
ಅಹಮದಾಬಾದ್ (ಏ.01): ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಹಿತಿ ಬಹಿರಂಗಗೊಳಿಸುವಂತೆ ಮುಖ್ಯ ಮಾಹಿತಿ ಆಯುಕ್ತರು 7 ವರ್ಷದ ಹಿಂದೆ ಗುಜರಾತ್ ವಿಶ್ವವಿದ್ಯಾಲಯಕ್ಕೆ ನೀಡಿದ ಆದೇಶವನ್ನು ಗುಜರಾತ್ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದೇ ವೇಳೆ, ಮಾಹಿತಿ ಬಹಿರಂಗ ಮಾಡುವಂತೆ ಮಹಿತಿ ಹಕ್ಕು ಅಡಿ ಕೋರಿದ್ದ ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ 25 ಸಾವಿರ ರು. ದಂಡ ವಿಧಿಸಿದೆ.
ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್, ದೇಶದ ಜನರಿಗೆ ತಮ್ಮ ಪ್ರಧಾನಿಯ ವಿದ್ಯಾರ್ಹತೆಯ ಮಾಹಿತಿ ಪಡೆಯುವ ಅವಕಾಶವೂ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಆಪ್ ಘೋಷಿಸಿದೆ. ಆದರೆ ಕೇಜ್ರಿವಾಲ್ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದ್ದು, ‘ಪ್ರಧಾನಿ ಕುರ್ಚಿಯ ಮೇಲೆಯೇ ಅನುಮಾನ ವ್ಯಕ್ತಪಡಿಸಿ ಸುಳ್ಳು ಪ್ರಕರಣ ದಾಖಲಿಸುವ ಕೇಜ್ರಿವಾಲ್‌ಗೆ ಕೋರ್ಟ್ ತಕ್ಕ ಶಾಸ್ತಿ ಮಾಡಿದೆ’ ಎಂದಿದೆ.
Chamarajanagar: ಏ.9ಕ್ಕೆ ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿ?: ಸಫಾರಿಗೆ ಹೋಗ್ತಾರಂತೆ ಮೋದಿ
ಏನಿದು ಪ್ರಕರಣ?: 2016ರಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ವಿದ್ಯಾರ್ಹತೆ ಕುರಿತು ನಾನಾ ಶಂಕೆಗಳು ವ್ಯಕ್ತವಾಗಿ ಬಿಜೆಪಿ-ಕಾಂಗ್ರೆಸ್ ರಾಜಕೀಯ ಕೆಸರೆರಚಾಟ ನಡೆಸಿದ್ದವು. ಆಗ ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಮಾಹಿತಿ ಬಹಿರಂಗಪಡಿಸುವಂತೆ ಕೇಜ್ರಿವಾಲ್ ಕೇಂದ್ರ ಮಾಹಿತಿ ಹಕ್ಕು ಆಯೋಗಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಂದಿನ ಮುಖ್ಯ ಮಾಹಿತಿ ಹಕ್ಕು ಆಯುಕ್ತ ಸಿ.ಶ್ರೀಧರ ಆಚಾರ್ಯಲು ಅವರು ಈ ಮಾಹಿತಿ ಬಹಿರಂಗ ಮಾಡುವಂತೆ ಮೋದಿ ಸ್ನಾತಕೋತ್ತರ ಪದವಿ ಪಡೆದ ದೆಹಲಿ ವಿವಿ ಮತ್ತು ಪದವಿ ಪಡೆದ ಗುಜರಾತ್ ವಿವಿಗೆ ಸೂಚಿಸಿದ್ದರು.
ಆದರೆ ಇದನ್ನು ಗುಜರಾತ್ ವಿವಿ ಗುಜರಾತ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಈ ಹಿನ್ನೆಲೆಯಲ್ಲಿ ಕೆಲ ದಿನಗಳಲ್ಲೇ ಮಾಹಿತಿ ಬಹಿರಂಗಕ್ಕೆ ಹೈಕೋರ್ಟ್ ತಡೆ ನೀಡಿತ್ತು. ವಿಚಾರಣೆ ವೇಳೆ ವಾದ ಮಂಡಿಸಿದ ಮೋದಿ ಪರ ವಾದಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ವ್ಯಕ್ತಿಯೊಬ್ಬರ ಬೇಜವಾಬ್ದಾರಿಯುತ, ಬಾಲಿಶ ಕುತೂಹಲವು ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕ ಹಿತಾಸಕ್ತಿಯಾಗದು. ಈ ಹಿಂದೆಯೇ ಗುಜರಾತ್ ವಿವಿ ಮೋದಿ ಅವರ ಪದವಿ ಪ್ರಮಾಣಪತ್ರವನ್ನು ವೆಬ್‌ಸೈಟ್‌ಗೆ ಹಾಕಿತ್ತು.
ಈಗ ಮತ್ತೆ ಬಹಿರಂಗಕ್ಕೆ ಬೇಡಿಕೆ ಏಕೆ? ಇದು ಖಾಸಗಿ ವಿಷಯವಾಗಿದ್ದು, ಖಾಸಗಿತನ ಹಕ್ಕಿಗೆ ಧಕ್ಕೆ ಬರುತ್ತದೆ. ಮೇಲಾಗಿ, ಮೋದಿ ವಿದ್ಯಾರ್ಹತೆಯು ಅವರ ಪ್ರಧಾನಿ ಸ್ಥಾನಮಾನದ ಮೇಲೆ ಪರಿಣಾಮವನ್ನೇನೂ ಬೀರದು. ಈ ಅರ್ಜಿಯು ಎದುರಾಳಿಗಳ ವಿರುದ್ಧ ದ್ವೇಷ ಸಾಧಿಸುವ ಸಾಧನವಾಗಿ ಹೊರಹೊಮ್ಮಿದೆ’ ಎಂದು ವಾದಿಸಿದ್ದರು. ಆದರೆ ಕೇಜ್ರಿವಾಲ್ ಪರ ವಕೀಲರು, ‘ಪ್ರಧಾನಿಗಳು ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿದ್ದೇನೆ ಎಂದು ಚುನಾವಣಾ ಅಫಿಡವಿಟ್‌ನಲ್ಲಿ ಹೇಳಿದ್ದಾರೆ. ಡಿಗ್ರಿ ವಿವರ ನಮಗೆ ವೆಬ್‌ಸೈಟ್‌ನಲ್ಲಿ ಸಿಕ್ಕಿಲ್ಲ. ಹೀಗಾಗಿ ಸರ್ಟಿಫಿಕೇಟ್ ಹಾಗೂ ಅಂಕಪಟ್ಟಿಮಾಹಿತಿ ಕೇಳಿದ್ದೇವೆ’ ಎಂದು ವಾದಿಸಿದ್ದರು.
ದಿವಾಳಿಯಾದ ಕಾಂಗ್ರೆಸ್ ಮುಂದೇ ಹರಾಜಿಗೆ ಬರಲಿದೆ: ಸಚಿವ ಶ್ರೀರಾಮುಲು
ಕೋರ್ಟ್ ಹೇಳಿದ್ದೇನು?: ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ ನ್ಯಾ.ಬೀರೇನ್ ವೈಷ್ಣವ್ ಅವರು ಮೆಹ್ತಾ ವಾದವನ್ನು ಒಪ್ಪಿ, ‘ಮೋದಿಯವರ ಪದವಿ ಮಾಹಿತಿಯನ್ನು ಬಹಿರಂಗಪಡಿಸಬೇಕಾದ ಅವಶ್ಯಕತೆ ಇಲ್ಲ’ ಎಂದು ಹೇಳಿತು ಹಾಗೂ ಕೇಜ್ರಿವಾಲ್ ಮನವಿಯನ್ನು ತಿರಸ್ಕರಿಸಿತು. ಕೇಜ್ರಿವಾಲ್‌ಗೆ 25000 ರು. ದಂಡ ವಿಧಿಸಿ ಅದನ್ನು, 1 ತಿಂಗಳ ಒಳಗೆ ಗುಜರಾತ್ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಖಾತೆಗೆ ಜಮಾ ಮಾಡುವಂತೆ ಸೂಚಿಸಿತು. ಪ್ರಧಾನಿ ಮೋದಿ ಈ ಹಿಂದೆ ನೀಡಿದ್ದ ಮಾಹಿತಿ ಅನ್ವಯ 1978ರಲ್ಲಿ ಗುಜರಾತ್ ವಿವಿಯಿಂದ ಪದವಿ ಮತ್ತು 1983ರಲ್ಲಿ ದೆಹಲಿ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಬಾಹ್ಯ ವಿದ್ಯಾರ್ಥಿಯಾಗಿ ಎಂಎ ರಾಜ್ಯಶಾಸ್ತ್ರದಲ್ಲಿ ಅವರು ಶೇ.62.3 ಅಂಕ ಪಡೆದಿದ್ದರು ಎಂದು 2016ರ ಮೇ ತಿಂಗಳಲ್ಲಿ ಗುಜರಾತ್ ವಿವಿ ಕುಲಪತಿ ಎಂ.ಎಂ. ಪಟೇಲ್ ಹೇಳಿಕೆ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ