ಮದುವೆಗೆ ವಾರವಿರುವಾಗ ನಗುವರ್ಧಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಯುವಕ ಸಾವು

By Anusha Kb  |  First Published Feb 20, 2024, 2:38 PM IST

ನಗು ವರ್ಧಿಸುವ ಅಥವಾ ನಕ್ಕಾಗ ಚೆನ್ನಾಗಿ ಕಾಣಿಸುವುದಕ್ಕಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಯುವಕನೋರ್ವ ಅನಸ್ತೇಸಿಯಾ ಓವರ್‌ಡೋಸ್ ಆಗಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಹೈದರಾಬಾದ್‌ನಲ್ಲಿ ನಡೆದಿದ್ದು, ಕ್ಲಿನಿಕ್ ವಿರುದ್ಧ ಪ್ರಕರಣ ದಾಖಲಾಗಿದೆ.


ಹೈದರಾಬಾದ್‌: ಕೆಲವರು ಸಹಜವಾಗಿ ಸುಂದರವಾಗಿದ್ದರೆ ಕೆಲವರು ದೇಹದ ಅಂಗಗಳಿಗೆ ಕತ್ತರಿ ಹಾಕಿ ಅವುಗಳಿಗೆ ಸುಂದರ ರೂಪ ನೀಡುವುದನ್ನು ಬಹುತೇಕ ಸಿನಿಮಾ ರಂಗದಲ್ಲಿರುವವರು ಮಾಡುತ್ತಾರೆ. ಸ್ತನ, ಮೂಗು, ತುಟಿ ಕೆನ್ನೆಗಳಿಗೆ ಬಹುತೇಕರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಬೇರೆಯದೇ ರೂಪ ನೀಡುತ್ತಾರೆ. ಆದರೆ ಇಲ್ಲೊಬ್ಬರು ನಗು ಹೆಚ್ಚಿಸುವ ಅಥವಾ ನಗು ವರ್ಧಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಇದು ಆತನ ಜೀವವನ್ನೇ ತೆಗೆದಿದೆ. ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ವಿವಾಹವಾಗಿ ಹೊಸ ಬದುಕಿಗೆ ಕಾಲಿರಿಸಬೇಕಾದ ಯುವಕನೋರ್ವ ಮದ್ವೆಗೆ ವಾರವಿರಬೇಕಾದರೆ ಪ್ರಾಣ ಕಳೆದುಕೊಂಡಿದ್ದಾನೆ. 

28 ವರ್ಷದ ಲಕ್ಷ್ಮಿನಾರಾಯಣ ವಿಂಜಮ್  ಅವರಿಗೆ ವಿವಾಹ ನಿಶ್ಚಿತಾರ್ಥವಾಗಿದ್ದು, ಹಸೆಮಣೆ ಏರಲು ವಾರವಷ್ಟೇ ಬಾಕಿ ಇತ್ತು. ಹೀಗಿರುವಾಗ ಅವರಿಗೆ ಅದೇನು ಅನಿಸಿತೋ ಏನೋ, ಬಹುಶಃ ತಮ್ಮ ನಗುವಿನ ಬಗ್ಗೆ ಅವರಿಗೆ ಕೀಳರಿಮೆ ಇತ್ತೇನೋ? ಮದ್ವೆಗೂ ಮೊದಲು ನಗುವರ್ಧಿಸುವ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ. ಇದಕ್ಕಾಗಿ ಅವರು ಹೈದರಾಬಾದ್‌ನ ಜುಬಿಲಿಹಿಲ್ಸ್‌ನಲ್ಲಿರುವ ಎಫ್‌ಎಂಎಸ್ ಇಂಟರ್‌ನ್ಯಾಷನಲ್ ಡೆಂಟಲ್ ಕ್ಲಿನಿಕ್‌ಗೆ ಈ ಚಿಕಿತ್ಸೆಗಾಗಿ ಫೆಬ್ರವರಿ 16 ರಂದು ದಾಖಲಾಗಿದ್ದಾರೆ. ಆದರೆ ಈಗ ಸುಂದರ ನಗುವಿನೊಂದಿಗೆ ಹೊರಬರಬೇಕಾದವರು ಹೆಣವಾಗಿದ್ದಾರೆ. 

Latest Videos

ಆಸ್ಪತ್ರೆ ನೀಡಿದ ಅನಸ್ತೇಸಿಯಾ ಓವರ್‌ಡೋಸ್‌ನಿಂದ ತನ್ನ ಮಗ ಸಾವಿಗೀಡಾಗಿದ್ದಾನೆ ಎಂದು ಲಕ್ಷ್ಮಿನಾರಾಯಣ ವಿಂಜಂ ಅವರ ತಂದೆ ರಾಮುಲು ವಿಂಜಂ ದೂರಿದ್ದಾರೆ.  ಸರ್ಜರಿ ವೇಳೆ ನನ್ನ ಮಗ ಪ್ರಜ್ಞೆ ಕಳೆದುಕೊಂಡಿದ್ದು, ಇದಾದ ನಂತರ ಆಸ್ಪತ್ರೆ ಸಿಬ್ಬಂದಿ ನನಗೆ ಕರೆ ಮಾಡಿ ಕ್ಲಿನಿಕ್‌ಗೆ ಬರುವಂತೆ ಕರೆದಿದ್ದಾರೆ.  ನಾವು ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದೆವು. ಆದರೆ ಅಲ್ಲಿ ವೈದ್ಯರು ದಾರಿ ಮಧ್ಯೆಯೇ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದರು ಎಂದು ಲಕ್ಷ್ಮಿನಾರಾಯಣ್ ಅವರ ತಂದೆ ದೂರಿದ್ದಾರೆ. 

ಅಲ್ಲದೇ ಈ ಶಸ್ತ್ರಚಿಕಿತ್ಸೆಗೆ ತಾನು ಒಳಗಾಗುತ್ತಿರುವ ಬಗ್ಗೆ ತಮ್ಮ ಪುತ್ರ ನಮಗೆ ತಿಳಿಸಿಯೇ ಇರಲಿಲ್ಲ, ಆತನಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ,  ಆತನ ಸಾವಿಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರೇ ಕಾರಣ ಎಂದು ಲಕ್ಷ್ಮಿನಾರಾಯಣ್ ತಂದೆ ರಾಮುಲು ಆರೋಪಿಸಿದ್ದಾರೆ. 

ಅನಸ್ತೇಸಿಯಾ ಚುಚ್ಚಿಕೊಂಡು 24 ವರ್ಷದ ಯುವ ವೈದ್ಯೆ ಆತ್ಮಹತ್ಯೆ

ಲಕ್ಷ್ಮಿನಾರಾಯಣ ಅವರು ಫೆಬ್ರವರಿ 16 ರಂದು ಮಧ್ಯಾಹ್ನ 2.30 ರ ಸುಮಾರಿಗೆ ಈ ಕ್ಲಿನಿಕ್‌ಗೆ ಆಗಮಿಸಿದ್ದರು.  ಸಂಜೆ 4.30ರ ಸುಮಾರಿಗೆ ಆತನನ್ನು ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯಲಾಗಿತ್ತು. ಮತ್ತು ಈ ನಗುವರ್ಧಕ ಶಸ್ತ್ರಚಿಕಿತ್ಸೆಯ ಪ್ರಕ್ರಿಯೆಯೂ  ಸುಮಾರು 2 ಗಂಟೆಗಳ ಕಾಲ ಮುಂದುವರೆದಿತ್ತು. ಆದರೆ 7 ಗಂಟೆಗೆ ಕ್ಲಿನಿಕ್‌ನವರು ಲಕ್ಷ್ಮಿನಾರಾಯಣ್ ಅವರ ತಂದೆಗೆ ಕರೆ ಮಾಡಿದ್ದು, ಅವರು ಬಂದು ಕೂಡಲೇ ಮಗನನ್ನು ಜ್ಯುಬ್ಲಿಹಿಲ್ಸ್‌ ಅಪೊಲೋ ಆಸ್ಪತ್ರೆಗೆ ಕರೆತಂದಿದ್ದಾರೆ.  ಆದರೆ ಕರೆತರುವಾಗಲೇ ಆತನ ಪ್ರಾಣ ಹೋಗಿದೆ ಎಂದು ಅಲ್ಲಿ ವೈದ್ಯರು ಘೋಷಿಸಿದ್ದರು ಎಂದು ಜ್ಯುಬಿಲಿ ಹಿಲ್ಸ್ ಠಾಣೆ ಅಧಿಕಾರಿ ಕೆ. ವೆಂಕಟೇಶ್ ರೆಡ್ಡಿ ಹೇಳಿದ್ದಾರೆ. 

ಲಕ್ಷ್ಮಿನಾರಾಯಣ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ವಾರದ ಹಿಂದೆ ಲಕ್ಷ್ಮಿನಾರಾಯಣ ಅವರಿಗೆ ವಿವಾಹ ನಿಶ್ಚಿತಾರ್ಥವಾಗಿತ್ತು. ಹಾಗೂ ಮುಂದಿನ ವಾರ ಅವರ ಮದುವೆ ನಿಗದಿಯಾಗಿತ್ತು. ಇನ್ನು ಈ ಶಸ್ತ್ರಚಿಕಿತ್ಸೆ ನಡೆಸಿದ ಆಸ್ಪತ್ರೆ ವಿರುದ್ಧ ಯುವಕನ ಕುಟುಂಬದವರು ನಿರ್ಲಕ್ಷ್ಯದ ಪ್ರಕರಣ ದಾಖಲಿಸಿದ್ದಾರೆ.  ನಾವು ಆಸ್ಪತ್ರೆಯ  ದಾಖಲೆಗಳನ್ನು ಹಾಗೂ ಕ್ಯಾಮರಾ ಫೂಟೇಜ್‌ಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಠಾಣೆ ಅಧಿಕಾರಿ ರೆಡ್ಡಿ ಹೇಳಿದ್ದಾರೆ. 

ಪ್ಲಾಸ್ಟಿಕ್ ಸರ್ಜರಿ ಮೂಲಕ ಮುಖ ಬದಲಾಗ್ತಿದ್ದಂತೆ ಆಸ್ಪತ್ರೆಯಿಂದ ಓಡಿದ ಮಹಿಳೆ…!

ಈ ಶಸ್ತ್ರಚಿಕಿತ್ಸೆ ನಡೆಸಿದ ಎಫ್‌ಎಂಎಸ್ ಇಂಟರ್‌ನ್ಯಾಷನಲ್‌ ತನ್ನ ವೆಬ್‌ಸೈಟ್‌ನಲ್ಲಿ ಅತೀಹೆಚ್ಚು ಅಂದರೆ 55ಕ್ಕೂ ಹೆಚ್ಚು ಬಹುಮಾನ ಸ್ವೀಕರಿಸಿದ ದಂತ ಚಿಕಿತ್ಸಾಲಯ ಎಂದು ಹೇಳಿಕೊಂಡಿದೆ.

click me!