ರಷ್ಯಾ ತೈಲ ನಿಲ್ಲಿಸಿದರೆ ಭಾರತಕ್ಕೆ ₹36000 ಕೋಟಿ ನಷ್ಟ

Kannadaprabha News   | Kannada Prabha
Published : Feb 05, 2026, 06:29 AM IST
 piyush goyal

ಸಾರಾಂಶ

ವ್ಯಾಪಾರ ಒಪ್ಪಂದದ ಭಾಗವಾಗಿ, ರಷ್ಯಾದಿಂದ ತೈಲ ಖರೀದಿ ಸ್ಥಗಿತಕ್ಕೆ ಭಾರತ ನಿರ್ಧರಿಸಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆ ಇದೀಗ ಅಮೆರಿಕ ಮತ್ತು ರಷ್ಯಾ ನಡುವೆ ಜಟಾಪಟಿಗೆ ಕಾರಣವಾಗಿದೆ.

ನವದೆಹಲಿ: ವ್ಯಾಪಾರ ಒಪ್ಪಂದದ ಭಾಗವಾಗಿ, ರಷ್ಯಾದಿಂದ ತೈಲ ಖರೀದಿ ಸ್ಥಗಿತಕ್ಕೆ ಭಾರತ ನಿರ್ಧರಿಸಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆ ಇದೀಗ ಅಮೆರಿಕ ಮತ್ತು ರಷ್ಯಾ ನಡುವೆ ಜಟಾಪಟಿಗೆ ಕಾರಣವಾಗಿದೆ. ಮತ್ತೊಂದೆಡೆ ಟ್ರಂಪ್ ಹೇಳಿಕೆ ಅನ್ವಯ ಭಾರತ ಪೂರ್ಣ ಪ್ರಮಾಣದಲ್ಲಿ ತೈಲ ಖರೀದಿ ಸ್ಥಗಿತಗೊಳಿಸಿದರೆ ಭಾರತಕ್ಕೆ ವಾರ್ಷಿಕ 30000 ಕೋಟಿ ರು.ನಷ್ಟು ನಷ್ಟ ಉಂಟಾಗಲಿದೆ ಎಂದು ಹಣಕಾಸು ಸಂಸ್ಥೆಯೊಂದು ಹೇಳಿದೆ.

ಭಾರೀ ನಷ್ಟ:

ಅಮೆರಿಕ ತೆರಿಗೆ ಹೊಡೆತಕ್ಕೆ ಅಂಜಿ ರಷ್ಯಾದ ರಿಯಾಯ್ತಿ ದರದ ಕಚ್ಚಾ ತೈಲ ಆಮದನ್ನು ಕಡಿತಗೊಳಿಸುತ್ತಿರುವ ಭಾರತಕ್ಕೆ ವಾರ್ಷಿಕ 36,000 ಕೋಟಿ ರು. ನಷ್ಟವಾಗಲಿದೆ ಎಂದು ಕೆಪ್ಲರ್‌ ಹಣಕಾಸು ಸಂಸ್ಥೆ ಹೇಳಿದೆ. ವರದಿಯ ಪ್ರಕಾರ ಭಾರತದ ತೈಲ ಆಮದು ಪ್ರಮಾಣದಲ್ಲಿ ರಷ್ಯಾದ ರಿಯಾಯ್ತಿ ದರದ ತೈಲ ಕಡಿಮೆಯಾಗಿ ಮಾರುಕಟ್ಟೆ ಮೌಲ್ಯದ ಮಧ್ಯಪ್ರಾಚ್ಯ ತೈಲಗಳು ಬರಲಾರಂಭಿಸಲಿದೆ.

ಪ್ರತಿ ಬ್ಯಾರಲ್‌ಗೆ 5 ಡಾಲರ್‌ನಂತೆ ಲೆಕ್ಕ ಇಟ್ಟರೂ, ದಿನಕ್ಕೆ 18 ಲಕ್ಷ ಬ್ಯಾರಲ್‌ಗಳಿಗೆ ಲೆಕ್ಕ ಹಾಕಿದರೆ ಒಟ್ಟು ವಾರ್ಷಿಕ 36,000 ಕೋಟಿ ರು. ಹೆಚ್ಚುವರಿ ತೈಲ ಬಿಲ್‌ ಪಾವತಿ ಮಾಡಬೇಕಿದೆ. ಇದು ಒಟ್ಟು ಬಿಲ್‌ನಲ್ಲಿ ಶೇ.2ರಷ್ಟು ಹೆಚ್ಚುವರಿಯಾಗಲಿದೆ. ಒಂದು ವೇಳೆ ಕೇಂದ್ರ ಸರ್ಕಾರವು ಪೆಟ್ರೋಲ್‌, ಡೀಸೆಲ್‌ ಸೇರಿ ಇಂಧನ ದರ ಏರಿಕೆ ಮಾಡದಿದ್ದಲ್ಲಿ, ಇದು ಇನ್ನು ಬಿಗುವಾಗಲಿದೆ ಎಂದು ಅಂದಾಜಿಸಿದೆ.

ಅಮೆರಿಕ-ರಷ್ಯಾ ಜಟಾಪಟಿ:

ಈ ನಡುವೆ ಭಾರತ-ಅಮೆರಿಕ ನಡುವೆ ಏರ್ಪಟ್ಟಿರುವ ವ್ಯಾಪಾರ ಒಪ್ಪಂದವು ಅಮೆರಿಕ ಮತ್ತು ರಷ್ಯಾ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ. ‘ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ’ ಎಂದು ಟ್ರಂಪ್‌, ಒಪ್ಪಂದದ ಘೋಷಣೆ ವೇಳೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರಷ್ಯಾ, ತೈಲ ಖರೀದಿ ಸ್ಥಗಿತದ ಬಗ್ಗೆ ಭಾರತ ನಮಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಹೇಳಿತ್ತು.

ಇದೀಗ ವೈಟ್‌ಹೌಸ್‌ ಪತ್ರಿಕಾ ಕಾರ್ಯದರ್ಶಿ ಕ್ಯಾರೊಲಿನ್‌ ಲೆವಿಟ್‌ ಮಾತನಾಡಿದ್ದು, ‘ಪ್ರಧಾನಿ ನರೇಂದ್ರ ಮೋದಿ ಅವರ ಜತೆ ನೇರವಾಗಿ ಮಾತನಾಡಿ ಟ್ರಂಪ್‌ ಒಳ್ಳೆ ಒಪ್ಪಂದ ಕುದುರಿಸಿದ್ದಾರೆ. ಇನ್ನುಮುಂದೆ ಭಾರತವು ರಷ್ಯಾದ ಬದಲು ಅಮೆರಿಕ ಮತ್ತು ವೆನಿಜುವೆಲಾದಿಂದ ತೈಲ ಖರೀದಿ ಮಾಡುತ್ತದೆ. ಇದರಿಂದ ಅಮೆರಿಕ ಮತ್ತು ಅದರ ಜನತೆಗೆ ನೇರ ಲಾಭವಾಗಲಿದೆ’ ಎಂದು ಹೇಳಿದ್ದಾರೆ. ಮುಂದುವರೆದು, ‘ಸಾರಿಗೆ, ಇಂಧನ, ಕೃಷಿ ಕ್ಷೇತ್ರಗಳ ಮೇಲೆ 45 ಲಕ್ಷ ಕೋಟಿ ರು. ಹೂಡಿಕೆ ಮಾಡುವ ಬಗ್ಗೆಯೂ ಮೋದಿ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

ಇದರ ಬೆನ್ನಲ್ಲೇ, ‘ಭಾರತ ಹೀಗೆ ಮಾಡುತ್ತದೆ(ತೈಲ ಖರೀದಿ ನಿಲ್ಲಿಸುತ್ತದೆ) ಎಂದು ನಂಬಲು ಯಾವುದೇ ಕಾರಣಗಳಿಲ್ಲ. ತೈಲ ವ್ಯಾಪಾರವು ಎರಡೂ ದೇಶಗಳಿಗೆ ಲಾಭದಾಯಕವಾಗಿರುವುದರ ಜತೆಗೆ ಅಂತಾರಾಷ್ಟ್ರೀಯ ಇಂಧನ ಮಾರುಕಟ್ಟೆಯಲ್ಲಿಯೂ ಸ್ಥಿರತೆಯನ್ನು ಕಾಪಾಡಿದೆ’ ಎಂದು ರಷ್ಯಾದ ವಿದೇಶಾಂಗ ಸಚಿವರು ಹೇಳಿದ್ದಾರೆ.

ಟ್ರೇಡ್‌ ಡೀಲ್‌ನಿಂದ ಕೃಷಿವಲಯ ರಕ್ಷಣೆ: ಗೋಯಲ್‌

ನವದೆಹಲಿ: ‘ ಅಮೆರಿಕ - ಭಾರತ ತೆರಿಗೆ ಒಪ್ಪಂದದಿಂದ ದೇಶದ ಆಹಾರ ಮತ್ತು ಕೃಷಿ ವಲಯಗಳು ಸುರಕ್ಷಿತವಾಗಿರಲಿದೆ. ಈ ಡೀಲ್‌ ಅಮೆರಿಕದ ಮಾರುಕಟ್ಟೆಗೆ ರಫ್ತು ಹೆಚ್ಚಳಕ್ಕೆ ನೆರವಾಗಲಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಸಂಸತ್‌ನಲ್ಲಿ ಪುನರುಚ್ಚರಿಸಿದ್ದಾರೆ.

ತೆರಿಗೆ ಒಪ್ಪಂದದ ಬಗ್ಗೆ ಗೋಯಲ್‌ ಬುಧವಾರ ಲೋಕಸಭೆ, ರಾಜ್ಯಸಭೆ ಎರಡರಲ್ಲಿಯೂ ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ಮಾತನಾಡಿದ್ದು ‘ಈ ಒಪ್ಪಂದ ಭಾರತೀಯ ರಫ್ತುದಾರರಿಗೆ ಅದರಲ್ಲಿಯೂ ದೇಶದ ಉತ್ಪಾದನಾ ವಲಯಗಳಿಗೆ ಹೆಚ್ಚಿನ ಪ್ರಯೋಜನ ನೀಡಲಿದೆ. ಆಹಾರ ಮತ್ತು ಕೃಷಿಯಲ್ಲಿ ಭಾರತದ ಪ್ರಮುಖ ಸೂಕ್ಷ್ಮತೆಗಳನ್ನು ರಕ್ಷಿಸಲಾಗುವುದು’ ಎಂದಿದ್ದಾರೆ.ಮುಂದುವರೆದಂತೆ ಅವರು, ‘ಈ ಪಾಲುದಾರಿಕೆಯು ಎಂಎಸ್‌ಎಂಇ, ಉದ್ಯಮಿಗಳು, ಕೌಶಲ್ಯ ಹೊಂದಿರುವ ಕೆಲಸಗಾರರು, ಕೈಗಾರಿಕೆಗಳಿಗೆ ಹೊಸ ಅವಕಾಶ ನೀಡಲಿದೆ. ಸುಧಾರಿತ ತಂತ್ರಜ್ಞಾನಗಳ ಪ್ರವೇಶವಾಗಲಿದೆ. ಜಗತ್ತಿಗೆ ಮೇಕ್‌ ಇನ್‌ ಇಂಡಿಯಾ, ವಿನ್ಯಾಸ ಮತ್ತು ನಾವೀನ್ಯತೆಯಲ್ಲಿ ಭಾರತದ ದೃಷ್ಟಿಕೋನವನ್ನು ಬೆಂಬಲಿಸುತ್ತದೆ’ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

7 ಲಕ್ಷ ಸೇಬು ಮರ ಉಳಿಸಲು ಚಿಪ್ಕೋ ಚಳವಳಿ : 3 ಕಾಶ್ಮೀರ ರೈಲ್ವೆಗಳ ರದ್ದು
ಸುಪ್ರೀಂನಲ್ಲಿ ವಕೀಲೆ ಆದ ಬಂಗಾಳದ ಮುಖ್ಯಮಂತ್ರಿ ದೀದಿ!