ಲಸಿಕೆ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ!

By Kannadaprabha News  |  First Published Jan 26, 2021, 7:45 AM IST

ಲಸಿಕೆ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ| ಕ್ರಮ ಕೈಗೊಳ್ಳಲು ರಾಜ್ಯಗಳಿಗೆ ಗೃಹ ಸಚಿವಾಲಯ ಸೂಚನೆ


ನವದೆಹಲಿ(ಜ.26): ಕೊರೋನಾ ವಿರುದ್ಧ ದೇಶದಲ್ಲಿ ನೀಡಲಾಗುತ್ತಿರುವ 2 ಲಸಿಕೆಗಳ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

‘ಇಂಥ ಪ್ರಕರಣಗಳನ್ನು ಪತ್ತೆಹಚ್ಚಿ, ಅಂಥವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಭಾರತೀಯ ದಂಡ ಸಂಹಿತೆ 1860ರ ಅಡಿ ಕ್ರಮ ಕೈಗೊಳ್ಳಬೇಕು’ ಎಂದು ನಿರ್ದೇಶಿಸಿದೆ.

Latest Videos

undefined

ಸುಳ್ಳು ಸುದ್ದಿಗೆ ಓಗೊಟ್ಟು ದೇಶಾದ್ಯಂತ ಲಸಿಕೆ ಪಡೆಯಲು ಸ್ವತಃ ಆರೋಗ್ಯ ಕಾರ್ಯಕರ್ತರೇ ಹಿಂದು ಮುಂದು ನೋಡುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

ಈ ಕುರಿತು ರಾಜ್ಯಗಳಿಗೆ ಪತ್ರ ಬರದಿರುವ ಗೃಹ ಸಚಿವಾಲಯದ ಮುಖ್ಯ ಕಾರ್ಯದರ್ಶಿ ಅಜಯ್‌ ಭಲ್ಲಾ, ‘ದೇಶದಲ್ಲಿ ಸದ್ಯ ವಿತರಿಸಲಾಗುತ್ತಿರುವ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆಗಳು ಸುರಕ್ಷಿತ ಮತ್ತು ದೇಹದಲ್ಲಿ ರೋಗ ನಿರೋಧಕ ಶಕ್ತಿ ಅಭಿವೃದ್ಧಿಪಡಿಸುವ ಸಾಮರ್ಥ್ಯ ಹೊಂದಿದೆ ಎಂದು ಸ್ವತಃ ಔಷಧಗಳ ಕುರಿತ ರಾಷ್ಟ್ರೀಯ ನಿಯಂತ್ರಣಾ ಪ್ರಾಧಿಕಾರ ಸ್ಪಷ್ಟನೆ ನೀಡಿದೆ. ಇದರ ಹೊರತಾಗಿಯೂ ಸಾಮಾಜಿಕ ಜಾಲತಾಣ ಮತ್ತು ಇತರೆ ಮಾಧ್ಯಮಗಳಲ್ಲಿ ಲಸಿಕೆ ವಿರುದ್ಧ ಸುಳ್ಳುಸುದ್ದಿ ಮತ್ತು ಅರೆಬರೆ ಮಾಹಿತಿ ರವಾನಿಸಲಾಗುತ್ತಿದೆ. ಇದು ಜನರಲ್ಲಿ ಲಸಿಕೆಯ ಸುರಕ್ಷತೆ ಮತ್ತು ಕಾರ್ಯಕ್ಷಮತೆ ಬಗ್ಗೆ ಅನುಮಾನ ಹುಟ್ಟುಹಾಕುತ್ತಿದೆ. ಪಟ್ಟಭದ್ರ ಹಿತಾಸಕ್ತಿಗಳು ಮಾಡುತ್ತಿರುವ ಇಂಥ ಕೆಲಸಗಳು ದೊಡ್ಡ ಮಟ್ಟದಲ್ಲಿ ಜನರ ಮೇಲೆ ಪ್ರಭಾವ ಬೀರುತ್ತಿದೆ. ಹೀಗಾಗಿ ಇಂಥ ಸುದ್ದಿ ಪತ್ತೆಗೆ ಸೂಕ್ತ ವ್ಯವಸ್ಥೆ ರಚಿಸಬೇಕು. ಸುಳ್ಳು ಸುದ್ದಿ ಪ್ರಸಾರ ತಡೆಯಲು ಅಧಿಕಾರಿಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅಗತ್ಯ ಸೂಚನೆ ನೀಡಬೇಕು’ ಎಂದು ಸೂಚಿಸಿದೆ.

click me!