21000 ಕೋಟಿ ರು. ಚೀನಾ ಆ್ಯಪ್‌ ಸಾಲ ದಂಧೆ ರೂವಾರಿ ಸಿನಿಮೀಯವಾಗಿ ಅರೆಸ್ಟ್‌!

By Suvarna NewsFirst Published Jan 2, 2021, 7:42 AM IST
Highlights

21000 ಕೋಟಿ ರು. ಚೀನಾ ಆ್ಯಪ್‌ ಸಾಲ ದಂಧೆ ರೂವಾರಿ ಸಿನಿಮೀಯವಾಗಿ ಅರೆಸ್ಟ್‌!| ಆನ್‌ಲೈನ್‌ ಮೂಲಕ ಭಾರೀ ಬಡ್ಡಿಗೆ ಸಾಲ ನೀಡಿ, ನಂತರ ಸಾಲಗಾರರಿಗೆ ಇನ್ನಿಲ್ಲದ ಕಿರುಕುಳ| ಸಾಲಕ್ಕೆ ಶೇ.36 ಬಡ್ಡಿ ಹಾಕುತ್ತಿದ್ದ ಧೂರ್ತ| ಜರ್ಮನಿಗೆ ಹೊರಟಿದ್ದಾಗ ತೆಲಂಗಾಣ ಪೊಲೀಸ್‌ ಬಲೆಗೆ

ಹೈದರಾಬಾದ್(ಜ.02)‌: ದೇಶದಲ್ಲಿ ಆ್ಯಪ್‌ಗಳ ಮೂಲಕ ಭಾರಿ ಪ್ರಮಾಣದ ಬಡ್ಡಿಗೆ ಆನ್‌ಲೈನ್‌ನಲ್ಲಿ ಸಾಲ ನೀಡಿ, ನಂತರ ಸಾಲಗಾರರಿಗೆ ಇನ್ನಿಲ್ಲದಂತೆ ಕಿರುಕುಳ ನೀಡುತ್ತಿದ್ದ ‘ಚೀನಿ ಆ್ಯಪ್‌ ವಂಚಕ ಜಾಲ’ದ ಮುಖ್ಯಸ್ಥ ಜೂ ವೀ ಅಲಿಯಾಸ್‌ ಲಾಂಬೋ (27) ಎಂಬಾತನನ್ನು ತೆಲಂಗಾಣ ಪೊಲೀಸರು ದೆಹಲಿಯಲ್ಲಿ ಸಿನಿಮೀಯವಾಗಿ ಸೆರೆಹಿಡಿದಿದ್ದಾರೆ. ಈತ ಬುಧವಾರ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ಹೊರಟಿದ್ದಾಗ ಸಿಕ್ಕಿಬಿದ್ದಿದ್ದಾನೆ. ಇನ್ನು ಚೀನಾದಲ್ಲೇ ಕುಳಿತು ಈ ಜಾಲವನ್ನು ನಿರ್ವಹಿಸುತ್ತಿದ್ದ ಯುವಾನ್‌ ಯುವಾನ್‌ ಅಲಿಯಾಸ್‌ ಜೆನ್ನಿಫರ್‌ ಎಂಬ ಮಹಿಳೆ ಸೆರೆಗೆ ಪೊಲೀಸರು ಈಗ ಬಲೆ ಬೀಸಿದ್ದಾರೆ.

100 ಚೀನಾ ಆ್ಯಪ್‌ ನಿರ್ಬಂಧಿಸಲು ಕೇಂದ್ರಕ್ಕೆ ರಾಜ್ಯದಿಂದ ಪ್ರಸ್ತಾವನೆ

ಆಘಾತಕಾರಿ ಸಂಗತಿಯೆಂದರೆ, ನಾಲ್ಕು ಕಂಪನಿಗಳ ಮೂಲಕ ಇವರು ಭಾರತದಲ್ಲಿ ಇಲ್ಲಿಯವರೆಗೆ 21,000 ಕೋಟಿ ರು.ನಷ್ಟುವಹಿವಾಟು ನಡೆಸಿದ್ದಾರೆ. ಕಳೆದ 6 ತಿಂಗಳಲ್ಲಿ 1.4 ಕೋಟಿಗೂ ಹೆಚ್ಚು ವ್ಯವಹಾರಗಳು ನಡೆದಿವೆ. ಗ್ರಾಹಕರು ಪಡೆದ ಸಾಲಕ್ಕೆ ಶೇ.36ರವರೆಗೂ ಬಡ್ಡಿ ವಿಧಿಸಲಾಗುತ್ತಿತ್ತು ಎಂಬ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಆಗ್ಲೋ ಟೆಕ್ನಾಲಜೀಸ್‌, ಲೀಫಂಗ್‌ ಟೆಕ್ನಾಲಜೀಸ್‌, ನಬ್ಲೂಮ್‌ ಟೆಕ್ನಾಲಜೀಸ್‌ ಹಾಗೂ ಪಿನ್‌ಪ್ರಿಂಟ್‌ ಟೆಕ್ನಾಲಜೀಸ್‌ ಎಂಬ ಕಂಪನಿಗಳ ಮೂಲಕ ಇವರು ಅಕ್ರಮ ಆ್ಯಪ್‌ ಸೃಷ್ಟಿಸಿ ಸಾಲ ನೀಡುತ್ತಿದ್ದರು. ನಂತರ ಸಾಲ ಪಡೆದವರಿಗೆ ತೀವ್ರ ಕಿರುಕುಳ ನೀಡುತ್ತಿದ್ದರು. ಇವರ ಕಿರುಕುಳದಿಂದ ತೆಲಂಗಾಣದಲ್ಲಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಪ್ರಕರಣಗಳ ತನಿಖೆ ಆರಂಭಿಸಿದ ಪೊಲೀಸರು ಈವರೆಗೆ 18 ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರಲ್ಲೂ ಕಾಲ್‌ ಸೆಂಟರ್‌:

ಆ್ಯಪ್‌ಗಳ ಮೂಲಕ ಸಾಲ ನೀಡುತ್ತಿದ್ದ ಈ ಕಂಪನಿಗಳು, ನಂತರ ತಮ್ಮಿಂದ ಸಾಲ ಪಡೆದವರಿಗೆ ಆನ್‌ಲೈನ್‌ನಲ್ಲಿ ಕಿರುಕುಳ ನೀಡಲು ಹಾಗೂ ಹೆದರಿಸಲು ಬೆಂಗಳೂರು ಸೇರಿದಂತೆ ದೇಶಾದ್ಯಂತ 7 ಕಾಲ್‌ ಸೆಂಟರ್‌ಗಳನ್ನು ಹೊಂದಿದ್ದವು.

ಕೊನೆಗೂ ಪಬ್‌ ಜೀ ‘ಆಟ’ ಮೊಬೈಲ್‌ನಲ್ಲಿ ಪೂರ್ಣ ಬಂದ್‌

ಬ್ಯಾಂಕ್‌ ಖಾತೆಯೇ ಇಲ್ಲ:

ಪ್ರಕರಣದಲ್ಲಿ ಬಂಧಿತ ಲಾಂಬೋ, ಭಾರತದಲ್ಲಿ ಒಂದೇ ಒಂದು ಬ್ಯಾಂಕ್‌ ಖಾತೆ ಹೊಂದಿರಲಿಲ್ಲ. ಈತನ ಕಂಪನಿಯ ಉದ್ಯೋಗಿಗಳಿಗೆ ಚೀನಾದಿಂದ ಹಣ ವರ್ಗಾವಣೆ ಆಗುತ್ತಿತ್ತು. ಅದನ್ನು ಪಡೆದುಕೊಂಡು ಆತ ಭಾರತದಲ್ಲಿ ಹಲವು ತಿಂಗಳಿನಿಂದ ಜೀವನ ನಡೆಸುತ್ತಿದ್ದ. ಇನ್ನೊಂದು ವಿಶೇಷವೆಂದರೆ ಈತನಿಗೆ ಇಂಗ್ಲೀಷ್‌ ಅಥವಾ ಹಿಂದಿ ಭಾಷೆಯೇ ಬರುವುದಿಲ್ಲ. ಹೀಗಾಗಿ ವಿಚಾರಣೆ ವೇಳೆ ಅಧಿಕಾರಿಗಳು ಗೂಗಲ್‌ ಟ್ರಾನ್ಸ್‌ಲೇಷನ್‌ ಸಾಫ್ಟ್‌ವೇರ್‌ ಬಳಸಿಕೊಂಡು ಆತನಿಗೆ ಪ್ರಶ್ನೆ ಕೇಳಿದ್ದಾರೆ.

ದಂಧೆ ಹೇಗೆ?

- ಆನ್‌ಲೈನ್‌ ಮೂಲಕ ಸಾಲ ನೀಡುವ ಆ್ಯಪ್‌ ಕುರಿತು ಟಿಕ್‌ಟಾಕ್‌, ರೊಪೋಸೋದಂತಹ ಆ್ಯಪ್‌ಗಳಲ್ಲಿ ಜಾಹೀರಾತು

- ಚೀನಾ ಆ್ಯಪ್‌ ಡೌನ್‌ಲೋಡ್‌ ಮಾಡಿ ಆಧಾರ್‌, ಗ್ರಾಹಕರ ಮೊಬೈಲಲ್ಲಿರುವ ಎಲ್ಲರ ನಂಬರ್‌, ಸೆಲ್ಫಿ ಫೋಟೋ ಕಡ್ಡಾಯ

- ಸಕಾಲಕ್ಕೆ ಸಾಲ ತೀರಿಸಲಾಗದಿದ್ದರೆ, ಇನ್ನೊಂದು ಆ್ಯಪ್‌ನಲ್ಲಿ ಹಳೆ ಸಾಲ ತೀರಿಸಲು ಹೊಸ ಸಾಲ. ಬಳಿಕ ಬ್ಲಾಕ್‌ಮೇಲ್‌

- ಗ್ರಾಹಕರು ನೀಡಿದ ಎಲ್ಲ ಮೊಬೈಲ್‌ ನಂಬರ್‌ಗಳಿಗೆ ಸಾಲದ ಬಾಕಿ, ಈತ ವಂಚಕ ಎಂದು ಫೋಟೋಸಹಿತ ಸಂದೇಶ

- ಮರಾರ‍ಯದೆಗೆ ಅಂಜಿ ಭಾರೀ ಬಡ್ಡಿ ಸಹಿತ ಮರುಪಾವತಿ ಮಾಡುವ ಸಾಲಗಾರರು. ಆಗದಿದ್ದ ಕೆಲವರಿಂದ ಆತ್ಮಹತ್ಯೆ

ಬಂಧನ ಹೇಗೆ?

- ಡಿ.25ಕ್ಕೆ ಆ್ಯಪ್‌ ಜಾಲದ ಇಬ್ಬರು ಚೀನಿಯರ ಬಂಧನ, ಇವರ ಮಾಹಿತಿ ಆಧರಿಸಿ ಬೆಂಗಳೂರು ಸೇರಿ ಹಲವೆಡೆ ದಾಳಿ

- ವಿಚಾರಣೆ ವೇಳೆ ಮ್ಯಾನೇಜರ್‌ ಒಬ್ಬಳ ಜೊತೆಗೆ ಚೀನಾ ಆ್ಯಪ್‌ ಕಂಪನಿ ಮುಖ್ಯಸ್ಥನ ಅಕ್ರಮ ಸಂಬಂಧದ ಮಾಹಿತಿ ಬೆಳಕಿಗೆ

- ಆಕೆಯ ತನಿಖೆ ಬಳಿಕ ಲಾಂಬೋ ಫೋಟೋ ಮತ್ತು ಆತನ ಪರಾರಿ ಸುಳಿವು. ಕೂಡಲೇ ಏರ್ಪೋರ್ಟ್‌ಗಳಿಗೆ ಸುದ್ದಿ, ಬಂಧನ

 

click me!