
ನವದೆಹಲಿ : ವಿಶ್ವವಿದ್ಯಾಲಯಗಳಲ್ಲಿ ಎಸ್ಸಿ-ಎಸ್ಟಿ, ಒಬಿಸಿಗಳ ಜಾತಿ ತಾರತಮ್ಯ ಹತ್ತಿಕ್ಕುವ ಸಲುವಾಗಿ ಸಮಿತಿ ರಚಿಸಲು ಯುಜಿಸಿ ಹೊರಡಿಸಿರುವ ಹೊಸ ಆದೇಶ ವಿವಾದಕ್ಕೀಡಾಗಿದೆ. ‘ಈ ಸಮಿತಿಯಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಇದೇ ವೇಳೆ, ಸಮಿತಿ ರಚನೆ ವಿರುದ್ಧ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ದೆಹಲಿ ಹಾಗೂ ಉತ್ತರ ಪ್ರದೇಶ ಸೇರಿ ಹಲವು ಕಡೆ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಈ ಬಗ್ಗೆ ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ.
ಆದರೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಾತನಾಡಿ, ವಿವಿಗಳಲ್ಲಿ ತಾರತಮ್ಯ ನಿಗ್ರಹ ಸಮಿತಿಗಳನ್ನು ದುರ್ಬಲಕೆ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ’ ಎಂದು ಭರವಸೆ ನೀಡಿದ್ದಾರೆ.
ಸುಪ್ರೀಂ ಕೋರ್ಟ್‌ಗೆ ವಿನೀತ್ ಜಿಂದಾಲ್ ಎಂಬುವರು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ‘ಜಾತಿ ತಾರತಮ್ಯದ ವಿರುದ್ಧದ ಸಮಿತಿಗೆ ಕೇವಲ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ವರ್ಗ (ಒಬಿಸಿ) ವಿದ್ಯಾರ್ಥಿಗಳು ಮಾತ್ರ ದೂರು ಸಲ್ಲಿಸಬಹುದು. ಇದು ಸಾಮಾನ್ಯ ವರ್ಗಕ್ಕೆ (ಮೀಸಲಾತಿ ಪಡೆಯದವರು) ಅನ್ಯಾಯವಾಗುತ್ತದೆ’ ಎಂದಿದ್ದಾರೆ.
‘ಜನರಲ್ ಕೆಟಗರಿಯ ವಿದ್ಯಾರ್ಥಿಗಳೂ ಜಾತಿ ನಿಂದನೆ, ತಾರತಮ್ಯ ಅನುಭವಿಸುತ್ತಾರೆ. ಅಲ್ಲದೇ ಯುಜಿಸಿ ಹೊರಡಿಸಿರುವ ಆದೇಶವು ಸಂವಿಧಾನದ ಮೂಲಭೂತವಾಗಿರುವ ಸಮಾನತೆ ಹಕ್ಕನ್ನು ಉಲ್ಲಂಘಿಸುತ್ತದೆ. ಹೀಗಾಗಿ ಎಲ್ಲ ವರ್ಗಗಳನ್ನ ಒಳಗೊಳ್ಳುವ ಸಮಿತಿ ರಚಿಸಬೇಕು. ಇಲ್ಲವಾದಲ್ಲಿ ಸಾಮಾನ್ಯ ವರ್ಗಕ್ಕೆ ಅನ್ಯಾಯವಾಗುತ್ತದೆ. ಅವರಿಗೆ ಸರಿಯಾಗಿ ದೂರು ನೀಡುವ ವ್ಯವಸ್ಥೆಯೂ ಇರುವುದಿಲ್ಲ’ ಎಂದು ಮನವಿ ಮಾಡಲಾಗಿದೆ.
ಯುಜಿಸಿ ಜ.13ರಂದು ಹೊರಡಿಸಿದ್ದ ಅಧಿಸೂಚನೆ ವಿವಾದದ ಮೂಲ. ಅಧಿಸೂಚನೆ ಪ್ರಕಾರ ವಿವಿಗಳು ಹಾಗೂ ವಿವಿ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಜಾತಿ ತಾರತಮ್ಯವನ್ನು ನಿಲ್ಲಿಸಲು ಸಮಿತಿ ರಚಿಸುವುದು ಕಡ್ಡಾಯವಾಗಿದೆ. ಈ ಸಮಿತಿಗೆ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಲ್ಲದೆ, ಒಬಿಸಿ (ಹಿಂದುಳಿದ ವರ್ಗ) ವಿದ್ಯಾರ್ಥಿಗಳು ಕೂಡ ದೂರು ನೀಡಬಹುದು. ಆದರೆ ಮೀಸಲು ರಹಿತ ಸಾಮಾನ್ಯ ವರ್ಗದವರಿಗೆ ದೂರಲು ಅವಕಾಶವಿಲ್ಲ. ಅಲ್ಲದೆ. ಈ ನಿಯಮವು ಮೇಲ್ವರ್ಗದವರ (ಬ್ರಾಹ್ಮಣ ಹಾಗೂ ಇತರ ಕೆಲವು ಸಮುದಾಯ) ವಿರುದ್ಧ ಸುಖಾಸುಮ್ಮನೇ ದೂರು ನೀಡಲು ಅನುವು ಮಾಡಿಕೊಡುತ್ತದೆ ಎಂಬುದು ಆರೋಪ.
ವಿವಿಗಳಲ್ಲಿ ಎಸ್ಸಿ, ಎಸ್ಟಿ, ಒಬಿಸಿಗಳ ಜಾತಿ ತಾರತಮ್ಯ ಹತ್ತಿಕ್ಕುವ ಸಲುವಾಗಿ ಸಮಿತಿ ರಚಿಸಲು ಯುಜಿಸಿ ಆದೇಶ
ಇದರನ್ವಯ ಮೇಲ್ಕಂಡ ವರ್ಗದವರು ಮಾತ್ರವೇ ತಮ್ಮ ಮೇಲಿನ ತಾರತಮ್ಯ ದೂರು ಸಲ್ಲಿಸಲು ಅವಕಾಶ ನೀಡಿಕೆ
ಒಂದು ಮೇಲೆ ಸಾಮಾನ್ಯ ವರ್ಗದವರು ಇಂಥ ತಾರಮತ್ಯಕ್ಕೆ ತುತ್ತಾದರೆ ಸಮಿತಿಗೆ ದೂರು ಸಲ್ಲಿಕೆಗೆ ಅವಕಾಶ ಇಲ್ಲ
ಯುಜಿಸಿ ಆದೇಶದಿಂದ ಸಮಾನತೆ ನಿಯಮ ಉಲ್ಲಂಘನೆ. ಜತೆಗೆ ಕಾಯ್ದೆ ದುರ್ಬಳಕೆಗೆ ಅವಕಾಶ ಎಂದು ದೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ