ಬಂಗಾಳದಲ್ಲಿ ಮತ್ತೆ ಹಿಂಸಾಚಾರ: 45 ಮಂದಿ ಬಂಧನ, ನಿಷೇಧಾಜ್ಞೆ ಜಾರಿ; ಘಟನೆಗೆ ಬಿಜೆಪಿ ಕಾರಣ ಎಂದ ದೀದಿ

By Kannadaprabha News  |  First Published Apr 1, 2023, 9:37 AM IST

ಘಟನೆಗೆ ಸಂಬಂಧಿಸಿದಂತೆ ಈವರೆಗೆ ಸುಮಾರು 45 ಜನರನ್ನು ಬಂಧಿಸಲಾಗಿದ್ದು, ಘಟನೆಯಲ್ಲಿ ಪೊಲೀಸ್‌ ವಾಹನಗಳು ಸೇರಿದಂತೆ ಹಲವು ವಾಹನಗಳು ಬೆಂಕಿಗಾಹುತಿಯಾಗಿವೆ. ಈ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಹೌರಾದಲ್ಲಿ ಸಿಆರ್‌ಪಿಸಿ 144 ಸೆಕ್ಷನ್‌ ಹೇರಲಾಗಿದೆ.


ಕೋಲ್ಕತಾ (ಏಪ್ರಿಲ್ 1, 2023): ರಾಮನವಮಿ ಮೆರವಣಿಗೆ ವೇಳೆ ಪಶ್ಚಿಮ ಬಂಗಾಳದ ಹೌರಾದಲ್ಲಿ ಗುರುವಾರ ಆರಂಭವಾಗಿದ್ದ ಹಿಂಸಾಚಾರ ಶುಕ್ರವಾರವೂ ಮುಂದುವರೆದಿದ್ದು, ಉದ್ರಿಕ್ತರು ಹಲವು ಕಡೆ ಕಲ್ಲು ತೂರಾಟ ನಡೆಸಿ, ಅಂಗಡಿ ಮುಂಗಟ್ಟುಗಳನ್ನು ಪುಡಿಗಟ್ಟಿದ್ದಾರೆ. ಇದರ ಬೆನ್ನಲ್ಲೇ ಹೌರಾದಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಗಲಭೆಕೋರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಆದರೂ ಸಹ ಗುಂಪು ಸ್ಥಳದಲ್ಲಿದ್ದ ಮಾಧ್ಯಮದವರೂ ಸೇರಿದಂತೆ ಹಲವರ ಮೇಲೆ ಕಲ್ಲು ತೂರಾಟ ನಡೆಸಿದೆ. ಘಟನೆಯು ಬಿಜೆಪಿ ಹಾಗೂ ಆಡಳಿತಾರೂಢ ಟಿಎಂಸಿ ನಡುವೆ ರಾಜಕೀಯ ವಾಕ್ಸಮರಕ್ಕೆ ನಾಂದಿ ಹಾಡಿದೆ.

ಆಗಿದ್ದೇನು?:
ಶಿಬ್‌ಪುರದಲ್ಲಿ ಗುರುವಾರ ಹಿಂಸಾಚಾರ ನಡೆದಿತ್ತು. ಈ ಸ್ಥಳವನ್ನು ಶುಕ್ರವಾರ ಜನ ಸಂಚಾರಕ್ಕೆ ತೆರವು ಮಾಡಲಾಗಿತ್ತು. ಆದರೆ ಮಧ್ಯಾಹ್ನ 1.30ರ ಸುಮಾರಿಗೆ ಉದ್ರಿಕ್ತರು ರಸ್ತೆಗೆ ಇಳಿದು, ಅಂಗಡಿಗಳ ಮೇಲೆ ದಾಳಿ ಮಾಡಿ ಪುಡಿಗಟ್ಟಿ ಬೆಂಕಿ ಹಚ್ಚಿದ್ದಾರೆ. ಕಲ್ಲು ತೂರಾಟ ನಡೆಸಿ, ಕೆಲವು ಪೊಲೀಸ್‌ ವಾಹನಗಳನ್ನೂ ಜಖಂಗೊಳಿಸಿದ್ದಾರೆ.

Tap to resize

Latest Videos

ಇದನ್ನು ಓದಿ: ರಾಷ್ಟ್ರಧ್ವಜಕ್ಕೆ ಅವಮಾನ: ಮಮತಾ ಬ್ಯಾನರ್ಜಿ ವಿರುದ್ಧ ತನಿಖೆಗೆ ಕೋರ್ಟ್‌ ಆದೇಶ

ಘಟನೆಗೆ ಸಂಬಂಧಿಸಿದಂತೆ ಈವರೆಗೆ ಸುಮಾರು 45 ಜನರನ್ನು ಬಂಧಿಸಲಾಗಿದ್ದು, ಘಟನೆಯಲ್ಲಿ ಪೊಲೀಸ್‌ ವಾಹನಗಳು ಸೇರಿದಂತೆ ಹಲವು ವಾಹನಗಳು ಬೆಂಕಿಗಾಹುತಿಯಾಗಿವೆ. ಈ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಹೌರಾದಲ್ಲಿ ಸಿಆರ್‌ಪಿಸಿ 144 ಸೆಕ್ಷನ್‌ ಹೇರಲಾಗಿದೆ.

ಬಿಜೆಪಿ ಕಾರಣ - ಮಮತಾ ಆರೋಪ:

‘ಹಿಂಸಾಚಾರಗಳಿಗೆ ಬಿಜೆಪಿಯೇ ನೇರ ಕಾರಣ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ‘ಹೌರಾದಲ್ಲಿ ನಡೆದಿರುವ ಘಟನೆ ದುರದೃಷ್ಟಕರವಾದುದು. ಆದರೆ ಈ ಹಿಂಸಾಚಾರದ ಹಿಂದೆ ಹಿಂದೂಗಳಾಗಲ್ಲ. ಮುಸ್ಲಿಮರಾಗಲೀ ಇಲ್ಲ ಇದರ ಹಿಂದೆ ಇರುವುದು ಬಿಜೆಪಿ’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಆದರೆ ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ‘ಇದರಲ್ಲಿ ಬಿಜೆಪಿಯ ಯಾವುದೇ ಕೈವಾಡವಿಲ್ಲ. ಈ ಪ್ರಕರಣದ ಕುರಿತಾಗಿ ಎನ್‌ಐಎ ತನಿಖೆ ನಡೆಸಲಿ’ ಎಂದು ಹೇಳಿದೆ.

ಇದನ್ನೂ ಓದಿ: From the India Gate: ಅಧಿಕಾರಿ ಸಸ್ಪೆಂಡ್‌, ಮೇಲಿನವರು ಸೇಫ್‌: ತೃತೀಯ ರಂಗ ಬಲಗೊಳಿಸಲು ಮತ್ತೆ ‘ದೀದಿ’ ಯತ್ನ..!

ಮಾಹಿತಿ ಪಡೆದ ಅಮಿತ್‌ ಶಾ:
ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯಪಾಲ ಡಾ.ಆನಂದ ಬೋಸ್‌ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ್‌ ಮುಜುಂದಾರ್‌ ಅವರೊಂದಿಗೆ ಮಾತನಾಡಿದ್ದಾರೆ. ಅಲ್ಲದೇ ಈ ಘಟನೆಯ ಕುರಿತಾಗಿ ಮಾಹಿತಿ ಪಡೆದಿದ್ದಾರೆ.

ಬಿಹಾರದಲ್ಲೂ ಹಿಂಸೆ:
ಈ ನಡುವೆ, ಬಿಹಾರದ ಸಸಾರಾಂನಲ್ಲೂ 2 ಗುಂಪುಗಳ ನಡುವೆ ಘರ್ಷಣೆಗಳು ನಡೆದಿದ್ದು, ನಿಷೇದಾಜ್ಞೆ ಹೇರಲಾಗಿದೆ. ಗುರುವಾರ ಹಿಂಸಾಚಾರ ನಡೆದ ಮಹಾರಾಷ್ಟ್ರ ಮತ್ತು ಗುಜರಾತ್‌ಗಳಲ್ಲಿ ಪರಿಸ್ಥಿತಿ ಶಾಂತವಾಗಿದೆ.

ಇದನ್ನೂ ಓದಿ: From the India Gate: ಸಿದ್ದರಾಮಯ್ಯ ಪುತ್ರ ವ್ಯಾಮೋಹ; ಬಂಗಾಳದಲ್ಲಿ ಬಡ ಪಕ್ಷ, ಸಿರಿವಂತ ನಾಯಕರು..!

click me!