ಗುಜರಾತ್‌ನಲ್ಲಿ ಮಳೆಯ ಅಬ್ಬರಕ್ಕೆ 11 ಜನ ಬಲಿ: ಉತ್ತರಾಖಂಡದಲ್ಲಿ ಭೂಕುಸಿತದಿಂದ ಚಾರ್‌ಧಾಮ್‌ ಯಾತ್ರೆಗೆ ಅಡ್ಡಿ

By Kannadaprabha News  |  First Published Jul 3, 2023, 1:22 PM IST

ಮಳೆಯಿಂದ ಸಂಭವಿಸಿದ ವಿವಿಧ ಘಟನೆಗಳಲ್ಲಿ ಕಳೆದ ಶುಕ್ರವಾರ ಗುಜರಾತ್‌ನಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಇನ್ನೊಂದೆಡೆ ಅತಿಯಾದ ಮಳೆಯಿಂದ ಭೂಕುಸಿತ ಸಂಭವಿಸಿ ಉತ್ತರಾಖಂಡದಲ್ಲಿ ಚಾರ್‌ಧಾಮಗಳಲ್ಲಿ ಒಂದಾದ ಪ್ರಸಿದ್ಧ ಬದರೀನಾಥ್‌ ಹೆದ್ದಾರಿಯನ್ನು ಬಂದ್‌ ಮಾಡಲಾಗಿದೆ.


ಅಹಮದಾಬಾದ್‌/ ಡೆಹ್ರಾಡೂನ್‌ (ಜುಲೈ 3, 2023): ಗುಜರಾತ್‌ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಉಭಯ ರಾಜ್ಯಗಳಲ್ಲಿ ಭಾರಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ತಗ್ಗು ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿವೆ. ಮಳೆಯಿಂದ ಸಂಭವಿಸಿದ ವಿವಿಧ ಘಟನೆಗಳಲ್ಲಿ ಕಳೆದ ಶುಕ್ರವಾರ ಗುಜರಾತ್‌ನಲ್ಲಿ 11 ಮಂದಿ ಮೃತಪಟ್ಟಿದ್ದಾರೆ.

ಇನ್ನೊಂದೆಡೆ ಅತಿಯಾದ ಮಳೆಯಿಂದ ಭೂಕುಸಿತ ಸಂಭವಿಸಿ ಉತ್ತರಾಖಂಡದಲ್ಲಿ ಚಾರ್‌ಧಾಮಗಳಲ್ಲಿ ಒಂದಾದ ಪ್ರಸಿದ್ಧ ಬದರೀನಾಥ್‌ ಹೆದ್ದಾರಿಯನ್ನು ಬಂದ್‌ ಮಾಡಲಾಗಿದೆ.

Tap to resize

Latest Videos

ಇದನ್ನು ಓದಿ: ಮುಂಗಾರು ಚುರುಕು: ಉತ್ತರ ಭಾರತದ ಹಲವೆಡೆ ಭೂಕುಸಿತ, ರಸ್ತೆ ಬಂದ್‌; ಹಿಮಾಚಲದಲ್ಲಿ ನೂರಾರು ಪ್ರವಾಸಿಗರು ಅತಂತ್ರ; ಹಲವರು ಬಲಿ

ಗುಜರಾತಲ್ಲಿ ವರ್ಷಧಾರೆ:
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಸರಾಸರಿ 3 ಸೆಂ.ಮೀ. ಮಳೆಯಾಗಿದ್ದು ವಲ್ಸಾದ್‌ ಜಿಲ್ಲೆಯ ಧರಂಪುರದಲ್ಲಿ ಬರೋಬ್ಬರಿ 23 ಸೆಂ.ಮೀ ಮಳೆಯಾಗಿದೆ. ಇದು ರಾಜ್ಯದಲ್ಲೇ ಗರಿಷ್ಠವಾಗಿದ್ದು ಒಟ್ಟು 205 ತಾಲೂಕುಗಳಲ್ಲಿ ಭಾರೀ ಪ್ರಮಾಣದ ಮಳೆಯಾಗಿದೆ. ಇನ್ನು ಪ್ರವಾಹಕ್ಕೆ ಸಿಲುಕಿ ರಸ್ತೆಗಳು ಕೊಚ್ಚಿ ಹೋಗಿದ್ದರಿಂದ ರಾಜ್ಯದಲ್ಲಿ ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಇನ್ನು ಹಲವಾರು ಮನೆಗಳು ನೀರಿನಲ್ಲಿ ಮುಳುಗಡೆಯಾಗಿದ್ದು ರಾಷ್ಟ್ರೀಯ ಮತ್ತು ರಾಜ್ಯ ಭದ್ರತಾ ಪಡೆಗಳು ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಯಲ್ಲಿ ತೊಡಗಿವೆ.

ಉತ್ತರಾಖಂಡದಲ್ಲಿ ಚಾರ್‌ಧಾಮ್‌ ಯಾತ್ರೆಗೆ ಅಡ್ಡಿ:
ಉತ್ತರಾಖಂಡದ ಹಲವೆಡೆ ಭಾರಿ ಮಳೆ ಸುರಿಯುತ್ತಿದ್ದು ಚಮೋಲಿ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿರುವ ಪರಿಣಾಮ ಬದರಿನಾಥ್‌ ಹೆದ್ದಾರಿಯನ್ನು ಕಳೆದ 3 ದಿನಗಳಲ್ಲಿ 4ನೇ ಬಾರಿ ಬಂದ್‌ ಮಾಡಲಾಗಿದೆ. ಇದರಿಂದ ಬದರಿನಾಥ್‌ ಸೇರಿದಂತೆ ಚಾರ್‌ ಧಾಮ್‌ ಯಾತ್ರಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ. ಇನ್ನು ಜುಲೈ 5 ರವರೆಗೆ ರಾಜ್ಯದಲ್ಲಿ ‘ಆರೆಂಜ್‌ ಅಲರ್ಟ್‌’ ಘೋಷಿಸಲಾಗಿದೆ.

ಇದನ್ನೂ ಓದಿ: ಅಸ್ಸಾಂ ಪ್ರವಾಹ ಸ್ಥಿತಿ ಮುಂದು​ವ​ರಿ​ಕೆ: 16 ಜಿಲ್ಲೆಗಳ 4.88 ಲಕ್ಷ ಜನರಿಗೆ ತೀವ್ರ ಸಂಕಷ್ಟ

ಸಚಿವ ಅಮಿತ್‌ ಶಾ ಭರವಸೆ:
ಎರಡೂ ರಾಜ್ಯಗಳ ಪ್ರವಾಹ ಸ್ಥಿತಿ ಬಗ್ಗೆ ಪ್ರತ್ಯೇಕ ಟ್ವೀಟ್‌ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ಪರಿಸ್ಥಿತಿ ಕುರಿತು ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದಿದ್ದೇನೆ. ಜನರೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿದ್ದು ಅಗತ್ಯವಾದ ಎಲ್ಲ ನೆರವನ್ನೂ ನೀಡಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ಈ ವರ್ಷ ತಡವಾಗಿಯೇ ದೇಶ ಪ್ರವೇಶಿಸಿದ ಮುಂಗಾರು ಮಾರುತಗಳು ಕಳೆದ ಕೆಲ ದಿನಗಳಿಂದ ಚುರುಕುಗೊಂಡಿದ್ದು ರಾಜಸ್ಥಾನ, ಗುಜರಾತ್‌, ಉತ್ತರಾಖಂಡ ಸೇರಿದಂತೆ ಉತ್ತರ ಭಾರತದ ಹಲವೆಡೆ ಭಾರಿ ಮಳೆಯಾಗುತ್ತಿದೆ.

ಮರಳುಗಾಡು ರಾಜಸ್ಥಾನದಲ್ಲಿ ಮಳೆಯೋ ಮಳೆ: ಮಲೆನಾಡಿನಲ್ಲಿ ಮಳೆಯೇ ಇಲ್ಲ.. ಇದೆಂತಾ ವಿಚಿತ್ರ ಅಲ್ವಾ?

click me!