ಅಣು ದಾಳಿ ಭೀತಿಗೆ ಅಮೆರಿಕದ ಮಧ್ಯ ಪ್ರವೇಶ?: ಭಾರತ ದಿಢೀರ್‌ ಕದನ ವಿರಾಮಕ್ಕೆ ಒಪ್ಪಿದ್ದೇಕೆ?

Published : May 12, 2025, 07:48 AM IST
ಅಣು ದಾಳಿ ಭೀತಿಗೆ ಅಮೆರಿಕದ ಮಧ್ಯ ಪ್ರವೇಶ?: ಭಾರತ ದಿಢೀರ್‌ ಕದನ ವಿರಾಮಕ್ಕೆ ಒಪ್ಪಿದ್ದೇಕೆ?

ಸಾರಾಂಶ

ಕರಾಚಿ ಮೇಲಿನ ದಾಳಿಗೂ ಸಜ್ಜಾಗಿದ್ದ, ಈ ಬಾರಿ ವೈರಿರಾಷ್ಟ್ರದ ಗರ್ವಭಂಗ ಮಾಡಲು ಎಲ್ಲರೀತಿಯಲ್ಲೂ ಸಿದ್ಧವಾಗಿದ್ದ ಪಾಕಿಸ್ತಾನದ ಜತೆಗೆ ಭಾರತ ದಿಢೀರ್‌ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದು ಯಾಕೆ? 

ನವದೆಹಲಿ (ಮೇ.12): ಕರಾಚಿ ಮೇಲಿನ ದಾಳಿಗೂ ಸಜ್ಜಾಗಿದ್ದ, ಈ ಬಾರಿ ವೈರಿರಾಷ್ಟ್ರದ ಗರ್ವಭಂಗ ಮಾಡಲು ಎಲ್ಲರೀತಿಯಲ್ಲೂ ಸಿದ್ಧವಾಗಿದ್ದ ಪಾಕಿಸ್ತಾನದ ಜತೆಗೆ ಭಾರತ ದಿಢೀರ್‌ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದು ಯಾಕೆ? ಇನ್ನೊಂದೆಡೆ ಭಾರೀ ರಣೋತ್ಸಾಹ ತೋರಿಸಿದ್ದ ಪಾಕಿಸ್ತಾನ ಭಾರತದ ಮುಂದೆ ಅಂಗಲಾಚಿ ಕದನ ವಿರಾಮ ಪ್ರಸ್ತಾಪ ಮುಂದಿಟ್ಟಿದ್ದೇಕೆ? ಮತ್ತೊಂದೆಡೆ ಕಾಶ್ಮೀರ ನಮಗೆ ಸಂಬಂಧಿಸಿದ ವಿಷಯವೇ ಅಲ್ಲ ಎಂದಿದ್ದ ಅಮೆರಿಕ, ಭಾರತ ಮತ್ತು ಪಾಕ್‌ ನಡುವೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದು ಏಕೆ ಎಂಬುದರ ಬಗ್ಗೆ ಇದುವರೆಗೂ ಮೂರೂ ಬಣಗಳಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ ಎರಡು ಪರಮಾಣು ಸಶಕ್ತ ದೇಶಗಳ ನಡುವಿನ ಯುದ್ಧ ವಿಪರೀತಕ್ಕೆ ಹೋಗಿ, ಅದು ಪರಮಾಣು ದಾಳಿಯ ಹಂತದವರೆಗೂ ತಲುಪಬಹುದು ಎಂಬ ಭೀತಿಯೇ ಅಮೆರಿಕವು ಸಂಧಾನ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಕಾರಣವಾಯ್ತು ಎಂಬ ವಿಶ್ಲೇಷಣೆ ಕೇಳಿಬಂದಿದೆ. ಜೊತೆಗೆ ಇಂಥ ಪರಮಾಣು ಭೀತಿ ಹುಟ್ಟಲು ಕಾರಣವಾದ ಬೆಳವಣಿಗೆ ಏನು ಎಂಬ ಬಗ್ಗೆ 2 ರೀತಿಯ ವಿಶ್ಲೇಷಣೆ ಕೇಳಿಬಂದಿದೆ.

ಅಣ್ವಸ್ತ್ರದೆಡೆಗೆ ಪಾಕ್‌ ಹೆಜ್ಜೆ ಬಗ್ಗೆಅಮೆರಿಕಕ್ಕೆ ಭಾರತದ ಮಾಹಿತಿ: ಭಾರತವು ಶುಕ್ರವಾರ ರಾತ್ರಿ ಪಾಕಿಸ್ತಾನದ 4 ವಾಯು ನೆಲೆಗಳ ಮೇಲೆ ಭಾರೀ ದಾಳಿ ನಡೆಸಿತ್ತು. ಭಾರತದ ಈ ಅನಿರೀಕ್ಷಿತ ದಾಳಿಗೆ ತೀವ್ರ ಹತಾಶಗೊಂಡಿದ್ದ ಪಾಕಿಸ್ತಾನ ಅಣ್ವಸ್ತ್ರಗಳ ಮೊರೆ ಹೋಗಲು ಸಿದ್ಧತೆ ನಡೆಸಿತ್ತು. ಒಂದು ಹಂತದಲ್ಲಿ ಅಣ್ವಸ್ತ್ರಗಳ ಕುರಿತು ನಿರ್ಧಾರ ತೆಗೆದುಕೊಳ್ಳುವ ಕಮಾಂಡ್‌ ಕಂಟ್ರೋಲ್‌ ಸಮಿತಿಯ ಸಭೆ ನಡೆಸಲೂ ಪಾಕಿಸ್ತಾನ ನಿರ್ಧರಿಸಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ ಪಾಕಿಸ್ತಾನದ ಅಣ್ವಸ್ತ್ರ ಸಾಗಣೆ ಚಟುವಟಿಕೆಗಳ ಕುರಿತು ಭಾರತಕ್ಕೆ ಗುಪ್ತಚರ ಮಾಹಿತಿ ಸಿಕ್ಕಿದ್ದು, ತಕ್ಷಣ ಈ ವಿಚಾರವನ್ನು ಭಾರತದ ವಿದೇಶಾಂಗ ಸಚಿವ ಜೈಶಂಕರ್‌ ಮತ್ತು ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು ಅಮೆರಿಕದ ಗಮನಕ್ಕೆ ತಂದರು. ಇದರಿಂದ ಎಚ್ಚೆತ್ತುಕೊಂಡ ಅಮೆರಿಕ ಎರಡೂ ದೇಶಗಳ ಮುಖಂಡರನ್ನು ಸಂಪರ್ಕಿಸಿತು. ಸ್ವತಃ ಪ್ರಧಾನಿ ಮೋದಿಗೆ ಕರೆ ಮಾಡಿದ ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌, ಪರಮಾಣು ಕದನದ ಅಪಾಯದ ಬಗ್ಗೆ ಮನವರಿಕೆ ಮಾಡಿ ಮೋದಿ ಮನವೊಲಿಸಿದರು ಎನ್ನಲಾಗಿದೆ.

ಪಾಕಿಸ್ತಾನಕ್ಕೆ ನುಗ್ಗಿ ಹೊಡೆದಿದ್ದು ಬ್ರಹ್ಮೋಸ್‌: ಈ ಕ್ಷಿಪಣಿಯ ಸಾಮರ್ಥ್ಯವೇನು?

ಪಾಕ್‌ ಅಣ್ವಸ್ತ್ರ ಸಂಗ್ರಹದ ಮೇಲೆ ದಾಳಿಗೆ ಭಾರತ ಸಜ್ಜು ಆತಂಕ: ಭಾರತದ 4 ವಾಯುನೆಲೆ ಗುರಿಯಾಗಿಸಿ ಪಾಕ್‌ ನಡೆಸಿದ ದಾಳಿಗೆ ಪ್ರತಿಯಾಗಿ ಪಾಕ್‌ 8 ವಾಯುನೆಲೆ ಮೇಲೆ ಭಾರತ ಭಾರೀ ದಾಳಿ ನಡೆಸಿತ್ತು. ಅದರಲ್ಲೂ ಪಾಕಿಸ್ತಾನ ಸೇನೆಯ ಕೇಂದ್ರ ಕಚೇರಿ ಇರುವ ರಾವಲ್ಪಿಂಡಿಯ ಮೇಲಿನ ದಾಳಿ ಪಾಕ್‌ನ ಆತಂಕ ಹೆಚ್ಚಿಸಿತ್ತು. ದಾಳಿ ನಡೆದ ಸ್ಥಳ, ಪಾಕಿಸ್ತಾನದ ಸೇನೆ ಮುಖ್ಯಸ್ಥ ಮುನೀರ್‌ ಮನೆಯಿಂದ ಕೇವಲ 10 ಕಿ.ಮೀ ದೂರದಲ್ಲಿ ಮತ್ತು ಪಾಕ್‌ ಅಣ್ವಸ್ತ್ರ ನಿರ್ವಹಣೆಯ ಕಮಾಂಡ್‌ ಕೇಂದ್ರದ ಸಮೀಪದಲ್ಲೇ ಇತ್ತು. ಅಲ್ಲದೆ ಸರ್‌ಗೋಧಾದಲ್ಲಿನ ಪಾಕ್‌ನ ಅಣ್ವಸ್ತ ಸಂಗ್ರಹಾರಕ್ಕೆ ತೆರಳುವ ಸುರಂಗ ಬಾಗಿಲ ಬಳಿಯೇ ದಾಳಿ ನಡೆಸಿತ್ತು. ಒಂದು ವೇಳೆ ಪಾಕ್‌ ಇನ್ನಷ್ಟು ದಾಳಿ ನಡೆಸಿದರೆ ಪಾಕಿಸ್ತಾನದ ಅಣ್ವಸ್ತ್ರಗಳನ್ನು ರಹಸ್ಯವಾಗಿ ಸಂಗ್ರಹಿಸಿರುವ ಕಿರಾನಾ ಬೆಟ್ಟದ ಮೇಲೆ ದಾಳಿಗೆ ಭಾರತ ಸಜ್ಜಾಗಿದೆ ಎಂಬ ಮಾಹಿತಿ ಪಾಕ್‌ ಮತ್ತು ಅಮೆರಿಕದ ಕಿವಿಗೆ ಬಿದ್ದಿತ್ತು.  ಹೀಗಾಗಿ ಬೆಚ್ಚಿದ ಪಾಕಿಸ್ತಾನ, ಕದನ ವಿರಾಮಕ್ಕೆ ಭಾರತದ ಮನವೊಲಿಸುವಂತೆ ಅಮೆರಿಕಕ್ಕೆ ದುಂಬಾಲು ಬಿದ್ದಿತ್ತು. ಈ ರಹಸ್ಯ ಸ್ಥಳದಲ್ಲಿ ಅಣ್ವಸ್ತ್ರ ಸಂಗ್ರಹಕ್ಕೆ ಸ್ವತಃ ಅಮೆರಿಕವೇ ನೆರವು ನೀಡಿದ್ದ ಹಿನ್ನೆಲೆಯಲ್ಲಿ, ಅಪಾಯ ಸುಳಿವರಿತ ಅಮೆರಿಕ ಭಾರತದ ಮೇಲೆ ಒತ್ತಡ ಹೇರಿ ಸಂಧಾನದ ಹೆಜ್ಜೆ ಹಾಕಿಸಿತು ಎನ್ನಲಾಗಿದೆ.

ಎಲ್ಲಿ ಅಡಗಿದ್ದರೂ ಹೊಡೀತೀವಿ:  ಪಹಲ್ಗಾಂ ನರಮೇಧ, ಉಗ್ರ ಪೋಷಕರಿಗೆ ಭಾರತದ ಎಚ್ಚರಿಕೆನವದೆಹಲಿ: ಪಾಕಿಸ್ತಾನವನ್ನು ಪುಡಿಗಟ್ಟಲು ಭಾರತ ಕೈಗೊಂಡಿರುವ ಆಪರೇಷನ್‌ ಸಿಂದೂರ, ಏ.22ರಂದು ಜಮ್ಮುವಿನಲ್ಲಿ ನಡೆದ ಪಹಲ್ಗಾಣ ಹತ್ಯಾಕಾಂಡಕ್ಕೆ ಪ್ರತ್ಯುತ್ತರ ನೀಡುವ ಜತೆಗೆ, ಉಗ್ರರರನ್ನು ಸಲಹುತ್ತಿರುವ ವೈರಿದೇಶಕ್ಕೆ, ‘ಇದಿನ್ನು ಮುಂದುವರೆಯದು’ ಎಂದ ಕಠಿಣ ಸಂದೇಶವನ್ನು ರವಾನಿಸಿದೆ.‘ಪಾಕ್‌ನ ಯಾವ ಜಾಗವೂ ಉಗ್ರರಿಗೆ ಸುರಕ್ಷಿತವಲ್ಲ. ನೀವು ಪಾಕಿಸ್ತಾನದ ಒಳಗೆ ಎಲ್ಲಿ ಅಡಿಗಿ ಕುಳಿತಿದ್ದರೂ ನಾವು ಹುಡುಕಿ ಹೊಡೆಯುತ್ತೇವೆ.  ಈ ಬಾರಿ, ದೊಡ್ಡ ತಲೆಗಳು ನಮ್ಮ ಗುರಿಯಾಗಿದೆ’ ಎಂಬ ಸಂದೇಶವನ್ನು, ಭಾರತದಲ್ಲಿ ಅರಾಜಕತೆ ಸೃಷ್ಟಿಸಿರುವ ಅಥವಾ ಸೃಷ್ಟಿಸಲು ಯತ್ನಿಸುತ್ತಿರುವ ಉಗ್ರರಿಗೆ, ಅವರನ್ನು ಬೆಂಬಲಿಸುವ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಸೇನಾಧಿಕಾರಿಗಳಿಗೆ ಆಪರೇಷನ್‌ ಸಿಂದೂರದ ಮೂಲಕ ತಲುಪಿಸುವುದು ಮತ್ತು ಮನವರಿಕೆ ಮಾಡಿಸುವುದು ಭಾರತದ ಉದ್ದೇಶ.

ಮಾತುಕತೆ ಏನಿದ್ದರೂ ಪಿಒಕೆ ವಾಪಸ್‌ ಕುರಿತು ಮಾತ್ರ: ಅಮೆರಿಕ ಉಪಾಧ್ಯಕ್ಷಗೆ ಮೋದಿ ಖಡಕ್‌ ಸಂದೇಶ

ಅಂತೆಯೇ, ‘ಉಗ್ರರ ವಿರುದ್ಧದ ಕಾರ್ಯಾಚರಣೆ ಈಗಿನ ನ್ಯೂ ನಾರ್ಮಲ್‌ (ಇದು ಹೊಸತಲ್ಲ. ಇನ್ನು ಹೀಗೆಯೇ ಮುಂದುವರೆಯಲಿದೆ)’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ, ‘ಉಗ್ರರು ಸಂಪೂರ್ಣ ನಿರ್ನಾಮವಾಗುವ ತನಕ ನಮ್ಮ ದಾಳಿ ನಿಲ್ಲದು’ ಎಂಬ ಅರ್ಥದಲ್ಲಿದ್ದು, ಪಾಕಿಗಳ ಬೇಟೆ ಮುಂದುವರೆಯುವ ಸ್ಪಷ್ಟ ಸೂಚನೆಯಾಗಿದೆ. ಅಂತೆಯೇ, ‘ಭಾರತೀಯರನ್ನು ರಕ್ಷಿಸುವ ದೇಶದ ಬದ್ಧತೆಯ ವಿಷಯಕ್ಕೆ ಬಂದರೆ, ಎಲ್‌ಒಸಿ, ಅಂತಾರಾಷ್ಟ್ರೀಯ ಗಡಿಯಷ್ಟೇ ಅಲ್ಲ, ಅಣ್ವಸ್ತ್ರ ಬಳಕೆಯ ಬೆದರಿಕೆಯೂ ನಗಣ್ಯ’ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ
ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು