ಡಯಾಬಿಟೀಸ್ ಇದೆ, ಬಿಪಿಯೂ ಇದೆ | ಆದ್ರೂ ಮನೆಯಲ್ಲೇ ಇದ್ದು ಕೊರೋನಾ ವಿರುದ್ಧ ಹೋರಾಡಿ ಗೆದ್ದ 100ರ ಅಜ್ಜಿ | ಇವರಲ್ಲವೇ ನಮಗೆ, ನಿಮಗೆ ಸ್ಫೂರ್ಥಿ ?
ಲಕ್ನೋ(ಮೇ.07): ಕೊರೋನಾ ಎರಡನೇ ಅಲೆ ಅನ್ನೋವಾಗಲೇ ಚಳಿ ಹತ್ತೋ, ಬರೀ ಆಲೋಚನೆಗಳಿಂದಲೇ ಭಯಭೀತರಾಗೋ ಜನ ಇದನ್ನು ಓದಲೇ ಬೇಕು. ನಿಮಗೆ ಸದ್ಯಕ್ಕೆ ಅಗತ್ಯವಾದ ಡೋಸ್ ಇದು. ಕೊರೋನಾ ಕುರಿತು ಯೋಚಿಸಿಯೇ ಭಯಪಡೋರಿಗೆ ಈಗಿನ ಅತ್ಯಗತ್ಯ ಲಸಿಕೆ ಈ ಸ್ಟೋರಿ.
ಲಕ್ನೋದ 100 ವರ್ಷದ ಅಜ್ಜಿ ಜಾನಕಿ ತುಕ್ರಾಲ್ ಬಿಪಿ, ಶುಗರ್ ಇದ್ದರೂ, ಈ ಹಿಂದೆ ಹಾರ್ಟ್ ಸರ್ಜರಿಯಾಗಿದ್ದರೂ ಕೊರೋನಾ ವಿರುದ್ಧ ಹೋರಾಡಿ ಗೆದ್ದಿದ್ದಾರೆ. ವಿಶೇಷ ಅಂದ್ರೆ ಅವರು ಆಸ್ಪತ್ರೆಗೂ ದಾಖಲಾಗಿಲ್ಲ, ಬೆಡ್‌ಗಾಗಿ ಅಲೆದಾಡಿಲ್ಲ, ಅವರು ಗುಣಮುಖರಾಗಿದ್ದು ಮನೆಯಲ್ಲೇ.
undefined
ಈ ಮನೆಯವರೆಲ್ಲ ಪರಸ್ಪರ ತಮ್ಮ ಆರೈಕೆಯನ್ನು ತಾವೇ ಮಾಡ್ಕೊಂಡು ಹೋಂ ಐಸೊಲೇಷನ್‌ನಲ್ಲಿಯೇ ಕೊರೋನಾ ವಿರುದ್ಧ ಹೋರಾಡಿದ್ದಾರೆ. ಇವರಿಗೆ ನೆರವಾಗಿದ್ದು ಟೆಲಿ ಮೆಡಿಸಿನ್ ಮತ್ತು ವೈದ್ಯರ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ.
ವೈದ್ಯರ ಸಲಹೆ, ಪ್ರೋನಿಂಗ್ ಮೂಲಕ ಮನೆಯಲ್ಲೇ ಕೊರೋನಾ ಸೋಲಿಸಿದ 82ರ ವೃದ್ಧೆ
ಜಾನಕಿ ಅವರ ಆಕ್ಸಿಜನ್ ಲೆವೆಲ್ 70ಕ್ಕೆ ತಲುಪಿತ್ತು. ಆದರೆ ಅವರು ಮನೆಯಲ್ಲೇ ಹುಷಾರಾಗುವಲ್ಲಿ ಸಕ್ಸಸ್ ಆದರು. ಕುಟುಂಬದ 10 ಜನಕ್ಕೆ ಕೊರೋನಾ ಬಂದಿತ್ತು. ಎಲ್ಲರೂ ಮನೆಯಲ್ಲೇ ಹೋಂ ಐಸೊಲೇಷನ್‌ನಲ್ಲಿದ್ದರು.
ಹಸ್ರತ್‌ಗಂಜ್‌ನ ಸರ್ಪು ಮಾರ್ಗ್‌ನಲ್ಲಿ ನಮ್ಮ ಮನೆ ಇದೆ. ಏ.10ರಂದು ಅಜ್ಜಿಗೆ ಕೊರೋನಾ ಪಾಸಿಟಿವ್ ಬಂತು. ನಂತರ ಎಲ್ಲರೂ ಪರೀಕ್ಷಿಸಿಕೊಂಡೆವು. ನಂತರ ನನ್ನ ಪತ್ನಿ, 8 ವರ್ಷದ ಮಗ ಸೇರಿ 11ಜನಕ್ಕೆ ಪಾಸಿಟಿವ್ ಬಂತು. ಅಡುಗೆಯವರಿಗೂ ಪಾಸಿಟಿವ್ ಬಂದಿತ್ತು. ಇದರಲ್ಲಿ 80 ವರ್ಷ ಮೇಲ್ಪಟ್ಟ ಅತ್ತೆ ಮಾವ, 70 ವರ್ಷ ಮೇಲ್ಪಟ್ಟ ಅಪ್ಪ-ಅಮ್ಮನೂ ಇದ್ದರು. ಐವರು ಹಿರಿಯರಲ್ಲಿ ಅಜ್ಜಿಯ ಆರೈಕೆಯೇ ಸವಾಲಾಗಿತ್ತು. ಆ ಸಂದರ್ಭ ಆಸ್ಪತ್ರೆ ವ್ಯವಸ್ಥೆ ಹದೆಗೆಟ್ಟಿತ್ತು. ಅಂತಹ ಸಂದರ್ಭದಲ್ಲಿ ಅಜ್ಜಿಗೆ ಮನೆಯಲ್ಲೇ ಚಿಕಿತ್ಸೆ ಕೊಡೋಕೆ ನಿರ್ಧರಿಸಿದೆವು. ಫೋನ್ ಮೂಲಕ ಖಾಸಗಿ ಆಸ್ಪತ್ರೆ ವೈದ್ಯರಿಂದ ಸಲಹೆ, ಸೂಚನೆ ಪಡೆಯೋಕೆ ತೀರ್ಮಾನಿಸಿದ್ವಿ ಎನ್ನುತ್ತಾರೆ ಜಾನಕಿ ತುಕ್ರಾಲ್ ಅವರ ಮೊಮ್ಮಗ ಅಮಿತ್.
ಜಾನಕಿ ಅವರ ಆಕ್ಸಿಜನ್ ಲೆವೆಲ್ ಕಡಿಮೆಯಾದಾಗ ಒಂದು ಆಕ್ಸಿಜನ್ ಸಿಲಿಂಡರ್ ಪಡೆದಿದ್ದರು. ಒಬ್ಬರು ನರ್ಸ್‌ನ್ನು ನಿಯೋಜಿಸಲಾಯಿತು. ಅವರು ಸಂಜೆ ಬಂದು ಶುಗರ್ ಚೆಕ್ ಮಾಡುತ್ತಿದ್ದರು. ಹಗಲು ನಾವು ನೋಡಿಕೊಳ್ಳುತ್ತಿದ್ದೆವು. ವೈದ್ಯರ ಸಲಹೆಯಂತೆ ಸ್ಟೆರಾಯ್ಡ್ ಮತ್ತು ಇನ್ಸುಲಿನ್ ನೀಡುತ್ತಿದ್ದೆವು ಎಂದಿದ್ದಾರೆ ಅಮಿತ್.
ಕ್ರಮೇಣ ಆಕ್ಸಿಜನ್ ಲೆವೆಲ್ ನಾರ್ಮಲ್ ಆಯ್ತು. ಹಾಗೆಯೇ ಇವರು ಚೇತರಿಸಿಕೊಂಡಿದ್ದಾರೆ. ಎಲ್ಲರಿಗೂ ಕೊರೋನಾ ನೆಗೆಟಿವ್ ಬಂತು. ಆದರೆ ಅಜ್ಜಿ ನಿಧಾನವಾಗಿ ಗುಣಮುಖರಾಗುತ್ತಿದ್ದಾರೆ. 20 ದಿನಗಳ ನಂತರ ಮೇಯಲ್ಲಿ ಅವರ ವರದಿಯೂ ನೆಗೆಟಿವ್ ಬಂತು. ಈಗ ಎಲ್ಲರೂ ಆರಾಮವಾಗಿದ್ದೇವೆ ಎಂದಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona