ಒಂದು ಉದಾಹರಣೆಯಾಗಿದೆ. ಭಾರತವು ತನ್ನ ಲಸಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಿದಾಗ, ಅನೇಕರು 130 ಕೋಟಿ ಭಾರತೀಯರ ಸಾಮರ್ಥ್ಯಗಳನ್ನು ಅನುಮಾನಿಸಿದರು. ಭಾರತವು ಲಸಿಕೆ ನೀಡಲು 3-4 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಕೆಲವರು ಹೇಳಿದರು. ಇನ್ನೂ ಕೆಲವರು ಲಸಿಕೆ ಹಾಕಿಸಿಕೊಳ್ಳಲು ಜನರು ಮುಂದೆ ಬರುವುದಿಲ್ಲ ಎಂದರು. ಲಸಿಕೆ ನೀಡಿಕೆ ಪ್ರಕ್ರಿಯೆಯಲ್ಲಿ ಸಂಪೂರ್ಣ ತಪ್ಪು ನಿರ್ವಹಣೆ ಮತ್ತು ಅವ್ಯವಸ್ಥೆ ಇರುತ್ತದೆ ಎಂದು ಹೇಳಿದವರೂ ಇದ್ದರು. ಕೆಲವರು ಭಾರತವು ಪೂರೈಕೆ ಸರಪಳಿಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದರು. ಆದರೆ ಜನತಾ ಕರ್ಫ್ಯೂ ಮತ್ತು ನಂತರದ ಲಾಕ್‌ಡೌನ್‌ಗಳಂತೆಯೇ, ಭಾರತದ ಜನರು ತಮ್ಮನ್ನು ವಿಶ್ವಾಸಾರ್ಹ ಪಾಲುದಾರರನ್ನಾಗಿಸಿದರೆ ಫಲಿತಾಂಶಗಳು ಎಷ್ಟು ಅದ್ಭುತವಾಗಿರುತ್ತವೆ ಎಂಬುದನ್ನು ತೋರಿಸಿಕೊಟ್ಟರು. 

ಪ್ರತಿಯೊಬ್ಬರಿಗೂ ಮಾಲೀಕತ್ವದ ಮನೋಭಾವ ಬಂದರೆ ಯಾವುದೂ ಅಸಾಧ್ಯವಲ್ಲ. ನಮ್ಮ ಆರೋಗ್ಯ ಕಾರ್ಯಕರ್ತರು ಬೆಟ್ಟಗಳನ್ನು ಹತ್ತಿ, ನದಿಗಳನ್ನು ದಾಟಿ ಕಷ್ಟಕರವಾದ ಭೌಗೋಳಿಕ ಪ್ರದೇಶಗಳನ್ನು ತಲುಪಿ ಜನರಿಗೆ ಲಸಿಕೆ ಹಾಕಿದರು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಲಸಿಕೆಯ ಬಗ್ಗೆ ಭಾರತದಲ್ಲಿರುವ ಕನಿಷ್ಠ ಹಿಂಜರಿಕೆಯ ಶ್ರೇಯ ನಮ್ಮ ಯುವಕರು, ಸಾಮಾಜಿಕ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು, ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರಿಗೆ ಸಲ್ಲಬೇಕು.

ಲಸಿಕೆ ನೀಡಿಕೆಯಲ್ಲಿ ತಮಗೆ ಆದ್ಯತೆ ನೀಡಬೇಕು ಎಂದು ವಿವಿಧ ಹಿತಾಸಕ್ತಿ ಗುಂಪುಗಳಿಂದ ಸಾಕಷ್ಟು ಒತ್ತಡವಿತ್ತು. ಆದರೆ ನಮ್ಮ ಇತರ ಯೋಜನೆಗಳಂತೆ, ಲಸಿಕೆ ಹಾಕುವಿಕೆಯಲ್ಲೂ ಯಾವುದೇ ವಿಐಪಿ ಸಂಸ್ಕೃತಿಯಿಲ್ಲ ಎಂದು ಸರ್ಕಾರ ಖಚಿತಪಡಿಸಿತು.

2020 ರ ಆರಂಭದಲ್ಲಿ, ಕೋವಿಡ್-19 ಪ್ರಪಂಚದಾದ್ಯಂತ ರುದ್ರನರ್ತನ ಮಾಡುತ್ತಿದ್ದಾಗ, ಈ ಸಾಂಕ್ರಾಮಿಕ ರೋಗವನ್ನು ಅಂತಿಮವಾಗಿ ಲಸಿಕೆಗಳ ಸಹಾಯದಿಂದಲೇ ಜಯಿಸಬೇಕಾಗುತ್ತದೆ ಎಂಬುದು ನಮಗೆ ಸ್ಪಷ್ಟವಾಗಿತ್ತು. ನಾವು ಬೇಗನೆ ಸಿದ್ಧತೆ ಆರಂಭಿಸಿದೆವು. ನಾವು ತಜ್ಞರ ಗುಂಪುಗಳನ್ನು ರಚಿಸಿದೆವು ಮತ್ತು ಏಪ್ರಿಲ್ 2020 ರಿಂದಲೇ ಮಾರ್ಗಸೂಚಿಯನ್ನು ತಯಾರಿಸಲು ಪ್ರಾರಂಭಿಸಿದೆವು.

ಇದುವರೆಗೆ, ಬೆರಳೆಣಿಕೆಯ ದೇಶಗಳು ಮಾತ್ರ ತಮ್ಮದೇ ಸ್ವಂತ ಲಸಿಕೆಗಳನ್ನು ಅಭಿವೃದ್ಧಿಪಡಿಸಿವೆ. ಭಾರತವು 100 ಕೋಟಿ ಡೋಸ್ ದಾಟಿದ್ದರೂ 180 ಕ್ಕೂ ಹೆಚ್ಚು ದೇಶಗಳು ಒಂದು ಸೀಮಿತ ಲಸಿಕೆ ತಯಾರಕ ಗುಂಪಿನ ಮೇಲೆ ಅವಲಂಬಿತವಾಗಿವೆ ಮತ್ತು ಡಜನ್ ಗಟ್ಟಲೆ ರಾಷ್ಟ್ರಗಳು ಇನ್ನೂ ಲಸಿಕೆಗಳ ಪೂರೈಕೆಗಾಗಿ ಕಾಯುತ್ತಿವೆ! ಭಾರತಕ್ಕೆ ಸ್ವಂತ ಲಸಿಕೆ ಇಲ್ಲದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಊಹಿಸಿಕೊಳ್ಳಿ. ಇಷ್ಟು ದೊಡ್ಡ ಜನಸಂಖ್ಯೆಗೆ ಭಾರತವು ಸಾಕಷ್ಟು ಲಸಿಕೆಗಳನ್ನು ಹೇಗೆ ಪಡೆಯುತ್ತಿತ್ತು ಮತ್ತು ಅದಕ್ಕೆ ಎಷ್ಟು ವರ್ಷಗಳು ಬೇಕಾಗುತ್ತಿದ್ದವು? ಭಾರತೀಯ ವಿಜ್ಞಾನಿಗಳು ಮತ್ತು ಉದ್ಯಮಿಗಳಿಗೆ ಇದರ ಶ್ರೇಯ ಸಲ್ಲಬೇಕು. ಅವರ ಪ್ರತಿಭೆ ಮತ್ತು ಕಠಿಣ ಪರಿಶ್ರಮದಿಂದಾಗಿ ಲಸಿಕೆಗಳ ವಿಚಾರದಲ್ಲಿ ಭಾರತವು ನಿಜವಾಗಿಯೂ ಆತ್ಮನಿರ್ಭರವಾಗಿದೆ. ನಮ್ಮ ಲಸಿಕೆ ತಯಾರಕರು, ಇಷ್ಟು ಬೃಹತ್ ಜನಸಂಖ್ಯೆಯ ಬೇಡಿಕೆಗಳನ್ನು ಪೂರೈಸಲು ಸಮರ್ಥರಾಗುವ ಮೂಲಕ ನಾವು ಯಾರಿಗೂ ಕಡಿಮೆ ಇಲ್ಲ ಎಂದು ತೋರಿಸಿದ್ದಾರೆ.

ಸರ್ಕಾರಗಳೆಂದರೆ ಮುಂದುವರಿಕೆಗೆ ಅಡ್ಡಿಯಾಗುವ ರಸ್ತೆ ತಡೆಗಳು ಎಂದು ಕರೆಯಲಾಗುವ ರಾಷ್ಟ್ರದಲ್ಲಿ, ನಮ್ಮ ಸರ್ಕಾರವು ವೇಗವರ್ಧಕ ಮತ್ತು ಪ್ರಗತಿಯನ್ನು ಸಕ್ರಿಯಗೊಳಿಸುವ ಸಾಧನವಾಗಿದೆ. ಸರ್ಕಾರವು ಮೊದಲ ದಿನದಿಂದಲೇ ಲಸಿಕೆ ತಯಾರಕರೊಂದಿಗೆ ಸಹಭಾಗಿತ್ವ ಹೊಂದಿತು. ಅವರಿಗೆ ಸಾಂಸ್ಥಿಕ ನೆರವು, ವೈಜ್ಞಾನಿಕ ಸಂಶೋಧನೆ, ಧನಸಹಾಯ, ಹಾಗೂ ನಿಯಂತ್ರಣ ಪ್ರಕ್ರಿಯೆಗಳ ವೇಗವರ್ಧನೆಯ ರೂಪದಲ್ಲಿ ಬೆಂಬಲವನ್ನು ನೀಡಿತು. ನಮ್ಮ 'ಇಡೀ ಸರ್ಕಾರ' ವಿಧಾನದ ಪರಿಣಾಮವಾಗಿ ಸರ್ಕಾರದ ಎಲ್ಲಾ ಸಚಿವಾಲಯಗಳು ಲಸಿಕೆ ತಯಾರಕರಿಗೆ ನೆರವಾಗಲು ಮತ್ತು ಎಲ್ಲ ಅಡೆತಡೆಗಳನ್ನು ನಿವಾರಿಸಲು ಒಗ್ಗೂಡಿದವು.

ಭಾರತದಂತಹ ಬೃಹತ್ ದೇಶದಲ್ಲಿ, ಕೇವಲ ಉತ್ಪಾದನೆ ಮಾಡಿದರೆ ಸಾಕಾಗುವುದಿಲ್ಲ. ಕಟ್ಟಕಡೆಯ ವ್ಯಕ್ತಿಗೆ ವಿತರಣೆ ಮತ್ತು ತಡೆರಹಿತ ಲಾಜಿಸ್ಟಿಕ್ಸ್ ಮೇಲೆ ಗಮನಹರಿಸಬೇಕು. ಸವಾಲುಗಳನ್ನು ಅರ್ಥಮಾಡಿಕೊಳ್ಳಲು, ಲಸಿಕೆಯ ಒಂದು ಬಾಟಲಿಯ ಪ್ರಯಾಣವನ್ನು ಕಲ್ಪಿಸಿಕೊಳ್ಳಿ. ಪುಣೆ ಅಥವಾ ಹೈದರಾಬಾದಿನ ಒಂದು ಘಟಕದಿಂದ ಯಾವುದೇ ರಾಜ್ಯಗಳಲ್ಲಿನ ಹಬ್‌ಗೆ ಬಾಟಲಿಯನ್ನು ಕಳುಹಿಸಲಾಗುತ್ತದೆ, ಅಲ್ಲಿಂದ ಅದನ್ನು ಜಿಲ್ಲಾ ಕೇಂದ್ರಕ್ಕೆ ಸಾಗಿಸಲಾಗುತ್ತದೆ. ಅಲ್ಲಿಂದ ಅದು ಲಸಿಕೆ ಕೇಂದ್ರವನ್ನು ತಲುಪುತ್ತದೆ. ಇದರಲ್ಲಿ ವಿಮಾನಗಳು ಮತ್ತು ರೈಲುಗಳ ಅನೇಕ ಪ್ರಯಾಣಗಳು ಸೇರಿರುತ್ತವೆ. ಈ ಸಂಪೂರ್ಣ ಪ್ರಯಾಣದ ಸಮಯದಲ್ಲಿ, ತಾಪಮಾನವನ್ನು ಕೇಂದ್ರೀಯ ಮೇಲ್ವಿಚಾರಣೆ ಮೂಲಕ ಒಂದು ನಿರ್ದಿಷ್ಟ ವ್ಯಾಪ್ತಿಯಲ್ಲಿ ನಿರ್ವಹಿಸಬೇಕು. ಇದಕ್ಕಾಗಿ, 1 ಲಕ್ಷಕ್ಕೂ ಹೆಚ್ಚು ಶೀತ-ಸರಪಳಿ ಸಾಧನಗಳನ್ನು ಬಳಸಲಾಗಿದೆ. ಲಸಿಕೆಗಳ ವಿತರಣಾ ವೇಳಾಪಟ್ಟಿಯ ಬಗ್ಗೆ ರಾಜ್ಯಗಳಿಗೆ ಮುಂಚಿತವಾಗಿ ಸೂಚನೆ ನೀಡಲಾಯಿತು, ಇದರಿಂದ ಅವರು ತಮ್ಮ ಅಭಿಯಾನಗಳನ್ನು ಉತ್ತಮವಾಗಿ ಯೋಜಿಸಿದವು ಮತ್ತು ಪೂರ್ವ ನಿರ್ಧಾರಿತ ದಿನಗಳಲ್ಲಿ ಲಸಿಕೆಗಳು ರಾಜ್ಯಗಳಿಗೆ ತಲುಪಿದವು. ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಇದೊಂದು ಅಭೂತಪೂರ್ವ ಪ್ರಯತ್ನವಾಗಿದೆ.

ಈ ಎಲ್ಲಾ ಪ್ರಯತ್ನಗಳಿಗೆ ಕೋವಿನ್ ತಂತ್ರಜ್ಞಾನ ಪ್ಲಾಟ್ ಫಾರ್ಮ್ ಒಂದು ದೃಢವಾದ ಬೆಂಬಲ ನೀಡಿತು. ಲಸಿಕೆ ಅಭಿಯಾನವು ನ್ಯಾಯಯುತ ಮತ್ತು ಪಾರದರ್ಶಕವಾಗಿರುವುದನ್ನು ಅದು ಖಾತ್ರಿಪಡಿಸಿತು. ಇದು ಯಾವುದೇ ಪಕ್ಷಪಾತ ಅಥವಾ ಸರದಿ ತಪ್ಪಿಸಲು ಅವಕಾಶವಿಲ್ಲದಿರುವುದನ್ನು ಖಚಿತಪಡಿಸಿತು. ಒಬ್ಬ ಬಡ ಕಾರ್ಮಿಕನು ತನ್ನ ಹಳ್ಳಿಯಲ್ಲಿ ಮೊದಲ ಡೋಸ್ ತೆಗೆದುಕೊಳ್ಳಬಹುದು ಮತ್ತು ಅದೇ ಲಸಿಕೆಯ ಎರಡನೇ ಡೋಸ್ ಅನ್ನು ಅವನು ಕೆಲಸ ಮಾಡುವ ನಗರದಲ್ಲಿ ಅಗತ್ಯ ಸಮಯದ ಮಧ್ಯಂತರದ ನಂತರ ತೆಗೆದುಕೊಳ್ಳಬಹುದು ಎಂದು ಕೋವಿನ್ ಖಚಿತಪಡಿಸಿತು. ಪಾರದರ್ಶಕತೆಯನ್ನು ಹೆಚ್ಚಿಸಲು ನೈಜ-ಸಮಯದ ಡ್ಯಾಶ್‌ಬೋರ್ಡ್ ಜೊತೆಗೆ, ಕ್ಯೂಆರ್ ಕೋಡ್ ಇರುವ ಪ್ರಮಾಣಪತ್ರಗಳು ಮಾನ್ಯತೆಯನ್ನು ಖಾತ್ರಿಪಡಿಸುತ್ತವೆ. ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಲ್ಲಿಯೂ ಇಂತಹ ಪ್ರಯತ್ನಗಳ ನಡೆದ ಉದಾಹರಣೆಗಳಿಲ್ಲ.

2015 ರಲ್ಲಿ ನನ್ನ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, 'ಟೀಮ್ ಇಂಡಿಯಾ'ದ ಕಾರಣದಿಂದ ನಮ್ಮ ದೇಶ ಮುಂದುವರಿಯುತ್ತಿದೆ ಮತ್ತು ಈ' ಟೀಮ್ ಇಂಡಿಯಾ' ನಮ್ಮ 130 ಕೋಟಿ ಜನರ ದೊಡ್ಡ ತಂಡವಾಗಿದೆ ಎಂದು ಹೇಳಿದ್ದೆ. ಜನರ ಭಾಗವಹಿಸುವಿಕೆ ಪ್ರಜಾಪ್ರಭುತ್ವದ ದೊಡ್ಡ ಶಕ್ತಿ. 130 ಕೋಟಿ ಭಾರತೀಯರ ಪಾಲ್ಗೊಳ್ಳುವಿಕೆಯ ಮೂಲಕ ನಾವು ದೇಶವನ್ನು ಮುನ್ನಡೆಸಿದರೆ, ನಮ್ಮ ದೇಶವು ಪ್ರತಿ ಕ್ಷಣವೂ 130 ಕೋಟಿ ಹೆಜ್ಜೆ ಮುಂದೆ ಹೋಗುತ್ತದೆ. ನಮ್ಮ ಲಸಿಕೆ ಅಭಿಯಾನವು ಮತ್ತೊಮ್ಮೆ ಈ 'ಟೀಮ್ ಇಂಡಿಯಾ'ದ ಶಕ್ತಿಯನ್ನು ತೋರಿಸಿದೆ. ಭಾರತವು ತನ್ನ ಲಸಿಕೆ ಯಶಸ್ಸಿನ ಮೂಲಕ ಇಡೀ ಜಗತ್ತಿಗೆ 'ಪ್ರಜಾಪ್ರಭುತ್ವವು ಸಾಧಿಸಬಲ್ಲುದು' ಎಂಬುದನ್ನು ತೋರಿಸಿಕೊಟ್ಟಿದೆ.

ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನದಲ್ಲಿ ಸಾಧಿಸಿರುವ ಯಶಸ್ಸು ನಮ್ಮ ಯುವಕರು, ನಮ್ಮ ಆವಿಷ್ಕಾರಕರು ಮತ್ತು ಸರ್ಕಾರದ ಎಲ್ಲಾ ಹಂತಗಳು ಸಾರ್ವಜನಿಕ ಸೇವೆ ವಿತರಣೆಯಲ್ಲಿ ಹೊಸ ಮಾನದಂಡಗಳನ್ನು ಸೃಷ್ಟಿಸಲು ನಮ್ಮ ದೇಶಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಮಾದರಿಯಾಗಲಿದೆ ಎಂಬ ಭರವಸೆ ನನಗಿದೆ.

 

click me!