
ನವದೆಹಲಿ (ಮೇ.9): ವಕ್ಫ್ ತಿದ್ದುಪಡಿ ವಿಧೇಯಕ ಹಾಗೂ ಮಸೂದೆಗೆ ಸಹಿ ಹಾಕುವಂತೆ ರಾಷ್ಟ್ರಪತಿಗೆ ಗಡುವು ನೀಡಿ ಆದೇಶ ಹೊರಡಿಸಿದ ವಿಷಯ ಮುಂದಿಟ್ಟುಕೊಂಡು ತನ್ನ ಮತ್ತು ಮುಖ್ಯ ನ್ಯಾಯಮೂರ್ತಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ದುಬೆ ಹೇಳಿಕೆ ತೀವ್ರ ಬೇಜವಾಬ್ದಾರಿಯಿಂದ ಕೂಡಿದೆ ಮತ್ತು ಗಮನ ಸೆಳೆಯುವ ಪ್ರಯತ್ನದಂತಿದೆ. ಅವರಿಗೆ ಸಾಂವಿಧಾನಿಕ ನ್ಯಾಯಾಲಯಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬ ಕನಿಷ್ಠ ಜ್ಞಾನವೂ ಇದ್ದಂತಿಲ್ಲ ಎಂದು ಕಿಡಿಕಾರಿದೆ.
ದುಬೆ ವಿರುದ್ಧ ನ್ಯಾಯಾಂಗ ನಿಂದನೆ ದಾವೆ ಹೂಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಪೀಠ, ಈ ಅರ್ಜಿಯನ್ನು ತಿರಸ್ಕರಿಸಿತು. ಆದರೆ ತಿರಸ್ಕರಿಸುವ ಆದೇಶ ಪ್ರಕಟಿಸುವಾಗ ಮೊನಚಾದ ನುಡಿಗಳನ್ನು ಆಡಿದ ಸಿಜೆಐ ಸಂಜೀವ್ ಖನ್ನಾ ಮತ್ತು ನ್ಯಾ. ಸಂಜಯ್ ಕುಮಾರ್ ಅವರ ಪೀಠ, ‘ದುಬೆ ಅವರ ಹೇಳಿಕೆಗಳು ನ್ಯಾಯಾಲಯ ಮತ್ತು ನ್ಯಾಯಾಧೀಶರ ಘನತೆಗೆ ಕುಂದುಂಟು ಮಾಡಿ ಜನರ ಗಮನಸೆಳೆಯುವ ಪ್ರಯತ್ನದ ಭಾಗ. ಈ ರೀತಿಯ ಅಸಂಬದ್ಧ ಹೇಳಿಕೆಗಳ ಮೂಲಕ ಕುಗ್ಗಿಹೋಗಲು ನ್ಯಾಯಾಲಯಗಳೇನು ಹೂವಿನಷ್ಟು ದುರ್ಬಲವಲ್ಲ’ ಎಂದು ಅಭಿಪ್ರಾಯಪಟ್ಟಿದೆ.
ನ್ಯಾಯಾಲಯದ ಮೇಲೆ ಸಾರ್ವಜನಿಕರ ವಿಶ್ವಾಸಾರ್ಹತೆ ಇಂಥ ಅಸಂಬದ್ಧ ಹೇಳಿಕೆಯಿಂದ ಕುಂದುತ್ತದೆ ಎಂದು ನಮಗೇನೂ ಅನಿಸುವುದಿಲ್ಲ ಎಂದು ಪೀಠ ಹೇಳಿದೆ.
ಇದನ್ನೂ ಓದಿ: ಮುಸ್ಲಿಂ ಆಯುಕ್ತ ಎಂದ ಬಿಜೆಪಿ ಸಂಸದ ದುಬೆಗೆ ಖುರೇಶಿ ತಿರುಗೇಟು
ದುಬೆ ಅವರ ಹೇಳಿಕೆ ತೀವ್ರ ಬೇಜವಾಬ್ದಾರಿಯಿಂದ ಕೂಡಿದೆ. ಅವರಿಗೆ ಸಾಂವಿಧಾನಿಕ ನ್ಯಾಯಾಲಯಗಳ ಪಾತ್ರದ ಬಗ್ಗೆಯಾಗಲಿ, ಸಂವಿಧಾನದಡಿ ಅವುಗಳಿಗೆ ನೀಡಲಾದ ಕರ್ತವ್ಯಗಳು ಮತ್ತು ಬಾಧ್ಯತೆಗಳ ಕುರಿತಾಗಲಿ ಯಾವುದೇ ಜ್ಞಾನ ಇದ್ದಂತಿಲ್ಲ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಇದೇ ವೇಳೆ, ಕೋಮುದ್ವೇಷ ಬೆಳೆಯುವ ಅಥವಾ ದ್ವೇಷ ಹೇಳಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಪೀಠ ಎಚ್ಚರಿಸಿದೆ.
ವಕ್ಫ್ ಕಾಯ್ದೆ ವಿವಾದವನ್ನು ಮುಂದಿಟ್ಟುಕೊಂಡು ಸುಪ್ರೀಂ ಕೋರ್ಟ್ ದೇಶವನ್ನು ಅರಾಜಕತೆಗೆ ಕೊಂಡೊಯ್ಯುತ್ತಿದೆ, ರಾಷ್ಟ್ರಪತಿಗಳಿಗೇ ಮಸೂದೆಗೆ ಸಹಿ ಹಾಕುವಂಥ ಆದೇಶ ನೀಡಿ ವ್ಯಾಪ್ತಿ ಮೀರುತ್ತಿದೆ. ದೇಶದಲ್ಲಿ ನಡೆಯುತ್ತಿರುವ ನಾಗರಿಕ ದಂಗೆಗೆ ಮುಖ್ಯ ನ್ಯಾಯಮೂರ್ತಿ ಸಿಜೆಐ ಸಂಜೀವ್ ಖನ್ನಾ ಕಾರಣ ಎಂದು ದುಬೆ ಆರೋಪಿಸಿದ್ದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ