ದೇಶದ ಆರ್ಥಿಕತೆ ‘ದೇವರು ತಂದಿತ್ತ ಅಸಾಮಾನ್ಯ ಸಂಕಷ್ಟ’ ಎದುರಿಸುತ್ತಿದೆ. ಅದನ್ನು ಎದುರಿಸಲು ರಾಜ್ಯ ಸರ್ಕಾರಗಳಿಗೆ ಎರಡು ಆಯ್ಕೆ ನೀಡುತ್ತೇವೆ. ಏಳು ದಿನಗಳ ಒಳಗೆ ಯಾವುದನ್ನು ಆಯ್ದುಕೊಳ್ಳುತ್ತೀರಿ ಎಂಬುದನ್ನು ತಿಳಿಸಬೇಕು ಎಂದು ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಸೂಚಿಸಿದರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನಷ್ಟವನ್ನು ತುಂಬಿಕೊಳ್ಳಲು ಕೇಂದ್ರ ಸರ್ಕಾರ ಈ ಬಾರಿ ರಾಜ್ಯ ಸರ್ಕಾರಗಳ ಎದುರು ಎರಡು ಹೊಸ ದಾರಿಗಳನ್ನು ತೆರೆದಿಟ್ಟಿದೆ. ಅಂದರೆ, ಕಳೆದ ಮೂರು ವರ್ಷಗಳಿಂದ ತುಂಬಿಕೊಡುತ್ತಿದ್ದಂತೆ ಈ ಬಾರಿ ಸಂಪೂರ್ಣ ನಷ್ಟವನ್ನು ತಾನೇ ತುಂಬಿಕೊಡಲು ಸಾಧ್ಯವಿಲ್ಲ, ನೀವೇ ನಷ್ಟದಿಂದ ಹೊರಬರುವ ದಾರಿ ಕಂಡುಕೊಳ್ಳಿ ಎಂದು ಪರೋಕ್ಷವಾಗಿ ಹೇಳಿದೆ.
ಗುರುವಾರ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಸತತ ಐದು ತಾಸುಗಳ ಕಾಲ ರಾಜ್ಯ ಸರ್ಕಾರಗಳ ಪ್ರತಿನಿಧಿಗಳ ಜೊತೆಗೆ ಜಿಎಸ್‌ಟಿ ಮಂಡಳಿಯ 41ನೇ ಸಭೆ ನಡೆಯಿತು. ಅದರಲ್ಲಿ ನಿರ್ಮಲಾ, 2021ನೇ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಒಟ್ಟು 2.35 ಲಕ್ಷ ಕೋಟಿ ರು. ಜಿಎಸ್‌ಟಿ ನಷ್ಟವಾಗುತ್ತದೆ. ಇದರಲ್ಲಿ ಜಿಎಸ್‌ಟಿ ಜಾರಿಯಿಂದಾಗಿಯೇ ಆಗುವ ನಷ್ಟ97,000 ಕೋಟಿ ರು. ಮಾತ್ರ. ಇನ್ನುಳಿದ ನಷ್ಟ ಕೊರೋನಾ ವೈರಸ್‌ನಿಂದ ಉಂಟಾಗಿದೆ. ದೇಶದ ಆರ್ಥಿಕತೆ ‘ದೇವರು ತಂದಿತ್ತ ಅಸಾಮಾನ್ಯ ಸಂಕಷ್ಟ’ ಎದುರಿಸುತ್ತಿದೆ. ಅದನ್ನು ಎದುರಿಸಲು ರಾಜ್ಯ ಸರ್ಕಾರಗಳಿಗೆ ಎರಡು ಆಯ್ಕೆ ನೀಡುತ್ತೇವೆ. ಏಳು ದಿನಗಳ ಒಳಗೆ ಯಾವುದನ್ನು ಆಯ್ದುಕೊಳ್ಳುತ್ತೀರಿ ಎಂಬುದನ್ನು ತಿಳಿಸಬೇಕು ಎಂದು ಸೂಚಿಸಿದರು.
ಕೇಂದ್ರ ನೀಡಿದ ಆಯ್ಕೆಗಳು
1. 97,000 ಕೋಟಿ ರು. ನಷ್ಟತುಂಬಿಕೊಳ್ಳಲು ರಾಜ್ಯಗಳು ಭಾರತೀಯ ರಿಸವ್‌ರ್ ಬ್ಯಾಂಕ್ (ಆರ್‌ಬಿಐ)ನಿಂದ ಸಾಲ ಪಡೆಯಲು ವಿಶೇಷ ಗವಾಕ್ಷಿಯ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡಿಕೊಡಲಿದೆ. ಅದರಡಿ ಕಡಿಮೆ ಬಡ್ಡಿ ದರದಲ್ಲಿ ರಾಜ್ಯಗಳಿಗೆ ಸಾಲ ಸಿಗಲಿದೆ. ಈ ಸಾಲವನ್ನು ಜಿಎಸ್‌ಟಿ ಜಾರಿಯಾದ ಐದು ವರ್ಷಗಳ ನಂತರ, ಅಂದರೆ 2022ರ ನಂತರ, ರಾಜ್ಯಗಳು ತೀರಿಸಬೇಕು.
ಮತ್ತೆ ಎರಡು ಸಾವಿರ ರೂ ನೋಟು ಬ್ಯಾನ್?: ಸೆಂಟ್ರಲ್ ಬ್ಯಾಂಕ್ ಬಿಚ್ಚಿಟ್ಟ ಅಚ್ಚರಿಯ ಸಂಗತಿ!
2. ಜಿಎಸ್‌ಟಿಯಿಂದ ಹಾಗೂ ಕೊರೋನಾ ವೈರಸ್ ಕಾರಣದಿಂದ ಉಂಟಾದ ಒಟ್ಟು ತೆರಿಗೆ ಸಂಗ್ರಹದಲ್ಲಿನ ಕೊರತೆ 2.35 ಲಕ್ಷ ರು.ಗಳನ್ನು ರಾಜ್ಯಗಳು ಆರ್‌ಬಿಐನಿಂದ ಕಡಿಮೆ ಬಡ್ಡಿ ದರದ ಸಾಲದ ರೂಪದಲ್ಲಿ ಪಡೆದುಕೊಳ್ಳಬಹುದು. ಎಲ್ಲಾ ರಾಜ್ಯ ಸರ್ಕಾರಗಳಿಗೂ ಹೆಚ್ಚುಕಮ್ಮಿ ಏಕರೂಪದ ಬಡ್ಡಿ ದರದಡಿ ಸಾಲ ನೀಡುವಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಲಿದೆ. ಸಾಲ ಸುಲಭವಾಗಿ ಸಿಗಲಿದೆ.
2021ರಲ್ಲಿ ಒಟ್ಟು 3 ಲಕ್ಷ ಕೋಟಿ ನಷ್ಟ:
2021ರಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯಗಳಿಗೆ ಒಟ್ಟು 3 ಲಕ್ಷ ಕೋಟಿ ರು. ಕೊರತೆಯಾಗಲಿದೆ. ಅದರಲ್ಲಿ 65,000 ಕೋಟಿ ರು.ಗಳನ್ನು ಈಗಾಗಲೇ ಸಂಗ್ರಹಿಸಿರುವ ಜಿಎಸ್‌ಟಿ ಸೆಸ್ ಮೂಲಕ ರಾಜ್ಯಗಳಿಗೆ ತುಂಬಿಕೊಡಬಹುದು. ಆಗ 2.35 ಲಕ್ಷ ಕೋಟಿ ರು. ಕೊರತೆಯಾಗುತ್ತದೆ. ಇದರಲ್ಲಿ ನಿಜವಾಗಲೂ ಜಿಎಸ್‌ಟಿ ವ್ಯವಸ್ಥೆಯ ಜಾರಿಯಿಂದಲೇ ರಾಜ್ಯಗಳಿಗೆ ಉಂಟಾಗುವ ತೆರಿಗೆ ನಷ್ಟ97,000 ಕೋಟಿ ರು.ಗಳು. ಇನ್ನುಳಿದ ಆದಾಯದ ಕೊರತೆ ಕೊರೋನಾ ವೈರಸ್‌ನಿಂದ ಆಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೇಂದ್ರವೇಕೆ ನಷ್ಟ ಭರಿಸುತ್ತೆ?
2017ರಲ್ಲಿ ದೇಶಾದ್ಯಂತ ಏಕರೂಪದ ತೆರಿಗೆ ವಿಧಿಸುವ ಹೊಸ ಪದ್ಧತಿಯಾದ ಜಿಎಸ್‌ಟಿಯನ್ನು ಜಾರಿಗೊಳಿಸುವಾಗ ರಾಜ್ಯ ಸರ್ಕಾರಗಳು ಅಲ್ಲಿಯವರೆಗೆ ತಾವು ವಿಧಿಸುತ್ತಿದ್ದ ವ್ಯಾಟ್‌ನಂತಹ ತೆರಿಗೆಗಳನ್ನು ತ್ಯಾಗ ಮಾಡಲು ಒಪ್ಪಿಕೊಂಡಿದ್ದವು. ಅದರಿಂದಾಗುವ ನಷ್ಟವನ್ನು 5 ವರ್ಷಗಳ ಕಾಲ ರಾಜ್ಯಗಳಿಗೆ ಭರಿಸಿಕೊಡುವ ವಾಗ್ದಾನವನ್ನು ಕೇಂದ್ರ ಸರ್ಕಾರ ನೀಡಿತ್ತು. ಐಷಾರಾಮಿ ಹಾಗೂ ಪಾಪದ ವಸ್ತುಗಳ ಮೇಲೆ ಹೆಚ್ಚು ಸೆಸ್ ವಿಧಿಸುವ ಮೂಲಕ ಈ ನಷ್ಟವನ್ನು ಕೇಂದ್ರ ಸರ್ಕಾರ ತುಂಬಿಕೊಡುತ್ತಿತ್ತು. ಆದರೆ, ಈ ಸೆಸ್ ಸಂಗ್ರಹ ಈ ಬಾರಿ ರಾಜ್ಯಗಳ ನಷ್ಟ ತುಂಬಿಕೊಡುವಷ್ಟು ಆಗಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.
ರಾಜ್ಯಗಳು ಒಪ್ಪಿದರೆ ಬಾಕಿ ಚುಕ್ತಾ
2021ನೇ ಹಣಕಾಸು ವರ್ಷದ ಏಪ್ರಿಲ್-ಜುಲೈ ಅವಧಿಗೆ 1.50 ಲಕ್ಷ ಕೋಟಿ ರು.ಗಳ ಜಿಎಸ್‌ಟಿ ಪರಿಹಾರವನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಬೇಕಿದೆ. ರಾಜ್ಯ ಸರ್ಕಾರಗಳು 2 ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನು ಒಪ್ಪಿಕೊಂಡರೆ ಈ ಹಣವನ್ನು ಎರಡು ಕಂತುಗಳಲ್ಲಿ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಬೈಕ್‌ಗಳ ಮೇಲಿನ ಜಿಎಸ್‌ಟಿ ಇಳಿಕೆಯಿಲ್ಲ!
ಗುರುವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ದ್ವಿಚಕ್ರ ವಾಹನಗಳ ಮೇಲಿನ ಶೇ.28ರಷ್ಟುಜಿಎಸ್‌ಟಿಯನ್ನು ಕೇಂದ್ರ ಸರ್ಕಾರ ಇಳಿಸಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ ದ್ವಿಚಕ್ರ ವಾಹನಗಳ ಬೆಲೆ ಇಳಿಕೆಯಾಗಲಿದೆ ಎಂದು ಕಾಯುತ್ತಿದ್ದವರಿಗೆ ನಿರಾಸೆಯಾಗಿದೆ. ಸಭೆಯಲ್ಲಿ ಯಾವುದೇ ಸರಕು ಅಥವಾ ವಸ್ತುಗಳ ಮೇಲಿನ ತೆರಿಗೆ ಇಳಿಸುವ ಬಗ್ಗೆ ಚರ್ಚೆ ನಡೆಯಲಿಲ್ಲ. ಹೀಗಾಗಿ, ಕೆಲ ದಿನಗಳ ಹಿಂದಷ್ಟೇ ಸಮಾರಂಭವೊಂದರಲ್ಲಿ ‘ದ್ವಿಚಕ್ರ ವಾಹನಗಳು ಐಷಾರಾಮಿ ವಸ್ತುಗಳೂ ಅಲ್ಲ, ಪಾಪದ ವಸ್ತುಗಳೂ ಅಲ್ಲ. ಹೀಗಾಗಿ ಅವುಗಳ ತೆರಿಗೆ ಪರಿಷ್ಕರಿಸುವುದು ಯೋಗ್ಯವಾಗಿದೆ’ ಎನ್ನುವ ಮೂಲಕ ತೆರಿಗೆ ಇಳಿಸುವ ಸುಳಿವು ನೀಡಿದ್ದ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆ ಯಾವುದೇ ಫಲ ನೀಡಲಿಲ್ಲ.