ಪ್ರಶಾಂತ್ ನಾತು ಅಂಕಣ | ನಿತಿನ್ ನವೀನ್‌ಗೆ ಬಿಜೆಪಿ ಪಟ್ಟ ಸಿಕ್ಕಿದ್ದೇಗೆ? ಮೋದಿ-ಅಮಿತ್ ಶಾ ಕೊಟ್ಟ ಸಂದೇಶ ಏನು?

Prashant Natu   | Kannada Prabha
Published : Dec 21, 2025, 06:46 AM IST
How Nitin Nabin Became Bihar BJP President: Internal Story

ಸಾರಾಂಶ

ನಡ್ಡಾ ಅವರ ಉತ್ತರಾಧಿಕಾರಿಯ ಕುತೂಹಲಕ್ಕೆ ತೆರೆಬಿದ್ದಿದ್ದು, ಪ್ರಧಾನಿ ಮೋದಿ ಅಚ್ಚರಿಯ ಆಯ್ಕೆ. ಆರ್‌ಎಸ್‌ಎಸ್‌ ಜೊತೆಗಿನ ತಿಕ್ಕಾಟ, ಉತ್ತರಾಧಿಕಾರಿಯ ಚರ್ಚೆ ನಡುವೆ, ದೆಹಲಿ ರಾಜಕಾರಣದ ಅನುಭವವಿಲ್ಲದ ಬಿಹಾರದ ಯುವ ನಾಯಕ ನಿತಿನ್ ನವೀನ್‌ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. 

2024ರ ಲೋಕಸಭಾ ಚುನಾವಣೆ ಮುಗಿದ ಮೇಲೆ ರಾಷ್ಟ್ರ ರಾಜಕಾರಣದ ಭವಿಷ್ಯದ ದೃಷ್ಟಿಯಿಂದ ತುಂಬಾ ಕುತೂಹಲ ಇದ್ದದ್ದು ಜೆ.ಪಿ. ನಡ್ಡಾ ಅವರ ಉತ್ತರಾಧಿಕಾರಿಯಾಗಿ ಯಾರು ಬರುತ್ತಾರೆ ಎಂಬುದರ ಬಗ್ಗೆ. ಏಕೆಂದರೆ ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರಾಧಿಕಾರಿ ಆಗಲಿರುವವರ ಸಂಕೇತಗಳು ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ದೊರಕಬಹುದು ಎಂಬ ಚರ್ಚೆಗಳು ಬಿಜೆಪಿ ಮತ್ತು ಮಾಧ್ಯಮಗಳ ವಿಶ್ಲೇಷಣೆಗಳಲ್ಲಿ ಕೇಳಿ ಬರುತ್ತಿದ್ದವು. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವೆ ಸಮನ್ವಯ ಕೊರತೆಯಿಂದ ಕಳೆದ 15 ತಿಂಗಳು ಹೊಸ ಅಧ್ಯಕ್ಷರ ಆಯ್ಕೆ ಸಾಧ್ಯ ಆಗಿರಲಿಲ್ಲ ಎಂದು ಮೂಲಗಳು ಹೇಳುತ್ತಿದ್ದವು. ಅವುಗಳ ಪ್ರಕಾರ, ‘ನೀವು 3 ಹೆಸರುಗಳನ್ನು ಕೊಡಿ. ನಾವು ಒಂದು ಫೈನಲ್ ಮಾಡುತ್ತೇವೆ’ ಎಂದು ಬಿಜೆಪಿಯು ಆರ್‌ಎಸ್‌ಎಸ್‌ಗೆ ಹೇಳಿತ್ತು. ಆದರೆ ಇದಕ್ಕೆ ಒಪ್ಪದ ಸಂಘ, ‘ನೀವೇ ಮೂವರನ್ನು ಸೂಚಿಸಿ. ಸಂಘ ಪರಿವಾರಕ್ಕೆ ಹಿತವಾಗುವವರು ಯಾರು ಎಂದು ನಾವೇ ಹೇಳುತ್ತೇವೆ’ ಎಂದು ಹೇಳಿ ಕಳುಹಿಸಿತ್ತು.

ಮಾಧ್ಯಮಗಳಲ್ಲಿ ಶಿವರಾಜ್ ಸಿಂಗ್ ಚೌಹಾಣ್‌, ಧರ್ಮೇಂದ್ರ ಪ್ರಧಾನ್‌ ಮತ್ತು ಭೂಪೇಂದ್ರ ಯಾದವ್‌ರ ಹೆಸರುಗಳು ಓಡಾಡುತ್ತಿದ್ದವು. ಆದರೆ ಅಧಿಕೃತವಾಗಿ ಎಲ್ಲಿಯೂ ಆ ಬಗ್ಗೆ ಚರ್ಚೆ ನಡೆದಿರಲಿಲ್ಲ. ಯಾವ ಹೆಸರಿನ ಬಗ್ಗೆ ಚರ್ಚೆ ನಡೆದರೂ, ಅವರು ಮೋದಿಯವರ ಉತ್ತರಾಧಿಕಾರಿ ಎಂಬ ಚರ್ಚೆಗೆ ಇಂಬು ಕೊಟ್ಟಂತೆ ಆಗೋದು ಬಹುಶಃ ಮೋದಿ ಸಾಹೇಬರಿಗೂ ಇಷ್ಟ ಇರಲಿಲ್ಲ. ಆ ಚರ್ಚೆ ಒಮ್ಮೆ ಶುರು ಆಗಿ ಬಿಟ್ಟರೆ ಗುಜರಾತ್ ಮತ್ತು ಉತ್ತರ ಪ್ರದೇಶಗಳ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳು ಜಾಸ್ತಿ ಇದ್ದವು. ಹೀಗಾಗಿ ವ್ಯಕ್ತಿ ಹಿನ್ನೆಲೆಯ ಚರ್ಚೆ ಹಾಗೂ ಮುಂದಿನ ಮಾತಿಗೆ ಆಸ್ಪದವೇ ಬೇಡ ಎಂದು ಮೋದಿ ಸಾಹೇಬರು, ದಿಲ್ಲಿ ರಾಜಕಾರಣದ ಸ್ವಲ್ಪವೂ ಅನುಭವ ಇಲ್ಲದ 45 ವರ್ಷದ ಬಿಹಾರಿ ನಾಯಕ ನಿತಿನ್ ನವೀನ್‌ರನ್ನು ತಂದು ಬಿಜೆಪಿ ಕಾರ್ಯಾಲಯದಲ್ಲಿ ಕೂರಿಸಿದ್ದಾರೆ. ಒಂದೇ ಏಟಿಗೆ ಮೋದಿ ಉತ್ತರಾಧಿಕಾರಿ ಚರ್ಚೆ ಮತ್ತು ಸಂಘದೊಂದಿಗಿನ ತಿಕ್ಕಾಟಕ್ಕೆ ಪೂರ್ಣವಿರಾಮ ಹಾಕಿದ್ದಾರೆ. ಆದರೆ ನಿತಿನ್‌ರನ್ನು ಆಯ್ಕೆ ಮಾಡುವುದಕ್ಕೆ 15 ತಿಂಗಳು ಬೇಕಿತ್ತಾ? ಎಂಬ ಪ್ರಶ್ನೆ ಏಳೋದು ಸ್ವಾಭಾವಿಕ. ಅವರ ಆಯ್ಕೆ ಪ್ರಕ್ರಿಯೆ ನೋಡಿದಾಗ ಮೇಲುನೋಟಕ್ಕೆ ಅನ್ನಿಸಿದ್ದು, ‘ಆಗಿತೀವಿ ಅಂದಿದ್ದು ಗುಡ್ಡ, ಆದರೆ ಹೊರಗೆ ತೆಗೆದದ್ದು ಇಲಿ’. ಅದೇನೋ ಗೊತ್ತಿಲ್ಲ, ಮೋದಿ ಸಾಮ್ರಾಜ್ಯದಲ್ಲಿ ಅಚ್ಚರಿ ಹೆಸರಿಗೆ ಇರುವ ಪ್ರಾಧಾನ್ಯತೆ ಅನುಭವಕ್ಕೆ ಇರುವುದಿಲ್ಲ.

ಸಂಸದೀಯ ಸಭೆ ಏನಾಯ್ತು?

ಬಿಹಾರದ ಚುನಾವಣೆ ಮುಗಿದ ಮೇಲೆ ಹೊಸ ರಾಷ್ಟ್ರೀಯ ಅಧ್ಯಕ್ಷರ ಬಗ್ಗೆ ಆರ್‌ಎಸ್‌ಎಸ್‌ ಜೊತೆ ಮೋದಿ ಮತ್ತು ಅಮಿತ್ ಶಾ ಚರ್ಚೆ ನಡೆಸಬಹುದು ಎಂಬ ಅಂದಾಜು ಇತ್ತು. ಆದರೆ ಇಷ್ಟೊಂದು ತರಾತುರಿಯಲ್ಲಿ ಎಲ್ಲವೂ ನಡೆಯುತ್ತೆ ಎಂಬುದನ್ನು ಯಾರೂ ಊಹೆ ಮಾಡಿರಲಿಲ್ಲ. ಏಕಾಏಕಿ ಕಳೆದ ವಾರ ಸಂಸದೀಯ ಮಂಡಳಿ ಸಭೆ ಕರೆಯಲಾಗಿತ್ತು. ಪಾರ್ಟಿ ಕಾರ್ಯಾಲಯದಲ್ಲಿ ಮೀಟಿಂಗ್ ಕರೆದರೆ ಮಾಧ್ಯಮಗಳು ಸಕ್ರಿಯ ಆಗಬಹುದು ಎಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಲಾಯಿತು.

‘ಹೆಸರು ಬೇಡ. ಬಿಜೆಪಿಗೆ ಮುಂದಿನ ಅಧ್ಯಕ್ಷ ಯಾವ ರೀತಿ ಇರಬೇಕು ಎಂದಷ್ಟೇ ಹೇಳಿ’ ಎಂದು ಮೋದಿ ಸಾಹೇಬರು ಕೇಳಿದ್ದರು. ಆಗ ಎಲ್ಲರೂ ‘ಯುವಕ ಆಗಿರಬೇಕು. ಹಿಂದಿ ಗೊತ್ತಿರಬೇಕು. ಜೊತೆಗೆ ಮುಂದುವರೆದ ಜಾತಿಯವರು (ಫಾರ್ವರ್ಡ್ ಸಮುದಾಯ) ಇದ್ದರೆ ಒಳ್ಳೆಯದು’ ಎಂಬ ಅಭಿಪ್ರಾಯ ಹೇಳಿದರು. ಆಗ ‘ಸರಿ’ ಎಂದ ಮೋದಿ, ‘3 ಹೆಸರನ್ನು ಸೂಚಿಸಿ ನನಗೆ ಕಳುಹಿಸಿ’ ಎಂದು ಅಮಿತ್ ಶಾ ಮತ್ತು ನಡ್ಡಾರಿಗೆ ಹೇಳಿ ಸಭೆ ಬರಖಾಸ್ತು ಮಾಡಿದ್ದಾರೆ. ಅದಾದ 48 ಗಂಟೆಯಲ್ಲಿ ನಿತಿನ್ ನವೀನ್‌ ಆಯ್ಕೆ ಪ್ರಕ್ರಿಯೆ ಮುಗಿಸಿ ಅಧಿಕೃತವಾಗಿ ಘೋಷಣೆ ಕೂಡ ಮಾಡಲಾಯಿತು. ಪಟನಾದ ಬಿಜೆಪಿ ನಾಯಕರು ಹೇಳುವ ಪ್ರಕಾರ, ಘೋಷಣೆ ಆಗುವ 1 ಗಂಟೆ ಮುಂಚೆಯೂ ನಿತಿನ್‌ ಅವರಿಗೆ ವಿಷಯ ಗೊತ್ತಿರಲಿಲ್ಲ. ಮೋದಿ ಕಾಲದಲ್ಲಿ ಯಾರಿಗೆ ಯಾವಾಗ ಅಧಿಕಾರ ಬರಬಹುದು, ಅಧಿಕಾರ ಹೋಗಬಹುದು ಎಂದು ಊಹಿಸುವುದು ಕಷ್ಟ ಬಿಡಿ.

ನಿತಿನ್- ಅಮಿತ್‌ ಶಾ ಸಂವಾದ

ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್‌ರ ನಿಯುಕ್ತಿಯನ್ನು ಸ್ವತಃ ಪ್ರಧಾನಿ ಮೋದಿ ಮಾಡಿದ್ದು ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ. ನಿತಿನ್ ನವೀನ್ ಕಾರ್ಯ ಶೈಲಿ ಛತ್ತೀಸ್‌ಗಢದ ಚುನಾವಣೆ ಪ್ರಭಾರಿ ಆಗಿದ್ದಾಗ ಅಮಿತ್ ಶಾರಿಗೆ ತುಂಬಾ ಇಷ್ಟ ಆಗಿತ್ತಂತೆ. ಅವರೇ ನಿತಿನ್‌ರ ಸಮನ್ವಯ ಸಾಧಿಸುವ ಗುಣದ ಬಗ್ಗೆ ಪ್ರಧಾನಿ ಮೋದಿ ಅವರಿಗೂ ಸಾಕಷ್ಟು ಬಾರಿ ಹೇಳಿದ್ದರಂತೆ. ಆದರೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಅಮಿತ್ ಶಾ ಕೂಡ ನಿತಿನ್ ಹೆಸರನ್ನು ಪರಿಗಣಿಸಿರಲಿಲ್ಲ.

ಬಿಹಾರದ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಉಳಿದವರು ಮಾತಾಡುತ್ತಿದ್ದಾಗ ತಡೆದ ಮೋದಿ, ‘ನಿತಿನ್ ನವೀನ್‌ ಅಭಿಪ್ರಾಯ ಏನು’ ಎಂದು ಕೇಳಿದಾಗಲೇ ಅನೇಕರಿಗೆ ಅಚ್ಚರಿ ಆಗಿತ್ತು. ಬಿಹಾರದ ಫಲಿತಾಂಶ ಬಂದ ನಂತರ ಒಂದು ದಿನ ರಾಯಪುರಕ್ಕೆ ನಿತಿನ್‌ರನ್ನು ಕರೆದ ಅಮಿತ್ ಶಾ, ಛತ್ತೀಸ್‌ಗಢದ ಜೊತೆಗೆ ಬಂಗಾಳ, ಅಸ್ಸಾಂ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿದರಂತೆ. ಜೊತೆಗೆ, ‘ಪಟನಾಗೆ ಹೋಗುವಾಗ ದಿಲ್ಲಿ ಮೂಲಕ ಹೋಗಿ. ಅಲ್ಲಿ ಜೆ.ಪಿ. ನಡ್ಡಾ ಅವರನ್ನು ಒಮ್ಮೆ ಭೇಟಿಯಾಗಿ’ ಅಂದರಂತೆ. ದಿಲ್ಲಿಗೆ ಬಂದ ನಿತಿನ್, ನಡ್ಡಾ ಅವರನ್ನು ಭೇಟಿಯಾಗಿ ಹೋದರೂ ಅಧ್ಯಕ್ಷ ಹುದ್ದೆ ಬಗ್ಗೆ ಎಲ್ಲೂ ಪ್ರಸ್ತಾಪ ಆಗಿರಲಿಲ್ಲ. ನಿತಿನ್ ನವೀನ್ ಪಟನಾದ ಗೆಳೆಯರ ಬಳಿ ಹೇಳಿಕೊಂಡಿರುವ ಪ್ರಕಾರ, ‘ಭಾಳ ಅಂದರೆ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಮಾಡಬಹುದು’ ಎಂದು ಅಂದಾಜು ಇತ್ತು ಅಂತೆ. ಆದರೆ ನಿತಿನ್‌ ಈಗ ಏಕಾಏಕಿ ಮೋದಿ ಮತ್ತು ಅಮಿತ್ ಶಾ ಅವರ ನಂತರದ ಸ್ಥಾನದಲ್ಲಿ ಬಂದು ಕುಳಿತಿದ್ದಾರೆ. ಇತಿಹಾಸ ನಿರ್ಮಿಸುತ್ತಾರೋ ಅಥವಾ ಬರೀ ಇತಿಹಾಸದ ಪುಟದಲ್ಲಿ ದಾಖಲು ಆಗುತ್ತಾರೋ ಎಂದು ಈಗಲೇ ಶರಾ ಬರೆಯುವುದು ಕಷ್ಟ.

ಸಂಘಕ್ಕೆ ಮೋದಿ ಹೇಳಿದ್ದೇನು?

ನಿತಿನ್ ಆಯ್ಕೆ ಘೋಷಣೆ ಆದಾಗ ಎಲ್ಲರಿಗೂ ಕುತೂಹಲ ಇದ್ದಿದ್ದು, ‘ಈ ಆಯ್ಕೆ ಸಂಘ ಪರಿವಾರದ್ದೋ ಅಥವಾ ಮೋದಿ ಮತ್ತು ಅಮಿತ್ ಶಾ ಜೋಡಿಯದ್ದೋ’ ಅಂತಷ್ಟೇ. ಸ್ವಲ್ಪ ಆಳವಾಗಿ ಉತ್ಖನನ ಮಾಡಿ ನೋಡಿದಾಗ ಗೊತ್ತಾಗಿದ್ದು ನಿತಿನ್ ನವೀನ್ ಆಯ್ಕೆ ಶತ ಪ್ರತಿಶತ ಮೋದಿ ಸಾಹೇಬರದ್ದು ಅಂತ. ಆರ್‌ಎಸ್‌ಎಸ್‌ ಪ್ರಮುಖರಿಗೆ ಒಂದೇ ಹೆಸರು ಕೇಳಿ ಅಭಿಪ್ರಾಯ ಕೇಳಲಾಯಿತೇ ಹೊರತು ಯಾವುದೇ ಕಾರಣಕ್ಕೂ ವೀಟೊ ಅಧಿಕಾರವನ್ನು ಕೊಟ್ಟಿರಲಿಲ್ಲ. ಮೂಲಗಳ ಪ್ರಕಾರ, ನಡ್ಡಾ ಅವರು, \Bಆರ್‌ಎಸ್‌ಎಸ್‌ನಲ್ಲಿ ಬಿಜೆಪಿಯನ್ನು ಗಮನಿಸುವ\B ಅರುಣ ಕುಮಾರ ಜೊತೆ ನಿತಿನ್‌ರ ಬಗ್ಗೆ ಚರ್ಚೆ ನಡೆಸಿದ್ದರು. ಅದಕ್ಕೆ ಸಂಘದವರು ಬೇಡ ಅನ್ನಲಿಲ್ಲ. ಬೇಡ ಅನ್ನಲು ಕಾರಣಗಳೂ ಇರಲಿಲ್ಲ. ಒಂದೊಮ್ಮೆ ಬೇಡ ಅಂದಿದ್ದರೆ ಮೋದಿ ಸಾಹೇಬರು ಒಪ್ಪುತ್ತಿದ್ದರಾ? ಅದು ಯಾರಿಗೂ ಗೊತ್ತಿಲ್ಲ.

ಕಳೆದ ಒಂದು ವರ್ಷದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಆಯ್ಕೆ ವಿಳಂಬವಾಗಲು ಮುಖ್ಯ ಕಾರಣ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಡುವೆ ಮೂಡದ ಒಮ್ಮತ ಎಂದು ಹೇಳಲಾಗುತ್ತಿತ್ತು. ಆದರೆ ಏಕಾಏಕಿ ದಿಲ್ಲಿಯಲ್ಲಿ ಯಾವತ್ತೂ ಚರ್ಚೆ ಆಗದ ನಿತಿನ್ ಅವರ ಹೆಸರು ತರಾತುರಿಯಲ್ಲಿ ಘೋಷಣೆ ಮಾಡಿದ್ದು, ಬಿಜೆಪಿ ಬಗ್ಗೆ ಸುದ್ದಿ ಕವರ್‌ ಮಾಡುವ ಪತ್ರಕರ್ತರಷ್ಟೇ ಅಲ್ಲ, ಬಿಜೆಪಿ ಹಿರಿಯ ನಾಯಕರಲ್ಲೂ ಒಂದು ಮಟ್ಟದ ಅಚ್ಚರಿಗೆ ಕಾರಣವಾಗಿದೆ. 2024ರಲ್ಲಿ ಬಿಜೆಪಿ 300ರಿಂದ 240ಕ್ಕೆ ಇಳಿದಾಗ ಸಹಜವಾಗಿ ಆರ್‌ಎಸ್‌ಎಸ್‌ ನಾಯಕರು ಸ್ವಲ್ಪ ಅಗ್ರೆಸಿವ್ ಆಗಿದ್ದರು. ಸರ್ಕಾರವನ್ನು ಮೋದಿ ಮತ್ತು ಶಾ ನಡೆಸಲಿ, ಪಾರ್ಟಿ ಮಾತ್ರ ಸಂಘ ಹೇಳಿದ ಹೆಸರಿನ ಕೈಯಲ್ಲಿ ನಡೀಬೇಕು ಎಂದು ಖಾಸಗಿಯಾಗಿ ಮಾತಾಡಲು ಶುರು ಮಾಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಸಂಘ ಪರಿವಾರದ ನಿರಾಸಕ್ತತೆಗೆ, ಬಿಜೆಪಿ ಪೂರ್ತಿ ಮೋದಿ- ಶಾ ಮಯ ಆಗಿದ್ದೇ ಮುಖ್ಯ ಕಾರಣ ಎಂಬ ಚರ್ಚೆ ಕೂಡ ಶುರು ಆಗಿತ್ತು. ಆದರೆ ಹರ್ಯಾಣ, ಮಹಾರಾಷ್ಟ್ರ, ದಿಲ್ಲಿ ಮತ್ತು ಬಿಹಾರದ ಭರ್ಜರಿ ಗೆಲುವು ಮರಳಿ ನಿರ್ಧಾರ ತೆಗೆದು ಕೊಳ್ಳುವ ಸೂತ್ರಗಳನ್ನು ಮೋದಿ ಮತ್ತು ಅಮಿತ್ ಶಾ ಕೈಯಲ್ಲಿ ತಂದು ಕೊಟ್ಟಿದ್ದವು. ಹೀಗಾಗಿ ಬಂಗಾಳ ಮತ್ತು ಅಸ್ಸಾಂ ಚುನಾವಣೆಗೂ ಮುನ್ನವೇ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ ಅನ್ನಿಸುತ್ತಿದೆ. ಈ ಒಂದು ಆಯ್ಕೆಯ ಮೂಲಕ ಮೋದಿ ಮತ್ತು ಅಮಿತ್ ಶಾ ಸಂಘ ಪರಿವಾರಕ್ಕೆ, ‘ನಿಮ್ಮದು ಏನೇ ಇದ್ದರೂ ಸಲಹೆಗಾರರ ಪಾತ್ರ ಅಷ್ಟೇ. ಬಿಜೆಪಿ ಪಾರ್ಟಿ ಇರಲಿ, ಸರ್ಕಾರ ಇರಲಿ, ನಿರ್ಧಾರ ತೆಗೆದು ಕೊಳ್ಳುವವರು ನಾವೇ’ ಎಂದು ಸ್ಪಷ್ಟ ಶಬ್ದಗಳಲ್ಲಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

PN
About the Author

Prashant Natu

ಮೂಲತಃ ಉತ್ತರ ಕರ್ನಾಟಕದ ಹುಬ್ಬಳ್ಳಿ. ಆಟೋ ಮೊಬೈಲ್ ಎಂಜಿನಿಯರಿಂಗ್ ಶಿಕ್ಷಣದ ನಂತರ ಬದಲಾಯಿತು ದಿಕ್ಕು. ರಾಜಕೀಯ ವರದಿಗಾರಿಕೆ ಮಾಡಲೆಂದೇ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ವಿದ್ಯುನ್ಮಾನ ಮಾಧ್ಯಮ ಸ್ನಾತಕೋತ್ತರ ಅಧ್ಯಯನ. ದಿಲ್ಲಿಯಲ್ಲಿ ಸುವರ್ಣ ನ್ಯೂಸ್ ವರದಿಗಾರನಾಗಿ ಆಯ್ಕೆ. 18 ವರ್ಷಗಳಿಂದಲೂ ಒಂದೇ ಸಂಸ್ಥೆ ಯಲ್ಲಿ ಕೆಲಸ ಮಾಡುತ್ತಿರುವುದು ವಿಶೇಷ. ರಾಜಕೀಯ ವರದಿಗಾರಿಕೆ ಮತ್ತು ನಿಖರ ವಿಶ್ಲೇಷಣೆಗಳಿಗೆ ಕನ್ನಡ ಪತ್ರಿಕೋದ್ಯಮದಲ್ಲಿ ಮಾತ್ರವಲ್ಲ, ರಾಷ್ಟ್ರೀಯ ಮಾಧ್ಯಮದಲ್ಲೂ ಹೆಸರುವಾಸಿ. 2015ರಿಂದ ಕನ್ನಡ ಪ್ರಭ ಪತ್ರಿಕೆಯಲ್ಲಿ 'ಇಂಡಿಯಾ ಗೇಟ್' ಎಂಬ ದಿಲ್ಲಿ ರಾಜಕೀಯದ ಒಳ ಸುಳಿವು ಅಂಕಣ ಪ್ರಕಟವಾಗುತ್ತಿದೆ. ಸುವರ್ಣ ನ್ಯೂಸ್‌ನ 'ಮಾರ್ನಿಂಗ್ ನ್ಯೂಸ್ ಅವರ್' ಸಂಜೆ 'ಪಾರ್ಟಿ ರೌಂಡ್ಸ್' 'ಲೆಫ್ಟ್ ರೈಟ್ ಸೆಂಟರ್' ಕಾರ್ಯಕ್ರಮಗಳು ಹೆಚ್ಚು ಪ್ರಸಿದ್ಧ.Read More...
Read more Articles on
click me!

Recommended Stories

ದೇಶದ್ರೋಹಿಗಳಿಂದ ನುಸುಳುಕೋರರಿಗೆ ರಕ್ಷಣೆ : ಮೋದಿ ಕಿಡಿ
ಜಿ ರಾಮ್‌ ಜಿ ರದ್ದತಿಗಾಗಿ ಹೋರಾಟ : ಸೋನಿಯಾ