ದಿಲ್ಲಿ ಗೌರ್ನಮೆಂಟ್‌ ಅಂದರೆ ಇನ್ನು ‘ಲೆ| ಗವರ್ನರ್‌’!

By Kannadaprabha NewsFirst Published Apr 29, 2021, 9:15 AM IST
Highlights

ದಿಲ್ಲಿ ಗೌರ್ನಮೆಂಟ್‌ ಅಂದರೆ ಇನ್ನು ‘ಲೆ| ಗವರ್ನರ್‌’| ಕೇಜ್ರಿವಾಲ್‌ ಬದಲು ಉಪರಾಜ್ಯಪಾಲರೇ ಬಾಸ್‌| ಕೇಂದ್ರ ಸರ್ಕಾರದಿಂದ ಅಧಿಸೂಚನೆ| ಕೇಜ್ರಿ ಸರ್ಕಾರದ ನಿರ್ಣಯಕ್ಕೆ ರಾಜ್ಯಪಾಲರ ಅನುಮೋದನೆ ಕಡ್ಡಾಯ

ನವದೆಹಲಿ(ಏ.29): ‘ದಿಲ್ಲಿ ಸರ್ಕಾರ ಎಂದರೆ ಉಪರಾಜ್ಯಪಾಲರು’ ಎಂಬ ವಿವಾದಿತ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿಕೊಂಡಿದ್ದ ಕೇಂದ್ರ ಸರ್ಕಾರ, ಈಗ ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ ಚುನಾಯಿತ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬದಲು ಇನ್ನು ಮುಂದೆ ಉಪರಾಜ್ಯಪಾಲ ಅನಿಲ್‌ ಬೈಜಲ್‌ ಅವರೇ ದಿಲ್ಲಿ ಸರ್ಕಾರದ ಮುಖ್ಯಸ್ಥನ ರೀತಿ ಕೆಲಸ ಮಾಡಲಿದ್ದಾರೆ.

ಕಳೆದ ಸಂಸತ್‌ ಅಧಿವೇಶನದಲ್ಲಿ ‘ದಿಲ್ಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ಮಸೂದೆ-2021’ ಅಂಗೀಕಾರವಾಗಿತ್ತು. ಇದಕ್ಕೆ ರಾಷ್ಟ್ರಪತಿಗಳ ಅಂಕಿತ ಕೂಡ ಬಿದ್ದಿತ್ತು. ಮಂಗಳವಾರ ರಾತ್ರಿ ಕೇಂದ್ರ ಗೃಹ ಸಚಿವಾಲಯ ಈ ಕುರಿತು ಅಧಿಸೂಚನೆ ಪ್ರಕಟಿಸಿ, ತಿದ್ದುಪಡಿಯನ್ನು ಜಾರಿಗೆ ತಂದಿದೆ.

ದಿಲ್ಲಿ ಕೇಂದ್ರಾಡಳಿತ ಪ್ರದೇಶವಾಗಿದ್ದು ಪೊಲೀಸರು ಕೇಂದ್ರ ಸರ್ಕಾರದ ಅಡಿಯಲ್ಲೇ ಕಾರ್ಯನಿರ್ವಹಿಸುತ್ತಾರೆ. ಆದರೆ, ಆರೋಗ್ಯ, ಶಿಕ್ಷಣ, ಕೃಷಿ, ಅರಣ್ಯ, ಸಾರಿಗೆ- ಈ ಮೊದಲಾದ ವಿಷಯಗಳು ದಿಲ್ಲಿ ಸರ್ಕಾರದ ಅಧೀನಕ್ಕೆ ಬರುತ್ತವೆ.

ಈಗ ‘ರಾಜ್ಯಪಾಲರೇ ಆಡಳಿತದ ಮುಖ್ಯಸ್ಥರು’ ಎಂಬ ಕಾನೂನು ಜಾರಿಗೆ ಬಂದಿರುವ ಕಾರಣ, ರಾಜ್ಯ ಸರ್ಕಾರ (ಕೇಜ್ರಿವಾಲ್‌ ಸರ್ಕಾರ) ತನ್ನ ವ್ಯಾಪ್ತಿಯಲ್ಲಿ ಬರುವ ಯಾವುದೇ ವಿಷಯದ ನಿರ್ಣಯ ಕೈಗೊಳ್ಳಬೇಕಾದರೂ ಇನ್ನು ಉಪರಾಜ್ಯಪಾಲರ ಅನುಮೋದನೆ ಪಡೆಯಬೇಕಾಗುತ್ತದೆ.

ಈಗಾಗಲೇ ಕೇಜ್ರಿವಾಲ್‌ ಸರ್ಕಾರ, ಕೇಂದ್ರ ಸರ್ಕಾರದ ಈ ನಡೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದು, ‘ಎಲ್ಲ ರಾಜ್ಯಪಾಲರದ್ದೇ ಅಧಿಕಾರ ಎಂದರೆ ಚುನಾಯಿತ ಸರ್ಕಾರವೇಕೆ ಬೇಕು?’ ಎಂದಿದೆ. ಅದರಲ್ಲೂ ಕೊರೋನಾದಂಥ ಸೂಕ್ಷ್ಮ ವಿಷಯವನ್ನು ಕೇಜ್ರಿವಾಲ್‌ ಸರ್ಕಾರ ನಿಭಾಯಿಸುತ್ತಿರುವಾಗ ಇಂಥ ನಿರ್ಣಯ ಅಗತ್ಯವಿತ್ತೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.

click me!