
ಅಹ್ಮದಾಬಾದ್: ಗುಜರಾತ್‌ನಲ್ಲಿ ಸಾವಿರಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಮಕ್ಕಳು ಮಹಿಳೆಯರು ಸೇರಿದ್ದಾರೆ. ಅಹ್ಮದಾಬಾದ್, ಸೂರತ್‌ನಲ್ಲಿ ಶುಕ್ರವಾರ ರಾತ್ರಿ ಈ ಕಾರ್ಯಾಚರಣೆ ನಡೆದಿದೆ. ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಪೊಲೀಸ್ ಮುಖ್ಯಸ್ಥ, ವಿಕಾಸ್ ಸಹಾಯ್, ಅಕ್ರಮ ಒಳನುಸುಳುವಿಕೆ ಮತ್ತು ಸಂಬಂಧಿತ ಅಪರಾಧ ಚಟುವಟಿಕೆಗಳನ್ನು ಎದುರಿಸಲು ಈ ಕಾರ್ಯಾಚರಣೆಯು ಅತ್ಯಗತ್ಯ ಕ್ರಮವಾಗಿತ್ತು ಎಂದು ಹೇಳಿದರು. ಗುಜರಾತ್ ಪೊಲೀಸರು ಇದುವರೆಗೆ ನಡೆಸಿದ ಅತ್ಯಂತ ದೊಡ್ಡ ಕಾರ್ಯಾಚರಣೆಯಲ್ಲಿ ಇದು ಒಂದಾಗಿದೆ ಎಂದು ಗುಜರಾತ್ ಗೃಹ ಸಚಿವ ಹರ್ಷ್ ಸಂಘ್ವಿ ಹೇಳಿದರು.
ಈ ಕಾರ್ಯಾಚರಣೆಯಲ್ಲಿ ಅಹ್ಮದಾಬಾದ್‌ನಲ್ಲಿ 890 ಜನರನ್ನು ಬಂಧಿಸಲಾಗಿದೆ. ಹಾಗೆಯೇ ಅಹ್ಮದಾಬಾದ್‌ನಲ್ಲಿ 134 ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಒಂದೇ ರಾತ್ರಿಯೊಳಗೆ ಈ ಕಾರ್ಯಾಚರಣೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಬಂಧಿತರಾದ ಅಕ್ರಮ ಬಾಂಗ್ಲಾದೇಶಿಗಳು ಆತಂಕಕಾರಿ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಕಂಡು ಬಂದಿದೆ.ಹಲವಾರು ಬಾಂಗ್ಲಾದೇಶಿಯರು ಮಾದಕವಸ್ತು ಕಳ್ಳಸಾಗಣೆ, ಮಾನವ ಕಳ್ಳಸಾಗಣೆ ಮತ್ತು ಇತರ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದರು. ಇತ್ತೀಚೆಗೆ ಬಂಧಿಸಲಾದ ನಾಲ್ವರು ಬಾಂಗ್ಲಾದೇಶಿಗಳಲ್ಲಿ ಇಬ್ಬರು ಶಂಕಿತ ಅಲ್-ಖೈದಾ ಸ್ಲೀಪರ್ ಸೆಲ್ ಕಾರ್ಯಕರ್ತರಾಗಿರುವುದನ್ನು ನಾವು ನೋಡಿದ್ದೇವೆ ಎಂದು ಹೇಳಿದ ಸಹಾಯ್ ಈ ರಾಷ್ಟ್ರೀಯ ಭದ್ರತಾ ಕಾಳಜಿ ಭಾಗವಾಗಿ ಈ ಕಾರ್ಯಾಚರಣೆಗೆ ಚಾಲನೆ ನೀಡಲಾಯ್ತು ಎಂದು ಹೇಳಿದರು. ಬಂಧಿತರನ್ನು ಎಲ್ಲಾ ಕಾನೂನು ಕ್ರಮಗಳ ನಂತರ ಮತ್ತೆ ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗುವುದು.
ಇದನ್ನೂ ಓದಿ:ಭಾರತ ಯುದ್ಧ ಸಿದ್ಧತೆಗೆ ಪಾಕ್ ಕಂಗಾಲು, ಸೇನಾ ಮುಖ್ಯಸ್ಥ ನಾಪತ್ತೆ ಬೆನ್ನಲ್ಲೇ 5000 ಯೋಧರು ರಾಜೀನಾಮೆ?
ಇಷ್ಟೊಂದು ಜನ ದೇಶದೊಳಗೆ ಸೇರಲು ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ಕ್ರಿಮಿನಲ್ ಜಾಲಗಳು ಕಾರಣವಾಗಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸುವಲ್ಲಿ ಅವರು ಭಾಗಿಯಾಗಿದ್ದಾರೆ. ಈ ನಕಲಿ ದಾಖಲೆ ಸೃಷ್ಟಿಸುವವರ ಜಾಡು ಪತ್ತೆ ಮಾಡಲು ತನಿಖಾಧಿಕಾರಿಗಳು ಸಿದ್ಧತೆ ಮಾಡುತ್ತಿದ್ದಾರೆ ಎಂದು ಸಹಾಯ್ ಹೇಳಿದ್ದಾರೆ.
ಪಹಲ್ಗಾಮ್ ದಾಳಿ ಬಳಿಕ ಪಾಕ್ ಪರ ಪೋಸ್ಟ್; ವಿದ್ಯಾರ್ಥಿ, ಶಿಕ್ಷಕ ಶಾಸಕ ಸೇರಿ 19 ಜನರ ಬಂಧನ
ಗುವಾಹಟಿ: 26 ಪ್ರವಾಸಿಗರನ್ನು ಬಲಿ ಪಡೆದ ಪಹಲ್ಗಾಮ್ ದಾಳಿಯ ನಂತರ ದಾಳಿಯನ್ನು ಸಮರ್ಥಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ದೇಶ ವಿರೋಧಿ ಪೋಸ್ಟ್ ಮಾಡಿದ ಒಟ್ಟು 19 ಜನರನ್ನು ಇದುವರೆಗೆ ಬಂಧಿಸಲಾಗಿದೆ. ಬಂಧಿತರಲ್ಲಿ ಓರ್ವ ಶಾಸಕ, ಮತ್ತೊರ್ವ ಪತ್ರಕರ್ತ, ವಕೀಲ, ನಿವೃತ್ತ ಶಿಕ್ಷಕ ಕೂಡ ಸೇರಿದ್ದಾರೆ. ಈಶಾನ್ಯ ಭಾರತದ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ತ್ರಿಪುರಾದಲ್ಲಿ ಈ ಬಂಧನ ನಡೆದಿದೆ. ಬರೀ ಅಸ್ಸಾಂವೊಂದರಲ್ಲೇ ಒಟ್ಟು 14 ಜನರನ್ನು ಬಂಧಿಸಲಾಗಿದೆ. ಅಸ್ಸಾಂನಲ್ಲಿ ಮೊದಲು ಬಂಧನವಾಗಿದ್ದು, ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ನ ಶಾಸಕ ಅಮೀನುಲ್ ಇಸ್ಲಾಂ ಬಂಧಿತನಾದ ಮೊದಲ ವ್ಯಕ್ತಿ. ಈತ 2019 ರ ಪುಲ್ವಾಮಾ ದಾಳಿ ಮತ್ತು ಮಂಗಳವಾರದ ನಡೆದ ಪಹಲ್ಗಾಮ್ ದಾಳಿ ಎರಡೂ ಸರ್ಕಾರ ನಡೆಸಿದ ಪಿತೂರಿ ಎಂದು ಆರೋಪಿಸಿದ್ದಾನೆ. ಇದೇ ಕಾರಣಕ್ಕೆ ಗುರುವಾರ ಬಂಧಿಸಲಾಗಿದ್ದು, ಶುಕ್ರವಾರ 4 ದಿನಗಳ ಪೊಲೀಸ್ ಕಸ್ಟಡಿಗೆ ವಸಹಿಸಲಾಗಿದೆ.
ಇದನ್ನೂ ಓದಿ: ಉಗ್ರರಿಂದ ತಪ್ಪಿಸಿಕೊಂಡು ಮರವೇರಿ ಪೆಹಲ್ಗಾಮ್ ದಾಳಿ ಸಂಪೂರ್ಣ ದೃಶ್ಯ ಸೆರೆ ಹಿಡಿದ ಫೋಟೋಗ್ರಾಫರ್
ಶುಕ್ರವಾರದವರೆಗೆ ಅಸ್ಸಾಂನಲ್ಲಿ ಬಂಧಿಸಲಾದ ಇತರರ ವಿವರ ಹೀಗಿದೆ. ಹೈಲಕಂಡಿಯ ಮೊಹಮ್ಮದ್ ಜಬೀರ್ ಹುಸೇನ್, ಸಿಲ್ಚಾರ್‌ನ ಮೊಹಮ್ಮದ್ ಎಕೆ ಬಹಾವುದ್ದೀನ್ ಮತ್ತು ಮೊಹಮ್ಮದ್ ಜಾವೇದ್ ಮಜುಂದಾರ್, ಮೋರಿಗಾಂವ್‌ನ ಮೊಹಮ್ಮದ್ ಮಹಾಹರ್ ಮಿಯಾ ಮತ್ತು ಶಿವಸಾಗರ್‌ನ ಮೊಹಮ್ಮದ್ ಸಾಹಿಲ್ ಅಲಿ ಹೀಗೆ ಸೋಶಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿ ಬಂಧಿತರಾದವರು. ಹಾಗೆಯೇ ಕರೀಂಗಂಜ್‌ನ ಎಂಡಿ ಮುಸ್ತಾ ಅಹ್ಮದ್ ಅಲಿಯಾಸ್ ಸಹೇಲ್ ಎಂಬಾತ ಫೇಸ್‌ಬುಕ್‌ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಪೋಸ್ಟ್ ಮಾಡಿದ ನಂಥರ ಆತನನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಜಬೀರ್ ಹುಸೇನ್ ಒಬ್ಬ ಪತ್ರಕರ್ತನಾಗಿದ್ದರೆ, ಬಹಾವುದ್ದೀನ್ ಸಿಲ್ಚಾರ್‌ನ ಅಸ್ಸಾಂ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನ ವಿದ್ಯಾರ್ಥಿಯಾಗಿದ್ದಾನೆ. ಹಾಗೆಯೇ ಎಂಡಿ ಜಾವೇದ್ ಮಜುಂದಾರ್ ವಕೀಲಿಕೆ ವೃತ್ತಿ ಮಾಡುತ್ತಿದ್ದಾನೆ.
ಹಾಗೇಯೇ ಶನಿವಾರವೂ ಅಸ್ಸಾಂ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ. ವಿದ್ಯಾರ್ಥಿ ಸಂಘಟನೆಯಾದ ಸತ್ರ ಮುಕ್ತಿ ಸಂಗ್ರಾಮ್ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಬಿಸ್ವಾನಾಥ್‌ದ ನಿವಾಸಿ ಅನಿಲ್ ಬನಿಯಾ ಹಾಗೂ 25 ವರ್ಷದ ಮೊಹಮ್ಮದ್ ಜಾರೀಪ್ ಅಲಿ ಎಂಬಾತನನ್ನು ಬಂಧಿಸಿದ್ದಾರೆ. ಇವರ ಜೊತೆ ಗೆಹೈಲಕಂಡಿಯಲ್ಲಿ ಸುಮೋನ್ ಮಜುಂದಾರ್ ಅಲಿಯಾಸ್ ಬುಲ್ಬುಲ್ ಅಲೋಮ್ ಮಜುಂದಾರ್, ನಾಗಾಂವ್‌ನಲ್ಲಿ ಮಶೂದ್ ಅಜರ್, ಹಾಗೂ ಗುವಾಹಟಿಯ ಹಜೋದಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ದೇಶ ವಿರೋಧಿ ಪೋಸ್ಟ್ ಮಾಡಿದ ಕಾರಣಕ್ಕೆ ಈ ಬಂಧನವಾಗಿದೆ. ಹಾಗೆಯೇ ಕಚಾರ್ ಜಿಲ್ಲೆಯ ಪೊಲೀಸರು ಪಾಕಿಸ್ತಾನ ಪರ ಪೋಸ್ಟ್ ಮಾಡಿದ ಕಾರಣಕ್ಕೆ ಇಬ್ಬರನ್ನು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ