TV channels Advisory ದಿಲ್ಲಿ ಹಿಂಸಾಚಾರ ವರದಿ, ಟೀವಿ ಚಾನೆಲ್‌ಗಳಿಗೆ ಕೇಂದ್ರದ ಖಡಕ್ ಎಚ್ಚರಿಕೆ!

Published : Apr 24, 2022, 03:03 AM IST
TV channels Advisory ದಿಲ್ಲಿ ಹಿಂಸಾಚಾರ ವರದಿ, ಟೀವಿ ಚಾನೆಲ್‌ಗಳಿಗೆ ಕೇಂದ್ರದ ಖಡಕ್ ಎಚ್ಚರಿಕೆ!

ಸಾರಾಂಶ

- ಉಕ್ರೇನ್‌ ಯುದ್ಧದ ‘ತಪ್ಪು ವರದಿಗಾರಿಕೆ’ಗೂ ಚಾಟಿ - ಪ್ರಚೋದಕ ಹೆಡ್‌ಲೈನ್‌ಗಳು ಹಾಗೂ ಉತ್ಪ್ರೇಕ್ಷಿತ ವರದಿಗಾರಿಕೆ - ಘಟನಾವಳಿಗಳ ಬಗ್ಗೆ ತಪ್ಪು ವರದಿಗಾರಿಕೆ

ನವದೆಹಲಿ(ಏ.24): ರಷ್ಯಾ- ಉಕ್ರೇನ್‌ ಯುದ್ಧ ಹಾಗೂ ದಿಲ್ಲಿ ನಗರದ ಜಹಾಂಗೀರ್‌ಪುರಿ ಕೋಮುಗಲಭೆ ಬಗ್ಗೆ ಟೀವಿ ಚಾನೆಲ್‌ಗಳು ನಡೆಸಿದ ವರದಿಗಾರಿಕೆ ಬಗ್ಗೆ ಕೇಂದ್ರ ವಾರ್ತಾ ಹಾಗೂ ಪ್ರಸಾರ ಸಚಿವಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಚೋದಕ ಹೆಡ್‌ಲೈನ್‌ಗಳು ಹಾಗೂ ಉತ್ಪ್ರೇಕ್ಷಿತ ವರದಿಗಾರಿಕೆಯ ಬಗ್ಗೆ ಕಟು ಶಬ್ದಗಳಲ್ಲಿ ಅದು ಚಾನೆಲ್‌ಗಳನ್ನು ತರಾಟೆಗೆ ತೆಗೆದುಕೊಂಡಿದೆ.

‘ಪರಮಾಣು ಪುಟಿನ್‌ ಸೇ ಜೆಲೆನ್‌ಸ್ಕಿ ಕೋ ಡಿಪ್ರೆಶನ್‌’ (ಪುಟಿನ್‌ರ ಅಣುಬಾಂಬ್‌ನಿಂದ ಜೆಲೆನ್‌ಸ್ಕಿಗೆ ಭಯ) ಹಾಗೂ ‘ಅಲಿ, ಬಲಿ ಔರ್‌ ಖಲ್‌ಬಲಿ’ (ಅಲಿ, ಬಲಿ ಮತ್ತು ಅಶಾಂತಿ) ಎಂಬ ಟೀವಿ ಚಾನೆಲ್‌ಗಳ ಹೆಡ್‌ಲೈನ್‌ಗಳನ್ನು ಪ್ರಸ್ತಾಪಿಸಿರುವ ಅದು, ‘ಚಾನೆಲ್‌ಗಳು ಘಟನಾವಳಿಗಳ ಬಗ್ಗೆ ತಪ್ಪು ವರದಿಗಾರಿಕೆ ಮಾಡುತ್ತಿವೆ. ಉಕ್ರೇನ್‌ ಯುದ್ಧದ ವರದಿಗಾರಿಕೆಯಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಗಳ ಹೆಸರು ಹೇಳಿ ತಪ್ಪು ವರದಿಗಳನ್ನು ಪ್ರಸಾರ ಮಾಡುತ್ತಿವೆ. ಇನ್ನು ದಿಲ್ಲಿ ಜಹಾಂಗೀರ್‌ಪುರಿ ಘಟನೆಗೆ ಕೋಮು ಬಣ್ಣ ಹಚ್ಚುತ್ತಿವೆ’ ಎಂದು ಎಲ್ಲ ಉಪಗ್ರಹ ಚಾನೆಲ್‌ಗಳಿಗೆ ಬರೆದ ಪತ್ರದಲ್ಲಿ ವಾರ್ತಾ ಸಚಿವಾಲಯ ತಿಳಿಸಿದೆ.

Jahangirpuri: ಗಲಭೆಕೋರರ ಅಕ್ರಮ ಕಟ್ಟಡ ತೆರವಿಗೆ ಸುಪ್ರೀಂ ತಡೆ!

‘ಜಹಾಂಗೀರ್‌ಪುರಿ ಹಿಂಸಾಚಾರ ಘಟನೆಯ ಟೀವಿ ಚರ್ಚೆಗಳು ಸ್ವೀಕಾರಾರ್ಹವಲ್ಲದ, ಅಸಂಸದೀಯ ಹಾಗೂ ಪ್ರಚೋದಕ ಭಾಷೆಗಳಿಂದ ಕೂಡಿದ್ದವು. ಆದರೆ ತಕ್ಷಣದಿಂದಲೇ ಇಂಥ ಯಾವುದೇ ವರದಿಗಾರಿಕೆ ಮಾಡಕೂಡದು. ಇಂಥ ವರದಿಗಾರಿಕೆಯು ಕೇಬಲ್‌ ಟೀವಿ ಜಾಲ ಕಾಯ್ದೆ-1995ರ ಉಲ್ಲಂಘನೆ ಆಗುತ್ತದೆ’ ಎಂದು ಅದು ಕಟು ಶಬ್ದಗಳಲ್ಲಿ ಎಚ್ಚರಿಸಿದೆ.

ಟೀವಿ ಚಾನೆಲ್‌ ನಿರೂಪಕರು ಉತ್ಪ್ರೇಕ್ಷಿತವಾಗಿ ಮಾತನಾಡುತ್ತಾರೆ. ಉಕ್ರೇನ್‌-ರಷ್ಯಾ ಯುದ್ಧದ ವೇಳೆ ತಪ್ಪು ದಾರಿಗೆ ಎಳೆಯುವ ವರದಿಗಾರಿಕೆ ನಡೆಯುತ್ತಿದೆ. ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೃಢೀಕೃತವಲ್ಲದ ಸಿಸಿಟೀವಿ ಫುಟೇಜ್‌ಗಳನ್ನು ಪ್ರಸಾರ ಮಾಡಿ ತನಿಖೆಯ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಸಚಿವಾಲಯ ಕಿಡಿಕಾರಿದೆ.

ದಿಲ್ಲಿಯ ಜಹಾಂಗೀರ್‌ಪುರಿ ಘಟನೆ
ಹನುಮಾನ್‌ ಜಯಂತಿಯ ದಿನ ನಗರದ ಜಹಾಂಗೀರ್‌ಪುರಿಯಲ್ಲಿ ಶೋಭಾಯಾತ್ರೆಯ ಸ್ಥಳದಲ್ಲಿ ಹಿಂಸಾಚಾರ ನಡೆದ ಎರಡು ದಿನಗಳ ನಂತರ ಸೋಮವಾರ ಮತ್ತೆ ಕಲ್ಲು ತೂರಾಟ ನಡೆದಿದೆ. ಇದೇ ವೇಳೆ, ಶೋಭಾಯಾತ್ರೆಯ ಮೇಲೆ ಗುಂಡು ಹಾರಿಸಿದ್ದ ವ್ಯಕ್ತಿಯ ಮನೆಗೆ ಪೊಲೀಸ್‌ ತಂಡ ತನಿಖೆಗೆ ತೆರಳಿದಾಗ ಆತನ ಮನೆಯವರು ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ.

ಹನುಮ ಜಯಂತಿ ಯಾತ್ರೆಗೆ ಕಲ್ಲು: ಐವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕೇಸು

ಶೋಭಾಯಾತ್ರೆ ನಡೆದ ಸ್ಥಳಕ್ಕೆ ಸಮೀಪದಲ್ಲಿ ಸೋಮವಾರ ಮಧ್ಯಾಹ್ನ ಮನೆಯೊಂದರ ಮೇಲಿನಿಂದ ಇಟ್ಟಿಗೆ ಹಾಗೂ ಕಲ್ಲುಗಳನ್ನು ಎಸೆಯಲಾಗಿದೆ. ತಕ್ಷಣ ಪೊಲೀಸ್‌ ತುಕಡಿಗಳು ತೆರಳಿ ಸ್ಥಳದ ಸುತ್ತ ಬಂದೋಬಸ್‌್ತ ಕೈಗೊಂಡಿವೆ. ಅದರ ನಡುವೆಯೇ, ತನಿಖೆಗೆಂದು ಆರೋಪಿಯ ಮನೆಗೆ ಪೊಲೀಸರು ತೆರಳಿದ್ದಾಗ ಅವರ ಮೇಲೆ ಮನೆಯವರು ಕಲ್ಲು ಎಸೆದಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ.

ರಷ್ಯಾ ಉಕ್ರೇನ್ ಯುದ್ಧ
ಸತತ ಒಂದೂವರೆ ತಿಂಗಳಿಂದ ಉಕ್ರೇನ್‌ ಮೇಲೆ ದಾಳಿ ನಡೆಸುತ್ತಿದ್ದ ರಷ್ಯಾಕ್ಕೆ ಗುರುವಾರ ಮಹತ್ವದ ಜಯ ಸಿಕ್ಕಿದೆ. ಬಂದರು ನಗರಿ ಮರಿಯುಪೋಲ್‌ ತನ್ನ ಕೈವಶವಾಗಿದೆ ಎಂದು ರಷ್ಯಾ ಘೋಷಿಸಿದೆ. ಇದು ಕಳೆದ ಒಂದೂವರೆ ತಿಂಗಳ ಯುದ್ಧದಲ್ಲಿ ರಷ್ಯಾ ಕೈವಶವಾದ ಪ್ರಮುಖ ನಗರವಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ‘ಮರಿಯುಪೋಲ್‌ ವಿಮೋಚನೆ ಯಶಸ್ವಿಯಾಗಿದೆ’ ಎಂದು ಘೋಷಿಸಿದ್ದಾರೆ. ಆದರೆ ನಗರದ ಅಜೋವ್‌ಸ್ಟಾಲ್‌ ಉಕ್ಕು ಸ್ಥಾವರ ಈಗಲೂ ಉಕ್ರೇನ್‌ ಸೈನಿಕರು ವಶದಲ್ಲಿದೆ. ಆದಾಗ್ಯೂ ಉಕ್ಕು ಸ್ಥಾವರದ ಮೇಲೆ ಮೇಲೆ ದಾಳಿ ನಡೆಸದಂತೆ, ಆದರೆ ಅಲ್ಲಿಂದ ಒಂದು ಧೂಳಿನ ಕಣ ಕೂಡ ಪರಾರಿಯಾಗದಂತೆ ನೋಡಿಕೊಳ್ಳಬೇಕೆಂದು ಸೇನೆಗೆ ಪುಟಿನ್‌ ತಾಕೀತು ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಾಯ್ನಾಡಿನ ರಕ್ಷಣೆಗೆ ಅಂಬೇಡ್ಕರರ ಪ್ರತಿಜ್ಞೆ- ದೇಶದ ರಕ್ಷಣೆ, ಅಭಿವೃದ್ಧಿ ಬಗ್ಗೆ ಯೋಚಿಸುತ್ತಿದ್ದವರು
ಭಾರತ- ರಷ್ಯಾ ಸಹಕಾರದಲ್ಲಿ ಹೊಸ ಮೈಲುಗಲ್ಲು