
ಭಾರದದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ದೇಶಾದ್ಯಂತ ಜೆನ್‌ಝಿ ಪ್ರತಿಭಟನೆ ಸಂಘಟಿಸಿ ಯಶಸ್ವಿಯಾಗಿರುವ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆಗೆ ಸಂಕಷ್ಟ ಶುರುವಾಗಿದೆ. ಅಭಿಜಿತ್ ದೀಪ್ಕೆ ತಂದೆಯ ಆಸ್ತಿ ಹಾಗೂ ಆದಾಯ ಮೂಲಗಳ ತನಿಖೆಗೆ ಆರ್‌ಟಿಐ ಕಾರ್ಯಕರ್ತ ಅಮಿತ್ ತಿವಾರಿ ದೂರು ನೀಡಿದ್ದಾರೆ. ಅಭಿಜೀತ್ ದೀಪ್ಕೆ ಅವರ ತಂದೆ ಭಗವಾನ್‌ರಾವ್ ದೀಪ್ಕೆ ಅವರ ಆರ್ಥಿಕ ಮೂಲಗಳ ಕುರಿತು ತನಿಖೆ ನಡೆಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ದೂರು ನೀಡಿದ್ದಾರೆ. ಮಹಾರಾಷ್ಟ್ರಾ ಕೈಗಾರಿಕಾ ಅಭಿವೃದ್ಧಿ ನಿಗದಮ ನಿವೃತ್ತ ಎಂಜಿನೀಯರ್ ಮಗ ಅಭಿಜಿತ್ ದೀಪ್ಕೆಯನ್ನು ಅಮೆರಿಕಗೆ ಕಳುಹಿಸಿ ಕೋಟ್ಯಾಂತರ ರೂಪಾಯಿ ವಿದ್ಯಾಭ್ಯಾಸಕ್ಕೆ ಖರ್ಚು ಮಾಡಲು ಹೇಗೆ ಸಾಧ್ಯವಾಯಿತು ಎಂದು ಆರ್‌ಟಿಐ ಕಾರ್ಯಕರ್ತ ಪ್ರಶ್ನಿಸಿದ್ದಾರೆ.
ಅಮಿತ್ ತಿವಾರಿ ದೂರು ಇಷ್ಟಕ್ಕೆ ಮುಗಿದಿಲ್ಲ, ಚುನಾವಣಾ ಆಯೋಗಕ್ಕೂ ದೂರು ನೀಡಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿ ನೋಂದಾಯಿತ ರಾಜಕೀಯ ಪಕ್ಷವಲ್ಲ. ಆದರೆ ರಾಜಕೀಯ ಪಕ್ಷದ ಹೆಸರಿನಲ್ಲೇ ಕಾರ್ಯಾಚರಣೆ ನಡೆಸುತ್ತಿದೆ. ಇಷ್ಟೇ ಅಲ್ಲ ಫಂಡಿಂಗ್ ಸ್ವೀಕರಿಸುತ್ತಿದೆ. ಇದು ಕಾನೂನುಬಾಹಿರವಾಗಿದೆ. ಪ್ರಜಾಪ್ರತಿನಿಧಿ ಕಾಯ್ದೆ 1951 ರ ವಿಭಾಗ 29A (Section 29A of RPA, 1951) ಅಡಿಯಲ್ಲಿ ಸಿಜೆಪಿ ನೋಂದಣಿಯಾಗಿದೆಯೇ ಎಂಬುದನ್ನು ಚುನಾವಣಾ ಆಯೋಗ ತಕ್ಷಣವೇ ಪರಿಶೀಲಿಸಬೇಕು ಎಂದು ಅಮಿತ್ ತಿವಾರಿ ಆಗ್ರಹಿಸಿದ್ದಾರೆ. ನೋಂದಣಿ ಆಗದಿದ್ದರೆ ಕೋಟಿ ಕೋಟಿ ರೂಪಾಯಿ ಹಣ ಸಂಗ್ರಹದ ವಿರುದ್ದ ಕಾನೂನು ಕ್ರಮ ಜರುಗಿಸಲು ದೂರಿನಲ್ಲಿ ಆಗ್ರಹಿಸಿದ್ದಾರೆ.
ಈ ಪ್ರತಿಭಟನೆಗೆ ವಿದೇಶಿ ಫಂಡ್ಗಳು ಬರುತ್ತಿವೆ ಎನ್ನುವ ಗಂಭೀರ ಆರೋಪ ಇದ್ದ ಹಿನ್ನೆಲೆಯಲ್ಲಿ, ಅಭಿಜೀತ್ ದೀಪ್ಕೆ, ಹೌದು ನನಗೆ ವಿದೇಶಿ ಫಂಡ್ ಬರ್ತಿರೋದು ನಿಜ. ಹಾಗಿದ್ರೆ ಪ್ರೂವ್ ಮಾಡಿ. ಒಂದು ವೇಳೆ ಫಂಡಿಂಗ್ ತೆಗೆದುಕೊಳ್ತಾ ಇದ್ದರೂ ಅದು ಕೇಂದ್ರ ಸರ್ಕಾರಕ್ಕೆ ಗೊತ್ತಾಗಲಿಲ್ಲ ಎಂದರೆ, ಅದು ಅವರ ಲೋಪ ಆದಂತೆ ಎಂದು ಹೇಳುವ ಮೂಲಕ, ತಾವು ಯಾವ ವಿದೇಶಿ ಫಂಡಿಂಗ್ ಕೂಡ ತೆಗೆದುಕೊಳ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ಅದರ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ ಅಮಿತ್ ತಿವಾರಿ ದೂರು ಹೊಸ ಸಂಚಲನ ಸೃಷ್ಟಿಸಿದೆ.
ಇದೀಗ ಇವರ ಇಡೀ ಕುಟುಂಬದ ತನಿಖೆ ಆಗಬೇಕು, ನಿವೃತ್ತ ಸರ್ಕಾರಿ ನೌಕರ ಒಬ್ಬರು ಅಭಿಜೀತ್ ದೀಪ್ಕೆಯ ವಿದೇಶಿ ಶಿಕ್ಷಣಕ್ಕೆ ಆ ಪರಿಯಲ್ಲಿ ಹಣ ಖರ್ಚು ಮಾಡಿದ್ದು ಹೇಗೆ ಎನ್ನುವ ಸಂಪೂರ್ಣ ಮಾಹಿತಿ ಬೇಕು ಎಂದು ಸೂರತ್ ಮೂಲದ ಆರ್‌ಟಿಐ ಕಾರ್ಯಕರ್ತ ಅಮಿತ್ ತಿವಾರಿ , ಅರ್ಜಿ ಸಲ್ಲಿಸಿದ್ದಾರೆ. ಮಹಾರಾಷ್ಟ್ರದ ನಿವೃತ್ತ ಸರ್ಕಾರಿ ಉದ್ಯೋಗಿಯಾಗಿರುವ ಅಭಿಜೀತ್ ಅವರ ತಂದೆ ಭಗವಾನ್‌ರಾವ್ ಹಣಕಾಸಿನ ಬಗ್ಗೆ ತನಿಖೆ ನಡೆಸಬೇಕೆಂದು ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇವರ ಆರ್ಥಿಕ ಹಿನ್ನೆಲೆಯ ಬಗ್ಗೆ ತನಿಖೆಯ ಅಗತ್ಯವಿದೆ ಎಂದಿದ್ದಾರೆ.
ಇಷ್ಟೇ ಅಲ್ಲದೇ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಕುರಿತು ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಪೊಲೀಸ್ ಪ್ರಕರಣಗಳನ್ನು ಎದುರಿಸುತ್ತಿರುವ ಸಿಜೆಪಿ ಪ್ರತಿಭಟನಾಕಾರರಿಗೆ ಘೋಷಿಸಲಾದ ಕಾನೂನು ರಕ್ಷಣಾ ನಿಧಿಯ ಬಗ್ಗೆಯೂ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಈ ಮಾಹಿತಿಗಳು ಹೊರಬಂದರೆ, ಇನ್ನಷ್ಟು ಹಿನ್ನೆಲೆ ಬೆಳಕಿಗೆ ಬರುವ ಸಾಧ್ಯತೆ ಇದೆ. ನೀಟ್ ಪರೀಕ್ಷೆಯಿಂದಾಗಿ ಅನ್ಯಾಯಕ್ಕೆ ಒಳಗಾಗಿರುವ ವಿದ್ಯಾರ್ಥಿಗಳ ಹೋರಾಟ ಹಾಗೂ ಪ್ರತಿಭಟನೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮೇಲಿನ ಆರೋಪಗಳು ತೀವ್ರಗೊಳ್ಳುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ