ಪುನರ್ಜನ್ಮ ನಂಬಿ ಮಕ್ಕಳನ್ನೇ ಹತ್ಯೆಗೈದ ರಕ್ಕಸ ಪೋಷಕರು| ಕಲಿಕಾಲ ಅಂತ್ಯ, ಸತ್ಯಯುಗದಲ್ಲಿ ಹುಟ್ತಾರೆಂದ ಮಾಟಗಾರ| ಇದನ್ನು ನಂಬಿ ತ್ರಿಶೂಲದಿಂದ ತಿವಿದು, ಬಡಿದು ಇಬ್ಬರ ಹತ್ಯೆ| ಭಾನುವಾರ ಕಲಿಯುಗ ಮುಗಿದು ಸತ್ಯಯುಗ ಶುರುವಾಗುತ್ತೆ ಎಂದಿದ್ದ ಮಾಟಗಾರ| ಸತ್ಯಯುಗದಲ್ಲಿ ನಿಮ್ಮ ಹೆಣ್ಣು ಮಕ್ಕಳು ಹುಟ್ಟಿಬರುತ್ತಾರೆ ಎಂದು ನಂಬಿಸಿದ್ದ ಧೂರ್ತ| ಇದನ್ನು ನಂಬಿದ್ದ ಆಂಧ್ರದ ಚಿತ್ತೂರಿನ ಪ್ರಾಂಶುಪಾಲ, ಉಪಪ್ರಾಂಶುಪಾಲೆ ದಂಪತಿ| ಭಾರೀ ದೈವಭಕ್ತರಾಗಿದ್ದ ದಂಪತಿಯಿಂದ ಪೂಜೆ ನಡೆಸಿ ಇಬ್ಬರು ಹೆಣ್ಣು ಮಕ್ಕಳ ಹತ್ಯೆ| ಹಿರಿ ಮಗಳನ್ನು ತ್ರಿಶೂಲದಿಂದ ತಿವಿದು, ಕಿರಿ ಮಗಳನ್ನು ಡಂಬೆಲ್ಸ್‌ನಿಂದ ಬಡಿದು ಹತ್ಯೆ
ಚಿತ್ತೂರು(ಜ.26): ಸತ್ಯಯುಗದಲ್ಲಿ ‘ಮಕ್ಕಳು ಪುನರ್ಜನ್ಮ ತಾಳುತ್ತಾರೆ’ ಎಂಬ ಮಾಟಗಾರನೊಬ್ಬನ ಮಾತು ನಂಬಿದ ಸುಶಿಕ್ಷಿತ ದಂಪತಿಗಳು, ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನೇ ಬಲಿಕೊಟ್ಟಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಪಡೆದಿದೆ.
ಅಲೇಖ್ಯಾ (27) ಮತ್ತು ಸಾಯಿದಿವ್ಯ (22) ಬಲಿಯಾದ ಇಬ್ಬರು ಹೆಣ್ಣುಮಕ್ಕಳು. ಇವರ ತಂದೆ, ಪದವಿ ಕಾಲೇಜೊಂದರ ಉಪ ಪ್ರಾಚಾರ್ಯ ಎನ್.ಪುರುಷೋತ್ತಮ ನಾಯ್ಡು ಭಾನುವಾರ ಘಟನೆ ಬಗ್ಗೆ ಸಹೋದ್ಯೋಗಿಯೊಂದಿಗೆ ಹೇಳಿಕೊಂಡ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ತೀರಾ ದೈವಭಕ್ತರಾಗಿದ್ದ ದಂಪತಿಗಳು ಕೊಲೆ ನಡೆಯುವ ಮುಂಚೆ ಮನೆಯಲ್ಲಿ ಪೂಜೆ ಪುನಸ್ಕಾರಗಳನ್ನು ನಡೆಸಿದ್ದಾರೆ. ಬಳಿಕ ಮಕ್ಕಳು ಮತ್ತೆ ಹುಟ್ಟಿಬರಲಿದ್ದಾರೆ ಎಂಬ ನಂಬಿಕೆಯಲ್ಲಿ ಕಿರಿಯ ಮಗಳು ಸಾಯಿದಿವ್ಯಾಳನ್ನು ತ್ರಿಶೂಲದಿಂದ ತಿವಿದು ಮತ್ತು ಅಲೇಖ್ಯಾಳನ್ನು ಡಂಬೆಲ್ಸ್‌ನಿಂದ ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲಿಯುಗ ಅಂತ್ಯವೆಂಬ ನಂಬಿಕೆ:
ಭಾನುವಾರ ಕಲಿಯುಗದ ಅಂತ್ಯವಾಗಲಿದ್ದು, ಸೋಮವಾರ ಸತ್ಯಯುಗ ಆರಂಭವಾಗಲಿದೆ. ಹೀಗಾಗಿ ಸತ್ಯಯುಗದಲ್ಲಿ ಮಕ್ಕಳು ಮತ್ತೆ ಹುಟ್ಟಿಬರಲಿದ್ದಾರೆ ಎಂಬ ನಂಬಿಕೆಯಲ್ಲಿ ತಾವು ಮಕ್ಕಳನ್ನು ಸಾಯಿಸಿದ್ದಾಗಿ ದಂಪತಿ ವಿಚಾರಣೆ ವೇಳೆ ತಿಳಿಸಿದ್ದಾರೆ.
ಈ ನಡುವೆ, ‘ಕೋವಿಡ್ ಲಾಕ್‌ಡೌನ್ ಆರಂಭವಾದ ಬಳಿಕ ಕುಟುಂಬ ಸದಸ್ಯರು ಬಹುತೇಕ ಮನೆಯೊಳಗೇ ಇರುತ್ತಿದ್ದರು. ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ ಎಂದು ನೆರೆಹೊರೆಯುವರು ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾವಂತ ಪೋಷಕರು:
ಹೆಣ್ಣು ಮಕ್ಕಳಿಬ್ಬರ ತಂದೆ, ತಾಯಿ ಇಬ್ಬರೂ ವಿದ್ಯಾವಂತರಾಗಿದ್ದು, ನಾಯ್ಡು ಇಲ್ಲಿನ ಮಹಿಳಾ ಪದವಿ ಕಾಲೇಜಿನ ಉಪ ಪ್ರಾಂಶುಪಾಲರಾಗಿದ್ದಾರೆ. ತಾಯಿ ಪದ್ಮಜಾ ಖಾಸಗಿ ಶೈಕ್ಷಣಿಕ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿದ್ದಾರೆ. ಅಷ್ಟೇ ಅಲ್ಲದೆ ಹಿರಿಯ ಮಗಳು ಅಲೇಖ್ಯಾ ಸ್ನಾತಕೋತ್ತರ ಪದವಿ ಹಾಗೂ ಕಿರಿಯ ಮಗಳು ಸಾಯಿದಿವ್ಯ ಬಿಬಿಎ ಪೂರೈಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.