ಗ್ಯಾನವಾಪಿ ಮಸೀದಿಯನ್ನು ದೇವಾಲಯದ ಮೇಲೆ ನಿರ್ಮಾಣ ಮಾಡಲಾಗಿದೆಯೇ ಎಂಬುದನ್ನು ಪತ್ತೆ ಹಚ್ಚಲು ಅಲಹಾಬಾದ್ ಹೈಕೋರ್ಟ್ ಅನುಮತಿ ನೀಡಿದೆ. ಸಮೀಕ್ಷೆಗೆ ತಡೆ ಕೋರಿ ಮುಸ್ಲಿಂ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.
ಅಲಹಾಬಾದ್(ಆ.03) ಗ್ಯಾನವಾಪಿ ಮಸೀದಿಯಲ್ಲಿ ಹಿಂದೂಗಳ ವಾದಕ್ಕೆ ಆರಂಭಿಕ ಹಂತದ ಮುನ್ನಡೆ ಸಿಕ್ಕಿದೆ. ಗ್ಯಾನವಾಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಇಲಾಖೆ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಅನುಮತಿ ನೀಡಿದೆ. ಇದೇ ವೇಳೆ ಸರ್ವೆಗೆ ತಡೆ ಕೋರಿ ಮಸೀದಿ ಮುಸ್ಲಿಂ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.ಕಾಶಿ ವಿಶ್ವನಾಥ ಮಂದಿರದ ಬಳಿ ಇರುವ ಗ್ಯಾನವಾಪಿ ಮಸೀದಿಯನ್ನು ದೇವಾಲಯದ ಮೇಲೆ ನಿರ್ಮಾಣ ಮಾಡಲಾಗಿದೆಯೇ ಎಂಬುದನ್ನು ಪತ್ತೆ ಹಚ್ಚಲು ಭಾರತೀಯ ಪುರಾತತ್ವ ಇಲಾಖೆ ನಡೆಸುತ್ತಿದ್ದ ಸಮೀಕ್ಷೆಗೆ ಆ.3ರವರೆಗೆ ಅಲಹಾಬಾದ್ ಹೈಕೋರ್ಚ್ ತಡೆ ನೀಡಿತ್ತು. ಇದೇ ವೇಳೆ ಸಮೀಕ್ಷೆ ಮಾಡಬೇಕೋ ಬೇಡವೋ ಎಂಬ ಕುರಿತ ತೀರ್ಪನ್ನು ಆ.3ರವರೆಗೆ ಕಾಯ್ದಿರಿಸಿತ್ತು. ಇದೀಗ ತೀರ್ಪು ಪ್ರಕಟಿಸಿದ ಹೈಕೋರ್ಟ್, ಸರ್ವೆಗೆ ಅನುಮತಿ ನೀಡಿದೆ. ಈ ಕುರಿತು ವಾರಣಾಸಿ ಜಿಲ್ಲಾ ಕೋರ್ಟ್ ನೀಡಿದ್ದ ಅದೇಶವನ್ನೇ ಹೈಕೋರ್ಟ್ ಎತ್ತಿ ಹಿಡಿದಿದೆ.
ವಾರಣಾಸಿ ಕೋರ್ಟ್ ನೀಡಿದ್ದ ಸಮೀಕ್ಷೆ ಆದೇಶವನ್ನು ಪ್ರಶ್ನಿಸಿ ಮಸೀದಿ ಪರ ಮುಸ್ಲಿಂ ಸಮಿತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಜು.26ರವರೆಗೆ ಸುಪ್ರೀಂಕೋರ್ಚ್ ನೀಡಿದ್ದ ತಡೆಯನ್ನು ಒಂದು ದಿನ ಹೆಚ್ಚಳ ಮಾಡಿದ್ದ ಹೈಕೋರ್ಚ್ ಹೆಚ್ಚಿನ ವಿವರ ಸಲ್ಲಿಸುವಂತೆ ಎಎಸ್‌ಐಗೆ ಸೂಚಿಸಿತ್ತು. ಜುಲೈ 27 ರಂದು ಮತ್ತೆ ವಿಚಾರಣೆ ನಡೆಸಿದ ಕೋರ್ಚ್ ಯಥಾಸ್ಥಿತಿಯನ್ನು ಆ.3ವರೆಗೆ ಮುಂದುವರೆಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.ಜುಲೈ 27 ವಿಚಾರಣೆಯ ಸಮಯದಲ್ಲಿ ಅಂಜುಮಾನ್ ಇಂತೆಜಾಮಿಯಾ ಮಸೀದಿ ಹಾಗೂ ಹಿಂದೂ ಪರವಾದ ವಾದಗಳನ್ನು ಆಲಿಸಿತು.
ಮಸೀದಿಯೊಳಗೆ ತ್ರಿಶೂಲ ಹೇಗೆ? ಯೋಗಿ ಆದಿತ್ಯನಾಥ್ ಹೇಳಿಕೆಯಿಂದ ಜ್ಞಾನವ್ಯಾಪಿಗೆ ಹೊಸ ತಿರುವು!
ಮುಸ್ಲಿಮ್ ಸಮಿತಿ ಪರವಾಗಿ ವಾದಿಸಿದ ವಕೀಲರು, ಪ್ರಮುಖವಾಗಿ ಗ್ಯಾನವಾಪಿ ಮಸೀದಿ ಸಮೀಕ್ಷೆ ಹೆಸರಲ್ಲಿ ಮೂಲ ಸ್ವರೂಪಕ್ಕೆ ಧಕ್ಕೆ ತರಲಾಗುತ್ತದೆ ಎಂದು ವಾದಿಸಿದ್ದರು. ಇಲ್ಲಿ ಉತ್ಕನನ ನಡೆಸಲಾಗುತ್ತದೆ. ಇದರಿಂದ ಮಸೀದಿ ಮೂಲಸ್ವರೂಪಕ್ಕೆ ಧಕ್ಕೆಯಾಗಲಿದೆ. ಮಸೀದಿಯಲ್ಲಿ ಪೋಟೋಗ್ರಫಿ, ವಿಡಿಯೋಗ್ರಫಿಗೆ ಆಕ್ಷೇಪವಿಲ್ಲ. ಸಮೀಕ್ಷೆ ಹೆಸರಲ್ಲಿ ಮಸೀದಿ ಗೋಡೆಯೊಂದನ್ನು ಈಗಾಗಲೇ ಕೆಡವಲಾಗಿದೆ. ಹೀಗಾಗಿ ಸಮೀಕ್ಷೆಗೆ ತಕ್ಷಣವೇ ತಡೆ ನೀಡಬೇಕು ಎಂದು ಮುಸ್ಲಿಂ ಸಮಿತಿ ಪರ ವಕೀಲರು ವಾದ ಮಂಡಿಸಿದ್ದರು.
ಇತ್ತ ಹಿಂದೂ ಪರ ವಾದ ಮಂಡಿಸಿದ ವಕೀಲರು, ಕೆಲ ಆರೋಪಗಳನ್ನು ತಳ್ಳಿ ಹಾಕಿದ್ದರು. ಮಸೀದಿ ಗೋಡೆ ಕೆಡವಲಾಗಿದೆ ಎಂಬ ಆರೋಪ ಸುಳ್ಳು, ಒಂದು ಇಟ್ಟಿಗೆಯನ್ನೂ ತೆಗೆದಿಲ್ಲ. ಇಲ್ಲಿ ಯಾವುದೇ ಉತ್ಕನನ ನಡೆಯುತ್ತಿಲ್ಲ. ಒಂದೇ ಒಂದು ಇಟ್ಟಿಗೆಗೂ ಧಕ್ಕೆಯಾಗದಂತೆ ಪುತಾತತ್ವ ಇಲಾಖೆ ಸಮೀಕ್ಷೆ ನಡೆಸಲಿದೆ. ಸಮೀಕ್ಷೆಗೂ ಉತ್ಕನನಕ್ಕೂ ವ್ಯತ್ಯಾಸವಿದೆ. ಮಸೀದಿಯಲ್ಲಿ ಎಎಸ್‌ಐ ರಾಡಾರ್ ಇಮೇಜಿಂಗ್/ಫೋಟೋಗ್ರಫಿ ನಡೆಸುತ್ತಿದೆಯೇ ವಿನಾ ಯಾವುದೇ ಉತ್ಖನನ ನಡೆಸಿಲ್ಲ ಎಂದು ವಕೀಲರು ವಾದಿಸಿದ್ದರು. ಫೋಟೋಗ್ರಫಿ, ವಿಡಿಯೋಗ್ರಫಿ ಮಾಡಿದರೆ ಮಸೀದಿ ಮೂಲಸ್ವರೂಪಕ್ಕೆ ಧಕ್ಕೆ ಬರುವುದಿಲ್ಲ ಎಂದು ಹಿಂದೂ ಪರ ವಕೀಲರು ವಾದ ಮಂಡಿಸಿದ್ದರು.
ಜ್ಞಾನವಾಪಿ ಮಸೀದಿ ವಿವಾದ; ಮಣ್ಣಲ್ಲಿ ಹೂತು ಹೋಗಿದೆಯಾ ಶಿವನ ದೇವಾಲಯ..?
ವಾದ ವಿವಾದ ಆಲಿಸಿದ ಅಲಹಾಬಾದ್ ಹೈಕೋರ್ಟ್ ತೀರ್ಪು ಅಗಸ್ಟ್ 3ಕ್ಕೆ ಕಾಯ್ದಿರಿಸಿತ್ತು. ಇಂದು ಈ ಕುರಿತು ಮಹತ್ವದ ತೀರ್ಪು ಪ್ರಕಟಿಸಿದೆ. ಭಾರತೀಯ ಪುರಾತತ್ವ ಇಲಾಖೆಗೆ ಸಮೀಕ್ಷೆಗೆ ಅನುಮತಿ ನೀಡಿದೆ. ಇದೇ ವೇಳೆ ಮುಸ್ಲಿಂ ಸಮಿತಿ ಅರ್ಜಿಯನ್ನು ವಜಾಗೊಳಿಸಿದೆ. ಈ ಕುರಿತು ಹಿಂದೂಗಳ ಹೋರಾಟಕ್ಕೆ ಮೊದಲ ಹಂತದ ಗೆಲುವು ಸಿಕ್ಕಿದೆ.