
ಸಾಮಾನ್ಯವಾಗಿ ಯುವತಿಯರು ವಿಮಾನಯಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಕನಸು ಕಾಣುತ್ತಾರೆ. ಆದರೆ ಹಿಮಾಚಲ ಪ್ರದೇಶದ 25 ವರ್ಷದ ನೇಹಾ ಠಾಕೂರ್ ಅವರ ವೃತ್ತಿ ಪಯಣ ಮಾತ್ರ ವಿಭಿನ್ನ. ಏರ್‌ಹೋಸ್ಟೆಸ್ ಆಗಲು ತರಬೇತಿ ಪಡೆದಿದ್ದ ನೇಹಾ, ಕೊನೆಗೆ 16 ಟನ್ ತೂಕದ ಟ್ರಕ್ ಚಾಲಕಿಯಾಗಿ ತಮ್ಮದೇ ದಾರಿ ಕಂಡುಕೊಂಡಿದ್ದಾರೆ. ಇಂದು ಅವರು ಟ್ರಕ್ ಚಾಲನೆಯ ಜೊತೆಗೆ ತಮ್ಮ ಪ್ರಯಾಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ನೇಹಾ ಅವರ ತಂದೆ ಹಲವು ವರ್ಷಗಳಿಂದ ಟ್ರಕ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಬಾಲ್ಯದಲ್ಲಿ ತಂದೆಯೊಂದಿಗೆ ಟ್ರಕ್‌ನಲ್ಲಿ ಪ್ರಯಾಣಿಸುತ್ತಿದ್ದ ನೇಹಾ, ಕೆಲವೊಮ್ಮೆ ಅದೇ ಟ್ರಕ್‌ನಲ್ಲಿ ಶಾಲೆಗೂ ಹೋಗುತ್ತಿದ್ದರು. ಹೀಗಾಗಿ ಟ್ರಕ್‌ಗಳು ಅವರಿಗೆ ಹೊಸತೇನಲ್ಲ. ಬಾಲ್ಯದಲ್ಲಿ ಮೂಡಿದ ಈ ಆಸಕ್ತಿ ಮುಂದೆ ಅವರ ವೃತ್ತಿಯಾಗುತ್ತದೆ ಎಂದು ಆಗ ಯಾರೂ ಊಹಿಸಿರಲಿಲ್ಲ.
ಪದವಿ ಮುಗಿಸಿದ ಬಳಿಕ ನೇಹಾ ಚಂಡೀಗಢಕ್ಕೆ ತೆರಳಿ ಏರ್‌ಹೋಸ್ಟೆಸ್ ಆಗಲು ತರಬೇತಿ ಪಡೆದರು. ಆದರೆ ಕೋವಿಡ್-19 ಸಮಯದಲ್ಲಿ ವಿಮಾನಯಾನ ಕ್ಷೇತ್ರದಲ್ಲಿ ಉಂಟಾದ ಬದಲಾವಣೆಗಳಿಂದ ಅವರ ವೃತ್ತಿ ಯೋಜನೆ ಬದಲಾಯಿತು. ಬಳಿಕ ಸ್ವಗ್ರಾಮಕ್ಕೆ ಮರಳಿದ ಅವರು ಬಾಲ್ಯದಿಂದಲೂ ಆಸಕ್ತಿ ಹೊಂದಿದ್ದ ಟ್ರಕ್ ಚಾಲನೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡರು.
ನೇಹಾ 22ನೇ ವಯಸ್ಸಿನಲ್ಲಿ ಟ್ರಕ್ ಓಡಿಸಲು ಆರಂಭಿಸಿದರು. ಭಾರೀ ವಾಹನ ಚಾಲನೆಗೆ ಬೇಕಾದ ಕೌಶಲ್ಯಗಳನ್ನು ಕಲಿತು, ನಂತರ ಹೆವಿ ಮೋಟಾರ್ ವೆಹಿಕಲ್ ಲೈಸೆನ್ಸ್ ಪಡೆದರು. ಆರಂಭದಲ್ಲಿ ಸ್ಥಳೀಯ ಮಾರ್ಗಗಳಲ್ಲಿ ವಾಹನ ಚಲಾಯಿಸುತ್ತಿದ್ದ ಅವರು, ಬಳಿಕ ದೂರದ ಪ್ರಯಾಣಗಳನ್ನೂ ಕೈಗೊಳ್ಳಲು ಆರಂಭಿಸಿದರು. ಇಂದು 16 ಟನ್ ತೂಕದ ಟಾಟಾ ಟ್ರಕ್ ಓಡಿಸುತ್ತಿದ್ದಾರೆ.
ನೇಹಾ ಅವರ ವಿಶೇಷತೆ ಟ್ರಕ್ ಓಡಿಸುವುದಷ್ಟೇ ಅಲ್ಲ. ತಮ್ಮ ದಿನನಿತ್ಯದ ಜೀವನವನ್ನೇ ಸಾಮಾಜಿಕ ಜಾಲತಾಣದ ಕಂಟೆಂಟ್ ಆಗಿ ಮಾಡುತ್ತಿದ್ದಾರೆ. ಬೆಟ್ಟದ ರಸ್ತೆಗಳು, ಮಳೆ, ಮಂಜು, ಸರಕು ತುಂಬುವುದು ಮತ್ತು ಇಳಿಸುವುದು ಸೇರಿದಂತೆ ಟ್ರಕ್ ಚಾಲಕಿಯ ಬದುಕಿನ ಹಲವು ಅನುಭವಗಳನ್ನು ವಿಡಿಯೋಗಳ ಮೂಲಕ ಹಂಚಿಕೊಳ್ಳುತ್ತಾರೆ. ಅವರ ಮಾತಿನಲ್ಲಿ, ಟ್ರಕ್ ಸ್ಟಾರ್ಟ್ ಆದಾಗ ಕ್ಯಾಮೆರಾವೂ ಸ್ಟಾರ್ಟ್ ಆಗುತ್ತದೆ!
ಮಹಿಳೆಯೊಬ್ಬರು ಟ್ರಕ್ ಚಾಲನೆ ಮಾಡುತ್ತಿರುವುದನ್ನು ಕಂಡು ಕೆಲವರು ಪ್ರಶ್ನೆ ಮಾಡುತ್ತಾರೆ. ಆದರೆ ನೇಹಾ ಅವರ ಉತ್ತರ ಸರಳ: “ಟ್ರಕ್ ಯಾಕೆ ಓಡಿಸಬಾರದು?” ಚಾಲಕರ ಬಗ್ಗೆ ಇರುವ ನಕಾರಾತ್ಮಕ ಮನೋಭಾವ ಬದಲಾಗಬೇಕು ಎಂಬ ಉದ್ದೇಶವೂ ಅವರದ್ದು. ತಮ್ಮ ಕೆಲಸದ ಮೂಲಕ ಮಹಿಳೆಯರೂ ವಿಭಿನ್ನ ವೃತ್ತಿಗಳನ್ನು ಆಯ್ಕೆ ಮಾಡಬಹುದು ಎಂಬ ಸಂದೇಶವನ್ನು ಅವರು ನೀಡುತ್ತಿದ್ದಾರೆ.
ಬಾಲ್ಯದಲ್ಲಿ ತಂದೆಯ ಟ್ರಕ್‌ನಲ್ಲಿ ಪ್ರಯಾಣಿಸುತ್ತಿದ್ದ ಹುಡುಗಿ, ಇಂದು ಅದೇ ರಸ್ತೆಯಲ್ಲಿ ಸ್ವತಃ ಟ್ರಕ್ ಓಡಿಸುತ್ತಿದ್ದಾರೆ. ಏರ್‌ಹೋಸ್ಟೆಸ್ ತರಬೇತಿಯಿಂದ ಆರಂಭವಾದ ಪಯಣ, ಕೊನೆಗೆ ಹೆದ್ದಾರಿಯ ಸ್ಟೀರಿಂಗ್‌ವರೆಗೆ ತಲುಪಿದೆ. ನೇಹಾ ಅವರ ಕಥೆ ವೃತ್ತಿ ಆಯ್ಕೆಗೆ ಯಾವುದೇ ಒಂದು ಮಾದರಿಯೇ ಇಲ್ಲ ಎಂಬುದನ್ನು ತೋರಿಸುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ