
ನವದೆಹಲಿ: ಇತ್ತೀಚೆಗೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಇಂಡಿಯಾ ಕೂಟದ ಪಕ್ಷಗಳು 4 ರಾಜ್ಯಗಳಲ್ಲಿ ಸೋಲು ಅನುಭವಿಸಿದ ಬಳಿಕ ಇದೇ ಮೊದಲ ಬಾರಿ ಪೂರ್ಣ ಪ್ರಮಾಣದ ‘ಇಂಡಿಯಾ’ ಸಭೆ ಡಿ.19ರಂದು ದಿಲ್ಲಿಯಲ್ಲಿ ನಡೆಯಲಿದೆ. ಪಂಚರಾಜ್ಯ ಚುನಾವಣೆಯಲ್ಲಿ ಕೂಟದ ಪಕ್ಷಗಳು ಒಗ್ಗಟ್ಟಿನಿಂದ ಸ್ಪರ್ಧೆ ಮಾಡದೇ ಇರುವುದು ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ಇದರಿಂದ ಪಾಠ ಕಲಿತು ‘ಮೈ ನಹೀಂ, ಹಮ್’ (ನಾನು ಅಲ್ಲ, ನಾವು) ಘೋಷವಾಕ್ಯದೊಂದಿಗೆ ಮುಂದೆ ಸಾಗಿ ಪ್ರಧಾನಿ ನರೇಂದ್ರ ಮೋದಿಗೆ ಸಡ್ಡು ಹೊಡೆಯಲು ತೀರ್ಮಾನಿಸಲಾಗಿದೆ.
ಭಾನುವಾರ ಸಂಜೆ ಸಭೆ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಡಿ.19ರ ಮಧ್ಯಾಹ್ನ 3 ಗಂಟೆಗೆ ಇಂಡಿಯಾ ಕೂಟದ 4ನೇ ಸಭೆ ನಡೆಯಲಿದೆ’ ಎಂದಿದ್ದಾರೆ.
ಟಿಬೆಟ್ ಹೆಸರೇ ಬದಲಿಸಿ ‘ಕ್ಸಿ ಜಾಂಗ್’ ಮಾಡಿದ ಚೀನಾ ಸರ್ಕಾರ!
ಸಭೆಯಲ್ಲಿ 3 ಅಜೆಂಡಾಗಳನ್ನು ನಿಗದಿಪಡಿಸಲಾಗಿದೆ. 1ನೆಯದಾಗಿ ರಾಜ್ಯಗಳಲ್ಲಿ ಇಂಡಿಯಾ ಕೂಟದ ಪಕ್ಷಗಳ ನಡುವೆ ಸೀಟು ಹಂಚಿಕೆ, 2ನೆಯದಾಗಿ ಜಂಟಿ ರ್‍ಯಾಲಿಗಳನ್ನು ಎಲ್ಲ ರಾಜ್ಯಗಳಲ್ಲಿ ಆಯೋಜಿಸುವುದು, 3ನೆಯದಾಗಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ (ಸಾಮಾನ್ಯ ಪ್ರಣಾಳಿಕೆ) ರೂಪಿಸುವುದು- ಇವು ಸಭೆಯಲ್ಲಿ ಚರ್ಚೆಗೆ ಒಳಪಡಲಿರುವ ವಿಷಯಗಳಾಗಿವೆ.
ಇದೇ ವೇಳೆ, ಜಾತಿ ಗಣತಿ, ಹಳೆ ಪಿಂಚಣಿ ಯೋಜನೆ ಜಾರಿ- ಮುಂತಾದ ವಿಷಯಗಳನ್ನೂ ಇಂಡಿಯಾ ಕೂಟ ಪ್ರಮುಖವಾಗಿ ಪ್ರಸ್ತಾಪಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ 2024ರ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಮಣಿಸಿ ‘ಮೋದಿ ಕಿ ಗ್ಯಾರಂಟಿ’ಗೆ ತಿರುಗೇಟು ನೀಡಲು ಕಾರ್ಯತಂತ್ರ ರೂಪಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ. ಸಭೆಯಲ್ಲಿ ಪಂಚರಾಜ್ಯ ಚುನಾವಣೆಯ ಸೋಲಿನ ಆತ್ಮಾವಲೋಕನ ನಡೆಯಲಿದೆ.
ಕಾಶ್ಮೀರದ ವಿಶೇಷ ಸ್ಥಾನ ಹಿಂಪಡೆತ: ಇಂದು ಸುಪ್ರೀಂಕೋರ್ಟ್‌ನಲ್ಲಿ ಹಣೆಬರಹ ನಿರ್ಧಾರ
ಅಖಿಲೇಶ್-ಕಾಂಗ್ರೆಸ್ ಮನಸ್ತಾಪ ಶಮನ: ಚುನಾವಣೆ ವೇಳೆ ಸೀಟು ಹಂಚಿಕೆ ವಿಚಾರವಾಗಿ ಎಸ್ಪಿ ಮುಖಂಡ ಅಖಿಲೇಶ್ ಯಾದವ್ ಹಾಗೂ ಕಾಂಗ್ರೆಸ್ ನಡುವೆ ಮನಸ್ತಾಪವಾಗಿತ್ತು. ಇದನ್ನು ಈಗ ಕೆಲವು ನಾಯಕರು ಮಧ್ಯಸ್ಥಿಕೆ ವಹಿಸಿ ಬಗೆಹರಿಸಿದ್ದಾರೆ. ಹೀಗಾಗಿ ಅಖಿಲೇಶ್ ಅಲ್ಲದೆ, ಇಂಡಿಯಾ ಕೂಟದ ವಿವಿಧ ಘಟಾನುಘಟಿ ನಾಯಕರು ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಇತ್ತೀಚೆಗೆ ಡಿ.6ರಂದು ಇಂಡಿಯಾ ಕೂಟದ ಸಭೆ ನಿಗದಿ ಆಗಿತ್ತು. ಆದರೆ ಸಭೆಗೆ ಅಖಿಲೇಶ್ ಯಾದವ್, ಜೆಡಿಯು ನೇತಾರ ನಿತೀಶ್ ಕುಮಾರ್ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಬರುವುದಿಲ್ಲ ಎಂದಿದ್ದರು. ಹೀಗಾಗಿ ಸಭೆಯನ್ನು ಕಾಂಗ್ರೆಸ್ ಪಕ್ಷ ಮುಂದೂಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ