
ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಮೂವರು ಅಪ್ರಾಪ್ತ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಂದೆ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಆರ್ಥಿಕ ಸಂಕಷ್ಟದಿಂದ ಮಕ್ಕಳು ಈ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 'ನನ್ನ ಮಕ್ಕಳು ಕೊರಿಯನ್ ಸೀರೀಸ್ ಮತ್ತು ಗೇಮ್‌ಗಳಿಗೆ ದಾಸರಾಗಿದ್ದರು. ಅವರು ಕೊರಿಯನ್ನರಂತೆಯೇ ಬದುಕಲು ಬಯಸಿದ್ದರು. ಆದರೆ ನಾನವರನ್ನು ಭಾರತೀಯರಾಗಿ ಬೆಳೆಸಲು ಪ್ರಯತ್ನಿಸಿದೆ' ಎಂದು ತಂದೆ ಹೇಳಿದ್ದಾರೆ.
ಕೊರಿಯನ್ ಸೀರೀಸ್‌ಗಳನ್ನು ನೋಡುವುದನ್ನು ಬಿಡುವಂತೆ ಪೋಷಕರು ಒತ್ತಡ ಹೇರಿದ್ದರಿಂದ ಮಕ್ಕಳು ಖಿನ್ನತೆಗೆ ಒಳಗಾಗಿದ್ದರು ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಮಕ್ಕಳು ಆಡುತ್ತಿದ್ದ ಯಾವುದಾದರೂ ಗೇಮ್‌ನ ಟಾಸ್ಕ್ ಭಾಗವಾಗಿ ಈ ಆತ್ಮಹತ್ಯೆ ನಡೆದಿದೆಯೇ ಎಂಬುದಕ್ಕೆ ಸದ್ಯಕ್ಕೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಮಕ್ಕಳ ತಂದೆಗೆ ಎರಡು ಕೋಟಿ ರೂಪಾಯಿ ಸಾಲವಿತ್ತು. ಅಲ್ಲದೆ, ತಂದೆ ತಮ್ಮ ಮೊಬೈಲ್ ಫೋನ್ ಮಾರಿದ್ದಕ್ಕೆ ಮೂವರಿಗೂ ತೀವ್ರ ಬೇಸರವಾಗಿತ್ತು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಆದರೂ, ಮಕ್ಕಳ ಸಾವು ಆತ್ಮಹತ್ಯೆಯಲ್ಲ, ಇದು ಆನ್‌ಲೈನ್ ಗೇಮ್‌ನ ಟಾಸ್ಕ್ ಎಂದು ತಂದೆ ಪೊಲೀಸರ ಬಳಿ ಪದೇ ಪದೇ ಹೇಳುತ್ತಿದ್ದಾರೆ. ಮಕ್ಕಳು ಕೇವಲ ಗೇಮ್ ಮಾತ್ರವಲ್ಲ, ನಿರಂತರವಾಗಿ ಕೊರಿಯನ್ ವೆಬ್ ಸೀರೀಸ್‌ಗಳನ್ನು ಕೂಡ ನೋಡುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸೀರೀಸ್‌ಗಳ ಪಾತ್ರಗಳ ಹೆಸರನ್ನೇ ಮಕ್ಕಳು ಬಳಸುತ್ತಿದ್ದರು.
ಸಾಲದ ಸುಳಿಯಲ್ಲಿದ್ದ ತಂದೆ, ಮಕ್ಕಳು ಸೀರೀಸ್ ನೋಡಲು ಬಳಸುತ್ತಿದ್ದ ಮೊಬೈಲನ್ನು ಮಾರಾಟ ಮಾಡಿದ್ದರು. ಆ ಹಣದಿಂದಲೇ ಮನೆಯ ಕರೆಂಟ್ ಬಿಲ್ ಕಟ್ಟಿದ್ದರು. ಇದಕ್ಕೂ ಮುನ್ನ, ಬಿಲ್ ಕಟ್ಟದ ಕಾರಣ ಇವರು ವಾಸವಿದ್ದ ಮನೆಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಸ್ಟಾಕ್ ಟ್ರೇಡರ್ ಆಗಿರುವ ಮಕ್ಕಳ ತಂದೆಗೆ 2 ಕೋಟಿ ರೂಪಾಯಿ ಸಾಲವಿದೆ. ಪೊಲೀಸರು ತಂದೆಯನ್ನು ವಿಚಾರಣೆ ನಡೆಸಿದ್ದಾರೆ. ಮಕ್ಕಳು ಯಾರೊಂದಿಗೂ ಬೆರೆಯದೆ ಒಂಟಿ ಜೀವನ ನಡೆಸುತ್ತಿದ್ದರು. ಬೇರೆ ಮಕ್ಕಳೊಂದಿಗೆ ಆಟವಾಡಲು ಕೂಡ ಹೋಗುತ್ತಿರಲಿಲ್ಲ ಎಂದು ಅಕ್ಕಪಕ್ಕದವರು ಪೊಲೀಸರಿಗೆ ತಿಳಿಸಿದ್ದಾರೆ. ಈ ನಡುವೆಯೂ, ಇದು ಆತ್ಮಹತ್ಯೆಯಲ್ಲ, ಆನ್‌ಲೈನ್ ಗೇಮ್‌ನ ಟಾಸ್ಕ್‌ನಿಂದಲೇ ಸಾವು ಸಂಭವಿಸಿದೆ ಎಂದು ತಂದೆ ಪುನರುಚ್ಚರಿಸಿದ್ದಾರೆ. ಬುಧವಾರ ಮುಂಜಾನೆ 2 ಗಂಟೆ ಸುಮಾರಿಗೆ, ಮೂವರು ಸಹೋದರಿಯರು ಯುಪಿಯ ನೋಯ್ಡಾದಲ್ಲಿರುವ ತಮ್ಮ ಫ್ಲ್ಯಾಟ್‌ನ ಒಂಬತ್ತನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ