Nitin Gadkari on Six Airbags in Cars : ಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಮೂಲಕ ನಾವು ಸಾಕಷ್ಟು ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಮತ್ತು ಅದಕ್ಕಾಗಿ ಕಾನೂನು ರಚಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ನಿತಿನ್ ಗಡ್ಕರಿ ಹೇಳಿದರು.
ನವದೆಹಲಿ (ಸೆ. 06): ರಸ್ತೆ ವಿನ್ಯಾಸ, ಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು (Airbag) ಕಡ್ಡಾಯಗೊಳಿಸುವುದು ಸೇರಿದಂತೆ ಸೀಟ್ ಬೆಲ್ಟ್ ಅನುಸರಣೆಯನ್ನು ಸುಧಾರಿಸುವ ಮೂಲಕ ಸುರಕ್ಷಿತ ಹೆದ್ದಾರಿಗಳನ್ನು ನಿರ್ಮಸುವಲ್ಲಿ ಕೇಂದ್ರ ಸರ್ಕಾರವು ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಐಎಎ ಜಾಗತಿಕ ಶೃಂಗಸಭೆಯಲ್ಲಿ ಮಾತನಾಡಿದ ಅವರು "ಸೈರಸ್ ಮಿಸ್ತ್ರಿ ಅವರ ಅಪಘಾತವು ಅತ್ಯಂತ ದುರದೃಷ್ಟಕರ ಮತ್ತು ಅವರು ನನಗೆ ಉತ್ತಮ ಸ್ನೇಹಿತರಾಗಿದ್ದರು. ಇದು ದೇಶಕ್ಕೆ ದೊಡ್ಡ ಆಘಾತವಾಗಿದೆ. ಸಮಸ್ಯೆಯೆಂದರೆ ದೇಶದಲ್ಲಿ ಪ್ರತಿ ವರ್ಷ 5 ಲಕ್ಷ ಅಪಘಾತಗಳು ಮತ್ತು ಒಂದು ಲಕ್ಷ ಸಾವುಗಳು ಸಂಭವಿಸುತ್ತಿವೆ" ಎಂದು ಹೇಳಿದರು.
ವಾಹನ ಸುರಕ್ಷತೆಯನ್ನು ಸುಧಾರಿಸುವತ್ತ ಗಮನ ಹರಿಸಲಾಗಿದೆ ಎಂದು ಹೇಳಿದ ಅವರು, ಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಮೂಲಕ ನಾವು ಸಾಕಷ್ಟು ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಮತ್ತು ಅದಕ್ಕಾಗಿ ಕಾನೂನು ರಚಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದರು.
undefined
ಏರ್‌ಬ್ಯಾಗ್‌ಗಳ ವೆಚ್ಚವು ಅವುಗಳ ಅಳವಡಿಕೆಗೆ ಅಡ್ಡಿಯಾಗಿದೆ ಎಂಬ ವಾದ ಸರಿಯಲ್ಲ ಎಂದ ಗಡ್ಕರಿ "ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಾನದಂಡಗಳು ಮತ್ತು ಯಶಸ್ವಿ ಅಭ್ಯಾಸಗಳ ಬಗ್ಗೆ ಯಾವುದೇ ರಾಜಿ ಇಲ್ಲ, ಈ ಅಹಮದಾಬಾದ್-ಮುಂಬೈ ಹೆದ್ದಾರಿ ತುಂಬಾ ಅಪಾಯಕಾರಿ. ನಾನು ಆ ಹೆದ್ದಾರಿಯ ಕೆಲಸವನ್ನು ಪೂರ್ಣಗೊಳಿಸಿದ್ದೇನೆ. ಪ್ರಸ್ತುತ ಪ್ಯಾಸೆಂಜರ್ ಕಾರ್ (ಪಿಸಿ) 1.25 ಲಕ್ಷಕ್ಕೂ ಹೆಚ್ಚು ಬಳಸುತ್ತದೆ" ಎಂದು ಹೇಳಿದರು.
ಸೀಟ್‌ಬೆಲ್ಟ್ ಧರಿಸದಿದ್ದರೆ ಕಾರಿನ ಏರ್‌ಬ್ಯಾಗ್ಸ್ ನಿಷ್ಪ್ರಯೋಜಕ ಏಕೆ?
ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಮುಂಬೈಗೆ ಹೋಗುವ ಮಾರ್ಗದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಒಂದು ದಿನದ ನಂತರ ನೀತಿನ್ ಗಡ್ಕರಿ ಈ ಹೇಳಿಕೆ ಬಂದಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಟಾಟಾ ಸಮೂಹದ ಮಾಜಿ ಮುಖ್ಯಸ್ಥ ಸೈರಸ್ ಮಿಸ್ತ್ರಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದರು.
ಮನಸ್ಥಿತಿ ಬದಲಾಗಬೇಕು: ‘ಇಲ್ಲಿ ನಮಗೆ ಜನರಿಂದ ಸಹಕಾರ ಬೇಕು’ ಎಂದ ಅವರು, ‘ಹಿಂದೆ ಕುಳಿತುಕೊಳ್ಳುವವರೂ ಸೀಟ್ ಬೆಲ್ಟ್ ಧರಿಸಬೇಕು, ಮನಸ್ಥಿತಿ ಬದಲಾಗಬೇಕು’ ಎಂದರು. 20,000 ಪಿಸಿ ಬಳಕೆಯ ನಂತರ ಆರು ಲೇನ್ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ. ಆದರೆ ಪ್ರಸ್ತುತ ಬಳಕೆಯು ತುಂಬಾ ಹೆಚ್ಚಾಗಿದೆ ಮತ್ತು ಕೇಂದ್ರವು ಮಲ್ಟಿ ಲೇನ್ ಫ್ಲೈಓವರ್‌ಗಳನ್ನು ಅಭಿವೃದ್ದೀಪಡಿಸುವ ಹೊಸ ಯೋಜನೆಯನ್ನು ಪ್ರಾರಂಭಿಸಿದೆ ಎಂದು ಗಡ್ಕರಿ ಹೇಳಿದರು.
ಭಾರತದ ಜನರ ಜೀವಕ್ಕೆ ಮೌಲ್ಯವಿಲ್ಲವೇ?: "ನಮ್ಮ ಬಹಳಷ್ಟು ಕಂಪನಿಗಳು ತಮ್ಮ ವಾಹನಗಳನ್ನು ಆರು ಏರ್ ಬ್ಯಾಗ್‌ಗಳೊಂದಿಗೆ ಭಾರತದಿಂದ ರಫ್ತು ಮಾಡುತ್ತಿವೆ. ಆದರೆ ಅದೇ ವಾಹನಗಳನ್ನು ಭಾರತದಲ್ಲಿ ಮಾರಾಟ ಮಾಡುವಾಗ ಕೇವಲ ನಾಲ್ಕು ಏರ್ ಬ್ಯಾಗ್‌ಗಳೊಂದಿಗೆ ಮಾರಾಟ ಮಾಡಲಾಗುತ್ತಿದೆ. ನಮ್ಮ ದೇಶದ ಜನರ ಜೀವಕ್ಕೆ ಮೌಲ್ಯವಿಲ್ಲವೇ" ಎಂದು ಗಡ್ಕರಿ ಪ್ರಶ್ನಿಸಿದರು.
ದೋಷಪೂರಿತ ರಸ್ತೆ ಎಂಜಿನಿಯರಿಂಗ್‌ನ ಬಗ್ಗೆಯೂ ಗಮನಹರಿಸಬೇಕು ಎಂದ ಸಚಿವರು "ರಸ್ತೆಗಳ ಡಿಪಿಆರ್ ದೋಷಪೂರಿತವಾಗಿದ್ದು, ಇದೀಗ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಲೋಪದೋಷಗಳಿಗೆ ಸಂಬಂಧಿಸಿದಂತೆ ಹಲವು ನಿರ್ಧಾರಗಳನ್ನು ಕೈಗೊಂಡು ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸುತ್ತಿದ್ದೇವೆ" ಎಂದರು
ಕೇಂದ್ರದ ನೀತಿಗೆ ಹೈರಾಣಾದ ಮಾರುತಿ ಸುಜುಕಿ, ಅಲ್ಟೋ ಸೇರಿ ಸಣ್ಣ ಕಾರು ಸ್ಥಗಿತಕ್ಕೆ ಚಿಂತನೆ!
ಸೀಟ್ ಬೆಲ್ಟ್ ಅನುಸರಣೆ ಕುರಿತು ಪ್ರತಿಕ್ರಿಯಿಸಿದ ಗಡ್ಕರಿ, "ಕಳೆದ ಒಂದು ವರ್ಷದಲ್ಲಿ ನಾನು ನಾಲ್ಕು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಯಾಣಿಸಿದ್ದೇನೆ. ಅವರ ಎಲ್ಲಾ ಚಾಲಕರು ತಮ್ಮ ಕಾರುಗಳಲ್ಲಿ ಸೀಟ್ ಬೆಲ್ಟ್ ಅಲಾರ್ಮ್‌ಗಳನ್ನು ಬದಲಾಯಿಸುವ ಕ್ಲಿಪ್‌ಗಳನ್ನು ಕಾರುಗಳಲ್ಲಿ ಅಳವಡಿಸಿದ್ದರು. ನಾನು ಈಗ ಸೀಟ್ ಬೆಲ್ಟ್ ಅಲಾರಂಗಳನ್ನು ತೆಗೆದೆಹಾಕುವ ಹಾಗೂ ಈ ಕ್ಲಿಪ್‌ಗಳ ತಯಾರಿಕೆ ಮತ್ತು ಬಳಕೆಯನ್ನು ನಿಷೇಧಿಸುವ ಆದೇಶವನ್ನು ಹೊರಡಿಸಿದ್ದೇನೆ" ಎಂದರು