ಕ್ರಿಕೆಟರ್ ಹೆಸರಲ್ಲಿ ಹೋಟೆಲ್‌, ರೂಪದರ್ಶಿ, ಐಷಾರಾಮಿ ರೆಸಾರ್ಟ್‌ಗಳಿಗೆ ಮೋಸ: ಖತರ್ನಾಕ್ ವಂಚಕ ಅರೆಸ್ಟ್

By Kannadaprabha NewsFirst Published Dec 29, 2023, 9:50 AM IST
Highlights

ಐಪಿಎಲ್‌ ಆಟಗಾರ, ಕರ್ನಾಟಕದ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ಎಂದು ಹೇಳಿಕೊಂಡು ದೇಶದ ಪಂಚತಾರಾ ಹೋಟೆಲ್‌ಗಳು, ಐಷಾರಾಮಿ ರೆಸಾರ್ಟ್‌ಗಳು, ಜಾಗತಿಕ ಕ್ರೀಡಾ ಬ್ರ್ಯಾಂಡ್‌ಗಳು ಹಾಗೂ ರೂಪದರ್ಶಿಯರಿಗೆ ವಂಚಿಸಿದ್ದ ಖತರ್‌ನಾಕ್‌ ಯುವಕನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ನವದೆಹಲಿ: ಐಪಿಎಲ್‌ ಆಟಗಾರ, ಕರ್ನಾಟಕದ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ಎಂದು ಹೇಳಿಕೊಂಡು ದೇಶದ ಪಂಚತಾರಾ ಹೋಟೆಲ್‌ಗಳು, ಐಷಾರಾಮಿ ರೆಸಾರ್ಟ್‌ಗಳು, ಜಾಗತಿಕ ಕ್ರೀಡಾ ಬ್ರ್ಯಾಂಡ್‌ಗಳು ಹಾಗೂ ರೂಪದರ್ಶಿಯರಿಗೆ ವಂಚಿಸಿದ್ದ ಖತರ್‌ನಾಕ್‌ ಯುವಕನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಭಾರತ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ಹಾಗೂ ಬ್ಯಾಟ್ಸ್‌ಮನ್‌ ರಿಷಬ್‌ ಪಂತ್‌ ಅವರಿಗೂ ಈತ 1.6 ಕೋಟಿ ರು. ವಂಚನೆ ಮಾಡಿದ್ದ ಸಂಗತಿಯೂ ಬಯಲಾಗಿದೆ.

ಹರ್ಯಾಣ ಮೂಲದ ಮೃಣಾಂಕ್‌ ಸಿಂಗ್ (25) ಬಂಧಿತ. ಈತನಿಗೆ ಸ್ಟಾರ್ ಹೋಟೆಲ್‌ಗಳಲ್ಲಿ ತಂಗುವುದು, ದುಬಾರಿ ಶೋಕಿ ಮಾಡುವುದು ಎಂದರೆ ಎಲ್ಲಿಲ್ಲದ ಇಷ್ಟ. ಹೀಗಾಗಿ ಆತ ಸಾಲು ಸಾಲು ವಂಚನೆಗಳನ್ನು ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ಟೋಲ್ ಪ್ಲಾಜಾ ನಿರ್ಮಿಸಿ ಒಂದೂವರೆ ವರ್ಷದಿಂದ ವಾಹನ ಸವಾರರ ಸುಲಿಗೆ

ವಂಚನೆ ಹೇಗೆ

2014ರಿಂದ 2018ರವರೆಗೆ ತಾನು ಮುಂಬೈ ಇಂಡಿಯನ್ಸ್‌ ಐಪಿಎಲ್‌ ತಂಡದಲ್ಲಿ ಆಡಿದ್ದೆ ಎನ್ನುವ ಮೂಲಕ ತಾನೊಬ್ಬ ಜನಪ್ರಿಯ ವ್ಯಕ್ತಿ ಎಂದು ಬಿಂಬಿಸಿಕೊಳ್ಳುತ್ತಿದ್ದ. ಮಹಿಳೆಯರನ್ನು ನಂಬಿಸಿ, ಅವರ ಜತೆ ಐಷಾರಾಮಿ ರೆಸ್ಟೋರೆಂಟ್‌ಗಳಿಗೆ ಹೋಗುತ್ತಿದ್ದ. 2022ರಲ್ಲಿ ಈತ ದೆಹಲಿ ತಾಜ್‌ ಪ್ಯಾಲೇಸ್‌ ಹೋಟೆಲ್‌ನಲ್ಲಿ ಒಂದು ವಾರ ತಂಗಿದ್ದ. 5.53 ಲಕ್ಷ ರು. ಬಿಲ್‌ ಆಗಿತ್ತು. ಅಡಿಡಾಸ್‌ ಕಂಪನಿಯವರು ನಿಮಗೆ ಹಣ ಪಾವತಿಸುತ್ತಾರೆ ಎಂದು ಹೇಳಿದ್ದ. ಅದನ್ನು ಹೋಟೆಲ್‌ನವರೂ ನಂಬಿದ್ದರು. ಆದರೆ ಹಣ ಮಾತ್ರ ಸಿಗಲಿಲ್ಲ. ಫೋನ್‌ ಮಾಡಿದರೆ ಒಂದೊಂದು ಕತೆ ಹೇಳುತ್ತಿದ್ದ. ಬಳಿಕ ಸ್ವಿಚಾಫ್‌ ಮಾಡಿಕೊಂಡಿದ್ದ. ಹೀಗಾಗಿ ಆ ಸಂಸ್ಥೆ ದೂರು ನೀಡಿತ್ತು.

ತನಗೆ ಪರಿಚಯವಾಗುವ ಮಹಿಳೆಯರಿಗೆ ತಾನು ದುಬೈನಲ್ಲಿ ನೆಲೆಸಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ. ಹೀಗಾಗಿ ಈತನ ವಿರುದ್ಧ ಲುಕೌಟ್‌ ನೋಟಿಸ್‌ ಕೂಡ ಹೊರಡಿಸಲಾಗಿತ್ತು. ಡಿ.25ರಂದು ಈತ ಹಾಂಕಾಂಗ್‌ಗೆ ಪರಾರಿಯಾಗುತ್ತಿದ್ದಾಗ ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಳ್ಳಲಾಯಿತು. ಆತ ತಾನು ಕರ್ನಾಟಕದ ಐಪಿಎಸ್‌ ಅಧಿಕಾರಿ, ಎಡಿಜಿಪಿ ಅಲೋಕ್‌ ಕುಮಾರ್ ಎಂದು ಕತೆ ಕಟ್ಟಿದ. ಕೊನೆಗೆ ಅಲೋಕ್‌ ಹೆಸರಿನಲ್ಲಿ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ‘ನನ್ನ ಪುತ್ರನನ್ನು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಸಹಾಯ ಮಾಡಿ ಎಂದು ಕೇಳಿದ್ದ.

ಪೊಲೀಸರು ಈತನ ವರಸೆ ಗಮನಿಸಿ ಬಂಧಿಸಿದರು. ಆಗಲೂ ಈತನ ಸುಳ್ಳು ನಿಲ್ಲಲಿಲ್ಲ. ತನ್ನ ತಂದೆ ಭಾರತ ಕ್ರಿಕೆಟ್‌ ತಂಡದಲ್ಲಿ 80ರ ದಶಕದಲ್ಲಿ ಆಟವಾಡಿದ್ದ ಅಶೋಕ್‌ ಕುಮಾರ್‌ ಸಿಂಗ್‌. ಅವರು ಏರ್‌ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ನಂಬಿಸಲು ಯತ್ನಿಸಿದ್ದ.

ಪಂತ್‌ಗೂ ವಂಚನೆ

ದುಬಾರಿ ಬ್ರ್ಯಾಂಡ್‌ ವಸ್ತುಗಳನ್ನು ಕಡಿಮೆ ಬೆಲೆಗೆ ಕೊಡಿಸುವ, ಅಗ್ಗದ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ವ್ಯವಹಾರ ನಡೆಸುತ್ತಿದ್ದೇನೆ ಎಂದು ರಿಷಬ್‌ ಪಂತ್‌ ಅವರನ್ನು ನಂಬಿಸಿದ್ದ. ಹೀಗಾಗಿ ರಿಷಬ್‌ ಅವರು 1.6 ಕೋಟಿ ರು. ಹಣ ವರ್ಗ ಮಾಡಿದ್ದರು. ಈತನ ವಂಚನೆ ಗೊತ್ತಾಗಿ ಹಣ ವಾಪಸ್‌ ಕೇಳಿದ್ದರು. ಈತ ಕೊಟ್ಟಿದ್ದ ಚೆಕ್‌ ಬೌನ್ಸ್‌ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡದ ಹಿರಿಯ ಕಲಾವಿದ ರವಿಕಿರಣ್‌ಗೆ ಗುರೂಜಿಯಿಂದ 4 ಲಕ್ಷ ರೂ ವಂಚನೆ!

ರೂಪದರ್ಶಿಯರ ಜತೆ ಖಾಸಗಿಯಾಗಿ ಮೃಣಾಲ್‌ ಫೋಟೋಗಳನ್ನು ತೆಗೆಸಿಕೊಂಡಿದ್ದಾನೆ ಎಂದು ವಿವರಿಸಿದ್ದಾರೆ. ಈತ ಕುಟುಂಬದಿಂದ ದೂರವಿದ್ದು, ವಂಚನೆ ಎಸಗುತ್ತಿದ್ದ ಎನ್ನಲಾಗಿದೆ.

click me!