
ಗಾಜಿಯಾಬಾದ್ (ಫೆ.5): ಆತ್ಮಹತ್ಯೆಗೆ ಪ್ರಚೋದಿಸುವ ಕೊರಿಯನ್ ಆನ್‌ಲೈನ್ ಗೇಮ್‌ನ ಚಟಕ್ಕೆ ಬಿದ್ದಿದ್ದ ಮೂವರು ಸೋದರಿಯರು, ಅಪಾರ್ಟ್‌ಮೆಂಟ್‌ನ ಕಿಟಕಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆಯೊಂದು ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಬುಧವಾರ ನಡೆದಿದೆ. ಕೊರಿಯನ್ ಗೇಮ್‌ನ ಕೊನೆಯ ಮತ್ತು 50ನೇ ಆಟ ಆತ್ಮಹತ್ಯೆಯಾಗಿತ್ತು. ಈ ಕಾರಣಕ್ಕೇ ಮಕ್ಕಳು ಆತ್ಮಹತ್ಮೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದರ ನಡುವೆ ಈ ಮಕ್ಕಳ ತಂದೆ ಚೇತನ್‌ಗೆ ಎರಡು ಮದುವೆ ಆಗಿದ್ದು, 5 ಜನ ಮಕ್ಕಳಿದ್ದರು. ಕೊರಿಯನ್ ಗೇಮ್‌ಗೆ ಈ ಸೋದರಿಯರು ಬಲಿಯಾಗಿದ್ದಾರಾ? ಅನ್ನೋ ಕೋನದಲ್ಲಿಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ,
ಕೆಲ ವರ್ಷಗಳ ಹಿಂದೆ ಭಾರತ ಸೇರಿದಂತೆ ವಿಶ್ವಾದ್ಯಂತ ನೂರಾರು ಮಕ್ಕಳ ಜೀವ ಬಲಿ ಪಡೆದಿದ್ದ ಬ್ಲ್ಯೂವೇಲ್ ಮಾದರಿಯ ಈ ಗೇಮ್ ಮತ್ತು ಅದಕ್ಕೆ ಮಕ್ಕಳ ಬಲಿ ಇಡೀ ದೇಶವನ್ನೇ ಮತ್ತೊಮ್ಮೆ ಬೆಚ್ಚಿಬೀಳಿಸಿದೆ. ಜೊತೆಗೆ, ಇಂಥ ಗೇಮಿಂಗ್‌ಗೆ ದಾಸರಾಗಿರುವ ಮಕ್ಕಳ ಬಗ್ಗೆ ಪೋಷಕರು ಎಚ್ಚೆತ್ತುಕೊಳ್ಳುವ, ಮಕ್ಕಳ ಮೊಬೈಲ್ ಬಳಕೆ ಮೇಲೆ ನಿಗಾ ಇಡುವ ಬಗ್ಗೆ ವ್ಯಾಪಕ ಆಗ್ರಹ ಕೇಳಿಬಂದಿದೆ.
ಏನಾಯ್ತು?: ಗಾಜಿಯಾಬಾದ್‌ನ ಭಾರತ್ ಸಿಟಿ ಪ್ರದೇಶದಲ್ಲಿ ಕುಟುಂಬವೊಂದರ ನಿಶಿಕಾ (16), ಪ್ರಾಚಿ (14), ಪಾಖಿ (12) ಎಂಬ ಮೂವರು ಹೆಣ್ಣುಮಕ್ಕಳು ಬುಧವಾರ ನಸುಕಿನ 2.45ರ ವೇಳೆಗೆ ಅಪಾರ್ಟ್‌ಮೆಂಟ್‌ನ 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಆ ವೇಳೆಗಾಗಲೇ ಅವರೆಲ್ಲಾ ಮೃತಪಟ್ಟಿದ್ದರು. ಪ್ರಾಥಮಿಕ ತನಿಖೆ ವೇಳೆ, ಈ ಮೂವರೂ ಕೊರಿಯನ್ ಆಟಕ್ಕೆ ದಾಸರಾಗಿದ್ದರು.
ಮಕ್ಕಳ ಮೊಬೈಲ್ ಚಟದಿಂದ ಬೇಸತ್ತಿದ್ದ ಪೋಷಕರು, ಅತಿಯಾಗಿ ಮೊಬೈಲ್ ಬಳಸದಂತೆ ಇತ್ತೀಚೆಗೆ ನಿರ್ಬಂಧ ವಿಧಿಸಿದ್ದರು. ಇದರಿಂದ ಮೂವರು ಸಹೋದರಿಯರಿಗೆ ಕಿರಿಕಿರಿಯಾಗಿ ಅತಿಯಾಗಿ ನೊಂದುಕೊಂಡಿದ್ದರು. ಇದರಿಂದ ನೊಂದು ಮೂವರು 9ನೇ ಮಹಡಿಯಲ್ಲಿದ್ದ ಫ್ಲಾಟ್‌ನ ಬಾಲ್ಕನಿಯಿಂದ ಕೆಳಗೆ ಹಾರಿದ್ದಾರೆ ಎಂದು ಒಂದು ವರದಿ ಹೇಳಿದೆ. ಇನ್ನೊಂದು ವರದಿಯ ಪ್ರಕಾರ, ಕೊರಿಯನ್ ಗೇಮ್‌ನ ಕಡೆಯ ಮತ್ತು 50ನೇ ಆಟ ಆತ್ಮಹತ್ಯೆಯಾಗಿತ್ತು. ಹೀಗಾಗಿ ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನಲಾಗಿದೆ.
ಆದರೆ ಸಾವಿಗೆ ಆಟವೇ ಕಾರಣವೇ ಎಂಬುದರ ಬಗ್ಗೆ ಇನ್ನಷ್ಟು ತನಿಖೆ ಬಳಿಕವೇ ಖಚಿತವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ನಡುವೆ ಸಾವಿಗೂ ಮುನ್ನ ಒಬ್ಬಾಕೆ, ನಮ್ಮನ್ನು ಕ್ಷಮಿಸಿ ಅಪ್ಪ. ಈ ಪತ್ರದಲ್ಲಿ ನಾವು ಬರೆದಿರುವುದೆಲ್ಲಾ ನಿಜ. ನೀವು ನಮ್ಮನ್ನ ಕೊರಿಯಾದಿಂದ ದೂರ ಮಾಡಲಾಗದು ಎಂದು ಪತ್ರದಲ್ಲಿ ದಾಖಲಿಸಿರುವುದು ಮಕ್ಕಳ ಆನ್‌ಲೈನ್ ಆಟದ ದಾಸ್ಯದ ಕುರಿತ ಅನುಮಾನ ದೃಢಪಡಿಸಿದೆ.
ಕೋವಿಡ್ ವೇಳೆ ಮೂವರು ಮಕ್ಕಳು ಆನ್‌ಲೈನ್ ಆಟಕ್ಕೆ ದಾಸ್ಯರಾಗಿದ್ದರು. ಅದಾದ ಬಳಿಕ ಓದಿನಲ್ಲೂ ಹಿಂದೆ ಬಿದ್ದ ಕಾರಣ ಮೂವರು ಕಳೆದ ಎರಡು ವರ್ಷಗಳಿಂದ ಶಾಲೆಗೆ ಕೂಡಾ ಹೋಗುತ್ತಿರಲಿಲ್ಲ ಎನ್ನಲಾಗಿದೆ. ಜೊತೆಗೆ ಮೂವರೂ ಅತ್ಯಂತ ಆತ್ಮೀಯರಾಗಿದ್ದು, ದೈನಂದಿನ ಚಟುವಟಿಕೆಗಳು ಸೇರಿ ಯಾವುದೇ ಕೆಲಸವಿದ್ದರೂ ಒಟ್ಟಿಗೇ ಮಾಡುತ್ತಿದ್ದರು. ಬಹುತೇಕ ಸಮಯ ಕೊಠಡಿಯಲ್ಲಿ ಮೊಬೈಲ್ ಆಟವಾಡುತ್ತಾ ಕಾಲ ಕಳೆಯುತ್ತಿದ್ದರು. ಮನೆಯ ಸದಸ್ಯರು ಕೊಠಡಿಗೆ ಪ್ರವೇಶ ಮಾಡಿದರೆ ಹೊರಗೆ ತೆರಳುತ್ತಿದ್ದರು. ಎನ್ನಲಾಗಿದೆ.
ಕೊರೋನಾ ಸಮಯದಲ್ಲಿ ಮೂವರೂ ಕೊರಿಯನ್ ಲವ್ ಗೇಮ್ ಆಡಲು ಪ್ರಾರಂಭಿಸಿದ್ದರು. ಜತೆಗೆ ಕೊರಿಯಾದ ಕಾರ್ಯಕ್ರಮಗಳನ್ನೂ ಬಿಟ್ಟೂಬಿಡದೆ ನೋಡುತ್ತಿದ್ದ ಇವರು, ತಮ್ಮನ್ನು ತಾವು ಕೊರಿಯಾದ ರಾಜಕುಮಾರಿಯರು ಎಂದು ಭಾವಿಸಿದ್ದರು. ತಮಗೆ ಮನೆಯಲ್ಲಿ ಇಟ್ಟ ಹೆಸರು ಬಿಟ್ಟು ಪ್ರತ್ಯೇಕವಾಗಿ ತಾವೇ ಕೊರಿಯನ್ ಹೆಸರು ಕೂಡಾ ಇಟ್ಟುಕೊಂಡಿದ್ದರಂತೆ. ಅಲ್ಲದೆ ತಮ್ಮ ತಂದೆಗೆ ಪದೇ ಪದೇ ತಮ್ಮನ್ನು ಕೊರಿಯಾಕ್ಕೆ ಕರೆದೊಯ್ಯವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ.
ತಂದೆ ಆಕ್ರಂದನ: ‘ನನ್ನ ಮಕ್ಕಳು ಆಗಾಗ ಬಂದು ಕೊರಿಯಾಗೆ ಕರೆದುಕೊಂಡು ಹೋಗುವಂತೆ ಕೇಳುತ್ತಿದ್ದರು. ಆದರೆ ಅವರು ಕಳೆದ 2-3 ವರ್ಷಗಳಿಂದ ಆಡುತ್ತಿದ್ದ ಆಟದ ಟಾಸ್ಕ್ ಪೂರೈಸುವ ಉದ್ದೇಶ ಅವರದ್ದಾಗಿತ್ತೆಂದು ಗೊತ್ತಿರಲಿಲ್ಲ. ಮಕ್ಕಳು ಅಂತಹ ಗೇಮ್ ಆಡುತ್ತಿದ್ದರು ಎಂದು ತಿಳಿದಿದ್ದರೆ ನಾನು ಆಡಲು ಬಿಡುತ್ತಲೇ ಇರಲಿಲ್ಲ’ ಎಂದು ಮೃತ ಮಕ್ಕಳ ತಂದೆ ಚೇತನ್ ದುಃಖಿಸಿದ್ದಾರೆ. ಘಟನೆಯ ಬಗ್ಗೆ ಮಾತನಾಡುತ್ತಾ, ‘ರಾತ್ರಿ ನಾವೆಲ್ಲಾ ಮಲಗಿದ್ದಾಗ ನೀರು ಕುಡಿಯುವ ನೆಪದಲ್ಲಿ ಮಕ್ಕಳು ಎದ್ದಿದ್ದರು. ಆಗ ಅವರ ಕೈಯ್ಯಲ್ಲಿ ಮೊಬೈಲ್ ಇದ್ದದ್ದನ್ನು ನಾನು ಗಮನಿಸಿರಲಿಲ್ಲ. ಮೆಲ್ಲನೆ ಹೊರಹೋದವರು ಚಿಲಕವಿಕ್ಕಿಕೊಂಡು ಬಾಲ್ಕನಿಯಿಂದ ಕೆಳಗೆ ಹಾರಿದ್ದಾರೆ. ಆಗ ಅವರು ಕಿರುಚಿದ ಹಾಗೂ ಧೊಪ್ಪೆಂದು ಬಿದ್ದ ಸದ್ದು ಕೇಳಿಸಿ ಎಲ್ಲರೂ ಎದ್ದೆವು’ ಎಂದಿದ್ದಾರೆ.
ವ್ಯಾಪಾರಿಯಾಗಿರುವ ಚೇತನ್ ಕುಮಾರ್ ಅವರಿಗೆ ಮೊದಲ ಪತ್ನಿಯಿಂದ ಮಕ್ಕಳಾಗಿರಲಿಲ್ಲ. ಆದಕಾರಣ ನಾದಿನಿಯನ್ನೇ ಮದುವೆಯಾಗಿ ಅವರಿಂದ 3 ಮಕ್ಕಳನ್ನು ಪಡೆದಿದ್ದರು. ಇದೇ ವೇಳೆ ಮೊದಲ ಪತ್ನಿಯೂ ಇಬ್ಬರು ಮಕ್ಕಳಿಗೆ ಜನ್ಮ ನೀಡಿದರು. ಚೇತನ್ ಅವರು ಇಬ್ಬರು ಮಡದಿಯರು ಮತ್ತು ಐವರು ಮಕ್ಕಳೊಂದಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದರು. ಮೃತ ಮಕ್ಕಳಲ್ಲಿ ಒಬ್ಬಳು ಮೊದಲ ಪತ್ನಿಯ ಮಗಳಾದರೆ, ಇನ್ನಿಬ್ಬರು 2ನೇ ಹೆಂಡತಿಯ ಪುತ್ರಿಯರು.
2017ರಲ್ಲಿ ಬ್ಲ್ಯೂವೇಲ್ ಎಂಬ ರಷ್ಯಾ ಮೂಲದ ಗೇಮ್ ಕೂಡ ಜಗತ್ತಿನಾದ್ಯಂತ ಭಾರೀ ವೈರಲ್ ಆಗಿತ್ತು. ಅದರಲ್ಲೂ ಕೂಡ ದಿನಕ್ಕೊಂದು ಸವಾಲು ನೀಡುವುದು ಮತ್ತು ಅಂತಿಮವಾಗಿ ಸಾವನ್ನಪ್ಪುವ ಟಾಸ್ಕ್ ನೀಡಲಾಗುತ್ತಿತ್ತು. ಇದಕ್ಕೆ ರಷ್ಯಾ ಮೊದಲಾದ ದೇಶಗಳಲ್ಲಿ 130ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಮುಂಬೈನಲ್ಲೂ ಬಾಲಕನೊಬ್ಬ ಸಾವನ್ನಪ್ಪಿದ್ದ.
ಗಾಜಿಯಾಬಾದ್ (ಫೆ.5): ಮಕ್ಕಳ ಆತ್ಮಹತ್ಯೆಯ ಕಾರಣ ತಿಳಿಯಲು ತನಿಖೆಯನ್ನಾರಂಭಿಸಿರುವ ಪೊಲೀಸರಿಗೆ ಅವರ ಕೋಣೆಯಲ್ಲಿ ಡೈರಿಯೊಂದು ಸಿಕ್ಕಿದೆ. 8 ಪುಟಗಳ ಆ ಪುಟ್ಟ ಡೈರಿಯಲ್ಲಿ, ‘ಇದರಲ್ಲಿ ಬರೆದಿರುವುದನ್ನೆಲ್ಲಾ ಓದಿ. ಕಾರಣ ಇದೆಲ್ಲಾ ಸತ್ಯ. ಕೊರಿಯಾ ನಮ್ಮ ಜೀವ, ಅದೇ ನಮ್ಮ ಬದುಕ. ನೀವೇನೇ ಹೇಳಿದರೂ ಕೊರಿಯನ್ನರನ್ನು ನಾವು ಅತಿಯಾಗಿ ಪ್ರೀತಿಸುತ್ತೇವೆ. ಆದರೆ ನೀವು ನಮ್ಮನ್ನದರಿಂದ ದೂರವಿಡಲು ಯತ್ನಿಸಿದಿರಿ. ನಮ್ಮ ಪ್ರೀತಿಯ ತೀವ್ರತೆ ಈಗ ನಿಮಗೆ ಅರ್ಥವಾಗಿರಬಹುದು. ಕ್ಷಮಿಸಿ ಅಪ್ಪಾ’ ಎಂದು ಬರೆಯಲಾಗಿದ್ದು, ಅಳಯವ ಚಿತ್ರವನ್ನೂ ಬಿಡಿಸಲಾಗಿದೆ. ಅವರ ಕೋಣೆಯ ಗೋಡೆಯಲ್ಲಿ, ‘ನಾನು ತುಂಬಾ ಒಂಟಿಯಾಗಿದ್ದೇನೆ’ ಎಂದೂ ಗೀಚಿರುವುದು ಪತ್ತೆಯಾಗಿದೆ.
ಕೆಲ ವರ್ಷಗಳ ಹಿಂದೆ ಅನೇಕರನ್ನು ಬಲಿ ಪಡೆದು, ಬಳಿಕ ಬ್ಯಾನ್ ಆಗಿದ್ದ ಬ್ಲೂವೇಲ್ ವೇಲ್ ಆಟದ ರೀತಿಯೇ ಕೊರಿಯನ್ ಲವರ್ ಗೇಮ್. ಇದರಲ್ಲಿ ಬಳಕೆದಾರರಿಗೆ ಚಿತ್ರವಿಚಿತ್ರ ಹಾಗೂ ಅಪಾಯಕಾರಿ ಟಾಸ್ಕ್‌ಗಳನ್ನು ಕೊಟ್ಟು, ಆಟದ ಮುಂದಿನ ಹಂತಕ್ಕೆ ಹೋಗಲು ಅದನ್ನು ಪೂರೈಸುವಂತೆ ಹೇಳಲಾಗುತ್ತದೆ. ಒಮ್ಮೊಮ್ಮೆ ಇವುಗಳು ಜೀವಕ್ಕೇ ಕುತ್ತು ತರುವಂತಿದ್ದರೂ, ಅದರ ಗೀಳಿಗೆ ಬಲಿಯಾದವರು ಮುಂದುವರೆಯುತ್ತಿದ್ದರು. ತಡರಾತ್ರಿ ಏಳುವುದು? ಕೊರಿಯಾಗೆ ಹೋಗುವುದು ಸೇರಿದಂತೆ ಹಲವು ಸವಾಲುಗಳನ್ನು ಕೊಡಲಾಗುತ್ತಿತ್ತು. ಇದರ ಅಂತಿಮ ಹಂತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಸವಾಲು ನೀಡಲಾಗುತ್ತದೆ ಎನ್ನಲಾಗಿದೆ.
ಮಕ್ಕಳು ದುರಂತ ಅಂತ್ಯ ಕಂಡ ದೃಶ್ಯವನ್ನು ಅವರ ಎದುರಿನ ಕಟ್ಟಡದ 10ನೇ ಮಹಡಿಯಲ್ಲಿ ವಾಸವಿರುವ ಅರುಣ್ ಎಂಬುವರು ಕಣ್ಣಾರೆ ಕಂಡಿದ್ದಾಗಿ ಹೇಳಿದ್ದಾರೆ. ‘ಸುಮಾರು 2 ಗಂಟೆ ಹೊತ್ತಿಗೆ ಬಾಲ್ಕನಿಯಲ್ಲಿ ನಿಂತಿದ್ದೆ. ಆಗ ಮುಂದಿನ ಕಟ್ಟಡದ 9ನೇ ಕಟ್ಟಡ ಬಾಲ್ಕನಿಯ ಕಿಟಕಿಯಲ್ಲಿ ನಿಶಿಕಾ ಬೆನ್ನು ಮಾಡಿ ಕುಳಿತದ್ದು ಕಾಣಿಸಿತು. ಪ್ರಾಚಿ ಅವಳನ್ನು ಅಪ್ಪಿದ್ದಳು. ಇದ್ದಕ್ಕಿದ್ದಂತೆ ಸಮತೋಲನ ತಪ್ಪಿ ನಿಶೀಕಾ ಮತ್ತು ಪ್ರಾಚಿ ಕೆಳಗೆ ಬಿದ್ದರು. ಅವರಿಬ್ಬರನ್ನು ಹಿಡಿಯಲು ಯತ್ನಿಸುವ ಭರದಲ್ಲಿ ಪಾಖಿ ಕೂಡ ಬಿದ್ದಳು’ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ