
ಮುಂಬೈ: ಮುಂಬೈನ ಬಾಂದ್ರಾ ಟರ್ಮಿನಸ್‌ನಿಂದ ದೆಹಲಿಯ ಸರೈ ರೋಹಿಲ್ಲಾಗೆ ಸಂಚರಿಸುತ್ತಿದ್ದ ಗರೀಬ್ ರಥ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಚಲಿಸುವ ರೈಲಿನಲ್ಲೇ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ ದಾರುಣ ಘಟನೆ ಸಂಭವಿಸಿದೆ. ಮೃತ ಮಹಿಳೆ ರೈಲಿನಲ್ಲಿ ತನ್ನ ಚಿಕ್ಕ ಮಗನೊಂದಿಗೆ ಪ್ರಯಾಣಿಸುತ್ತಿದ್ದರು. ಈ ಘಟನೆಯ ನಂತರ, ರೈಲ್ವೆ ಇಲಾಖೆಯು ಸಮಯಕ್ಕೆ ಸರಿಯಾಗಿ ವೈದ್ಯಕೀಯ ನೆರವು ನೀಡಲು ವಿಫಲವಾಗಿದೆ ಎಂದು ರೈಲಿನಲ್ಲಿದ್ದ ಬ್ಲಾಗರ್ ಒಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಪಶ್ಚಿಮ ರೈಲ್ವೆಯ ವಡೋದರಾ ವಿಭಾಗವು ತಕ್ಷಣವೇ ಸ್ಪಂದಿಸಿ ವೈದ್ಯಕೀಯ ಸಹಾಯ ಒದಗಿಸಲಾಗಿತ್ತು ಎಂದು ಸ್ಪಷ್ಟೀಕರಣ ನೀಡಿದೆ.
ಘಟನೆ ನಡೆದಿದ್ದು ಯಾವಾಗ ಮತ್ತು ಬ್ಲಾಗರ್ ಹೇಳುವುದೇನು?
ರೈಲಿನಲ್ಲಿದ್ದ ಬ್ಲಾಗರ್ ಸೊಹೈಬ್ ಸೈಯದ್ ಅವರ ಪ್ರಕಾರ, ರೈಲು ಭರೂಚ್ ನಿಲ್ದಾಣದಿಂದ ಹೊರಟ ಸ್ವಲ್ಪ ಸಮಯದ ನಂತರ (ಸಂಜೆ 4:17 ಕ್ಕೆ) ಮಹಿಳೆಗೆ ಇದ್ದಕ್ಕಿದ್ದಂತೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. "ನಾನು ತಕ್ಷಣ ಟಿಟಿಇ (TTE) ಗೆ ಮಾಹಿತಿ ನೀಡಿ, ಮಹಿಳೆಯ ಸ್ಥಿತಿ ಗಂಭೀರವಾಗಿರುವುದರಿಂದ ಹತ್ತಿರದ ನಿಲ್ದಾಣದಲ್ಲೇ ರೈಲನ್ನು ನಿಲ್ಲಿಸುವಂತೆ ವಿನಂತಿಸಿದೆ" ಎಂದು ಅವರು ತಿಳಿಸಿದ್ದಾರೆ. ರೈಲಿನಲ್ಲಿದ್ದ ಹೃದ್ರೋಗ ತಜ್ಞರೊಬ್ಬರು ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ, ಅವರಿಗೆ ತುರ್ತಾಗಿ ಆಮ್ಲಜನಕ (Oxygen) ಮತ್ತು ಆಸ್ಪತ್ರೆಯ ಅಗತ್ಯವಿತ್ತು.
ಭರೂಚ್ ನಂತರ ರೈಲು ನಬಿಪುರ ಮತ್ತು ಕಂಜಾರ್ ನಿಲ್ದಾಣಗಳನ್ನು ಹಾದುಹೋಗಿ, ಅಂತಿಮವಾಗಿ ಇಟೋಲಾ ನಿಲ್ದಾಣದಲ್ಲಿ ಸಂಜೆ 4:57 ಕ್ಕೆ ನಿಲುಗಡೆ ಪಡೆಯಿತು. ಮಾಹಿತಿ ನೀಡಿದ ನಂತರ ರೈಲು ನಿಲ್ಲಿಸಲು ರೈಲ್ವೆ ಇಲಾಖೆಯು ಬರೋಬ್ಬರಿ 40 ನಿನಿಮಿಷಗಳಷ್ಟು ಸಮಯ ತೆಗೆದುಕೊಂಡಿತು, ಅಷ್ಟರಲ್ಲೇ ಮಹಿಳೆ ಕೊನೆಯುಸಿರೆಳೆದಿದ್ದರು ಎಂದು ಬ್ಲಾಗರ್ ದೂರಿದ್ದಾರೆ.
ರೈಲ್ವೆ ಇಲಾಖೆಯ ಸ್ಪಷ್ಟೀಕರಣ:
ಈ ಆರೋಪಕ್ಕೆ ಸಂಬಂಧಿಸಿದಂತೆ ವಡೋದರಾ ವಿಭಾಗದ ಡಿಆರ್‌ಎಂ (DRM) ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದು, ರೈಲು ಸಿಬ್ಬಂದಿಗೆ ಮಾಹಿತಿ ಸಿಕ್ಕ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಲಾಗಿತ್ತು ಎಂದು ಹೇಳಿದ್ದಾರೆ. ಹತ್ತಿರದ ನಿಲ್ದಾಣವಾದ ಇಟೋಲಾದಲ್ಲಿ ಕೇವಲ 10 ನಿಮಿಷಗಳಲ್ಲೇ ವೈದ್ಯಕೀಯ ನೆರವು ಮತ್ತು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ಮಹಿಳೆಯನ್ನು ಪೋರ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ