Qutub Minar ಕುತುಬ್‌ ಮಿನಾರ್‌ ಹೆಸರನ್ನು ವಿಷ್ಣು ಸ್ತಂಭವೆಂದು ಬದಲಾಯಿಸಲು ಪ್ರತಿಭಟನೆ

Published : May 11, 2022, 05:05 AM IST
Qutub Minar ಕುತುಬ್‌ ಮಿನಾರ್‌ ಹೆಸರನ್ನು ವಿಷ್ಣು ಸ್ತಂಭವೆಂದು ಬದಲಾಯಿಸಲು ಪ್ರತಿಭಟನೆ

ಸಾರಾಂಶ

-  ಕುತುಬ್‌ ಮಿನಾರ್‌ ಮುಂದೆ ಚಾಲೀಸಾ ಪ್ರತಿಭಟನೆ - ಹಿಂದೂ ಸಂಘಟನೆಗಳಿಂದ ಪ್ರತಿಭಟನೆ: 30 ಮಂದಿ ಸೆರೆ - ಮಿನಾರ್‌ ಸಂಕೀರ್ಣದಲ್ಲಿ ಪ್ರಾರ್ಥಿಸಲು ಅವಕಾಶ ನೀಡಬೇಕು

ನವದೆಹಲಿ(ಮೇ.11): ಹಿಂದೂ ಸಂಘಟನೆಗಳ ಸದಸ್ಯರು ಕುತುಬ್‌ ಮಿನಾರ್‌ ಸಂಕೀರ್ಣದ ಮುಂದೆ ಮಂಗಳವಾರ ಹನುಮಾನ್‌ ಚಾಲೀಸಾ ಪಠಣ ಮಾಡಿದ್ದು, ಐತಿಹಾಸಿಕ ಸ್ಮಾರಕದ ಹೆಸರನ್ನು ವಿಷ್ಣು ಸ್ತಂಭ ಎಂದು ಬದಲಾಯಿಸಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಾರು 30 ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದು, ನಂತರ ಬಿಡುಗಡೆ ಮಾಡಿದ್ದಾರೆ.

ಯುನೈಟೆಡ್‌ ಹಿಂದೂ ಫ್ರಂಟ್‌ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಭಗವಾನ್‌ ಗೋಯಲ್‌ ಅವರು ‘ಕುತುಬ್‌ ಮಿನಾರ್‌ ಅನ್ನು ರಾಜಾ ವಿಕ್ರಮಾದಿತ್ಯ ನಿರ್ಮಾಣ ಮಾಡಿದ್ದರು. ಇದನ್ನು ವಿಷ್ಣು ಸ್ತಂಭವೆಂದು ಕರೆಯಲಾಗುತ್ತಿತ್ತು. ನಂತರದ ದಿನಗಳಲ್ಲಿ ಕುತ್ಬುದ್ದೀನ್‌ ಐಬಕ್‌ ಇದರ ಸ್ಥಾಪನೆ ತಾನು ಮಾಡಿದ್ದಾಗಿ ಹೇಳಿಕೊಂಡ’ ಎಂದು ಆರೋಪಿಸಿದರು.

ಕುತುಬ್ ಮಿನಾರ್ ಸಂಕೀರ್ಣದಲ್ಲಿರುವ ಗಣೇಶ ಮೂರ್ತಿ ಬಗ್ಗೆ ಯಥಾಸ್ಥಿತಿ ಕಾಯ್ದುಕೊಳ್ಳಿ: ಕೋರ್ಟ್‌

ಈ ಸಂಕೀರ್ಣದಲ್ಲಿ 27ಕ್ಕೂ ಹೆಚ್ಚಿನ ದೇವಾಲಯಗಳಿದ್ದವು, ಅವುಗಳನ್ನು ಐಬಕ್‌ ಧ್ವಂಸಗೊಳಿಸಿದ್ದ. ಇದಕ್ಕೆ ಸಾಕ್ಷಿಯಾಗಿ ಇಂದಿಗೂ ಕುತುಬ್‌ ಮಿನಾರ್‌ ಸಂಕೀರ್ಣದಲ್ಲಿ ಹಿಂದೂ ದೇವತೆಗಳ ವಿಗ್ರಹಗಳನ್ನು ಕಾಣಬಹುದಾಗಿದೆ’ ಎಂದರು. ಅಲ್ಲದೇ ಮಿನಾರ್‌ ಹೆಸರನ್ನು ವಿಷ್ಣು ಸ್ತಂಭವೆಂದು ಬದಲಾಯಿಸಬೇಕು. ಇದರೊಂದಿಗೆ ಹಿಂದೂಗಳಿಗೆ ಕುತುಬ್‌ ಮಿನಾರ್‌ ಸಂಕೀರ್ಣದಲ್ಲಿ ಪ್ರಾರ್ಥಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಜೈ ಶ್ರೀರಾಮ್‌ ಘೋಷಣೆ ಕೂಗುತ್ತ ಪ್ರತಿಭಟನಾಕಾರರು ಹನುಮಾನ್‌ ಚಾಲೀಸಾ ಪಠಣವನ್ನೂ ಮಾಡಿದ್ದಾರೆ. ರಸ್ತೆಯ ಮಧ್ಯದಲ್ಲಿ ಪ್ರತಿಭಟನೆ ನಡೆಸಿ ಸಂಚಾರಕ್ಕೆ ಅಡ್ಡಿಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಸುಮಾರು 30 ಪ್ರತಿಭಟನಾಕಾರರನ್ನು ಬಂಧಿಸಿದ್ದು, ಕೆಲ ಸಮಯದ ನಂತರ ಬಿಡುಗಡೆ ಮಾಡಿದ್ದಾರೆ.

ಕುತುಬ್‌ ಕಾಂಪ್ಲೆಕ್ಸ್‌ನ ಗಣೇಶ ವಿಗ್ರಹ ಸ್ಥಳಾಂತರ ವಿವಾದ
ಕುತುಬ್‌ ಮಿನಾರ್‌ ಕಾಂಪ್ಲೆಕ್ಸ್‌ನಲ್ಲಿರುವ 2 ಗಣೇಶನ ವಿಗ್ರಹಗಳನ್ನು ರಾಷ್ಟ್ರೀಯ ವಸ್ತು ಸಂಗ್ರಹಾಲಯಕ್ಕೆ ಸ್ಥಳಾಂತರಗೊಳಿಸಬೇಕು ಎಂದು ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರವು (ಎನ್‌ಎಂಎ), ಭಾರತೀಯ ಪುರಾತತ್ವ ಇಲಾಖೆಗೆ ಪತ್ರ ಬರೆದಿದೆ. ಆದರೆ ವಿಶ್ವ ಪರಂಪರೆ ತಾಣವೆನಿಸಿದ ಸ್ಥಳದಲ್ಲಿ ಬದಲಾವಣೆ ಮಾಡುವ ಎನ್‌ಎಂಎ ಪ್ರಯತ್ನಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಕುತುಬ್‌ ಮಿನಾರ್‌ ಸಂಕೀರ್ಣದಲ್ಲಿ 12ನೇ ಶತಮಾನದ ಉಲ್ಟಾಗಣೇಶ ಹಾಗೂ ಪಂಜರದಲ್ಲಿರುವ ಗಣೇಶನ ಎರಡು ವಿಗ್ರಹಗಳಿವೆ. 1993ರಲ್ಲಿ ಇಡೀ ಸಮುಚ್ಛಯವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ದಾಖಲಿಸಿದೆ. ಮಿನಾರ್‌ನಲ್ಲಿರುವ ಕುವತ್‌-ಉಲ್‌-ಇಸ್ಲಾಂ ಮಸೀದಿಯ ಉತ್ತರಾಭಿಮುಖವಾದ ಗೋಡೆಯಲ್ಲಿ ಉಲ್ಟಾಗಣೇಶನ ವಿಗ್ರಹವಿದ್ದರೆ, ಕಬ್ಬಿಣದ ಪಂಜರದಲ್ಲಿರುವ ವಿಗ್ರಹವನ್ನು ಮಸೀದಿಯಲ್ಲಿ ಜನರು ಓಡಾಡುವಷ್ಟುತಳಭಾಗದಲ್ಲಿರಿಸಲಾಗಿದೆ.

ಖತುಬ್ ಮಿನಾರ್ ಪ್ರಾಂಗಣದಲ್ಲಿದ್ದ ಹಿಂದೂ ದೇಗುಲ ಪುನರ್ ನಿರ್ಮಾಣಕ್ಕೆ ವಿಹೆಚ್‌ಪಿ ಆಗ್ರಹ!

ಈ ಹಿನ್ನೆಲೆಯಲ್ಲಿ ಎನ್‌ಎಂಎದ ಅಧ್ಯಕ್ಷ ತರುಣ್‌ ವಿಜಯ್‌ ‘ಕುತುಬ್‌ ಮಿನಾರ್‌ ಸಂಕೀರ್ಣದಲ್ಲಿ ಗಣೇಶನ ವಿಗ್ರಹವನ್ನು ಅತ್ಯಂತ ಅಗೌರವಪೂರ್ಣ ಸ್ಥಳದಲ್ಲಿ ಇರಿಸಲಾಗಿದೆ. ಹಿಂದೂಗಳನ್ನು ಅವಮಾನಿಸಲು ಗಣೇಶನ ವಿಗ್ರಹವನ್ನು ತಲೆಕೆಳಗಾದ ಸ್ಥಿತಿಯಲ್ಲಿ ಪ್ರವಾಸಿಗರ ಪಾದಗಳು ತಗುಲುವಷ್ಟುತಳ ಮಟ್ಟದಲ್ಲಿಡಲಾಗಿದೆ. ಹೀಗಾಗಿ ಗಣೇಶನ ವಿಗ್ರಹವನ್ನು ಈ ಸ್ಥಾನದಿಂದ ತೆಗೆದು ಗೌರವಪೂರ್ಣ ಸ್ಥಾನದಲ್ಲಿ ಸ್ಥಾಪಿಸಬೇಕು. ಈ ಕುರಿತು ತಾವು ಭಾರತದ ಪುರಾತತ್ವ ಸಮೀಕ್ಷೆಯವರಿಗೆ ವರ್ಷದ ಹಿಂದೆಯೇ ಪತ್ರ ಬರೆದಿದ್ದರೂ, ಇಲಾಖೆ ಅದಕ್ಕೆ ಸ್ಪಂದಿಸಿಲ್ಲ’ ಎಂದು ಆರೋಪಿಸಿದ್ದರು.

ಇದಲ್ಲದೇ ತರುಣ್‌ ಟ್ವೀಟ್‌ನಲ್ಲಿ ‘ಕುತುಬ್‌ ಮಿನಾರ್‌ ಸಂಕೀರ್ಣದಲ್ಲಿದ್ದವು ಎಂದು ನಂಬಲಾಗುವ 27 ದೇವಾಲಯಗಳು ಏನಾದವು? ತೀರ್ಥಂಕರ, ಯಮುನಾ, ದಶಾವತಾರ, ಕೃಷ್ಣನ ಜನನ, ನವಗ್ರಹ ಮೂರ್ತಿಗಳನ್ನು ಎಂದಿಗೂ ಪ್ರವಾಸಿಗರಿಗೆ ವೀಕ್ಷಿಸಲು ಅವಕಾಶಕೊಟ್ಟಿಲ್ಲ. ಇಲ್ಲಿ ಸಾಂಸ್ಕೃತಿಕ ನರಮೇಧ ನಡೆದಿದ್ದು, ವಸಾಹತುಶಾಹಿ ವಿರುದ್ಧ ಹೋರಾಡಲು ಇಂತಹ ತಪ್ಪುಗಳನ್ನು ಸರಿಪಡಿಸಬೇಕು’ ಎಂದಿದ್ದರು. ಸ್ಮಾರಕದ ಸಂರಕ್ಷಣೆ ಜವಾಬ್ದಾರಿ ವಹಿಸಿದ ಪುರಾತತ್ವ ಇಲಾಖೆ ಈ ಕುರಿತು ಇನ್ನು ಯಾವುದೇ ಹೇಳಿಕೆ ನೀಡಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌