15 ವರ್ಷ ಹಳೆ ಸರ್ಕಾರಿ ವಾಹನ 2022ರ ಏ.1ರಿಂದ ಗುಜರಿಗೆ!

Published : Jan 26, 2021, 07:55 AM IST
15 ವರ್ಷ ಹಳೆ ಸರ್ಕಾರಿ ವಾಹನ 2022ರ ಏ.1ರಿಂದ ಗುಜರಿಗೆ!

ಸಾರಾಂಶ

15 ವರ್ಷ ಹಳೆ ಸರ್ಕಾರಿ ವಾಹನ 2022ರ ಏ.1ರಿಂದ ಗುಜರಿಗೆ| ಯೋಜನೆಗೆ ಜಾರಿಗೆ ರಸ್ತೆ ಸಾರಿಗೆ ಸಚಿವ ಗಡ್ಕರಿ ಅನುಮೋದನೆ| 2ನೇ ಹಂತದಲ್ಲಿ ಖಾಸಗಿ ವಾಹನಗಳಿಗೂ ನೀತಿ ಜಾರಿ ಸಾಧ್ಯತೆ

ನವದೆಹಲಿ(ಜ.26): ಭಾರೀ ಪರಿಸರ ಮಾಲಿನ್ಯ ಉಂಟುಮಾಡುವ 15 ವರ್ಷದಷ್ಟುಹಳೆಯದಾದ ವಾಹನಗಳನ್ನು ಗುಜರಿಗೆ ಹಾಕಿ, ಹೊಸ ವಾಹನ ಖರೀದಿ ಪ್ರೋತ್ಸಾಹಿಸುವ ಸ್ಕ್ರಾಪ್‌ ಪಾಲಿಸಿ ಜಾರಿಗೆ ಕೊನೆಗೂ ಕೇಂದ್ರ ಸರ್ಕಾರ ಮುಂದಾಗಿದೆ. 2022ರ ಏ.1ರಿಂದ ಜಾರಿಗೆ ಬರುವಂತೆ, ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಬಳಕೆಯಲ್ಲಿರುವ 15 ವರ್ಷದಷ್ಟುಹಳೆಯದಾದ ವಾಹನಗಳನ್ನು ಗುಜರಿಗೆ ಹಾಕಲು ಸರ್ಕಾರ ನಿರ್ಧರಿಸಿದೆ.

ಹಲವು ವರ್ಷಗಳಿಂದ ಪ್ರಸ್ತಾವನೆಯ ಹಂತದಲ್ಲೇ ಇದ್ದ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಅನುಮೋದನೆ ನೀಡಿದ್ದು, ಶೀಘ್ರವೇ ಈ ಕುರಿತು ಸರ್ಕಾರ ಆದೇಶ ಹೊರಡಿಸಲಿದೆ ಎಂದು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎಲೆಕ್ಟ್ರಿಕ್‌ ವಾಹನ ಉತ್ತೇಜಿಸಲು, 15 ವರ್ಷ ಹಳೆಯ ವಾಹನ ನಿಷೇಧಿಸುವ ಕುರಿತು ‘ಮೋಟಾರು ವಾಹನ ಕಾಯ್ದೆ’ಗೆ ತಿದ್ದುಪಡಿ ತರುವ ಬಗ್ಗೆ 2019ರ ಜು.26ರಂದು ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿತ್ತು. ಇನ್ನು ಇತ್ತೀಚೆಗಷ್ಟೇ ಹೇಳಿಕೆಯೊಂದನ್ನು ನೀಡಿದ್ದ ಸಚಿವ ಗಡ್ಕರಿ, ಹಳೆಯ ವಾಹನಗಳನ್ನು ನಿಷೇಧಿಸುವ ಯೋಜನೆ ಕುರಿತು ನಾವು ಪ್ರಸ್ತಾಪ ಸಲ್ಲಿಸಿದ್ದು, ಶೀಘ್ರವೇ ಅದಕ್ಕೆ ಅನುಮೋದನೆ ಸಿಗುವ ವಿಶ್ವಾಸವಿದೆ. ಯೋಜನೆ ಜಾರಿ ಬಳಿಕ ಭಾರತ ಹೊಸ ವಾಹನಗಳ ಉತ್ಪಾದನೆಯ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಲಿದೆ. ಹಳೆಯ ವಾಹನಗಳಿಂದ ಉತ್ಪನ್ನಗಳು ಸಿಗುವ ಕಾರಣ ವಾಹನಗಳ ಬೆಲೆ ಇಳಿಯಲಿದೆ. ರಫ್ತು ಹೆಚ್ಚಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

2ನೇ ಹಂತದಲ್ಲಿ ಖಾಸಗಿ ವಾಹನಗಳಿಗೂ ನೀತಿ ಜಾರಿ?

ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಯೋಜನೆಯನ್ನು ಕೇಂದ್ರ ಸರ್ಕಾರ ಮೊದಲ ಹಂತದಲ್ಲಿ ಸರ್ಕಾರಿ ವಾಹನಗಳಿಗೆ ಮಾತ್ರವೇ ಸೀಮಿತ ಮಾಡಿದೆ. ಆದರೆ ಪರಿಸರಕ್ಕೆ ಮಾಲಿನ್ಯ ಉಂಟುಮಾಡುವ ವಾಹನಗಳ ಪಟ್ಟಿಯಲ್ಲಿ ಖಾಸಗಿ ವಾಹನಗಳ ಪಾಲು ಹೆಚ್ಚಿದೆ. ಹೀಗಾಗಿ ಯೋಜನೆಗೆ ಮೊದಲ ಹಂತದಲ್ಲಿ ಸಿಗುವ ಯಶಸ್ಸು, ಜಾರಿಯಲ್ಲಿನ ಅಡೆತಡೆಯನ್ನು ಗಮನಿಸಿ, ನಂತರ ಖಾಸಗಿ ವಾಹನಗಳಿಗೂ ನೀತಿ ಜಾರಿಗೆ ಕೇಂದ್ರ ಸರ್ಕಾರ ಉದ್ದೇಶಿಸಿದೆ ಎನ್ನಲಾಗಿದೆ. ಜೊತೆಗೆ ಕೋವಿಡ್‌ ಹಿನ್ನೆಲೆಯಲ್ಲಿ ಉದ್ಯಮ ವಲಯ ಸಂಕಷ್ಟದಲ್ಲಿರುವಾಗ, ಖಾಸಗಿ ವಾಹನಗಳಿಗೂ ಈ ನೀತಿ ಜಾರಿಗೆ ತಂದರೆ ಭಾರೀ ವಿರೋಧ ಎದುರಿಸಬೇಕಾಗಿ ಬರುವ ಭೀತಿ ಕೂಡಾ ಇಂಥದ್ದೊಂದು ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!
ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?