
ಅಕ್ಕನಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಆಕೆಯ ತಮ್ಮನೇ ಚಾಕು ಇರಿದು ಕೊಂದಂತಹ ಘಟನೆ ಮಧ್ಯಪ್ರದೇಶದ ಗುಣ ಜಿಲ್ಲೆಯಲ್ಲಿ ನಡೆದಿದೆ. 21 ವರ್ಷದ ಆರೋಪಿ ಅಭಿಷೇಕ್ ತಿಂಗಾ ಎಂಬಾತ ತನ್ನ ಅಕ್ಕನನ್ನು ಪ್ರೀತಿಸುತ್ತಿದ್ದ ಯುವಕ ಅನಿಲ್ ಎಂಬಾತನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಅಕ್ಕನ ಬರ್ತ್‌ಡೇ ದಿನ ಆಕೆ ಕೇಕ್ ಕತ್ತರಿಸಲು ಬಳಸಿದ ಚಾಕುವಿನಿಂದಲೇ ಈ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಶನಿವಾರ ಈ ಘಟನೆ ನಡೆದಿದ್ದು, ಕೊಲೆಯಾದ ಅನಿಲ್, ಅಭಿಷೇಕ್‌ನ ಅಕ್ಕನ ಜೊತೆ ಆತ್ಮೀಯತೆ ಇತ್ತು. ಆತ ಆಕೆಯನ್ನು ಪ್ರೀತಿಸುತ್ತಿದ್ದ. ತನ್ನನ್ನು ಮದುವೆಯಾದರೆ ಚಿನ್ನ ಹಾಗೂ ಬೆಳ್ಳಿಯ ಆಭರಣವನ್ನು ನೀಡುವುದಾಗಿ ಆಕೆಗೆ ಹೇಳಿದ್ದ ಎನ್ನಲಾಗಿದೆ. ಅದರೆ ಆಕೆ ತನ್ನ ಸೋದರ ಅಭಿಷೇಕ್ ಬಳಿ ಅನಿಲ್ ತನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಹೇಳಿದ್ದಳು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಅಭಿಷೇಕ್ ತನ್ನ ಸ್ನೇಹಿತರ ಜೊತೆ ಸೇರಿ ಅನಿಲ್ ಕೊಲೆಗೆ ಪ್ಲಾನ್ ಮಾಡಿದ್ದಾನೆ.
ಹೀಗಾಗಿ ಅನಿಲ್‌ನ ವರ್ತನೆಯನ್ನು ತನ್ನ ಅಕ್ಕನಿಗೆ ನೀಡ್ತಿರುವ ಕಿರುಕುಳ ಎಂದು ಭಾವಿಸಿದ ಅಭಿಷೇಕ್ ಆತನ ಕೊಲೆಗೆ ಸಂಚು ರೂಪಿಸಿದ್ದು, ಇದಕ್ಕಾಗಿ ಆನ್‌ಲೈನ್‌ನಲ್ಲಿ 4 ಚಾಕುಗಳನ್ನು ಆರ್ಡರ್ ಮಾಡಿದ್ದ. ನಂತರ ಅನಿಲ್‌ನ ಚಲನವಲನಗಳ ಮೇಲೆ ಕಣ್ಣಿಡಲು ಶುರು ಮಾಡಿದ್ದ. ಈ ಮಧ್ಯೆ ಅನಿಲ್ ಸಮೀಪದ ಪ್ರದೇಶವೊಂದರಲ್ಲಿ ಮದ್ಯಸೇವನೆ ಮಾಡ್ತಿರುವ ವಿಚಾರವನ್ನು ತಿಳಿದ ಅಭಿಷೇಕ್ ಇದೇ ಸರಿಯಾದ ಸಮಯ ಎಂದು ಕೂಡಲೇ ತನ್ನ ಸ್ನೇಹಿತರ ಜೊತೆ ಅನಿಲ್ ಇದ್ದ ಪ್ರದೇಶಕ್ಕೆ ಬಂದಿದ್ದಾನೆ. ನಂತರ ಅಲ್ಲಿ ಕುಡಿಯುತ್ತಾ ಕುಳಿತಿದ್ದ ಅನಿಲ್‌ಗೆ ಸ್ನೇಹಿತರ ಜೊತೆ ಸೇರಿ ಚಾಕುವಿನಿಂದ ಇರಿದ ಅಭಿಷೇಕ್ ಅಲ್ಲಿಂದ ತನ್ನ ಸ್ನೇಹಿತರ ಜೊತೆ ಪರಾರಿಯಾಗಿದ್ದಾನೆ. ಇಲ್ಲಿ ಅನಿಲ್ ಹತ್ಯೆಗೆ ತನ್ನ ಸೋದರಿಯ ಹುಟ್ಟುಹಬ್ಬದಂದು ಆಕೆ ಕೇಕ್ ಕತ್ತರಿಸುವುದಕ್ಕೆ ಬಳಸಿದ ಚಾಕುವನ್ನೇ ಬಳಸಲಾಗಿತ್ತು ಎಂದು ಅಲ್ಲಿನ ಎಸ್‌ಪಿ ಅಂಕಿತ್ ಸೋನಿ ಹೇಳಿದ್ದಾರೆ.
ಗರ್ಭಿಣಿ ಪತ್ನಿಯ ಕೊಂದು ಶವ ತುಂಡು ತುಂಡು ಮಾಡಿ ನದಿಗೆಸೆದ ಪತಿ:
ಹಾಗೆಯೇ ಮತ್ತೊಂದು ಭೀಕರ ಅಪರಾಧ ಪ್ರಕರಣವೊಂದು ನೆರೆಯ ರಾಜ್ಯ ತೆಲಂಗಾಣದಿಂದ ವರದಿಯಾಗಿದೆ. ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ ಗಂಡ ಆಕೆಯ ದೇಹವನ್ನು ಚೂರು ಚೂರು ಮಾಡಿದ ಹೈದರಾಬಾದ್ ನಗರದಲ್ಲಿ ಹರಿಯುವ ಮೌಸಿ ನದಿಗೆ ಎಸೆದಿದ್ದಾನೆ. ತೆಲಂಗಾಣದ ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದೆ. 5 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿ ದೇಹವನ್ನು ಚೂರು ಚೂರು ಮಾಡಿ ಮೌಸಿ ನದಿಗೆ ಎಸೆಯುತ್ತಿದ್ದ ವೇಳೆಯೇ ಈತ ಸಿಕ್ಕಿಬಿದ್ದಿದ್ದರಿಂದ ಈ ಘಟನೆ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ. ಮೃತ ಮಹಿಳೆಯನ್ನು 21 ವರ್ಷದ ಸ್ವಾತಿ ಎಂದು ಗುರುತಿಸಲಾಗಿದ್ದು, ಇವರು 5 ತಿಂಗಳ ಗರ್ಭಿಣಿಯಾಗಿದ್ದರು. ಟ್ರಾವೆಲ್ ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಹೇಂದರ್ ಕೊಲೆ ಮಾಡಿದ ಆರೋಪಿ. ಪತ್ನಿ ಸ್ವಾತಿಯನ್ನು ಕೊಲೆ ಮಾಡಿದ ಈತ, ದೇಹವನ್ನು ಹಲವು ಭಾಗಗಳಾಗಿ ಕತ್ತರಿಸಿದ್ದ. ತಲೆ ಆಕೆಯ ಕೈ ಕಾಲುಗಳನ್ನು ಆತ ಆಗಲೇ ಮೌಸಿ ನದಿಗೆ ಎಸೆದಿದ್ದ. ಆದರೆ ಸ್ವಾತಿಯ ದೇಹದ ಉಳಿದ ತುಂಡುಗಳು ಆತನ ಮನೆಯಲ್ಲಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದ ಜೋಡಿ:
ಹೈದರಬಾದ್ ಉಪನಗರವಾದ ಮೆಡಿಪಲ್ಲಿ ಪ್ರದೇಶದಲ್ಲಿ ಇರುವ ಬಾಲಾಜಿ ಹಿಲ್ಸ್‌ನಲ್ಲಿ ಈ ಕೊಲೆ ನಡೆದಿತ್ತು. ಸ್ವಾತಿ ಹಾಗೂ ಮಹೇಂದರ್ ಇಬ್ಬರು ವಿಕಾರಾಬಾದ್ ಜಿಲ್ಲೆಯ ಕಾಮರೆಡ್ಡಿಗುಡ್ಡದ ನಿವಾಸಿಗಳಾಗಿದ್ದರು. ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು ನಂತರ ಬಾಲಾಜಿ ಹಿಲ್ಸ್ ಪ್ರದೇಶಕ್ಕೆ ಶಿಫ್ ಆಗಿದ್ದರು.ಶನಿವಾರ 4.30ರ ಸುಮಾರಿಗೆ ಈ ಕೊಲೆ ನಡೆದಿದೆ. ಕೊಲೆ ಮಾಡಿದ ನಂತರ ಮಹೇಂದರ್ ತನ್ನ ಅಕ್ಕನಿಗೆ ಕರೆ ಮಾಡಿ ಸ್ವಾತಿ ನಾಪತ್ತೆಯಾಗಿದ್ದಾಳೆ ಎಂದು ಹೇಳಿದ್ದಾನೆ. ಈ ವೇಳೆ ಅನುಮಾನಗೊಂಡ ಸೋದರಿ ತನ್ನ ಸಂಬಂಧಿಕರಿಗೆ ಈ ವಿಚಾರ ತಿಳಿಸಿದ್ದಾರೆ. ಅವರು ಮಹೇಂದರ್‌ನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
ಅಲ್ಲಿಯೂ ಆತ ತನ್ನ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಹೇಳಿದ್ದಾನೆ. ಈ ವೇಳೆ ಪೊಲೀಸರು ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದಾಗ ಆತ ತಾನೇ ಪತ್ನಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಮಲ್ಕಜಗಿರಿ ಪ್ರದೇಶದ ಡಿಸಿಪಿ ಪಿವಿ ಪದ್ಮಜಾ ಅವರು ಹೇಳಿದ್ದಾರೆ. ಈಗ ಪೊಲೀಸರು ಮಹೇಂದರ್‌ನನ್ನು ಬಂಧಿಸಿ ಕಸ್ಟಡಿಗೆ ಪಡೆದಿದ್ದಾರೆ. ಈತ ಈಗಾಗಲೇ ಸ್ವಾತಿಯ ತಲೆ ಹಾಗೂ ಕೈಕಾಲುಗಳನ್ನು ನದಿಗೆಸೆದಿರುವುದರಿಂದ ಮೃತದೇಹದ ಭಾಗಗಳ ಶೋಧಕ್ಕೆ ನದಿಗಿಳಿದ ಡೈವರ್‌ಗಳಿಗೆ ಯಾವುದೇ ದೇಹದ ಭಾಗಗಳು ಸಿಕ್ಕಿಲ್ಲ, ನಾವು ವಿಧಿ ವಿಜ್ಞಾನ ತಂಡವನ್ನು ಕರೆಸಿ ಸಾಕ್ಷ್ಯ ಸಂಗ್ರಹಿಸಿದ್ದೇವೆ. ನಮಗೆ ಮನೆಯಲ್ಲಿ ಮಹಿಳೆಯ ಕೈಕಾಲು ತಲೆ ಇಲ್ಲದ ದೇಹ ಮಾತ್ರ ಸಿಕ್ಕಿದೆ ಡಿಎನ್‌ಎ ಪರೀಕ್ಷೆ ನಡೆಸಿ ಕೊಲೆಯಾದವರು ಸ್ವಾತಿಯೇ ಎಂಬುದನ್ನು ಖಚಿತಪಡಿಸಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಗಂಡನಿಗೆ ಲಿವರ್ ನೀಡಿದ ಹೆಂಡತಿ: ಅಂಗಾಂಗ ಕಸಿ ಬಳಿಕ ಇಬ್ಬರೂ ಸಾವು: ಆಸ್ಪತ್ರೆಗೆ ನೊಟೀಸ್
ಇದನ್ನೂ ಓದಿ: ಗ್ರೇಟರ್ ನೋಯ್ಡಾ ಡೌರಿ ಕೇಸ್: ಮಗನ ಜೊತೆ ಸೇರಿ ಸೊಸೆಗೆ ಬೆಂಕಿ ಹಚ್ಚಿದ ಅತ್ತೆ ಅಂದರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ