ಪಟಿಯಾಲ ಜೈಲಿನಲ್ಲಿ ನವಜೋತ್‌ ಸಿಧು ಕ್ಲರ್ಕ್, ದಲೇರ್‌ ಮೆಹಂದಿ ರೈಟರ್!

By Santosh NaikFirst Published Jul 16, 2022, 8:41 PM IST
Highlights

34 ವರ್ಷಗಳ ಹಿಂದಿನ ಬೀದಿ ಜಗಳದ ಪ್ರಕರಣದಲ್ಲಿ ನವಜೋತ್ ಸಿಂಗ್ ಸಿಧು ದೋಷಿ ಎಂದು ಸಾಬೀತಾಗಿದೆ. ಇದಕ್ಕಾಗಿ ಒಂದು ವರ್ಷದ ಶಿಕ್ಷೆ ಪಡೆದುಕೊಂಡಿರುವ ಸಿಧು ಪಟಿಯಾಲ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಅವರೊಂದಿಗೆ ಮಾನವ ಕಳ್ಳ ಸಾಗಣೆ ಪ್ರಕರಣದಲ್ಲಿ 2 ವರ್ಷಗಳ ಜೈಲು ಶಿಕ್ಷೆ ಪಡೆದುಕೊಂಡಿರುವ ಖ್ಯಾತ ಗಾಯಕ ದಲೇರ್‌ ಮೆಹಂದಿ ಕೂಡ ಜೊತೆಯಾಗಿದ್ದಾರೆ. ಇಬ್ಬರೂ ಕೂಡ ಒಂದೇ ಬ್ಯಾರಕ್‌ನಲ್ಲಿದ್ದಾರೆ.

ಪಟಿಯಾಲ (ಜುಲೈ 16): ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಮತ್ತು ಪಂಜಾಬ್‌ನ ಖ್ಯಾತ ಗಾಯಕ ದಲೇರ್ ಮೆಹಂದಿ ಪ್ರಸ್ತುತ ಪಟಿಯಾಲದ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಇಬ್ಬರನ್ನೂ ಒಂದೇ ಬ್ಯಾರಕ್‌ನಲ್ಲಿ ಇರಿಸಲಾಗಿದೆ. ಇದರೊಂದಿಗೆ ಜೈಲು ಆಡಳಿತ ಇಬ್ಬರಿಗೂ ಕೆಲಸಗಳನ್ನು ವಹಿಸಿದೆ. ಸಿದ್ದುಗೆ ಜೈಲಿನಲ್ಲಿ ಕ್ಲರ್ಕ್ ಕೆಲಸ ಸಿಕ್ಕಿದ್ದರೆ, ದಲೇರ್ ಮೆಹಂದಿ ಅವರಿಗೆ  ರೈಟರ್‌ (ದಾಖಲೆಗಳನ್ನು ಬರೆದುಕೊಳ್ಳುವುದು) ಜವಾಬ್ದಾರಿ ನೀಡಲಾಗಿದೆ. ಎರಡೂ ಪ್ರಕರಣಗಳಲ್ಲಿ ವಿವಿಧ ನ್ಯಾಯಾಲಯಗಳು ಇಬ್ಬರಿಗೆ ಶಿಕ್ಷೆ ವಿಧಿಸಿವೆ. ಸಿಧುಗೆ ಒಂದು ವರ್ಷ ಮತ್ತು ದಲೇರ್‌ಗೆ ಎರಡು ವರ್ಷ ಶಿಕ್ಷೆ ವಿಧಿಸಲಾಗಿದೆ. 34 ವರ್ಷಗಳ ಹಿಂದಿನ ಬೀದಿ ಜಗಳ ಪ್ರಕರಣದಲ್ಲಿ ನವಜೋತ್ ಸಿಂಗ್ ಸಿಧು ತಪ್ಪಿತಸ್ಥರೆಂದು ಕೋರ್ಟ್‌ ತೀರ್ಪು ನೀಡಿ, 1 ವರ್ಷ ಶಿಕ್ಷೆ ವಿಧಿಸಿತ್ತು. ಸುಪ್ರೀಂ ಕೋರ್ಟ್‌ ಕೂಡ ರಿಲೀಫ್‌ ನೀಡಲು ನಿರಾಕರಿಸಿದ ನಂತರ ಸಿಧು ಅವರನ್ನು ಪಟಿಯಾಲದ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು. ಅದೇ ಸಮಯದಲ್ಲಿ, ಪಂಜಾಬಿ ಗಾಯಕ ದಲೇರ್ ಮೆಹಂದಿ 18 ವರ್ಷ ಹಳೆಯ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಪಟಿಯಾಲ ನ್ಯಾಯಾಲಯವು ತಪ್ಪಿತಸ್ಥರೆಂದು ಘೋಷಣೆ ಮಾಡಿದ್ದಲ್ಲದೆ, ಕೆಳ ನ್ಯಾಯಾಲಯ ನೀಡಿದ್ದ  2 ವರ್ಷದ ಜೈಲು ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ಪೊಲೀಸರು ದಲೇರ್‌ನನ್ನು ಪಟಿಯಾಲದ ಕೇಂದ್ರ ಕಾರಾಗೃಹದಲ್ಲಿ ಇರಿಸಿದ್ದಾರೆ. ಇಲ್ಲಿ ದಲೇರ್ ಮತ್ತು ಸಿಧು ಅವರನ್ನು ಒಂದೇ ಬ್ಯಾರಕ್‌ನಲ್ಲಿ ಇರಿಸಲಾಗಿದೆ.

ಸಿಧುಗೆ ತೂಕ ಇಳಿಸಿಕೊಳ್ಳಿ ಎಂದ ವೈದ್ಯರು: ಮಾಹಿತಿ ಪ್ರಕಾರ, ಸಿಧು ಕ್ಲರ್ಕ್ ಮತ್ತು ದಲೇರ್ ಮೆಹಂದಿಗೆ ರೈಟರ್‌ ಜವಾಬ್ದಾರಿಯನ್ನು ಪಟಿಯಾಲ ಜೈಲಿನಲ್ಲಿ ನೀಡಲಾಗಿದೆ. ಇತ್ತೀಚೆಗಷ್ಟೇ ಸಿದ್ದು ಮೊಣಕಾಲು ನೋವಿನ ಬಗ್ಗೆ ದೂರು ನೀಡಿದ್ದರು. ಶುಕ್ರವಾರ ಬ್ಯಾರಕ್‌ನಲ್ಲಿ ಸಿದ್ದುಗೆ ಹಾಸಿಗೆ (ತಖ್ತ್ಪೋಸ್) ಕೂಡ ನೀಡಲಾಗಿದೆ. ಬರೋಬ್ಬರಿ 123 ಕೆಜಿ ತೂಕವಿರುವ ಸಿಧು ಕಳೆದ ಕೆಲವು ದಿನಗಳಿಂದ ಕೀಲುನೋವಿನ ಬಗ್ಗೆ ದೂರು ನೀಡಿದ್ದರು. ಅದರೊಂದಿಗೆ ಶೌಚಾಲಯದ ಕಮೋಡ್‌ ತೀರಾ ಕೆಳಗೆ ಇರುವುದು ತಮಗೆ ಸಮಸ್ಯೆ ಆಗಿದೆ ಎಂದು ಹೇಳಿದ್ದರು. ಇತ್ತೀಚೆಗೆ ಜೈಲಿಗೆ ಮೂಳೆವೈದ್ಯರು ಭೇಟಿ ನೀಡಿದ್ದು, ಸಿಧು ಅವರಿಗೆ ತೂಕ ಇಳಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಸಿಧು ಖೈದಿ ನಂ. 241383: ನವಜೋತ್ ಸಿಂಗ್ ಸಿಧು (Navjot Singh Sidhu) ಅವರಿಗೆ ಪಟಿಯಾಲಾ ಜೈಲಿನಲ್ಲಿ (Central Jail of Patiala ) ಖೈದಿ ಸಂಖ್ಯೆ 241383 ನೀಡಲಾಗಿದೆ. ಅವರನ್ನು ಬ್ಯಾರಕ್ ನಂಬರ್ 10 ರಲ್ಲಿ ಇರಿಸಲಾಗಿದೆ. ಒಂದು ವರ್ಷ ಶಿಕ್ಷೆಗೆ ಗುರಿಯಾಗಿರುವ ಸಿಧು ವರ್ಷಗಳ ಹಿಂದೆ ಒಂದು ದಿನದ ಜೈಲುವಾಸವನ್ನು ಕಳೆದಿದ್ದರು. ಈಗ ಅವರು ಪಟಿಯಾಲ ಜೈಲಿನಲ್ಲಿ ಉಳಿದ 364 ದಿನಗಳ ಸೆರೆವಾಸವನ್ನು ಅನುಭವಿಸುತ್ತಿದ್ದಾರೆ. ಆರಂಭದ ದಿನಗಳಲ್ಲಿ ಕೆಲವು ವಿಶೇಷ ಕಾರಣಗಳಿಂದ ಸಿಧು ಜೈಲಿನಲ್ಲಿ ಊಟ ಮಾಡುತ್ತಿರಲಿಲ್ಲ. ತನಗೆ ಗೋಧಿ ಎಂದರೆ ಅಲರ್ಜಿ, ಹಾಗಾಗಿ ಜೈಲಿನ ಆಹಾರ ತಿನ್ನಲು ನಿರಾಕರಿಸಿರುವುದಾಗಿ ಸಿಧು ಹೇಳಿದ್ದರು. ಅವರು ಜೈಲಿನ ದಾಲ್ ರೊಟ್ಟಿ ತಿನ್ನುತ್ತಿಲ್ಲ. ಕೇವಲ ಸಲಾಡ್ ತಿಂದು ಜೀವನ ಸಾಗಿಸುತ್ತಿದ್ದಾರೆ.

Latest Videos

ಇದನ್ನೂ ಓದಿ: ಜೈಲಿನಲ್ಲಿ ಸಿಧುಗೆ  ವೈದ್ಯರ ಸಲಹೆಯಂತೆ ಐಶಾರಾಮಿ ಆಹಾರ ಸೌಲಭ್ಯ!

ಗೋಧಿ ಅಲರ್ಜಿ: ಸಿಧು ಅವರ ಮಾಧ್ಯಮ ಸಲಹೆಗಾರ ಸುರೀಂದರ್ ದಲ್ಲಾ ಅವರು ಸಿಧು ಅವರಿಗೆ ಗೋಧಿ ಅಲರ್ಜಿ ಎಂದು ಹೇಳಿದ್ದಾರೆ. ಅವರು ಗೋಧಿ ರೊಟ್ಟಿಯನ್ನು ತಿನ್ನಲು ಸಾಧ್ಯವಿಲ್ಲ. ಅವರು ಬಹಳ ದಿನಗಳಿಂದ ರೊಟ್ಟಿ ತಿನ್ನುತ್ತಿಲ್ಲ, ಆದ್ದರಿಂದ ಅವರು ವಿಶೇಷ ಆಹಾರಕ್ಕಾಗಿ ಕೇಳಿದ್ದಾರೆ. ಆಸ್ಪತ್ರೆ ನೀಡಿರುವ ಡಯಟ್‌ ಚಾರ್ಟ್‌ನ ಪ್ರಕಾರ, ಸಿಧು ಪ್ರತಿದಿನ ಬೆಳಿಗ್ಗೆ ರೋಸ್ಮರಿ ಟೀ, ಅರ್ಧ ಗ್ಲಾಸ್ ಬಿಳಿ ಪೇಠಾ ಜ್ಯೂಸ್ ಅಥವಾ ಎಳನೀರನ್ನು ಕುಡಿಯಬೇಕು ಎಂದು ಹೇಳಲಾಗಿದೆ.

ಇದನ್ನೂ ಓದಿ: ಮಾನವ ಕಳ್ಳ ಸಾಗಣೆ: ಗಾಯಕ ದಲೇರ್ ಮೆಹಂದಿಗೆ 2 ವರ್ಷ ಜೈಲು

ದಲೇರ್ ಮೆಹಂದಿಯ ಪ್ರಕರಣವೇನು:
2003ರಲ್ಲಿ ದಲೇರ್ ಮೆಹಂದಿ (Daler Mehndi) ವಿರುದ್ಧ ಪ್ರಕರಣ ದಾಖಲಾಗಿತ್ತು. ಅಕ್ರಮವಾಗಿ ಜನರನ್ನು ವಿದೇಶಕ್ಕೆ ಕಳುಹಿಸುತ್ತಿದ್ದಾರೆ ಎಂಬ ಆರೋಪ ಅವರ ಮೇಲೆ ಕೇಳಿಬಂದಿತ್ತು.ಇದಕ್ಕಾಗಿ ದಲೇರ್ ಮೆಹಂದಿ ಜನರಿಂದ ಭಾರೀ ಹಣ ವಸೂಲಿ ಮಾಡಿದ್ದ ಎನ್ನಲಾಗಿತ್ತು. 1998 ಮತ್ತು 1999 ರ ನಡುವೆ, ದಲೇರ್ ಮೆಹೆಂದಿ ಸ್ಯಾನ್ ಫ್ರಾನ್ಸಿಸ್ಕೋ ಮತ್ತು ನ್ಯೂಜೆರ್ಸಿಯಲ್ಲಿ ಕನಿಷ್ಠ 10 ಜನರನ್ನು ಅಕ್ರಮವಾಗಿ ಬಿಟ್ಟು ಬಂದಿದ್ದರು. ಇದರ ನಂತರ ದಲೇರ್ ಮೆಹಂದಿ ಮತ್ತು ಅವರ ಮೃತ ಸಹೋದರ ಶಂಶೇರ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಬಳಿಕ ಇಬ್ಬರು ಸಹೋದರರ ವಿರುದ್ಧ ಸುಮಾರು 35 ದೂರುಗಳು ದಾಖಲಾಗಿತ್ತು.

click me!