
ರಾಂಚಿ(ಮೇ.07): ಕೊರೋನಾ ವೈರಸ್ ಪ್ರತಿ ರಾಜ್ಯದಲ್ಲೂ ಅಬ್ಬರಿಸುತ್ತಿದೆ. ಇತ್ತ ಕೇಂದ್ರ ಸರ್ಕಾರ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರ ನಡುವೆ ಪ್ರಧಾನಿ ಮೋದಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದಾರೆ. ಇತ್ತೀಚೆಗೆ ಜಾರ್ಖಂಡ್ ಸಿಎಂ ಜೊತೆ ಮಾತನಾಡಿದ್ದರು. ಆದರೆ ಮೋದಿ ಮಾತಿಗೆ ತಲೆಯಾಡಿಸಿದ್ದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಬಳಿಕ ಮೋದಿ ನಮ್ಮ ಮಾತು ಕೇಳುತ್ತಿಲ್ಲ ಎಂದು ಆರೋಪಿಸಿದ್ದರು. ಸೊರೆನ್ ಆರೋಪಕ್ಕೆ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಾಬುಲಾಲ್ ಮರಾಂಡಿ ತಿರುಗೇಟು ನೀಡಿದ್ದಾರೆ.
ಒಂದು ವಾರ ಸಂಪೂರ್ಣ ಲಾಕ್‌ಡೌನ್ ಘೋಷಿಸಿದ ಜಾರ್ಖಂಡ್ ಸರ್ಕಾರ!
ಕೊರೋನಾ ವೈರಸ್ ನಿಯಂತ್ರಣ ಮಾಡದ, ಅಗತ್ಯ ಕ್ರಮಗಳನ್ನು ಕೈಗೊಳ್ಳದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ವಿಫಲ ಮುಖ್ಯಮಂತ್ರಿ. ಕಳಪೆ ಆಡಳಿತ, ಕೊರೋನಾ ಸಂದರ್ಭ ಎದುರಿಸಲಾಗದೆ ಇತರರ ಮೇಲೆ ಆರೋಪ ಮಾಡುತ್ತಿದ್ದಾರೆ. ಈಗಾಲಾದರು ಎಚ್ಚೆತ್ತುಕೊಳ್ಳಿ ಮಿಸ್ಟರ್ ಸೊರೆನ್ ಸಮಯ ಮೀರುತ್ತಿದೆ ಎಂದು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ತಿರುಗೇಟು ನೀಡಿದ್ದಾರೆ.
ಹೇಮಂತ್ ಸೊರನೆ ಪ್ರಧಾನಿ ನರೇಂದ್ರ ಮೋದಿ ಕುರಿತು ಟ್ವೀಟ್ ಮಾಡಿದ ಬೆನ್ನಲ್ಲೇ ಬಾಬುಲಾಲ್ ಟ್ವಿಟರ್ ಮೂಲಕ ತಿರುಗೇಟು ನೀಡಿದ್ದಾರೆ. ಮೇ.06 ರಂದು ಪ್ರಧಾನಿ ನರೇಂದ್ರ ಮೋದಿ ನಾಲ್ಕು ರಾಜ್ಯದ ಮುಖ್ಯಮಂತ್ರಿ ಹಾಗೂ ಇಬ್ಬರು ಕೇಂದ್ರಾಡಳಿತ ಪ್ರದೇಶದ ರಾಜ್ಯಪಾಲರ ಜೊತೆ ಚರ್ಚಿಸಿದ್ದರು. ಈ ನಾಲ್ವರು ಮುಖ್ಯಮಂತ್ರಿಗಳ ಪೈಕಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಒಬ್ಬರಾಗಿದ್ದರು.
ಆಸ್ಪತ್ರೆ ತಪಾಸಣೆಗೆ ಬಂದ ಮಂತ್ರಿ, ಚಿಕಿತ್ಸೆ ಸಿಗದೆ ಆಸ್ಪತ್ರೆ ಹೊರಗೇ ಪ್ರಾಣ ಬಿಟ್ಟ ರೋಗಿ!.
ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ, ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಹತ್ವದ ಸಲಹೆ ನೀಡಿದ್ದರು. ಮೋದಿ ಮಾತುಕತೆ ಬಳಿಕ ಹೇಮಂತ್ ಸೊರನೆ ಟ್ವಿಟರ್ ಮೂಲಕ ಮೋದಿ ತಮ್ಮ ಮನ್‌ಕಿ ಬಾತ್ ಹೇಳುತ್ತಾರೆ. ನಮ್ಮ ಮಾತನ್ನು ಕೇಳಿಸಿಕೊಳ್ಳುವುದಿಲ್ಲ. ರಾಜ್ಯ ಕೈಗೊಂಡಿರುವ ಕ್ರಮಗಳು, ನಮ್ಮ ಮಾತುಗಳನ್ನು ಕೇಳಿಸಿಕೊಂಡರೆ ಉತ್ತಮ ಎಂದು ಸೊರೆನ್ ಟ್ವೀಟ್ ಮಾಡಿದ್ದರು.
ಸೊರೆನ್ ಈ ಟ್ವೀಟ್‌ಗೆ ಬಾಬುಲಾಲ್ ಇದೀಗ ಜಾರ್ಖಂಡ್ ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿಯನ್ನು ಬಹಿರಂಗ ಪಡಿಸಿದ್ದಾರೆ. ರಾಜ್ಯ ಕೊರೋನಾದಿಂದ ತತ್ತರಿಸಿರುವಾಗ, ತಮ್ಮ ವೈಫಲ್ಯವನ್ನು ಮುಚ್ಚಿಡಲು ಪ್ರಧಾನಿ ಮೋದಿಯನ್ನು ಎಳೆದುತಂದಿದ್ದಾರೆ. ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಬದಲು ಕೇಂದ್ರದತ್ತ ಮುಖ ಮಾಡಿಕುಳಿತರೆ ಪ್ರಯೋಜನವಿಲ್ಲ ಎಂದು ಬಾಬುಲಾಲ್ ಖಡಕ್ ಉತ್ತರ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ