
ನವದೆಹಲಿ(ಜೂ.29): ದೇಶದಲ್ಲಿ ಕೊರೋನಾ ಮೊದಲ ಅಲೆ ಕೊನೆಯಾಧ ಬೆನ್ನಲ್ಲೇ ಎರಡನೇ ಅಲೆ ಕಾನಿಸಿಕೊಂಡಿತ್ತು. ಈ ಅಲೆ ಸದ್ಯ ಕೊಂಚ ಕಡಿಮೆಯಾಗುತ್ತಿದೆ. ಹೀಗಿರುವಾಗ ಮೂರನೇ ಅಲೆ ದಾಳಿ ಇಡಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಹೀಗಿರುವಾಗ ದೇಶದಲ್ಲಿ ಕೊರೋನಾ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲಾಗಿದೆ. ಇನ್ನು ಗರ್ಭಿಣಿಯರು ಈ ಮಾರಣಾಂತಿಕ ಸೋಂಕಿಗೆ ಒಳಗಾಗುವ ಆತಂಕ ವ್ಯಕ್ತವಾಗಿವೆ. ಹೀಗಿರುವಾಗ ಆರೋಗ್ಯ ಇಲಾಖೆಯು ಕೊರೊನಾ ಲಸಿಕೆ ಸಂಪೂರ್ಣ ಸುರಕ್ಷಿತ ಇದು ತಾಯಿ ಹಾಗೂ ಹುಟ್ಟಲಿರುವ ಮಗುವನ್ನು ಕೊರೋನಾದಿಂದ ಕಾಪಾಡುತ್ತದೆ ಎಂದಿದೆ. ಜೊತೆಗೆ ಈ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿಯನ್ನೂ ಹೊರಡಿಸಿದೆ.
ಮಾರ್ಗಸೂಚಿ ಹೊರಡಿಸಿರುವ ಆರೋಗ್ಯ ಇಲಾಖೆ ಗಗರ್ಭಿಣಿಯರು ಕೊರೊನಾ ಲಸಿಕೆಯನ್ನು ಧೈರ್ಯವಾಗಿ ತೆಗೆದುಕೊಳ್ಳಬಹುದು, ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ. ಲಸಿಕೆ ತೆಗೆದುಕೊಳ್ಳುವುದರಿಂದ ಕೊರೋನಾದಿಂದ ಬಾಧಿಸಬಹುದಾದ ಸಮಸ್ಯೆಗಳನ್ನು ತಡೆಗಟ್ಟಬಹುದು. ಹೀಗಾಗಿ ಮಾರ್ಗಸೂಚಿ ಅನ್ವಯ ಗರ್ಭಿಣಿ ಮಹಿಳೆಯರಿಗೆ ಲಸಿಕೆ ಪಡೆಯಲು ಸೂಚಿಸಿದೆ.
ಗರ್ಭಿಣಿ ಮಹಿಳೆಯರಿಗೆ ಕರೋನಾ ಸೋಂಕಿನ ಲಕ್ಷಣಗಳು ಆರಂಭದಲ್ಲಿ ಸೌಮ್ಯವಾಗಿರುತ್ತವೆ, ಆದರೆ ನಂತರ ಅವರ ಆರೋಗ್ಯವು ಶೀಘ್ರವಾಗಿ ಹದಗೆಡುತ್ತದೆ ಮತ್ತು ಇದು ಅವರ ಹುಟ್ಟಲಿರುವ ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಮಾರ್ಗಸೂಚಿಗಳಲ್ಲಿ ಹೇಳಲಾಗಿದೆ. ಅದಕ್ಕಾಗಿಯೇ ಅವರು ಕೋವಿಡ್ -19 ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಲಸಿಕೆ ಪಡೆಯುವುದು ಮುಖ್ಯ.
ಮಾರ್ಗಸೂಚಿಯಲ್ಲಿನ ಪ್ರಮುಖ ಅಂಶಗಳು ಇಂತಿವೆ:
* ಗರ್ಭಧಾರಣೆಯಿಂದ ಕೊರೋನಾ ಹೆಚ್ಚಾಗುವುದಿಲ್ಲ. ಅನೇಕ ಗರ್ಭಿಣಿಯರಿಗೆ ಸೋಂಕಿನ ಲಕ್ಷಣಗಳೇ ಇರುವುದಿಲ್ಲ.ಇದ್ದರೂ ಸೌಮ್ಯವಾಗಿರುತ್ತವೆ. ಆದರೆ ಬಳಿಕ ಆರೋಗ್ಯ ನಿಧಾನವಾಗಿ ಹದಗೆಡಲಾರಂಭಿಸುತ್ತದೆ ಹಾಗೂ ಗರ್ಭದಲ್ಲಿರುವ ಭ್ರೂಣದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಕೊರೋನಾ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಹೀಗಾಗಿ ಕೊರೋನಾ ಲಸಿಕೆ ಪಡೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
* ಈವರೆಗೆ ಶೇ.80ಕ್ಕಿಂತ ಹೆಚ್ಚು ಕೊರೋನಾ ಸೋಂಕಿತ ಗರ್ಭಿಣಿಯರು ಕೊರೋನಾ ಲಕ್ಷಞಣಗಳು ಗಂಭೀರವಿಲ್ಲದೇ, ಆಸ್ಪತ್ರೆಗೆ ದಾಖಲಾಗದೆ ಚೇತರಿಸಿಕೊಂಡಿದ್ದಾರೆ. ಆದರೆ, ಕೆಲ ಪ್ರಕರಣದಲ್ಲಿ ಸೋಂಕು ತೀವ್ರವಾಗಿ ಬಾಧಿಸಿದ್ದೂ ಇದೆ. ಒಂದು ವೇಳೆ ಸೋಂಕು ಹೆಚ್ಚಾದರೆ ಗರ್ಭಿಣಿಯರು ಆಸ್ಪತ್ರೆಗೆ ದಾಖಲಾಗುವುದು ಅನಿವಾರ್ಯ. ಇದನ್ನು ಹೊರತುಪಡಿಸಿ ಅಧಿಕ ರಕ್ತದೊತ್ತಡ, ಬೊಜ್ಜು, ಮಧುಮೇಹ ಸಮಸ್ಯೆಯೂ ಇರುವುದರಿಂದ 35 ವರ್ಷ ಮೇಲ್ಪಟ್ಟವರು ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಹೀಗಾಗಿ ಲಸಿಕೆ ಪಡೆಯುವುದು ಸೂಕ್ತ ಎಂದಿದೆ.
* ಈವರೆಗೆ ಕೊರೋನಾ ಸೋಂಕಿತ ಗರ್ಭಿಣಿಯರಿಗೆ ಜನಿಸಿದ ಶೇ.96ಕ್ಕಿಂತ ಹೆಚ್ಚು ನವಜಾತ ಶಿಶುಗಳು ಆರೋಗ್ಯಕರವಾಗಿಯೇ ಜನಿಸಿವೆ. ಆದರೆ, ಕೆಲ ಪ್ರಕರಣಗಳಲ್ಲಿ ಅವಧಿಗೂ ಮುನ್ನ ಮಗು ಜನಿಸಿದ, ಮಗು ತೂಕ ಕಳೆದುಕೊಂಡ ಹಾಗೂ ಅಪರೂಪದ ಪ್ರಕರಣಗಳಲ್ಲಿ ಹುಟ್ಟುವ ಮುನ್ನವೇ ಮಗು ಸಾವಿಗೀಡಾದ ಉದಾಹರಣೆ ಇದೆ.
* 35 ವರ್ಷ ಮೇಲ್ಪಟ್ಟ ಗರ್ಭಿಣಿಯರು ಗರ್ಭ ಧರಿಸುವ ಮುನ್ನವೇ ಮಧುಮೇಹ, ಅಧಿಕ ರಕ್ತದೊತ್ತಡ, ರಕ್ತ ಹೆಪ್ಪುಗಟ್ಟುವ ಸಮಸ್ಯೆ ಇತ್ಯಾದಿಯಿಂದ ಬಳಲುತ್ತಿದ್ದರೆ ಅಂತಹವರಿಗೆ ಕೊರೋನಾ ಅಪಾಯ ಹೆಚ್ಚಿರುತ್ತದೆ ಒಂದುವೇಳೆ ಗರ್ಭ ಧರಿಸಿದ ಸಂದರ್ಭದಲ್ಲೇ ಕೊರೋನಾ ಸೋಂಕು ತಗುಲಿದರೆ ಹೆರಿಗೆಯಾದ ಕೂಡಲೇ ಕೊರೋನಾ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು.
* ಲಸಿಕೆ ಪಡೆದ ಬಳಿಕ ಗರ್ಭಿಣಿಯರಿಗೆ ಒಂದರಿಂದ ಮೂರು ದಿನ ಅನಾರೋಗ್ಯಕ್ಕೀಡಾದಂತೆ ಸಣ್ಣ ಪ್ರಮಾಣದ ಜ್ವರ, ನೋವು, ಸುಸ್ತು ಕಾಣಿಸಿಕೊಳ್ಳಬಹುದು. ಆದರೆ ಈವರೆಗೆ ಲಸಿಕೆ ಮಗುವಿನ ಮೇಲೆ ದೀರ್ಘಕಾಲಿದ ಪರಿಣಾಮ ಬೀರುತ್ತದೆ ಎನ್ನುವುದು ಯಾವುದೇ ಅಧ್ಯಯನದಲ್ಲಿ ಸಾಬೀತಾಗಿಲ್ಲ. ಅತೀ ಅಪರೂಪದ ಪ್ರಕರಣದಲ್ಲಿ ಲಸಿಕೆ ತೆಗೆದುಕೊಂಡ ನಂತರ ತುರ್ತು ವೈದ್ಯಕೀಯ ಸಹಾಯ ಬೇಕಾಗಬಹುದು. ಅದರಲ್ಲಿ ಉಸಿರಾಟದ ಸಮಸ್ಯೆ, ಎದೆನೋವು, ಕೈ ಕಾಲು ಸೆಳೆತ, ತಲೆನೋವು, ವಾಂತಿ, ಕಣ್ಣು ಮಂಜಾಗುವುದು ಸೇರಿದಂತೆ ಕೆಲ ಸಮಸ್ಯೆಗಳು ಬಾಧಿಸಬಹುದು.
* ಕೊರೋನಾ ಲಸಿಕೆ ಪಡೆದ ಬಳಿಕವೂ ಗರ್ಭಿಣಿಯರು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ಕುಟುಂಬಸ್ಥರಿಗೆ ಅರಿವು ಮೂಡಿಸಬೇಕು. ಎರಡು ಮಾಸ್ಕ್ ಧರಿಸುವುದು, ಆಗಾಗ ಕೈ ತೊಳೆಯುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಜನಸಂದಣಿ ಇದ್ದಲ್ಲಿ ತೆರಳದೇ ಇರುವುದು ಅತ್ಯವಶ್ಯಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ