ವಿಜಯ್ ಜೊತೆಗಿನ ಕಾಂಗ್ರೆಸ್ ಮೈತ್ರಿ 'ಅನೈತಿಕ', ಗಾಂಧಿ ತತ್ವಕ್ಕೆ ಮಾಡಿದ ಅವಮಾನ; ಕೈ ನಾಯಕ ಮಣಿಶಂಕರ್ ಅಯ್ಯರ್ ಕಿಡಿ!

Published : May 08, 2026, 06:52 PM IST
Mani Shankar Aiyar

ಸಾರಾಂಶ

ದಶಕಗಳ ಕಾಲದ ಮಿತ್ರಪಕ್ಷ ಡಿಎಂಕೆ (DMK) ಕೈಬಿಟ್ಟು, ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (TVK) ಜೊತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ನಿರ್ಧಾರವನ್ನು 'ಅನೈತಿಕ' ಮತ್ತು 'ರಾಜಕೀಯ ಅವಕಾಶವಾದಿತನ' ಕಾಂಗ್ರೆಸ್‌ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಟೀಕಿಸಿದ್ದಾರೆ.

ನವದೆಹಲಿ (ಮೇ 08): ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ದಶಕಗಳ ಕಾಲದ ಮಿತ್ರಪಕ್ಷ ಡಿಎಂಕೆ (DMK) ಕೈಬಿಟ್ಟು, ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (TVK) ಜೊತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ನಿರ್ಧಾರಕ್ಕೆ ಈಗ ಪಕ್ಷದ ಒಳಗಡೆಯೇ ತೀವ್ರ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್‌ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ತಮ್ಮದೇ ಪಕ್ಷದ ಈ ನಡೆಯನ್ನು 'ಅನೈತಿಕ' ಮತ್ತು 'ರಾಜಕೀಯ ಅವಕಾಶವಾದಿತನ' ಎಂದು ಕಟುವಾಗಿ ಟೀಕಿಸಿದ್ದಾರೆ.

ಗಾಂಧೀಜಿಯ ತತ್ವಗಳಿಗೆ ವಿರುದ್ಧವಾದ ನಡೆ:

ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಮಣಿಶಂಕರ್ ಅಯ್ಯರ್, 'ಕಾಂಗ್ರೆಸ್ ತನ್ನ ನಿಲುವನ್ನು ಬದಲಿಸಿ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಬೆಂಬಲ ನೀಡುತ್ತಿರುವುದು ಅತ್ಯಂತ ಘೋರವಾದ ನಡೆ. ಇದು ಕೀಳುಮಟ್ಟದ ರಾಜಕೀಯ ಅವಕಾಶವಾದಿತನವನ್ನು ಪ್ರದರ್ಶಿಸುತ್ತದೆ. 1925ರಲ್ಲಿ ಮಹಾತ್ಮ ಗಾಂಧೀಜಿಯವರು 'ಸ್ವರಾಜ್ಯ ಎಂಬುದು ನೈತಿಕತೆಯ ಆಧಾರದ ಮೇಲೆ ರಚಿತವಾದ ಸರ್ಕಾರವಾಗಿರಬೇಕು' ಎಂದು ಹೇಳಿದ್ದರು. ಆದರೆ, ಇಂದು ಕಾಂಗ್ರೆಸ್ ಹಡಗು ಬದಲಿಸುವ ಮೂಲಕ ಗಾಂಧೀಜಿಯವರ ಆ ಆಶಯವನ್ನೇ ಗಾಳಿಗೆ ತೂರಿದೆ' ಎಂದು ಆಕ್ರೋಶ ಹೊರಹಾಕಿದ್ದಾರೆ.

ಡಿಎಂಕೆಗೆ ಮಾಡಿದ ದ್ರೋಹವೇ?

ಕಳೆದ ಹಲವು ಚುನಾವಣೆಗಳಲ್ಲಿ ಕಾಂಗ್ರೆಸ್ ತಮಿಳುನಾಡಿನಲ್ಲಿ ಡಿಎಂಕೆಯ ಕಿರಿಯ ಪಾಲುದಾರನಾಗಿ ಗುರುತಿಸಿಕೊಂಡಿತ್ತು. 'ಕಾಂಗ್ರೆಸ್ ಇಂದು ಗೆದ್ದಿರುವ ಐದು ಸ್ಥಾನಗಳು ಅದರ ಸ್ವಂತ ಶಕ್ತಿಯಿಂದ ಬಂದಿದ್ದಲ್ಲ, ಬದಲಿಗೆ ಡಿಎಂಕೆಯೊಂದಿಗಿನ ದಶಕಗಳ ಕಾಲದ ಮೈತ್ರಿಯ ಬಲದಿಂದ ಬಂದಿದ್ದು. ಇಂತಹ ಪರಿಸ್ಥಿತಿಯಲ್ಲಿ ವಿಜಯ್ ಜೊತೆ ಕೈಜೋಡಿಸಿರುವುದು ಡಿಎಂಕೆಗೆ ಮಾಡಿದ ದ್ರೋಹ. ಇನ್ನು ಮುಂದೆ ನಮ್ಮನ್ನು ಯಾರು ತಾನೇ ನಂಬುತ್ತಾರೆ?' ಎಂದು ಅಯ್ಯರ್ ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ನ ಈ ನಡೆಯನ್ನು ಡಿಎಂಕೆ ಈಗಾಗಲೇ 'ಬೆನ್ನಿಗೆ ಇರಿದ ಕೆಲಸ' ಎಂದು ಕರೆದಿದೆ.

ಬಿಜೆಪಿಗೆ ಹಿತ್ತಲ ಬಾಗಿಲ ಪ್ರವೇಶದ ಭೀತಿ:

ಮಣಿಶಂಕರ್ ಅಯ್ಯರ್ ಅವರ ಮತ್ತೊಂದು ಪ್ರಮುಖ ಆತಂಕವೆಂದರೆ ಅದು ಬಿಜೆಪಿಯ ಪ್ರವೇಶ. 'ದ್ರಾವಿಡ ನೆಲದ ರಾಜಕೀಯ ಸಂಸ್ಕೃತಿಯಲ್ಲಿ ಕಾಂಗ್ರೆಸ್‌ನ ಈ ಎಡವಟ್ಟು ಬಿಜೆಪಿಗೆ ಹಿತ್ತಲ ಬಾಗಿಲಿನಿಂದ ಪ್ರವೇಶ ನೀಡುವಂತೆ ಮಾಡಬಹುದು. ಇದು ರಾಜಕೀಯ ಫುಟ್‌ಬಾಲ್ ಇತಿಹಾಸದಲ್ಲಿ ನಮ್ಮ ವಿರುದ್ಧವೇ ನಾವೇ ಹೊಡೆದುಕೊಂಡ 'ಸೆಲ್ಫ್ ಗೋಲ್' ಆಗಲಿದೆ' ಎಂದು ಅವರು ಎಚ್ಚರಿಸಿದ್ದಾರೆ. ಅಸ್ಥಿರ ಸರ್ಕಾರ ಅಥವಾ ಮೈತ್ರಿಕೂಟದ ಗೊಂದಲವು ಬಿಜೆಪಿಯಂತಹ ಪಕ್ಷಗಳಿಗೆ ಲಾಭವಾಗಬಹುದು ಎಂಬುದು ಅವರ ವಾದ.

ಸಂಖ್ಯಾಬಲದ ಲೆಕ್ಕಾಚಾರ:

ತಮಿಳುನಾಡು ವಿಧಾನಸಭೆಯ 234 ಸ್ಥಾನಗಳಲ್ಲಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದೆ. ವಿಜಯ್ ಅವರ ಟಿವಿಕೆ ಒಂಟಿಯಾಗಿ 108 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್‌ನ 5 ಶಾಸಕರು ಬೆಂಬಲ ನೀಡಿದರೂ ಸಂಖ್ಯೆ 113ಕ್ಕೆ ಏರುತ್ತದೆ, ಇದು ಮ್ಯಾಜಿಕ್ ನಂಬರ್‌ಗಿಂತ ಐದು ಸ್ಥಾನ ಕಡಿಮೆ. ಆದರೆ, ಮೂಲಗಳ ಪ್ರಕಾರ ವಿಸಿಪಿ (2), ಸಿಪಿಐ (2) ಮತ್ತು ಸಿಪಿಎಂ (4) ಪಕ್ಷಗಳು ವಿಜಯ್‌ಗೆ ಬೆಂಬಲ ನೀಡಲು ಮುಂದಾಗಿವೆ. ಈ ಮೂಲಕ ವಿಜಯ್ ಸರ್ಕಾರ ರಚಿಸಲು ಸಿದ್ಧರಾಗಿದ್ದರೂ, ಮಣಿಶಂಕರ್ ಅಯ್ಯರ್ ಅವರಂತಹ ಹಿರಿಯ ನಾಯಕರು ಕಾಂಗ್ರೆಸ್‌ನ 'ನೈತಿಕತೆ'ಯ ಬಗ್ಗೆ ಪ್ರಶ್ನೆ ಎತ್ತುತ್ತಿರುವುದು ಪಕ್ಷಕ್ಕೆ ಇರಿಸುಮುರಿಸು ಉಂಟುಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಮೇಶ್‌, ಸತೀಶ್‌ ಯಾರಿಗೂ ಇಲ್ಲ, ದೇವರ ನಾಡಿಗೆ ಸಿಎಂ ಆಗ್ತಾರಂತೆ ವೇಣುಗೋಪಾಲ!
ಎಸ್‌ಬಿಐನಲ್ಲಿ ಕವಿದ ಕಾರ್ಮೋಡ: ಮೇ 25, 26ಕ್ಕೆ ಬ್ಯಾಂಕ್ ಸೇವೆ ವ್ಯತ್ಯಯ, ಒಟ್ಟು 4 ದಿನ ಬಂದ್ ಸಾಧ್ಯತೆ!