ಪಾಕ್ ಗೂಢಚಾರಿ ಪತ್ರಕರ್ತನ ಜತೆ ಮಾಜಿ ರಾಷ್ಟ್ರಪತಿ ಅನ್ಸಾರಿ ಇರುವ ಫೋಟೋವನ್ನು ಬಿಜೆಪಿ ಬಿಡುಗಡೆ ಮಾಡಿದೆ. ಈ ಮೂಲಕ ಉತ್ತರ ನೀಡುವಂತೆ ಆಗ್ರಹಿಸಿದೆ.
ನವದೆಹಲಿ (ಜು.16): ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತಕ್ಕೆ ಐದು ಬಾರಿ ಭೇಟಿ ನೀಡಿ ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಹಸ್ತಾಂತರ ಮಾಡಿದ್ದೇನೆ ಎಂದು ಹೇಳಿಕೊಂಡಿರುವ ಪಾಕ್ ಪತ್ರಕರ್ತನ ಜೊತೆ ಭಾರತದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಇರುವ ಫೋಟೋವನ್ನು ಬಿಜೆಪಿ ಬಿಡುಗಡೆ ಮಾಡಿದೆ. ಹಮೀದ್ ಅನ್ಸಾರಿ ಆಹ್ವಾನದ ಮೇಲೆ ತಾನು ಭಾರತಕ್ಕೆ ತೆರಳಿದ್ದಾಗಿ ಪಾಕ್ ಪತ್ರಕರ್ತ ನುಸ್ರತ್ ಮಿರ್ಜಾ ಹೇಳಿಕೊಂಡಿದ್ದ. ಆದರೆ, ಆತ ಯಾರೆಂದೇ ತನಗೆ ಗೊತ್ತಿಲ್ಲವೆಂದು ಅನ್ಸಾರಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ, ಇಬ್ಬರೂ ವೇದಿಕೆ ಹಂಚಿಕೊಂಡ ಫೋಟೋವನ್ನು ಶುಕ್ರವಾರ ಬಿಡುಗಡೆ ಮಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ಸಾಂವಿಧಾನಿಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳು ಅದಕ್ಕೆ ತಕ್ಕಂತೆ ಗೌರವಯುತವಾಗಿ ನಡೆದುಕೊಳ್ಳಬೇಕು. ಮಿರ್ಜಾ ಜೊತೆ ಅನ್ಸಾರಿ ವೇದಿಕೆ ಹಂಚಿಕೊಳ್ಳಬಾರದಿತ್ತು ಎಂದು ವಾಗ್ದಾಳಿ ನಡೆಸಿದರು. ಇಂತಹ ಕಾರ್ಯಕ್ರಮಗಳಿಗೆ ವಿದೇಶಿ ವ್ಯಕ್ತಿಯನ್ನು ಆಹ್ವಾನಿಸಲು ಹಾಗೂ ಉಪರಾಷ್ಟ್ರಪತಿಗಳ ಜೊತೆ ವೇದಿಕೆ ಹಂಚಿಕೊಳ್ಳಲು ಅನುಮತಿ ನೀಡುವುದಕ್ಕೆ ಗುಪ್ತಚರ ದಳದ ಒಪ್ಪಿಗೆ ಬೇಕಾಗುತ್ತದೆ. ಕಾಂಗ್ರೆಸ್ ಸರ್ಕಾರ ಹೇಗೆ ಒಪ್ಪಿಗೆ ನೀಡಿತು ಎಂದೂ ಅವರು ಪ್ರಶ್ನಿಸಿದರು.
ಪಾಕ್ ಪತ್ರಕರ್ತನ ಸ್ಪೈ , ಸ್ಪಷ್ಟನೆಗೆ ಸೋನಿಯಾ, ಅನ್ಸಾರಿಗೆ ಬಿಜೆಪಿ ಆಗ್ರಹ: ಪಾಕಿಸ್ತಾನದ ಪತ್ರಕರ್ತ ನುಸ್ರತ್ ಮಿರ್ಜಾ ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತಕ್ಕೆ 5 ಸಲ ಆಗಮಿಸಿ ಬೆಂಗಳೂರು ಸೇರಿದಂತೆ 7 ನಗರಗಳಲ್ಲಿ ಪತ್ತೇದಾರಿಕೆ ನಡೆಸಿದ್ದರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಹಾಗೂ ಅಂದಿನ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿ ಸ್ಪಷ್ಟನೆ ನೀಡುವಂತೆ ಆಗ್ರಹಿಸಿತ್ತು.
ಅನ್ಸಾರಿ ಅವರ ಆಹ್ವಾನದ ಮೇರೆಗೆ ಒಮ್ಮೆ ಸೇರಿದಂತೆ 5 ಸಲ ಭಾರತಕ್ಕೆ ಅನ್ಸಾರಿ ಪ್ರವಾಸಿಗರ ನೆಪದಲ್ಲಿ ಭಾರತ ಪ್ರವಾಸ ಮಾಡಿ ಗೂಢಚಾರಿಕೆ ನಡೆಸಿದ್ದರು ಎಂದು ಮಂಗಳವಾರ ಗೊತ್ತಾಗಿತ್ತು. ಖುದ್ದು ಮಿರ್ಜಾ ಅವರೇ ಇದನ್ನು ಹೇಳಿಕೊಂಡಿದ್ದರು.
ಈ ಬಗ್ಗೆ ಮಾತನಾಡಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ‘ಸೋನಿಯಾ ಗಾಂಧಿ, ರಾಹುಲ್, ಹಮೀದ್ ಅನ್ಸಾರಿ ಅವರೇ. ದೇಶದ ಜನರು ನಿಮಗೆಲ್ಲ ಗೌರವ ನೀಡುತ್ತಿದ್ದಾರೆ. ಆದರೆ ನೀವು ದ್ರೋಹ ಮಾಡುತ್ತಿದ್ದೀರಿ. ಇದು ದೇಶದ್ರೋಹವಲ್ಲವೇ. ಮೌನ ವಹಿಸುವುದು ಮಹಾಪಾಪ. ನೀವು ಮೂರೂ ಜನ ಈ ಬಗ್ಗೆ ಸ್ಪಷ್ಟನೆ ನೀಡಬೇಕು’ ಎಂದು ಆಗ್ರಹಿಸಿದ್ದರು.
ಅಲ್ಲಗಳೆದಿದ್ದ ಅನ್ಸಾರಿ: ವಿಚಾರ ಬಹಿರಂಗವಾಗುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿದ್ದ, ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಪತ್ರಕರ್ತ ನುಸ್ರತ್ ಮಿರ್ಜಾರನ್ನು ಸ್ವಾಗತಿಸಿಲ್ಲ ಎಂದು ಹೇಳಿದ್ದರು. ಅವರನ್ನು ಸ್ವಾಗತಿಸುವುದಾಗಲೀ ಅಥವಾ ಆಹ್ವಾನ ಮಾಡಿರುವುದಾಗಲೀ ಶುದ್ಧ ಸುಳ್ಳು ಎಂದು ಹಮೀದ್ ಅನ್ಸಾರಿ ಆರೋಪವನ್ನು ಅಲ್ಲಗಳೆದಿದ್ದರು.
"ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಸರ್ಕಾರದ ಸಲಹೆಗಳೊಂದಿಗೆ ವಿದೇಶಾಂಗ ಸಚಿವಾಲಯ ಉಪ ರಾಷ್ಟ್ರಪತಿ ಆಹ್ವಾನಿಸಬೇಕಾದ ಗೌರವಾನ್ವಿತರ ಪಟ್ಟಿಯನ್ನು ನೀಡಲಾಗುತ್ತದೆ. ನನಗೆ ನುಸ್ರತ್ ಮಿರ್ಜಾ ಅವರ ಆಹ್ವಾನವೂ ಬಂದಿಲ್ಲ, ನಾನು ಅದನ್ನು ಎಂದಿಗೂ ಪಡೆದೂ ಇಲ್ಲ," ಎಂದು ಹಮೀದ್ ಅನ್ಸಾರಿ ಅವರ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದ್ದರು.
ಹಮೀದ್ ಅನ್ಸಾರಿ ಅವರು ಭಾರತದ ಇರಾನ್ ರಾಯಭಾರಿಯಾಗಿದ್ದಾಗ ದೇಶದ ಭದ್ರತಾ ಹಿತಾಸಕ್ತಿಗಳನ್ನು ಬಿಟ್ಟುಕೊಟ್ಟಿದ್ದಾರೆ ಎಂಬ ಬಿಜೆಪಿ ಆರೋಪವನ್ನು ಹಮೀದ್ ಅನ್ಸಾರಿ ಅಲ್ಲಗಳೆದಿದ್ದರು. ರಾಯಭಾರಿಯಾಗಿ ಸೇವೆ ಸಲ್ಲಿಸುವಾಗ ಅಂದಿನ ಸರ್ಕಾರಕ್ಕೆ ಮಾಹಿತಿ ಇರದ ಯಾವುದೇ ಕೆಲವನ್ನೂ ಮಾಡಿಲ್ಲ ಎಂದು ಹೇಳಿಕೊಂಡಿದ್ದರು.