
ಗುವಾಹಟಿ : ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ವಿರೋಧಿಸುತ್ತಿರುವ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ‘ನುಸುಳುಕೋರರನ್ನು ಮತದಾರರ ಪಟ್ಟಿಯಿಂದ ದೂರವಿಡಲು ಚುನಾವಣಾ ಆಯೋಗವು ವಿಶೇಷ ಮತಪಟ್ಟಿ ಪರಿಷ್ಕರಣೆ ನಡೆಸುತ್ತಿದ್ದರೆ, ದೇಶದ್ರೋಹಿಗಳು ಅದನ್ನೂ ವಿರೋಧಿಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಗುವಾಹಟಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಉದ್ಘಾಟಿಸಿದ ನಂತರ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ‘ಒಳನುಸುಳುವಿಕೆಯನ್ನು ತಡೆಯಲು ಕೇಂದ್ರವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನುಸುಳುಕೋರರನ್ನು ಪ್ರಜಾಪ್ರಭುತ್ವ ಪ್ರಕ್ರಿಯೆಯಿಂದ ದೂರವಿಡುವ ಗುರಿಯನ್ನು ಹೊಂದಿದೆ. ಆದರೆ, ‘ದೇಶದ್ರೋಹಿಗಳು’ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಟೀಕಿಸಿದರು.
‘ಈಶಾನ್ಯ ರಾಜ್ಯಗಳ ಅಭಿವೃದ್ಧಿಯು ಕಾಂಗ್ರೆಸ್‌ನ ಸಿದ್ಧಾಂತದಲ್ಲಿಯೇ ಇರಲಿಲ್ಲ. ಜೊತೆಗೆ ಅಸ್ಸಾಂನ ಗುರುತಿಗೆ ಮತ್ತು ರಕ್ಷಣೆಗೆ ಧಕ್ಕೆತರುವಂತಹ ನುಸುಳುಕೋರರು ನಮ್ಮ ಭೂಮಿ, ನೆಲವನ್ನು ಕಬಳಿಸಿಕೊಂಡಾಗ, ಕಾಂಗ್ರೆಸ್ ಪಕ್ಷವು ಅವರಿಗೆ ರಕ್ಷಣೆ ಒದಗಿಸಿತ್ತು. ಇದರಿಂದ ದೇಶದ ಭದ್ರತೆಗೇ ಅಪಾಯವಾಗಿತ್ತು. ಈ ತಪ್ಪುಗಳನ್ನು ನಾವು ಸರಿಪಡಿಸುತ್ತಿದ್ದೇವೆ. ಒಟ್ಟಾರೆಯಾಗಿ ಕಾಂಗ್ರೆಸ್ ಪಕ್ಷವು ಈಶಾನ್ಯ ರಾಜ್ಯಗಳಿಗೆ ಮಾಡಿದ ಅನ್ಯಾಯವನ್ನು ಬಿಜೆಪಿ ಸರ್ಕಾರವು ಸರಿಪಡಿಸುತ್ತಿದೆ’ ಎಂದು ಮೋದಿ ಹೇಳಿದರು.
‘ಇದೀಗ ಕೇಂದ್ರ ಹಾಗೂ ರಾಜ್ಯದ ಡಬಲ್ ಎಂಜಿನ್ ಸರ್ಕಾರದಡಿ ಅಸ್ಸಾಂನ ಅಭಿವೃದ್ಧಿಯು ಬ್ರಹ್ಮಪುತ್ರ ನದಿಯಂತೆ ಹರಿಯುತ್ತಿದೆ’ ಎಂದು ಗುಣಗಾನ ಮಾಡಿದರು.
ಮತಪಟ್ಟಿ ಪರಿಷ್ಕರಣೆ ಅರ್ಹ ಮತದಾರರನ್ನು ತೆಗೆದುಹಾಕುವ ಬಿಜೆಪಿ ಸಂಚೆಂದು ಆರೋಪಿಸಿದ್ದ ಕಾಂಗ್ರೆಸ್
ಇದಕ್ಕೆ ಅಸ್ಸಾಂನಲ್ಲಿ ನಡೆದ ರ್‍ಯಾಲಿ ವೇಳೆ ಪ್ರಧಾನಿ ಮೋದಿ ಆಕ್ರೋಶ. ಮತಪಟ್ಟಿ ಪರಿಷ್ಕರಣೆ ಬಗ್ಗೆ ಸಮರ್ಥನೆ
ಈ ಹಿಂದೆ ಅಸ್ಸಾಂನಲ್ಲಿ ಭೂಮಿ ಅತಿಕ್ರಮಿಸಿಕೊಂಡ ಅಕ್ರಮ ವಲಸಿಗರಿಗೆ ಕಾಂಗ್ರೆಸ್ ಸರ್ಕಾರದಿಂದಲೇ ರಕ್ಷಣೆ
ಇಂಥ ಅಕ್ರಮ ವಲಸಿಗರನ್ನು ಹೊರಹಾಕಲೆಂದೇ ಚುನಾವಣಾ ಆಯೋಗ ಮತಪಟ್ಟಿ ಪರಿಷ್ಕರಣೆ ನಡೆಸುತ್ತಿದೆ
ಆದರೆ ಇಂಥ ಅಕ್ರಮ ವಲಸಿಗರನ್ನು ಇದೀಗ ದೇಶದ್ರೋಹಿಗಳು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ: ಮೋದಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ