
ನವದೆಹಲಿ(ಏ.29): ಈಗಾಗಲೇ ಹಲವಾರು ರಾಜ್ಯಗಳಲ್ಲಿ ನಿಷೇಧಕ್ಕೆ ಒಳಗಾಗಿರುವ ವಿವಾದಿತ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿಎಫ್‌ಐ) ಇಸ್ಲಾಮಿಕ್ ಸಂಘಟನೆಯನ್ನು ದೇಶಾದ್ಯಂತ ನಿಷೇಧಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದೇವೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಹೇಳಿದೆ.
ಪಿಎಫ್‌ಐ ಜತೆ ನಂಟು ಹೊಂದಿದ ಆರೋಪದಲ್ಲಿ ಉತ್ತರಪ್ರದೇಶದಲ್ಲಿ ಬಂಧಿತನಾಗಿರುವ ಕೇರಳದ ಪತ್ರಕರ್ತ ಸಿದ್ದಿಕಿ ಕಪ್ಪನ್ ಪ್ರಕರಣದ ವಿಚಾರಣೆಯಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠದ ಮುಂದೆ ಬುಧವಾರ ಈ ಮಾಹಿತಿ ನೀಡಿದ್ದಾರೆ.
ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರದ ಪರ ವಾದ ಮಂಡಿಸಿದ ತುಷಾರ್ ಮೆಹ್ತಾ, ‘ಪತ್ರಕರ್ತ ಕಪ್ಪನ್ ಪಿಎಫ್‌ಐ ಜತೆ ನಂಟು ಹೊಂದಿದ್ದಾನೆ. ಪಿಎಫ್‌ಐನ ಪದಾಧಿಕಾರಿಗಳು ನಿಷೇಧಿತ ಸಿಮಿ ಸಂಘಟನೆಯ ಜತೆ ಸಂಪರ್ಕ ಹೊಂದಿದ್ದಾರೆ’ ಎಂದು ಪೀಠದ ಗಮನಕ್ಕೆ ತಂದರು.
ಆಗ ಪೀಠವು, ‘ಪಿಎಫ್‌ಐ ಅನ್ನು ನಿಷೇಧಿಸಲಾಗಿದೆಯೇ?’ ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಮೆಹ್ತಾ, ‘ಹಲವು ರಾಜ್ಯಗಳು ಪಿಎಫ್‌ಐ ನಿಷೇಧಿಸಿವೆ. ನನ್ನ ಮಾಹಿತಿ ಪ್ರಕಾರ ಕೇಂದ್ರ ಸರ್ಕಾರ ಕೂಡ ಇದನ್ನು ನಿಷೇಧಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ’ ಎಂದರು. ಆಗ ನ್ಯಾಯಪೀಠ, ‘ಹಾಗೆಂದರೆ ಇನ್ನೂ ಈ ಸಂಘಟನೆ ನಿಷೇಧವಾಗಿಲ್ಲ ಅಂದಂತಾಯ್ತು’ ಎಂದು ಪ್ರತಿಕ್ರಿಯಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ