ನಾಗರ ಪಂಚಮಿಯ ಮರುದಿನವೇ ಸರ್ಪ ಸೇಡಿಗೆ ಬಲಿಯಾದ ಸಹೋದರರು!

By Santosh NaikFirst Published Aug 4, 2022, 9:09 PM IST
Highlights

ಹಾವು ಕಚ್ಚಿ ಸಾವು ಕಂಡ ಅಣ್ಣನ ಅಂತ್ಯಸಂಸ್ಕಾರಕ್ಕೆ ಹೋಗಿದ್ದ ತಮ್ಮನೂ ಕೂಡ ಹಾವು ಕಡಿತದಿಂದ ಬಲಿಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇದರ ಬೆನ್ನಲ್ಲಿಯೇ ಸ್ಥಳೀಯರು ಕುಟುಂಬಕ್ಕೆ ಸರ್ಪದೋಷವಿದ್ದ ಪರಿಣಾಮದಿಂದಾಗಿಯೇ ಹೀಗಾಗಿದೆ ಎಂದು ಹೇಳುತ್ತಿದ್ದಾರೆ.

ಲಕ್ನೋ (ಆ.4): ಹಾವು ಕಚ್ಚಿ ಸಾವು ಕಂಡ ಅಣ್ಣನ ಅಂತ್ಯಸಂಸ್ಕಾರಕ್ಕೆ ಬಂದಿದ್ದ ತಮ್ಮನಿಗೂ ಹಾವು ಕಚ್ಚಿದ್ದರಿಂದ ಆತನೂ ಕೂಡ ಸಾವು ಕಂಡ ದಾರುಣ ಘಟನೆ ಉತ್ತರ ಪ್ರದೇಶದ ಭವಾನಿಪುರದಲ್ಲಿ ನಡೆದಿದೆ. ಗುರುವಾರ ಮನೆಯಲ್ಲಿ ನಿದ್ರೆ ಮಾಡುತ್ತಿದ್ದ ವೇಳೆ ತಮ್ಮನಿಗೂ ಹಾವು ಕಚ್ಚಿದ್ದು ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾನೆ. ಇಲ್ಲಿನ ಭವಾನಿಪುರ ಗ್ರಾಮದಲ್ಲಿ ಬುಧವಾರ 38 ವರ್ಷದ ಅರವಿಂದ್‌ ಮಿಶ್ರಾಗೆ ಹಾವು ಕಚ್ಚಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆತ ಅಸುನೀಗಿದ್ದ. ಗುರುವಾರ ಅಣ್ಣನ ಶವಸಂಸ್ಕಾರಕ್ಕೆ ಬಂದಿದ್ದ 22 ವರ್ಷದ ಗೋವಿಂದ್‌ ಮಿಶ್ರಾ, ಅಂತಿಮ ವಿಧಿವಿಧಾನಗಳನ್ನು ಪೂರೈಸಿಕೊಂಡು, ಮನೆಗೆ ಬಂದು ನಿದ್ರೆ ಮಾಡಿದ್ದರು. ಈ ವೇಳೆ ಅವರಿಗೂ ಕೂಡ ಹಾವು ಕಚ್ಚಿದ್ದು, ಆತನೂ ಸಾವು ಕಂಡಿದ್ದಾನೆ ಎಂದು ಸರ್ಕಲ್‌ ಇನ್ಸ್‌ಪೆಕ್ಟರ್‌ ರಾಧಾ ರಮಣ್‌ ಸಿಂಗ್‌ ಹೇಳಿದ್ದಾರೆ. ತಮ್ಮ ಗುರುವಾರ ಸಾವು ಕಂಡಿದ್ದಾನೆ. ಗೋವಿಂದ್‌ ಮಿಶ್ರಾ ನಿದ್ರೆ ಮಾಡುತ್ತಿದ್ದಾಗ ಆತನಿಗೆ ಹಾವು ಕಚ್ಚಿದೆ. ಇವರ ಸಂಬಂಧಿಕರಾದ 22 ವರ್ಷದ ಚಂದ್ರಶೇಖರ್‌ ಪಾಂಡೆ, ಆತನೂ ಕೂಡ ಈ ಮನೆಯಲ್ಲಿಯೇ ವಾಸವಿದ್ದ ಅವನಿಗೂ ಹಾವು ಕಚ್ಚಿದೆ ಎಂದು ರಮಣ್‌ ಸಿಂಗ್‌ ಹೇಳಿದ್ದಾರೆ. ಚಂದ್ರಶೇಖರ್‌ ಪಾಂಡೆಯನ್ನು ಸದ್ಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಆದರೆ, ಈತನ ಸ್ಥಿತಿಯೂ ಈಗ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೋವಿಂದ ಮಿಶ್ರಾ ಮತ್ತು ಚಂದ್ರಶೇಖರ್ ಪಾಂಡೆ ಇಬ್ಬರೂ ಅರವಿಂದ ಮಿಶ್ರಾ ಅವರ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಲುಧಿಯಾನದಿಂದ ಗ್ರಾಮಕ್ಕೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅದರಲ್ಲೂ ದೇಶಾದ್ಯಂತ ನಾಗರ ಪಂಚಮಿ ನಡೆದ ಮರು ದಿನವೇ ಒಂದೇ ಕುಟುಂಬದ ಸಹೋದರರು ಬಲಿಯಾಗಿರುವುದಕ್ಕೆ ಸರ್ಪದೋಷವೇ ಕಾರಣವಿರಬಹುದು ಎಂದು ಊರಿವರು ಹೇಳುತ್ತಿದ್ದಾರೆ.

ಶ್ರೀಕೃಷ್ಣನು ಯಮುನಾ ನದಿಯಲ್ಲಿದ್ದ ಕಾಳಿಂಗ ನಾಗನ ಮರ್ದನ ಮಾಡಿದ ದಿನವೇ ನಾಗರ ಪಂಚಮಿ

ಈ ನಡುವೆ ಹಿರಿಯ ವೈದ್ಯಕೀಯ ಮತ್ತು ಆಡಳಿತ ಅಧಿಕಾರಿಗಳು ಗುರುವಾರ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಸ್ಥಳೀಯ ಶಾಸಕ ಕೈಲಾಶ್ ನಾಥ್ ಶುಕ್ಲಾ ಅವರು ದುಃಖತಪ್ತ ಕುಟುಂಬವನ್ನು ಭೇಟಿಯಾಗಿ ಅವರಿಗೆ ಸಹಾಯ ಮಾಡುವ ಭರವಸೆ ನೀಡಿದರು. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಶುಕ್ಲಾ ಸ್ಥಳೀಯ ಅಧಿಕಾರಿಗಳನ್ನು ಕೇಳಿದರು. 

ರೈಲ್ವೆ ಕಚೇರಿಯ ಮೇಜಿನ ಮೇಲೇರಿ ಬಾಸ್‌ನಂತೆ ಹೆಡೆಬಿಚ್ಚಿ ಕುಳಿತ ನಾಗರಹಾವು

ಹಾವು ಕಚ್ಚಿ ಸಾವು, ಬದುಕಿಸಲು ಹಾವು ಮೋಡಿಗಾರರನ್ನು ಕರೆದ ಕುಟುಂಬ: ಇನ್ನು ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ನಡೆದ  ದಾರುಣ ಘಟನೆಯೊಂದರಲ್ಲಿ, ಹಾವು ಕಡಿತದಿಂದ ಸೋದರಳಿಯ ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ ವ್ಯಕ್ತಿಯೊಬ್ಬರು ಹಾವು ಕಡಿತದಿಂದ ಸಾವು ಕಂಡಿದ್ದಾರೆ. ಆದರೆ, ಕುಟುಂಬವು ಈ ವ್ಯಕ್ತಿ ಸಾವು ಕಂಡಿದ್ದನ್ನು ಒಪ್ಪಿಕೊಳ್ಳಲು ನಿರಾಕರಿಸಿತ್ತು. ಅವನನ್ನು ಬದುಕಿಸಲು ಹಾವು ಮೋಡಿ ಮಾಡುವವರನ್ನು ಕರೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಮೃತರನ್ನು ತಾಲಿಬ್ ಎಂದು ಗುರುತಿಸಲಾಗಿದ್ದು. ಮೈನ್‌ಪುರಿಯ ಜತ್ವಾನ್ ಮೊಹಲ್ಲಾದಲ್ಲಿ ವಾಸ ಮಾಡುತ್ತಿದ್ದ. ಕಳೆದ ಶುಕ್ರವಾರ ರಾತ್ರಿ ಈತ ಹಾವು ಕಡಿತಕ್ಕೆ ಬಲಿಯಾಗಿದ್ದಾನೆ. ಕೂಡಲೇ ಆತನನ್ನು ಸೈಫಾಯಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ,ಆಸ್ಪತ್ರೆಗೆ ಬರುವ ವೇಳೆಗೆ ಆತ ಮೃತಪಟ್ಟಿದ್ದ ಎಂದು ವೈದ್ಯರು ಈ ವೇಳೆ ತಿಳಿಸಿದ್ದರು. ಆದರೆ, ಕುಟುಂಬದವರು ಮಾತ್ರ ಇದನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಮಾಟಗಾರರು ಹಾಗೂ ಹಾವು ಮೋಡಿಗಾರರನ್ನು ಕರೆದು ವ್ಯಕ್ತಿಯನ್ನು ಬದುಕಿಸುವ ಪ್ರಯತ್ನ ಮಾಡಲಾಗಿತ್ತು. ಹಾಗಿದ್ದರೂ. ಅಂದಾಜು 30 ಗಂಟೆಗಳ ಕಾಲ ಮೋಡಿಗಾರರು ಪ್ರಯತ್ನಿಸಿದರೂ, ಆತನಿಗೆ ಜೀವ ನೀಡಲು ಸಾಧ್ಯವಾಗಲಿಲ್ಲ. ಕೊನೆಗೆ ಜುಲೈ 31ರ ಭಾನುವಾರದಂದು ಅಂತ್ಯಕ್ರಿಯೆ ಮಾಡಲಾಯಿತು. ತಾಲಿಬ್ ಪಂಜಾಬ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 10 ದಿನಗಳ ಹಿಂದೆ ಮನೆಗೆ ಬಂದಿದ್ದ ಈತನಿಗೆ ರಾತ್ರಿ ಮಲಗಿದ್ದ ವೇಳೆ ಹಾವು ಕಚ್ಚಿತ್ತು. ತಾಲಿಬ್ ಅವರ 10 ವರ್ಷದ ಸೋದರಳಿಯ ಕೂಡ ಇತ್ತೀಚೆಗೆ ಹಾವು ಕಡಿತದಿಂದ ಸಾವನ್ನಪ್ಪಿದ್ದ.
 

click me!