ಗಾಂಜಾ ವ್ಯಸನಿಯಾಗಿದ್ದ ಮಗನನ್ನು ಕಂಬಕ್ಕೆ ಕಟ್ಟಿ, ಕಣ್ಣಿಗೆ ಖಾರದ ಪುಡಿ ಎರಚಿ ಶಿಕ್ಷೆ ಕೊಟ್ಟ ತಾಯಿ!

By Santosh NaikFirst Published Apr 5, 2022, 5:23 PM IST
Highlights

ಗಾಂಜಾ ಚಟಕ್ಕೆ ದಾಸನಾಗಿದ್ದ ಮಗನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ, ಕಣ್ಣಿಗೆ ಖಾರದ ಪುಡಿ ಎರಚಿ ಶಿಕ್ಷೆ ನೀಡಿದ ತಾಯಿಯ ವಿಡಿಯೋ ಸಖತ್ ವೈರಲ್ ಆಗಿದೆ. ಗಾಂಜಾ ಚಟಕ್ಕೆ ಒಳಗಾಗಿ ಮನೆಗೆ ಬಾರದೇ ಅಲೆದಾಡುತ್ತಿದ್ದ ಮಗನಿಗೆ ಎಚ್ಚರಿಕೆ ನೀಡಿದ್ದರೂ, ಬದಲಾಗಿರಲಿಲ್ಲ. ಇದಕ್ಕಾಗಿ ತಾವೇ ಹೊಸ ರೀತಿಯಲ್ಲಿ ಶಿಕ್ಷೆ ನೀಡುವ ಮೂಲಕ ಗಮನಸೆಳೆದಿದ್ದಾರೆ.

ಹೈದರಾಬಾದ್ (ಏ. 5): ಡ್ರಗ್ಸ್ (Drugs) ಚಟದಿಂದಾಗಿ ದೇಶದ ಬಹುತೇಕ ಯುವ ಜನಾಂಗ (Youth) ಇಂದು ಹಾಳಾಗುತ್ತಿದೆ. ಅದರೆ, ತೆಲಂಗಾಣದ (Telangana) ಸೂರ್ಯಪೇಟ (Suryapet) ಜಿಲ್ಲೆಯ ಕೊಡಾದ್ ದಲ್ಲಿ ( Kodad)ನಡೆದ ಘಟನೆ ನಿಮ್ಮ ಗಮನಸೆಳೆಯುವುದು ಗ್ಯಾರಂಟಿ. ಗಾಂಜಾ ಚಟಕ್ಕೆ ದಾಸನಾಗಿ ಮನೆಗೆ ಬರದೆ ಅಲೆದಾಡುತ್ತಿದ್ದ ಮಗನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಕಣ್ಣಿಗೆ ಖಾರದಪುಡಿ ಎರಚಿದ ವಿಡಿಯೋ ಸಖತ್ ವೈರಲ್ ಆಗಿದೆ. 

ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ಕೊಡಾದ್ ಎಂಬಲ್ಲಿ ನಡೆದ ಈ ಘಟನೆಯ ವಿಡಿಯೋ ಸೋಮವಾರ ಇತ್ತೀಚೆಗೆ ಜಾಲತಾಣಗಳಲ್ಲಿ ವೈರಲ್ ಆಗಿದೆ. ತನ್ನ 15 ವರ್ಷದ ಮಗ ಗಾಂಜಾ ವ್ಯಸನಿಯಾಗುತ್ತಿರುವ ಬಗ್ಗೆ ಆತಂಕಗೊಂಡ ಮಹಿಳೆ ಆತನನ್ನು ಕಂಬಕ್ಕೆ ಕಟ್ಟಿ ಹಾಕಿದ್ದಾಳೆ. ಅಷ್ಟಕ್ಕೇ ನಿಲ್ಲದೆ ಮತ್ತೊಬ್ಬ ಮಹಿಳೆಯ ಸಹಾಯ ಪಡೆದುಕೊಂಡು, ಕಣ್ಣಿಗೆ ಖಾರದ ಪುಡಿ (mirchi powder ) ಎರಚಿ ವಿಶೇಷ ರೀತಿಯಲ್ಲಿ ಶಿಕ್ಷೆ ನೀಡಿದ್ದಾಳೆ. ಕಣ್ಣಿನ ಉರಿಯಿಂದಾಗಿ ಬಾಲಕ ಕಿರುಚಾಡುತ್ತಿದ್ದರೆ, ಅಕ್ಕಪಕ್ಕದಲ್ಲಿದ್ದರು ಕನಿಷ್ಠ ಆತನಿಗೆ ನೀರನ್ನಾದರೂ ನೀಡಿ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಕೇಳಿಸಿದೆ. ಗಾಂಜಾ ಸೇದುವ ಅಭ್ಯಾಸವನ್ನು ಬಿಡುವುದಾಗಿ ಭರವಸೆ ನೀಡಿದ ನಂತರವೇ ಮಹಿಳೆ ತನ್ನ ಮಗನನ್ನು ಕಂಬದಿಂದ ಬಿಚ್ಚಿದ್ದಾಳೆ.

ಅವನು ಶಾಲೆಗೆ ಬಂಕ್ ಮಾಡುತ್ತಿದ್ದ ಮತ್ತು ಗಾಂಜಾ ಸೇದುತ್ತಿದ್ದರಿಂದ ತಾವು ಈ ಕಠಿಣ ಶಿಕ್ಷೆ ನೀಡಿದ್ದಾಗಿ ತಾಯಿ ಹೇಳಿದ್ದಾರೆ. ಪದೇ ಪದೇ ಎಚ್ಚರಿಕೆ ನೀಡಿದರೂ ಅವರು ತಮ್ಮ ಮಾರ್ಗವನ್ನು ಸರಿಪಡಿಸಿಕೊಳ್ಳಲಿಲ್ಲ. ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ತಾಯಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

A mother found out that her 15-yr-old son was becoming ganja addict and came up with unique treatment by tying him to a pole & rubbed Chilli powder in his eyes until he promises to quit pic.twitter.com/MWPsznOICK

— sarika (@Sarika__reddy)


ತೆಲಂಗಾಣದ ಗ್ರಾಮಾಂತರದಲ್ಲಿ ಮಕ್ಕಳನ್ನು ಶಿಕ್ಷಿಸಲು ಪೋಷಕರು ಮಕ್ಕಳ ಕಣ್ಣಿಗೆ ಮೆಣಸಿನ ಪುಡಿ ಹಾಕುವುದು  ಹೊಸದೇನಲ್ಲ. ಆದರೆ, ಈ ಹಳೆಯ ವಿಧಾನವು ಎಷ್ಟು ಉಪಯುಕ್ತ ಎನ್ನುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಯುವಜನರಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನದ ನಡುವೆ ಈ ಘಟನೆ ಸಂಭವಿಸಿದೆ.

ಮನೆ ಬಳಿ ಇತ್ತು ಮೂರು ಕಾಳಿಂಗ ಸರ್ಪ, ಬೆಚ್ಚಿ ಬೀಳಿಸಿದೆ ದೃಶ್ಯ!

ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ಇಂಜಿನಿಯರಿಂಗ್ ಪದವೀಧರನೊಬ್ಬ ಡ್ರಗ್ಸ್ ಸೇವನೆಯಿಂದ ಮೃತಪಟ್ಟಿರುವುದು ಅಧಿಕಾರಿಗಳನ್ನು ಆತಂಕಕ್ಕೆ ದೂಡಿದೆ. ಸ್ನೇಹಿತರು ಮತ್ತು ಡ್ರಗ್ ದಂಧೆಕೋರರೊಂದಿಗೆ ಗೋವಾಗೆ ಭೇಟಿ ನೀಡಿದಾಗ ಮಾದಕ ವ್ಯಸನಿಯಾಗಿದ್ದ ಈತ ಮಾದಕ ದ್ರವ್ಯಗಳ ಕಾಕ್‌ಟೈಲ್ ಸೇವಿಸಲು ಆರಂಭಿಸಿದ್ದ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಮತ್ತು ಹೊಸದಾಗಿ ರಚಿಸಲಾದ ಹೈದರಾಬಾದ್ ನಾರ್ಕೋಟಿಕ್ಸ್ ಎನ್‌ಫೋರ್ಸ್‌ಮೆಂಟ್ ವಿಂಗ್ (H-NEW) ಪೆಡ್ಲರ್‌ಗಳ ವಿರುದ್ಧ ಕಠಿಣವಾಗಿ ವರ್ತಿಸುವುದು ಮಾತ್ರವಲ್ಲದೆ ಡ್ರಗ್ಸ್ ಸೇವಿಸುತ್ತಿರುವವರ ವಿರುದ್ಧ ಕೇಸ್‌ಗಳನ್ನು ಬುಕ್ ಮಾಡುತ್ತಿದೆ.

ಮದುವೆ ಭರವಸೆ ಮೇಲೆ ದೈಹಿಕ ಸಂಪರ್ಕ, ಇದು ಅತ್ಯಾಚಾರಕ್ಕೆ ಸಮವೇ? ಕೇರಳ ಹೈಕೋರ್ಟ್ ಮಹತ್ವದ ತೀರ್ಪು

ಪೊಲೀಸರ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಹಲವಾರು ಯುವಕರು ಮತ್ತು ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿದ್ದಾರೆ ಮತ್ತು ಅವರು ಅಪರಾಧ ಮತ್ತು ಇತರ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಯುವಕರು ಮತ್ತು ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಬಲಿಯಾಗದಂತೆ ಪೊಲೀಸರು ಮನವಿ ಮಾಡಿದ್ದು, ಪೋಷಕರು ತಮ್ಮ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು ಮತ್ತು ಇಂತಹ ಸಮಾಜ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸರನ್ನು ಸಂಪರ್ಕಿಸಲು ಅಥವಾ ಪೊಲೀಸರಿಗೆ ಮಾಹಿತಿ ನೀಡಲು ಹಿಂಜರಿಯಬೇಡಿ ಎಂದಿದ್ದಾರೆ.

 

click me!