2ನೇ ಕ್ಲಾಸ್‌ ಹಿಂದೂ ಮಗುವಿಗೆ ಇಸ್ಲಾಮಿಕ್ 'ಕಲ್ಮಾ' ಹೋಮ್‌ವರ್ಕ್; ಶಾಲೆಯ ವಿರುದ್ಧ ಭುಗಿಲೆದ್ದ ಆಕ್ರೋಶ!

Published : Jul 16, 2026, 08:07 PM IST
Kalma Homework

ಸಾರಾಂಶ

ಹೈದರಾಬಾದ್‌ನ ಶಾಲೆಯೊಂದರಲ್ಲಿ ಹಿಂದೂ ವಿದ್ಯಾರ್ಥಿಗೆ ಇಸ್ಲಾಮಿಕ್ ಪ್ರಾರ್ಥನೆಯನ್ನು ಹೋಮ್‌ವರ್ಕ್ ಆಗಿ ನೀಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ನಾಯಕಿ ಮಾಧವಿ ಲತಾ, ಇದು ಧಾರ್ಮಿಕ ಹೇರಿಕೆ ಎಂದು ಆರೋಪಿಸಿದ್ದಾರೆ.

ಹೈದರಾಬಾದ್ (ಜು.16): ಯಾರೊಬ್ಬರ ಮೇಲೂ ಯಾವುದೇ ಧರ್ಮವನ್ನು ಬಲವಂತವಾಗಿ ಹೇರಲು ಸಾಧ್ಯವಿಲ್ಲ ಎಂದು ಹೇಳಿರುವ ಬಿಜೆಪಿ ನಾಯಕಿ ಮಾಧವಿ ಲತಾ, ಹೈದರಾಬಾದ್‌ನ ಶಾಲೆಯೊಂದರಲ್ಲಿ ಹಿಂದೂ ವಿದ್ಯಾರ್ಥಿಗೆ ಇಸ್ಲಾಮಿಕ್ ಧಾರ್ಮಿಕ ಪ್ರಾರ್ಥನೆಯನ್ನು ಹೋಮ್‌ವರ್ಕ್ ಆಗಿ ನೀಡಿದ ಶಿಕ್ಷಕಿಯ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗಿ ಶಾಲೆಯೊಂದರ ಎರಡನೇ ತರಗತಿಯ 6 ವರ್ಷದ ಹಿಂದೂ ವಿದ್ಯಾರ್ಥಿಯೊಬ್ಬ ಬುಧವಾರ ಮನೆಗೆ ಮರಳಿದಾಗ, ಆತನ ಹೋಮ್‌ವರ್ಕ್ ಡೈರಿಯಲ್ಲಿ ಇಸ್ಲಾಮಿಕ್ ಧರ್ಮದ "ಮೊದಲ ಹಾಗೂ ಎರಡನೇ ಕಲ್ಮಾ" ಮತ್ತು "ಫಾತಿಹಾ" ಓದುವಂತೆ ಶಿಕ್ಷಕಿ ಸೂಚನೆ ಬರೆದಿದ್ದರು ಎಂದು ಪೋಷಕರು ಆರೋಪಿಸಿದ ಬೆನ್ನಲ್ಲೇ ಈ ವಿವಾದ ಭುಗಿಲೆದ್ದಿದೆ. ಇಸ್ಲಾಮಿಕ್ ನಂಬಿಕೆಯ ಪ್ರಮುಖ ಘೋಷಣೆಯನ್ನು 'ಕಲ್ಮಾ' ಎನ್ನಲಾಗುತ್ತದೆಯಲ್ಲದೆ, ಪವಿತ್ರ ಕುರಾನ್‌ನ ಮೊದಲ ಅಧ್ಯಾಯವನ್ನು 'ಸೂರತ್ ಅಲ್-ಫಾತಿಹಾ' ಎನ್ನಲಾಗುತ್ತದೆ.

'ಹಿಂದೂ ವಿದ್ಯಾರ್ಥಿಗಳು ಭಯದಲ್ಲೇ ಕಲಿಯಬೇಕೇ?'

ಸಂತ್ರಸ್ತ ಮಗುವಿನ ಪೋಷಕರನ್ನು ಭೇಟಿ ಮಾಡಲು ತೆರಳುತ್ತಿದ್ದಾಗ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಪೊಲೀಸರಿಂದ ವಶಕ್ಕೆ ಒಳಗಾದ ಬಿಜೆಪಿ ನಾಯಕಿ ಮಾಧವಿ ಲತಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, "ಹಿಂದೂ ವಿದ್ಯಾರ್ಥಿಗಳು ಯಾವಾಗಲೂ ಇಂತಹ ಭಯದ ವಾತಾವರಣದಲ್ಲೇ ಕಲಿಯಬೇಕೇ? ಸಂವಿಧಾನದ ನಿಯಮಗಳು ಮತ್ತು ಕಾಯ್ದೆಗಳನ್ನು ಪಾಲಿಸದ ಈ ಶಾಲೆಯ ವಿರುದ್ಧ ತೆಲಂಗಾಣ ಸರ್ಕಾರ ಯಾವ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂಬುದು ನನ್ನ ಏಕೈಕ ಪ್ರಶ್ನೆಯಾಗಿದೆ. ನಮ್ಮ ಮೂಲಭೂತ ಹಕ್ಕುಗಳ ಅಡಿಯಲ್ಲಿ ಯಾವುದೇ ಧರ್ಮವನ್ನು ಯಾರ ಮೇಲೂ ಬಲವಂತವಾಗಿ ಹೇರುವಂತಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೂ 2ನೇ ತರಗತಿಯ ಪುಟ್ಟ ಮಗುವಿನ ಮೇಲೆ ಇದನ್ನು ಹೇರಲಾಗಿದೆ," ಎಂದು ಕಿಡಿಕಾರಿದ್ದಾರೆ.

ಶಿಕ್ಷಕಿಯ ವಜಾ ಪರಿಹಾರವಲ್ಲ

ವಿವಾದದ ಬೆನ್ನಲ್ಲೇ ತಪ್ಪಿತಸ್ಥ ಶಿಕ್ಷಕಿಯನ್ನು ಶಾಲಾ ಆಡಳಿತ ಮಂಡಳಿಯು ಸೇವೆಯಿಂದ ವಜಾಗೊಳಿಸಿದೆ ಎಂದು ಗುರುವಾರ ಅಧಿಕೃತವಾಗಿ ಪ್ರಕಟಿಸಿದೆ. ಆದರೆ ಈ ಕ್ರಮದ ಬಗ್ಗೆ ತೃಪ್ತಿ ವ್ಯಕ್ತಪಡಿಸದ ಮಾಧವಿ ಲತಾ, ಶಿಕ್ಷಕಿಯನ್ನು ಕೆಲಸದಿಂದ ವಜಾಗೊಳಿಸುವುದು ಇದಕ್ಕೆ ಸರಿಯಾದ ಪರಿಹಾರವೇ? ನಮ್ಮನ್ನು ಸುಮ್ಮನಾಗಿಸಲು ಈ ಕ್ರಮ ಕೈಗೊಳ್ಳಲಾಗಿದೆಯೇ? ಹಿಂದೂಗಳು ನಂಬಿಕೆಯಿಂದ ಇಸ್ಲಾಮಿಕ್ ಮ್ಯಾನೇಜ್‌ಮೆಂಟ್ ನಡೆಸುವ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಾರೆ. ಅಲ್ಲಿನ ಹಿಂದೂಗಳು ಆ ಶಾಲೆಯನ್ನು ಪ್ರೀತಿಯಿಂದ ನಂಬಿದ್ದಾರೆ. ಈಗ ಅವರ ನಂಬಿಕೆಯ ಕಥೆಯೇನು? ಪ್ರತಿಯೊಬ್ಬರಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ಆದರೆ ಮಕ್ಕಳು ನೆಮ್ಮದಿಯಿಂದ ಕಲಿಯಲು ಸರ್ಕಾರವಾಗಲಿ ಅಥವಾ ಕಾನೂನಾಗಲಿ ಯಾವುದೇ ರಕ್ಷಣೆ ನೀಡದಿದ್ದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.

ಶಾಲೆ ಭಗವದ್ಗೀತೆ ಓದಿಸುತ್ತದೆಯೇ?

"ನಮ್ಮ ದೇಶವು ಸಂವಿಧಾನದ ಅಡಿಯಲ್ಲಿ ನಡೆಯುವುದು ಅತ್ಯಂತ ಮುಖ್ಯವಾಗಿದೆ. ಇಂತಹ ಸಂಸ್ಥೆಗಳು ಸಂವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರ ನೋಡಿಕೊಳ್ಳಬೇಕು. ನಾನು ಈಗ ಅದೇ ಶಾಲೆಯ ಮ್ಯಾನೇಜ್‌ಮೆಂಟ್ ಮತ್ತು ಶಿಕ್ಷಕಿಗೆ ಕೇಳುತ್ತೇನೆ; ಈಗ ನೀವು ಶಾಲೆಯಲ್ಲಿ ಭಗವದ್ಗೀತೆ ಓದಿಸಲು ಪ್ರಾರಂಭಿಸುತ್ತೀರಾ? ಆಗ ಅವರು ಸುಮ್ಮನಿರುತ್ತಾರೆಯೇ? ಹಾಗಾಗಿ ಕೇವಲ ಶಿಕ್ಷಕಿಯನ್ನು ಕೆಲಸದಿಂದ ತೆಗೆಯುವುದು ಇದಕ್ಕೆ ಪರಿಹಾರವಲ್ಲ. ಹಿಂದೂ ಮಗುವಿಗೆ ತನ್ನ ಹಕ್ಕು ಸಿಗಬೇಕು. ಹಿಂದೂ ಮಕ್ಕಳು ಯಾವುದೇ ಭಯವಿಲ್ಲದೆ ಶಾಲೆಗೆ ಹೋಗಿ ನೆಮ್ಮದಿಯಿಂದ ಓದಿಕೊಂಡು ಬರಲು ಸಾಧ್ಯವಿಲ್ಲವೇ? ಇಲ್ಲಿ ಯಾವುದೇ ಮುಸ್ಲಿಂ ಮಗುವಿಗೆ ಬಲವಂತ ಮಾಡಲಾಗಿಲ್ಲ. ಹಾಗಾಗಿ ಇದು ಕೇವಲ ಒಬ್ಬ ಶಿಕ್ಷಕಿಯ ತಪ್ಪಲ್ಲ, ಇದು ವ್ಯವಸ್ಥಿತವಾದ ಸಾಂಸ್ಥಿಕ ಸಮಸ್ಯೆ," ಎಂದು 2024ರ ಲೋಕಸಭಾ ಚುನಾವಣೆಯಲ್ಲಿ ಹೈದರಾಬಾದ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಧವಿ ಲತಾ ಆರೋಪಿಸಿದ್ದಾರೆ.

ರಾಜಿಯಾಗದ ಪೋಷಕರು - ಪ್ರಕರಣ ಸದ್ಯಕ್ಕೆ ಸುಖಾಂತ್ಯ

ಈ ಮಧ್ಯೆ, ಶಾಲಾ ಮ್ಯಾನೇಜ್‌ಮೆಂಟ್ ತೆಗೆದುಕೊಂಡಿರುವ ಶಿಸ್ತುಕ್ರಮದ ಬಗ್ಗೆ ತಾವು ತೃಪ್ತಿ ಹೊಂದಿದ್ದು, ವಿವಾದ ಸದ್ಯಕ್ಕೆ ಬಗೆಹರಿದಿದೆ ಎಂದು ಮಗುವಿನ ಪೋಷಕರು ಪೊಲೀಸರಿಗೆ ಲಿಖಿತ ಹೇಳಿಕೆ ನೀಡಿದ್ದಾರೆ. ಪೋಷಕರು ಈವರೆಗೆ ಪೊಲೀಸ್ ಠಾಣೆಗೆ ಯಾವುದೇ ಅಧಿಕೃತ ದೂರು ನೀಡಿಲ್ಲ ಮತ್ತು ಶಾಲೆಯ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ ಎಂದು ಹೈದರಾಬಾದ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ, ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಾಯಕರು ಶಾಲಾ ಶಿಕ್ಷಕಿಯ ಈ ಧಾರ್ಮಿಕ ಹೇರಿಕೆಯ ಹೋಮ್‌ವರ್ಕ್ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, ತಕ್ಷಣವೇ ಸಂಬಂಧಪಟ್ಟ ಶಾಲೆಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಶೌಚಾಲಯ ಬಳಸಬಹುದಾ' ಕೇಳಿದ್ದೇ ತಪ್ಪಾಯ್ತು: ಗಿಗ್​ ವರ್ಕ್​ರ್​ಗೆ 5 ದಿನ ಕೆಲಸ ಸಿಗದಂತೆ ಮಾಡಿದ ಆ 'ಶ್ರೀಮಂತ'
ರೈಲು ಲೇಟಾದ್ರೆ ನಿಮ್ಮ ಹಣ ವಾಪಸ್​: ಎಷ್ಟು ವಿಳಂಬ, ದುಡ್ಡು ಪಡೆಯೋದು ಹೇಗೆ? ಫುಲ್​ ಡಿಟೇಲ್ಸ್​ ಇಲ್ಲಿದೆ