ಕಾಶ್ಮೀರದಲ್ಲಿ ಸೇನೆ ದಾಳಿ ಮಾಡಿ ಪಾಕಿಸ್ತಾನ, ಚೀನಾ ನಿರ್ಮಿತ ಮದ್ದು, ಗುಂಡು ವಶಕ್ಕೆ ಪಡೆಯಲಾಗಿದೆ. ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಸೇನೆ ದಾಳಿ ಮಾಡಿದ್ದು, ಚೀನಾ, ಪಾಕಿಸ್ತಾನ ನಿರ್ಮಿತ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಯೋಧರಿಂದ ವಶಕ್ಕೆ ಪಡೆಯಲಾಗಿದೆ. ಯುದ್ಧಕ್ಕೆ ಸಿದ್ಧವಾಗುವಷ್ಟು ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, ಇದು ಪಾಕ್ ಹತಾಶೆ ಸಂಕೇತ ಎಂದು ಸೇನೆ ಕಿಡಿ ಕಾರಿದೆ.
ಶ್ರೀನಗರ: ಜಮ್ಮು-ಕಾಶ್ಮೀರದ (Jammu Kashmir) ಬಾರಾಮುಲ್ಲಾ (Baramulla) ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ (Line of Control) ಪ್ರದೇಶವೊಂದರ ಮೇಲೆ ದಾಳಿ ನಡೆಸಿರುವ ಭಾರತೀಯ ಸೇನೆ (Indian Army), ಚೀನಾ (China) ಮತ್ತು ಪಾಕಿಸ್ತಾನ (Pakistan) ನಿರ್ಮಿತ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು (Arms) ವಶಪಡಿಸಿಕೊಂಡಿದೆ (Seized). ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು ಯುದ್ಧಕ್ಕೆ (War) ಸಿದ್ಧರಾಗುವಷ್ಟರ ಮಟ್ಟಿನದ್ದು ಎಂದು ಸೇನೆಯ ಅಧಿಕಾರಿಗಳು ಹೇಳಿದ್ದಾರೆ. ಇದರೊಂದಿಗೆ ಗಡಿ ಮೂಲಕ ಉಗ್ರರನ್ನು ನುಸುಳಿಸುವ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸಿ ದೊಡ್ಡ ದುಷ್ಕೃತ್ಯಕ್ಕೆ ಸಂಚು ಮಾಡಿದ್ದ ಪಾಕಿಸ್ತಾನದ ಯತ್ನವನ್ನು ಸೇನೆ ವಿಫಲಗೊಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಸೇನೆಯ ಮೇಜರ್ ಜನರಲ್ ಅಜಯ್ ಚಾಂದ್‌ಪುರಿಯಾ ಹಾಗೂ ಕರ್ನಲ್ ಮನೀಶ್ ಪುಂಜ್ ‘ಕಾಶ್ಮೀರದಲ್ಲಿ ಉಗ್ರರನ್ನು ಮಟ್ಟಹಾಕಲಾಗಿದ್ದು, ಅವರ ಚಟುವಟಿಕೆ ಗಣನೀಯವಾಗಿ ತಗ್ಗಿದೆ. ಇಂಥ ಸಂದರ್ಭದಲ್ಲಿ ಶಸ್ತ್ರಾಸ್ತ್ರ ಕಳಿಸಿ, ಉಗ್ರರ ಒಳನುಸುಳುವಿಕೆಗೆ ಪಾಕ್ ಪ್ರೇರೇಪಿಸುತ್ತಿದೆ. ಯುದ್ಧಕ್ಕೆ ಸಿದ್ಧವಾಗುವಷ್ಟು ಶಸ್ತ್ರಾಸ್ತ್ರ ಸಂಗ್ರಹ ಪತ್ತೆಯಾಗಿದೆ. ಇದು ಹತಾಶೆಯ ಸಂಕೇತ’ ಎಂದು ಹೇಳಿದ್ದಾರೆ.
ಇದನ್ನು ಓದಿ: 84328 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಒಪ್ಪಿಗೆ: ಭಾರತ ಚೀನಾ ನಡುವೆ ಮಾತುಕತೆ
‘ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿಯ ಹಾತ್‌ಲಂಗಾ ಸೆಕ್ಟರ್‌ನಲ್ಲಿ ಸೇನೆ ಹಾಗೂ ಪೊಲೀಸರು ಕಳೆದ ಶುಕ್ರವಾರ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಯುದ್ಧದ ಮಾದರಿಯ ಶಸ್ತ್ರಾಸ್ತ್ರ ಕೋಠಿಯಲ್ಲಿ 24 ಮ್ಯಾಗಜೀನ್‌ಗಳು, 560 ಸಜೀವ ರೈಫಲ್, ರೌಂಡ್‌ಗಳು, 12 ಚೈನೀಸ್ ಪಿಸ್ತೂಲ್‌ಗಳು, 224 ಲೈವ್ ಪಿಸ್ತೂಲ್, ರೌಂಡ್‌ಗಳು, 14 ಪಾಕಿಸ್ತಾನ ಮತ್ತು ಚೀನಾದ ಗ್ರೆನೇಡ್‌ಗಳು, ಪಾಕಿಸ್ತಾನದ ಧ್ವಜವಿರುವ 81 ಬಲೂನ್‌ಗಳು ಹಾಗೂ 8 ಎಕೆಎಸ್ 74 ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದಿದ್ದಾರೆ.
ಇದೇ ವೇಳೆ, ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದ್ದು, ನಮಗೆ ಸಿಕ್ಕಿರುವ ಮಾಹಿತಿ ಆಧರಿಸಿ ಇನ್ನಷ್ಟು ದಾಳಿ ನಡೆಸಲಿದ್ದೇವೆ. ಈಗಲೇ ದಾಳಿಯ ಪೂರ್ಣ ಮಾಹಿತಿ ಮತ್ತು ವಶಪಡಿಸಿಕೊಂಡ ಸ್ಥಳದ ಬಗ್ಗೆ ಮಾಹಿತಿ ಬಹಿರಂಗಪಡಿಸಲಾಗದು. ಆದರೆ ನಮ್ಮ ದಾಳಿಯ ಬಳಿಕ ಪಾಕಿಸ್ತಾನದ ಕಡೆಯ ಉಗ್ರರ ಲಾಂಚ್‌ಪ್ಯಾಡ್‌ನಿಂದ ಬಂದಿದ್ದ ಉಗ್ರರು ಶಸ್ತ್ರಾಸ್ತ್ರಗಳನ್ನು ಇಲ್ಲಿಯೇ ಬಿಟ್ಟು ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಚೀನಾ ಗಡಿಗೆ ರಾಹುಲ್ ಸೂಚನೆ ಮೇರೆಗೆ ಸೇನೆ ಕಳಿಸಿದ್ದಲ್ಲ: ಜೈಶಂಕರ್ ತಿರುಗೇಟು
2 ದಿನಗಳ ಹಿಂದೆ, ಪೊಲೀಸರು ಮತ್ತು ಸೇನೆಯ ಜಂಟಿ ತಂಡವು ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ) ಸಂಘಟನೆಯ ಮೂವರು ಉಗ್ರಗಾಮಿ ಸಹಚರರನ್ನು ಬಂಧಿಸಿತ್ತು. ಅವರನ್ನು ಅಬ್ದುಲ್ ರೌಫ್ ಮಲಿಕ್, ಅಲ್ತಾಫ್ ಅಹ್ಮದ್ ಪೇಯರ್ ಮತ್ತು ರಿಯಾಜ್ ಅಹ್ಮದ್ ಲೋನ್ ಎಂದು ಗುರುತಿಸಲಾಗಿದ್ದು, ಈ ಮೂವರು ಕುಪ್ವಾರಾ ಜಿಲ್ಲೆಯ ಕ್ರಾಲ್ಪೋರಾ ನಿವಾಸಿಗಳು ಎಂದು ತಿಳಿದುಬಂದಿದೆ. ಹಾಗೂ, ಈ ಮೂವರ ಬಳಿ 1 ಎಕೆ-47 ರೈಫಲ್, 2 ಎಕೆ ಮ್ಯಾಗಜೀನ್, 119 ಎಕೆ ಮದ್ದುಗುಂಡು, 1 ಪಿಸ್ತೂಲ್, 1 ಪಿಸ್ತೂಲ್ ಮ್ಯಾಗಜೀನ್, 4 ಪಿಸ್ತೂಲ್ ರೌಂಡ್‌ಗಳು, 6 ಹ್ಯಾಂಡ್ ಗ್ರೆನೇಡ್‌ಗಳು, 1 ಐಇಡಿ, 2 ಡಿಟೋನೇಟರ್‌ಗಳು, 2 ವೈರ್ ಬಂಡಲ್‌ಗಳು ಮತ್ತು ಅವರೊಂದಿಗೆ ಸುಮಾರು 100 ಲೀಟರ್ ಸಾಮರ್ಥ್ಯದ ಒಂದು ನೀರಿನ ಟ್ಯಾಂಕ್ ಇತ್ತು.
ಈ ಮೂವರು ಜೂನ್‌ನಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಹಾಗೂ ಅಡಗುತಾಣಗಳ ನಿರ್ಮಾಣಕ್ಕೆ ಸಾಮಗ್ರಿಗಳನ್ನು ಪಡೆಯಲು 6 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದರು ಎನ್ನಲಾಗಿದ್ದು, ಈ ಪೈಕಿ ಅಧಿಕಾರಿಗಳು 64,000 ರೂ. ವಶಪಡಿಸಿಕೊಂಡಿದ್ದಾರೆ.
ಇದನ್ನು ಓದಿ: ಈ ಬಾರಿ ಬೆಂಗಳೂರಿನಲ್ಲಿ ಭಾರತೀಯ ಸೇನಾ ಪಥಸಂಚಲನ ದಿನ, ಫೀಲ್ಡ್ ಮಾರ್ಷಲ್ ಕಾರ್ಯಪ್ಪಗೆ ಗೌರವ!