
ಛಿಂದ್ವಾಡ (ಮ.ಪ್ರ): ಕೆಮ್ಮು ನಿವಾರಕ ಕೋಲ್ಡ್ರಿಫ್ ಸಿರಪ್ ಸೇವಿಸಿದ್ದರಿಂದ 14 ಮಕ್ಕಳು ಮೃತಪಟ್ಟಿರುವ ಪ್ರಕರಣದ ತನಿಖೆ ನಡೆಸಲು ಮಧ್ಯಪ್ರದೇಶ ಪೊಲೀಸರು ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿದ್ದಾರೆ. ಅತ್ತ ಇಬ್ಬರು ಔಷಧ ನಿರೀಕ್ಷಕರು ಹಾಗೂ ಆಹಾರ ಮತ್ತು ಔಷಧಿ ಆಡಳಿತದ ಉಪ ನಿರ್ದೇಶಕರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಜತೆಗೆ, ರಾಜ್ಯ ಔಷಧ ನಿಯಂತ್ರಕ ದಿನೇಶ್ ಮೌರ್ಯ ಅವರನ್ನು ವರ್ಗಾಯಿಸಲಾಗಿದೆ.
ಪರಸಿಯಾದ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಜಿತೇಂದ್ರ ಸಿಂಗ್ ಜಾಟ್ ನೇತೃತ್ವದ 12 ಸದಸ್ಯರ ತಂಡ, ತಮಿಳುನಾಡಿನಲ್ಲಿರುವ ಸಿರಪ್ ತಯಾರಕ ಕಂಪನಿಗೆ ತೆರಳಿ ತನಿಖೆ ನಡೆಸಲಿದೆ. ಇತ್ತ ಸಿರಪ್‌ನಿಂದಾಗಿ ಸಾವನ್ನಪ್ಪಿದ ಕೊನೆಯ ಬಾಲಕನ ದೇಹವನ್ನು, ಆತನ ಪರಿವಾರದ ಆಗ್ರಹದಂತೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುವುದು. ರಾಜ್ಯದಲ್ಲಿ ಕೊಲ್ಡ್ರಿಫ್ ಬಳಕೆ ನಿಷೇಧಿಸಿ, ಮೃತರಿಗೆ ಸಿರಪ್ ನೀಡಿದ್ದ ವೈದ್ಯ ಪ್ರವೀಣ್ ಸೋನಿಯ ಬಂಧನದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.
ವೈದ್ಯರ ಸಲಹೆ ಇಲ್ಲದೆ ಪುಟ್ಟ ಮಕ್ಕಳಿಗೆ ಔಷಧ : ಕೇರಳ ನಿಷೇಧ
ತಿರುವನಂತಪುರ: ವೈದ್ಯರ ಸಲಹೆಯಿಲ್ಲದೆ 12 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಔಷಧಗಳನ್ನು ಕೊಡುವಂತಿಲ್ಲ ಎಂದು ಕೇರಳ ಆರೋಗ್ಯ ಸಚಿವಾಲಯ ಸೋಮವಾರ ಆದೇಶಿಸಿದೆ.ಕೆಮ್ಮಿನ ಸಿರಪ್ ಬಳಕೆಯಿಂದ ಮಕ್ಕಳ ಸಾವಿನ ಬಗೆಗಿನ ಕಳವಳ ಹಿನ್ನೆಲೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಇಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
ಈ ಸಂಬಂಧ ಮಕ್ಕಳಿಗೆ ಕೆಮ್ಮಿನ ಸಿರಪ್ ಬಳಕೆ ಬಗ್ಗೆ ಅಧ್ಯಯನಕ್ಕೆ ರಾಜ್ಯ ಸರ್ಕಾರ 3 ತಜ್ಞರ ಸಮಿತಿಯೊಂದನ್ನು ರಚಿಸಿದ್ದು ಶೀಘ್ರ ವರದಿ ಸಲ್ಲಿಸಲು ಸೂಚಿಸಿದೆ. ಈ ಸಮಿತಿ ವರದಿ ಮಕ್ಕಳ ಕೆಮ್ಮಿನ ಸಿರಪ್ ಬಳಕೆ ಬಗ್ಗೆ ಹೊಸ ಮಾರ್ಗಸೂಚಿ ರಚಿಸಲು ಸಹಾಯಕವಾಗಲಿದೆ ಎಂದು ಸಚಿವೆ ವೀಣಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕೋಲ್ಡ್ರಿಫ್ ಸಿರಪ್‌ನಿಂದ 16 ಮಕ್ಕಳು ಮೃತಪಟ್ಟು ವಿವಾದವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ