* ಭಾರತದ ಕೋವಿಡ್ ಲಸಿಕಾಕರಣದ ಶತಕೋಟಿ ಸಾಧನೆ
* ಅರ್ಹ 93 ಕೋಟಿ ಜನರಲ್ಲಿ 70 ಕೋಟಿ ಜನರಿಗೆ ಕನಿಷ್ಠ 1 ಡೋಸ್ ಲಸಿಕೆ
* ಮೊದಲ ಡೋಸ್ ಪಡೆದವರಿಗೆಲ್ಲ ವರ್ಷಾಂತ್ಯಕ್ಕೆ 2ನೇ ಡೋಸ್‌ಗೆ ಯತ್ನ
* ಎರಡೂ ಡೋಸ್ ಪಡೆಯದ 23 ಕೋಟಿ ಜನರ ಲಸಿಕಾಕರಣಕ್ಕೂ ಪ್ರಯತ್ನ
ನವದೆಹಲಿ(ಅ.22): ಕೇಂದ್ರ ಸರ್ಕಾರವು ಕೋವಿಡ್ ಲಸಿಕಾಕರಣದ(Covid 19 Vaccination) ಶತಕೋಟಿ ಸಾಧನೆ ಮಾಡುತ್ತಿದ್ದಂತೆಯೇ, ಸಂಭ್ರಮಾಚರಣೆಯಲ್ಲಿ ಮೈಮರೆಯುವುದಿಲ್ಲ ಎಂಬ ಸುಳಿವು ನೀಡಿದೆ. ಇನ್ನು ಏನಿದ್ದರೂ ದೇಶದ ಎಲ್ಲ ಅರ್ಹ ಜನರಿಗೆ ಲಸಿಕೆಯ ಎರಡನೇ ಡೋಸ್(Second Dose) ನೀಡುವುದು ಹಾಗೂ ಈವರೆಗೆ ಒಂದೂ ಡೋಸ್ ಪಡೆಯದವರಿಗೆ ಲಸಿಕೆ ಕೊಡಿಸುವುದು ಎಂದಿದೆ. ಅಲ್ಲದೆ, 2ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕಾಕರಣ ಶೀಘ್ರದಲ್ಲೇ ಆರಂಭವಾಗಲಿದ್ದು, ಅದರತ್ತ ಕೂಡ ಗಮನ ಹರಿಸುವುದು ಸರ್ಕಾರದ ಇರಾದೆಯಾಗಿದೆ.
18 ವರ್ಷ ಮೇಲ್ಪಟ್ಟ93 ಕೋಟಿ ಜನರು ಲಸಿಕೆಗೆ ಅರ್ಹರಾಗಿದ್ದಾರೆ. ಈವರೆಗೆ ಸುಮಾರು 70 ಕೋಟಿ ಜನರು (ಇದರಲ್ಲಿ ಎರಡೂ ಡೋಸ್ ಪಡೆದವರೂ ಉಂಟು) ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ದಾರೆ ಹಾಗೂ ಹಾಗೂ 28 ಕೋಟಿ ಜನರು ಎರಡೂ ಡೋಸ್ ಪಡೆದಿದ್ದಾರೆ. ಹೀಗಾಗಿ ಇನ್ನು 23 ಕೋಟಿ ಜನರು ಲಸಿಕಾಕರಣದಲ್ಲಿ(Vaccination) ಬಾಕಿ ಉಳಿದಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವಾಲಯದ ಅಧಿಕಾರಿಗಳು(Health Ministry Officials), ‘ಈ ವರ್ಷಾಂತ್ಯದೊಳಗೆ ಎಲ್ಲ ಲಸಿಕಾಕರಣದಿಂದ ದೂರ ಉಳಿದ 23 ಜನರಿಗೆ ಮೊದಲ ಡೋಸ್ ನೀಡಿಕೆಯತ್ತ ಗಮನ ಹರಿಸಲಿದ್ದೇವೆ. ಇದೇ ವೇಳೆ ಶೇ.75ರಷ್ಟು ಜನರಿಗೆ ಮೊದಲ ಕನಿಷ್ಠ 1 ಡೋಸ್ ಲಸಿಕೆ ನೀಡಿಕೆ ಪೂರ್ಣಗೊಂಡಿರುವ ಕಾರಣ ಇನ್ನು ಅವರಿಗೆ 2ನೇ ಡೋಸ್ ನೀಡಿಕೆಯನ್ನು ತೀವ್ರಗೊಳಿಸಲಾಗುವುದು’ ಎಂದಿದ್ದಾರೆ.
ಇದೇ ವೇಳೆ, ಮಕ್ಕಳಿಗೆ ಝೈಕೋವ್ ಡಿ ಹಾಗೂ ಕೋವ್ಯಕ್ಸಿನ್ ಲಸಿಕೆಗಳು ಅನುಮೋದನೆ ಪಡೆದಿದ್ದು, ಶೀಘ್ರ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳ ಲಸಿಕಾಕರಣದ ಮೇಲೂ ಸರ್ಕಾರ ಇನ್ನು ಗಮನ ಕೇಂದ್ರೀಕರಿಸಲಿದೆ.